ಬೆನ್ಹದದ ಮತ್ತು ಅಹಾಬ ಇವರ ಯುದ್ಧ
20
ಬೆನ್ಹದದನು ಅರಾಮಿನ ರಾಜ. ಅವನು ತನ್ನ ಸೇನೆಯನ್ನೆಲ್ಲ ಒಟ್ಟಾಗಿ ಸೇರಿಸಿದನು. ಅವನ ಹತ್ತಿರ ಮೂವತ್ತೆರಡು ಮಂದಿ ರಾಜರಿದ್ದರು. ಅವರ ಬಳಿ ಕುದುರೆಗಳೂ ರಥಗಳೂ ಇದ್ದವು. ಅವರು ಸಮಾರ್ಯಕ್ಕೆ ವಿರುದ್ಧವಾಗಿ ಹೋಗಿ ಅದಕ್ಕೆ ಮುತ್ತಿಗೆ ಹಾಕಿದರು. ರಾಜನು ಆ ನಗರದಲ್ಲಿದ್ದ ಇಸ್ರೇಲಿನ ರಾಜನಾದ ಅಹಾಬನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. ಅವನ ಸಂದೇಶವು ಹೀಗಿತ್ತು: “ಬೆನ್ಹದದನು ಹೀಗೆನ್ನುವನು, ‘ನೀವು ನನಗೆ ನಿಮ್ಮಲ್ಲಿರುವ ಬೆಳ್ಳಿಬಂಗಾರಗಳನ್ನು ಒಪ್ಪಿಸಬೇಕು. ನಿಮ್ಮ ಪತ್ನಿಯರನ್ನು ಮತ್ತು ಮಕ್ಕಳನ್ನು ನನಗೆ ಒಪ್ಪಿಸಲೇಬೇಕು.’”
ಇಸ್ರೇಲಿನ ರಾಜನು, “ನನ್ನ ಒಡೆಯನಾದ ರಾಜನೇ, ಈಗ ನಾನು ನಿನ್ನವನೇ. ನನ್ನ ಬಳಿ ಇರುವುದೆಲ್ಲವೂ ನಿನ್ನದೇ” ಎಂದು ಉತ್ತರಿಸಿದನು.
ನಂತರ ಆ ಸಂದೇಶಕರು ಅಹಾಬನ ಹತ್ತಿರಕ್ಕೆ ಹಿಂದಿರುಗಿ ಬಂದು, “ಬೆನ್ಹದದನು ಹೀಗೆನ್ನುತ್ತಾನೆ, ‘ನೀನು ನಿನ್ನಲ್ಲಿರುವ ಎಲ್ಲಾ ಬೆಳ್ಳಿಬಂಗಾರವನ್ನು ಮತ್ತು ನಿನ್ನ ಪತ್ನಿಯರನ್ನು ಮತ್ತು ಮಕ್ಕಳನ್ನು ನನಗೆ ಒಪ್ಪಿಸಲೇಬೇಕೆಂದು ನಾನು ಮುಂಚೆಯೇ ನಿನಗೆ ತಿಳಿಸಿದ್ದೇನೆ. ನಾಳೆ ಇದೇ ಸಮಯದಲ್ಲಿ, ನಿನ್ನ ಅರಮನೆ ಮತ್ತು ನಿನ್ನ ಅಧೀನದಲ್ಲಿರುವ ಅಧಿಕಾರಿಗಳ ಮನೆಗಳನ್ನು ಶೋಧಿಸಲು ನಾನು ನನ್ನ ಜನರನ್ನು ಕಳುಹಿಸುತ್ತೇನೆ. ನನ್ನ ಜನರು ತಮಗೆ ಇಷ್ಟವಾದುದನ್ನು ತೆಗೆದುಕೊಳ್ಳುತ್ತಾರೆ’” ಎಂದು ಹೇಳಿದರು.
ಆದ್ದರಿಂದ ಅಹಾಬನು ತನ್ನ ರಾಜ್ಯದ ಹಿರಿಯರೆಲ್ಲರ ಒಂದು ಸಭೆಯನ್ನು ಕರೆದು, “ನೋಡಿ, ಬೆನ್ಹದದನು ಕೇಡುಮಾಡಬೇಕೆಂದಿದ್ದಾನೆ. ನನ್ನ ಪತ್ನಿಯರನ್ನು, ಮಕ್ಕಳನ್ನು ಮತ್ತು ಬೆಳ್ಳಿಬಂಗಾರಗಳನ್ನು ತನಗೆ ಒಪ್ಪಿಸಬೇಕೆಂದು ಅವನು ನನ್ನನ್ನು ಮೊದಲು ಕೇಳಿದ್ದನು. ನಾನು ಅದಕ್ಕೆ ಒಪ್ಪಿಕೊಂಡಿದ್ದೆನು. ಈಗ ಅವನು ಎಲ್ಲವನ್ನೂ ತೆಗೆದುಕೊಳ್ಳಲು ಅಪೇಕ್ಷೆಪಟ್ಟಿದ್ದಾನೆ” ಎಂದು ಹೇಳಿದನು.
ಆದರೆ ಹಿರಿಯರೆಲ್ಲರು ಮತ್ತು ಜನರೆಲ್ಲರು, “ಅವನ ಮಾತಿಗೆ ಒಪ್ಪಬೇಡ. ಅವನು ಹೇಳಿದ್ದನ್ನು ನೀನು ಮಾಡಬೇಡ” ಎಂದು ಹೇಳಿದರು.
ಅಹಾಬನು ಬೆನ್ಹದದನ ಸಂದೇಶಕರಿಗೆ, “ನನ್ನ ಒಡೆಯನಾದ ರಾಜನಿಗೆ ಇದನ್ನು ತಿಳಿಸಿರಿ: ನೀನು ಮೊದಲು ಹೇಳಿದ್ದನ್ನು ನಾನು ಮಾಡುತ್ತೇನೆ. ಆದರೆ ನಿನ್ನ ಎರಡನೆಯ ಆಜ್ಞೆಯನ್ನು ನೆರವೇರಿಸಲು ನನ್ನಿಂದ ಸಾಧ್ಯವಿಲ್ಲ” ಎಂದು ಹೇಳಿದನು.
ರಾಜನಾದ ಬೆನ್ಹದದನ ಜನರು ಈ ಸಂದೇಶವನ್ನು ರಾಜನಿಗೆ ತಿಳಿಸಿದರು. 10 ನಂತರ ಅವರು ಬೆನ್ಹದದನ ಮತ್ತೊಂದು ಸಂದೇಶದೊಂದಿಗೆ ಹಿಂದಿರುಗಿ ಬಂದರು. ಆ ಸಂದೇಶವು ಹೀಗಿತ್ತು: “ನಾನು ಸಮಾರ್ಯವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತೇನೆ. ಆ ನಗರದಲ್ಲಿ ಏನನ್ನೂ ಉಳಿಸುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ನನ್ನ ಜನರು, ಆ ನಗರವನ್ನು ಕಂಡುಹಿಡಿಯಲಾಗದಂತೆ ಮತ್ತು ಮನೆಗೆ ತೆಗೆದುಕೊಂಡು ಹೋಗಲು ಒಂದು ಹಿಡಿ ಧೂಳೂ ಉಳಿಯದಂತೆ ಮಾಡಿಬಿಡುತ್ತಾರೆ. ನಾನು ಇದನ್ನು ಮಾಡದೆ ಹೋದರೆ ದೇವರು ನನ್ನನ್ನು ನಾಶಪಡಿಸಲಿ!”
11 ರಾಜನಾದ ಅಹಾಬನು, “ಯುದ್ಧಕ್ಕೆ ಹೋಗುವ ಸೈನಿಕನು ತನ್ನ ಆಯುಧಗಳನ್ನು ಧರಿಸಿಕೊಳ್ಳುವಾಗ ಹೆಚ್ಚಳಪಡದೆ, ಯುದ್ಧವಾದ ಮೇಲೆ ತನ್ನ ಆಯುಧಗಳನ್ನು ಬಿಚ್ಚಿಡುವಾಗ ಹೆಚ್ಚಳಪಡುತ್ತಾನೆಂಬುದನ್ನು ಬೆನ್ಹದದನಿಗೆ ಹೇಳಿ” ಎಂದು ಉತ್ತರಿಸಿದನು.
12 ರಾಜನಾದ ಬೆನ್ಹದದನು ಇತರ ಅರಸರೊಡನೆ ಅವನ ಗುಡಾರದಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದನು. ಆ ಸಮಯದಲ್ಲಿ ರಾಜನಾದ ಅಹಾಬನಿಂದ ಬಂದ ಸಂದೇಶವನ್ನು ಸಂದೇಶಕರು ಅವನಿಗೆ ಹೇಳಿದರು. ರಾಜನಾದ ಬೆನ್ಹದದನು ಆ ನಗರಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗುವಂತೆ ತನ್ನ ಜನರಿಗೆ ಆಜ್ಞಾಪಿಸಿದನು. ಆದ್ದರಿಂದ ಜನರು ಯುದ್ಧಮಾಡಲು ತಮ್ಮತಮ್ಮ ಸ್ಥಳಗಳಿಗೆ ಹೋದರು.
13 ಅದೇ ಸಮಯಕ್ಕೆ ಒಬ್ಬ ಪ್ರವಾದಿಯು ರಾಜನಾದ ಅಹಾಬನ ಬಳಿಗೆ ಹೋಗಿ, “ರಾಜನಾದ ಅಹಾಬನೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ. ‘ಆ ಮಹಾಸೇನೆಯನ್ನು ನೀನು ನೋಡಿದೆಯಾ! ಯೆಹೋವನಾದ ನಾನು, ಈ ದಿನ ಆ ಸೇನೆಯನ್ನು ಸೋಲಿಸುವಂತೆ ನಿನಗೆ ಅವಕಾಶ ಮಾಡುತ್ತೇನೆ. ಅನಂತರ ನಾನೇ ಯೆಹೋವನೆಂಬುದು ನಿನಗೆ ತಿಳಿಯುತ್ತದೆ’” ಎಂದು ಹೇಳಿದನು.
14 ಅಹಾಬನು, “ಅವರನ್ನು ಸೋಲಿಸಲು ನೀನು ಯಾರನ್ನು ಬಳಸಿಕೊಳ್ಳುವೆ?” ಎಂದನು.
ಪ್ರವಾದಿಯು, “ಜಿಲ್ಲೆಗಳ ರಾಜ್ಯಪಾಲರುಗಳ ಸೇವೆಮಾಡುತ್ತಿರುವ ಯೌವನಸ್ಥರನ್ನು ಬಳಸಿಕೊಳ್ಳುತ್ತೇನೆ ಎಂದು ಯೆಹೋವನು ಹೇಳುತ್ತಾನೆ” ಎಂದು ಉತ್ತರಿಸಿದನು.
ನಂತರ ರಾಜನು, “ಯುದ್ಧವನ್ನು ಆರಂಭಿಸುವವರು ಯಾರು?” ಎಂದು ಕೇಳಿದನು.
“ನೀನೇ” ಎಂದು ಪ್ರವಾದಿಯು ಉತ್ತರಿಸಿದನು.
15 ಅಹಾಬನು ಜಿಲ್ಲೆಗಳ ರಾಜ್ಯಪಾಲರುಗಳ ಸೇವೆ ಮಾಡುತ್ತಿರುವ ಯೌವನಸ್ಥರನ್ನು ಒಟ್ಟಾಗಿ ಸೇರಿಸಿದನು. ಅಲ್ಲಿ ಇನ್ನೂರ ಮೂವತ್ತೆರಡು ಮಂದಿ ಯುವಜನರಿದ್ದರು. ನಂತರ ರಾಜನು ಇಸ್ರೇಲಿನ ಸೈನ್ಯವನ್ನು ಒಟ್ಟಾಗಿ ಕರೆದನು. ಅವರಲ್ಲಿ ಒಟ್ಟು ಏಳುಸಾವಿರ ಸೈನಿಕರಿದ್ದರು.
16 ಮಧ್ಯಾಹ್ನದ ವೇಳೆಗೆ, ರಾಜನಾದ ಬೆನ್ಹದದನು ಮತ್ತು ಅವನ ಸಹಾಯಕ್ಕಾಗಿ ಬಂದಿದ್ದ ಮೂವತ್ತೆರಡು ಮಂದಿ ರಾಜರು, ಅವರ ಗುಡಾರಗಳಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ರಾಜನಾದ ಅಹಾಬನ ಆಕ್ರಮಣವು ಆರಂಭವಾಯಿತು. 17 ಮೊದಲು ಯುವಸಹಾಯಕರು ಆಕ್ರಮಣ ಮಾಡಿದರು. ರಾಜನಾದ ಬೆನ್ಹದದನ ಜನರು, ಸಮಾರ್ಯದಿಂದ ಸೈನಿಕರು ಹೊರಗೆ ಬಂದಿದ್ದಾರೆಂಬುದನ್ನು ಅವನಿಗೆ ತಿಳಿಸಿದರು. 18 ಬೆನ್ಹದದನು, “ಅವರು ಪ್ರಾಯಶಃ ಹೋರಾಡಲು ಬಂದಿರಬಹುದು ಅಥವಾ ಅವರು ಶಾಂತಿ ಸಂಧಾನಕ್ಕಾಗಿ ಬಂದಿರಬಹುದು. ಅವರು ಯಾವುದಕ್ಕಾಗಿ ಬಂದಿದ್ದರೂ ಅವರನ್ನು ಜೀವಸಹಿತ ಬಂಧಿಸಿರಿ” ಎಂದು ಹೇಳಿದನು.
19 ಜಿಲ್ಲೆಗಳ ರಾಜ್ಯಪಾಲರುಗಳ ಸೇವೆಮಾಡುತ್ತಿದ್ದ ಯುವಕರು ಆಕ್ರಮಣದ ಮಂಚೂಣಿಯಲ್ಲಿದ್ದು, ಇಸ್ರೇಲಿನ ಸೇನೆಯು ಅವರನ್ನು ಹಿಂಬಾಲಿಸುತ್ತಿತ್ತು. 20 ಆದರೆ ಇಸ್ರೇಲಿನ ಪ್ರತಿಯೊಬ್ಬನೂ ತನ್ನ ಮೇಲೆ ಬಿದ್ದವನನ್ನು ಕೊಂದುಹಾಕುತ್ತಿದ್ದನು. ಅರಾಮ್ಯದ ಜನರು ಓಡಿಹೋಗಲು ಆರಂಭಿಸಿದರು. ಇಸ್ರೇಲಿನ ಸೈನ್ಯವು ಅವರನ್ನು ಅಟ್ಟಿಸಿಕೊಂಡು ಹೋಯಿತು. ರಾಜನಾದ ಬೆನ್ಹದದನು ಅಶ್ವಸೇನೆಯ ಕುದುರೆಯೊಂದರ ಮೇಲೆ ಕುಳಿತು ತಪ್ಪಿಸಿಕೊಂಡನು. 21 ರಾಜನಾದ ಅಹಾಬನು ತನ್ನ ಸೈನ್ಯವನ್ನು ಮುನ್ನಡೆಸಿ, ಅರಾಮ್ಯರ ಸೇನೆಯಿಂದ ರಥಗಳನ್ನೂ ಅಶ್ವಸೇನೆಯನ್ನೂ ಸೋಲಿಸಿದನು. ಅರಾಮ್ಯರ ಸೇನೆಯ ಮಹಾ ಅಪಜಯಕ್ಕೆ ರಾಜನಾದ ಅಹಾಬನು ಕಾರಣನಾದನು.
22 ಆಗ ಆ ಪ್ರವಾದಿಯು ರಾಜನಾದ ಅಹಾಬನಲ್ಲಿಗೆ ಹೋಗಿ, “ಅರಾಮಿನ ರಾಜನಾದ ಬೆನ್ಹದದನು ಮುಂದಿನ ವಸಂತಮಾಸದಲ್ಲಿ ನಿನ್ನ ವಿರುದ್ಧ ಯುದ್ಧಮಾಡಲು ಮತ್ತೆ ಬರುತ್ತಾನೆ. ಈಗ ನೀನು ಮನೆಗೆ ಹೋಗಿ ನಿನ್ನ ಸೈನ್ಯವನ್ನು ಬಲಪಡಿಸು. ಅವನ ವಿರುದ್ಧ ನೀನು ಸಮರ್ಥನಾಗಲು ಎಚ್ಚರಿಕೆಯಿಂದ ಉಪಾಯಗಳನ್ನು ಮಾಡು” ಎಂದು ಹೇಳಿದನು.
ಬೆನ್ಹದದನ ಮರು ಆಕ್ರಮಣ
23 ರಾಜನಾದ ಬೆನ್ಹದದನ ಅಧಿಕಾರಿಗಳು ಅವನಿಗೆ, “ಇಸ್ರೇಲಿನ ದೇವರು ಬೆಟ್ಟಗಳ ದೇವರಾಗಿದ್ದಾನೆ. ನಾವು ಬೆಟ್ಟಪ್ರದೇಶದಲ್ಲಿ ಹೋರಾಟ ಮಾಡಿದೆವು. ಆದ್ದರಿಂದ ಇಸ್ರೇಲಿನ ಜನರು ಗೆದ್ದರು. ಅವರೊಡನೆ ಸಮತಟ್ಟಾದ ಪ್ರದೇಶದಲ್ಲಿ ಹೋರಾಟ ಮಾಡೋಣ. ಆಗ ನಾವು ಗೆಲ್ಲುತ್ತೇವೆ. 24 ನೀನು ಮಾಡಬೇಕಾದದ್ದೇನೆಂದರೆ, ಮೂವತ್ತೆರಡು ಮಂದಿ ರಾಜರು ಸೇನೆಯನ್ನು ಮುನ್ನಡೆಸುವುದು ಬೇಡ; ಅವರ ಸೇನೆಯನ್ನು ಸೇನಾಧಿಪತಿಗಳೇ ಮುನ್ನಡೆಸಲಿ. 25 ಹಿಂದೆ ನೀನು ಕಳೆದುಕೊಂಡ ಸೇನೆಯಂತಹ ಮತ್ತೊಂದು ಸೈನ್ಯವನ್ನೀಗ ನೀನು ಒಟ್ಟುಗೂಡಿಸು, ಆ ಸೇನೆಯಲ್ಲಿದ್ದಂತಹ ಕುದುರೆಗಳನ್ನೂ ರಥಗಳನ್ನೂ ಒಟ್ಟಾಗಿ ಸೇರಿಸು. ನಂತರ ಇಸ್ರೇಲರೊಡನೆ ಸಮತಟ್ಟಾದ ಪ್ರದೇಶದಲ್ಲಿ ನಾವು ಹೋರಾಟ ಮಾಡೋಣ. ಆಗ ನಾವು ಜಯಗಳಿಸುತ್ತೇವೆ” ಎಂದು ಹೇಳಿದರು. ಬೆನ್ಹದದನು ಅವರ ಸಲಹೆಯನ್ನು ಅನುಸರಿಸಿ ಅವರು ಹೇಳಿದಂತೆಯೇ ಮಾಡಿದನು.
26 ವಸಂತಮಾಸದಲ್ಲಿ ಬೆನ್ಹದದನು ಅರಾಮ್ಯದ ಜನರನ್ನು ಒಟ್ಟುಗೂಡಿಸಿದನು. ಅವನು ಇಸ್ರೇಲರ ವಿರುದ್ಧ ಹೋರಾಡಲು ಅಫೇಕಕ್ಕೆ ಹೋದನು.
27 ಇಸ್ರೇಲರೂ ಯುದ್ಧಕ್ಕೆ ಸಿದ್ಧರಾದರು. ಇಸ್ರೇಲಿನ ಜನರು ಅರಾಮ್ಯದ ಸೇನೆಯೊಡನೆ ಹೋರಾಡಲು ಹೋದರು. ಅವರು ಅರಾಮ್ಯದ ಪಾಳೆಯಕ್ಕೆ ಎದುರಾಗಿ ತಮ್ಮ ಪಾಳೆಯ ಮಾಡಿಕೊಂಡರು. ಶತ್ರುಗಳಿಗೆ ಹೋಲಿಸಿದರೆ ಇಸ್ರೇಲರು ಆಡುಗಳ ಎರಡು ಚಿಕ್ಕಮಂದೆಯಂತೆ ಕಾಣುತ್ತಿದ್ದರು. ಆದರೆ ಅರಾಮ್ಯದ ಸೈನಿಕರು ಎಲ್ಲಾ ಪ್ರದೇಶವನ್ನು ವ್ಯಾಪಿಸಿದ್ದರು.
28 ಇಸ್ರೇಲಿನ ರಾಜನ ಹತ್ತಿರಕ್ಕೆ ಬಂದ ದೇವಮನುಷ್ಯನ ಸಂದೇಶವು ಇಂತಿದೆ: “ಯೆಹೋವನು ಹೀಗೆಂದನು: ‘ಯೆಹೋವನಾದ ನನ್ನನ್ನು ಬೆಟ್ಟಗಳ ದೇವರೆಂದು ಅರಾಮ್ಯದ ಜನರು ಹೇಳಿದ್ದಾರೆ. ನಾನು ಕಣಿವೆಗಳ ದೇವರಲ್ಲವೆಂದು ಸಹ ಅವರು ಯೋಚಿಸಿಕೊಂಡಿದ್ದಾರೆ. ಆದ್ದರಿಂದ ಈ ಮಹಾಸೇನೆಯನ್ನು ನೀನು ಸೋಲಿಸುವಂತೆ ನಾನು ಅವಕಾಶ ಮಾಡುತ್ತೇನೆ. ನಾನೇ ಯೆಹೋವನೆಂಬುದು ಆಗ ನಿನಗೇ ತಿಳಿಯುತ್ತದೆ!’”
29 ಈ ಎರಡು ಸೈನ್ಯಗಳೂ ಎದುರುಬದುರಾಗಿ ಏಳು ದಿನಗಳ ಕಾಲ ಪಾಳೆಯವನ್ನು ಹೂಡಿದವು. ಏಳನೆಯ ದಿನ ಯುದ್ಧವು ಆರಂಭವಾಯಿತು. ಇಸ್ರೇಲರು ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಸೈನಿಕರನ್ನು ಕೊಂದುಹಾಕಿದರು. 30 ಬದುಕಿ ಉಳಿದವರು ಅಫೇಕ್ ನಗರಕ್ಕೆ ಓಡಿಹೋದರು. ಆ ನಗರದ ಗೋಡೆಯು ಉಳಿದಿದ್ದ ಇಪ್ಪತ್ತೇಳು ಸಾವಿರ ಜನರ ಮೇಲೆ ಉರುಳಿ ಬಿತ್ತು. ಬೆನ್ಹದದನೂ ನಗರಕ್ಕೆ ಓಡಿಹೋಗಿ ಒಂದು ಕೊಠಡಿಯಲ್ಲಿ ಅವಿತುಕೊಂಡನು. 31 ಅವನ ಸೇವಕರು ಅವನಿಗೆ, “ಇಸ್ರೇಲಿನ ರಾಜರುಗಳು ಕನಿಕರವುಳ್ಳವರೆಂದು ನಾವು ಕೇಳಿದ್ದೇವೆ. ನಾವು ಗೋಣಿತಟ್ಟುಗಳನ್ನು (ನಮ್ಮ ನಡುಗಳಿಗೆ) ಕಟ್ಟಿಕೊಂಡು, ಹಗ್ಗಗಳನ್ನು ನಮ್ಮ ತಲೆಗಳ ಮೇಲೆ ಹಾಕಿಕೊಂಡು ಇಸ್ರೇಲಿನ ರಾಜನ ಬಳಿಗೆ ಹೋಗೋಣ. ಅವನು ನಮ್ಮ ಜೀವವನ್ನು ಉಳಿಸಬಹುದು” ಎಂದು ಹೇಳಿದರು.
32 ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡು, ತಲೆಯ ಮೇಲೆ ಹಗ್ಗವನ್ನು ಹಾಕಿಕೊಂಡು, ಇಸ್ರೇಲಿನ ರಾಜನ ಬಳಿಗೆ ಬಂದರು. ಅವರು, “ನಿಮ್ಮ ಸೇವಕನಾದ ಬೆನ್ಹದದನು ಹೀಗೆನ್ನುವನು: ‘ದಯವಿಟ್ಟು ನನ್ನನ್ನು ಜೀವಸಹಿತ ಬಿಡು’” ಎಂದರು.
ಅಹಾಬನು, “ಅವನಿನ್ನೂ ಜೀವಸಹಿತ ಇದ್ದಾನೆಯೇ? ಅವನು ನನ್ನ ಸೋದರ” ಎಂದು ಉತ್ತರಿಸಿದನು.
33 ರಾಜನಾದ ಅಹಾಬನು ತಾನು ಬೆನ್ಹದದನನ್ನು ಕೊಲ್ಲುವುದಿಲ್ಲವೆಂಬುದನ್ನು ಯಾವುದಾದರೂ ಸೂಚನೆಯ ಮೂಲಕ ತಿಳಿಸಬಹುದೆಂದು ಬೆನ್ಹದದನ ಜನರು ಅಪೇಕ್ಷೆಪಟ್ಟಿದ್ದರು. ಅಹಾಬನು ಬೆನ್ಹದದನನ್ನು ತನ್ನ ಸೋದರನೆಂದು ಕರೆದಾಗ, ಸಲಹೆಗಾರರು ತ್ವರಿತವಾಗಿ, “ಹೌದು! ಬೆನ್ಹದದನು ನಿನ್ನ ಸೋದರನೇ” ಎಂದರು.
ಅಹಾಬನು, “ಅವನನ್ನು ನನ್ನ ಬಳಿಗೆ ಕರೆತನ್ನಿ” ಎಂದನು. ಬೆನ್ಹದದನು ರಾಜನಾದ ಅಹಾಬನ ಬಳಿಗೆ ಬಂದನು. ರಾಜನಾದ ಅಹಾಬನು ಅವನನ್ನು ತನ್ನೊಡನೆ ರಥದಲ್ಲಿ ಕುಳ್ಳಿರಿಸಿಕೊಂಡನು.
34 ಬೆನ್ಹದದನು ಅವನಿಗೆ, “ಅಹಾಬನೇ, ನನ್ನ ತಂದೆಯು ನಿನ್ನ ತಂದೆಯಿಂದ ವಶಪಡಿಸಿಕೊಂಡಿರುವ ಪಟ್ಟಣಗಳನ್ನು ನಿನಗೇ ಬಿಟ್ಟುಬಿಡುತ್ತೇನೆ. ನನ್ನ ತಂದೆಯು ಸಮಾರ್ಯದಲ್ಲಿ ಮಾಡಿದಂತೆ ನೀನೂ ದಮಸ್ಕದಲ್ಲಿ ಅಂಗಡಿಗಳನ್ನು ಹಾಕಬಹುದು” ಎಂದನು.
ಅಹಾಬನು, “ನೀನು ಇದಕ್ಕೆ ಒಪ್ಪಿಕೊಂಡರೆ, ನಾನು ನಿನ್ನನ್ನು ಸ್ವತಂತ್ರವಾಗಿ ಹೋಗಲು ಬಿಡುತ್ತೇನೆ” ಎಂದನು. ಆ ಇಬ್ಬರು ರಾಜರುಗಳು ಶಾಂತಿಸಂಧಾನವನ್ನು ಮಾಡಿಕೊಂಡರು. ರಾಜನಾದ ಅಹಾಬನು ಬೆನ್ಹದದನಿಗೆ ಸ್ವತಂತ್ರವನ್ನು ಕೊಟ್ಟು ಕಳುಹಿಸಿದನು.
ಅಹಾಬನ ವಿರುದ್ಧವಾಗಿ ಪ್ರವಾದನೆ
35 ಪ್ರವಾದಿಗಳಲ್ಲಿ ಒಬ್ಬನು ಮತ್ತೊಬ್ಬ ಪ್ರವಾದಿಗೆ, “ನನ್ನನ್ನು ಹೊಡಿ” ಎಂದು ಹೇಳಿದನು. ಹೀಗೆ ಹೇಳುವಂತೆ ಯೆಹೋವನೇ ಅವನಿಗೆ ಆಜ್ಞಾಪಿಸಿದ್ದನು. ಆದರೆ ಇನ್ನೊಬ್ಬ ಪ್ರವಾದಿಯು ಅವನನ್ನು ಹೊಡೆಯಲಿಲ್ಲ. 36 ಆದ್ದರಿಂದ ಮೊದಲನೆಯ ಪ್ರವಾದಿಯು, “ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಈ ಸ್ಥಳವನ್ನು ಬಿಟ್ಟು ಹೊರಟಾಗ ನಿನ್ನನ್ನು ಒಂದು ಸಿಂಹವು ಕೊಂದುಹಾಕುತ್ತದೆ” ಎಂದು ಹೇಳಿದನು. ಎರಡನೆಯ ಪ್ರವಾದಿಯು ಆ ಸ್ಥಳವನ್ನು ಬಿಟ್ಟು ಹೊರಟಾಗ ಒಂದು ಸಿಂಹವು ಅವನನ್ನು ಕೊಂದುಹಾಕಿತು.
37 ಮೊದಲನೆಯ ಪ್ರವಾದಿಯು ಇನ್ನೊಬ್ಬ ಮನುಷ್ಯನ ಹತ್ತಿರಕ್ಕೆ ಹೋಗಿ, “ನನ್ನನ್ನು ಹೊಡಿ!” ಎಂದು ಅವನಿಗೆ ಹೇಳಿದನು.
ಈ ಮನುಷ್ಯನು ಅವನನ್ನು ಹೊಡೆದನು. ಪ್ರವಾದಿಗೆ ಗಾಯವಾಯಿತು. 38 ಪ್ರವಾದಿಯು ತನ್ನ ಕಣ್ಣಿನ ಮೇಲೆ ಬಟ್ಟೆಯನ್ನು ಕಟ್ಟಿಕೊಂಡನು. ತನ್ನನ್ನು ಯಾರೂ ಗುರುತಿಸಬಾರದೆಂದು ಅವನು ಹೀಗೆ ಕಟ್ಟಿಕೊಂಡನು. ಬಳಿಕ ಆ ಪ್ರವಾದಿಯು ಹೋಗಿ, ರಾಜನಿಗಾಗಿ ರಸ್ತೆಯಂಚಿನಲ್ಲಿ ಕಾಯುತ್ತಿದ್ದನು. 39 ರಾಜನು ಅಲ್ಲಿಗೆ ಬಂದಾಗ, ಪ್ರವಾದಿಯು ಅವನಿಗೆ, “ನಾನು ಯುದ್ಧದಲ್ಲಿ ಹೋರಾಡುವುದಕ್ಕೆ ಹೋಗಿದ್ದೆನು. ನಿನ್ನವನಾದ ಒಬ್ಬ ಮನುಷ್ಯನು ಶತ್ರುವಿನ ಸೈನಿಕನೊಬ್ಬನನ್ನು ನನ್ನ ಬಳಿಗೆ ಕರೆದುಕೊಂಡು ಬಂದು, ‘ಈ ಮನುಷ್ಯನನ್ನು ರಕ್ಷಿಸು. ಇವನು ಓಡಿಹೋದರೆ, ಇವನ ಜೀವಕ್ಕೆ ಬದಲಾಗಿ ನಿನ್ನ ಜೀವವನ್ನು ಕೊಡಬೇಕಾಗುವುದು ಅಥವಾ ಬೆಳ್ಳಿಯ ಮೂವತ್ನಾಲ್ಕು ಕಿಲೋಗ್ರಾಂ ದಂಡ ಕೊಡಬೇಕಾಗುವುದು’ ಎಂದನು. 40 ಆದರೆ ನಾನು ಇತರ ಕೆಲಸಗಳಲ್ಲಿ ನಿರತನಾಗಿದ್ದಾಗ, ಆ ಮನುಷ್ಯನು ಓಡಿಹೋದನು” ಎಂದು ಹೇಳಿದನು.
ಇಸ್ರೇಲಿನ ರಾಜನು, “ಆ ಸೈನಿಕನು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟ ನೀನು ನಿನ್ನನ್ನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವೆ. ಆದ್ದರಿಂದ, ಅದರ ಪರಿಹಾರವೂ ನಿನಗೆ ತಿಳಿದಿದೆ. ಆ ಮನುಷ್ಯನೇನು ಹೇಳಿದನೊ ಅದನ್ನು ನೀನು ಮಾಡಲೇಬೇಕು” ಎಂದು ಉತ್ತರಿಸಿದನು.
41 ಆಗ ಆ ಪ್ರವಾದಿಯು ತನ್ನ ಕಣ್ಣುಗಳ ಮೇಲಿನ ಬಟ್ಟೆಯನ್ನು ಸರಿಸಿದ್ದರಿಂದ ಅವನು ಪ್ರವಾದಿಗಳಲ್ಲಿ ಒಬ್ಬನೆಂಬುದು ಇಸ್ರೇಲಿನ ರಾಜನಿಗೆ ತಿಳಿಯಿತು. 42 ಬಳಿಕ ಪ್ರವಾದಿಯು ರಾಜನಿಗೆ, “ಯೆಹೋವನು ನಿನಗೆ ಹೀಗೆನ್ನುತ್ತಾನೆ, ‘ನಾನು ಸಂಹರಿಸೆಂದು ಹೇಳಿದ ಮನುಷ್ಯನನ್ನು ನೀನು ಸ್ವತಂತ್ರನಾಗಿಸಿದೆ. ಆದ್ದರಿಂದ ಅವನಿಗೆ ಸಂಭವಿಸಬೇಕಾದದ್ದು ನಿನಗೆ ಸಂಭವಿಸುವುದು. ನೀನು ಸಾಯುವೆ! ಶತ್ರುಗಳಿಗೆ ಸಂಭವಿಸಬೇಕಾದದ್ದು ನಿನ್ನ ಜನರಿಗೆ ಸಂಭವಿಸುವುದು. ನಿನ್ನ ಜನರು ಸಾಯುತ್ತಾರೆ!’” ಎಂದು ಹೇಳಿದನು.
43 ನಂತರ ರಾಜನು ಸಮಾರ್ಯದಲ್ಲಿದ್ದ ತನ್ನ ಅರಮನೆಗೆ ಹಿಂದಿರುಗಿದನು. ಅವನು ಬೇಸರಗೊಂಡಿದ್ದನು ಮತ್ತು ಕೋಪಗೊಂಡಿದ್ದನು.