ಬೀಜ ಬಿತ್ತುವ ರೈತನ ಸಾಮ್ಯ
(ಮತ್ತಾಯ 13:1-9; 8:4-8)
4
1 ಮತ್ತೊಂದು ಸಮಯದಲ್ಲಿ ಯೇಸು ಸರೋವರದ ತೀರದಲ್ಲಿ ಉಪದೇಶಿಸಲಾರಂಭಿಸಿದನು. ಅನೇಕಾನೇಕ ಜನರು ಆತನ ಸುತ್ತಲೂ ಸೇರಿದರು. ಯೇಸು ಒಂದು ದೋಣಿಯೊಳಕ್ಕೆ ಹೋಗಿ ಕುಳಿತು ಸರೋವರದ ದಡದಿಂದ ಸ್ವಲ್ಪದೂರ ಹೋದನು. ಜನರೆಲ್ಲರೂ ಸರೋವರದ ದಡದ ಮೇಲಿದ್ದರು.
2 ಯೇಸು ದೋಣಿಯಲ್ಲಿ ಕುಳಿತುಕೊಂಡು ಅವರಿಗೆ ಅನೇಕ ಸಾಮ್ಯಗಳ ಮೂಲಕ ಉಪದೇಶಿಸಿದನು. ಆತನು ಹೇಳಿದ್ದೇನೆಂದರೆ:
3 “ಕೇಳಿರಿ! ಒಬ್ಬ ರೈತನು ಬೀಜ ಬಿತ್ತಲು ಹೊಲಕ್ಕೆ ಹೋದನು.
4 ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಆ ಬೀಜಗಳನ್ನೆಲ್ಲ ತಿಂದುಬಿಟ್ಟವು.
5 ಕೆಲವು ಬೀಜಗಳು ಬಂಡೆಯ ನೆಲದ ಮೇಲೆ ಬಿದ್ದವು. ಆ ನೆಲದಲ್ಲಿ ಸಾಕಷ್ಟು ಮಣ್ಣಿರಲಿಲ್ಲ. ನೆಲವು ಆಳವಾಗಿಲ್ಲದಿದ್ದ ಕಾರಣ ಬೀಜಗಳು ಬಹಳ ಬೇಗನೆ ಮೊಳೆತವು.
6 ಆದರೆ ಸೂರ್ಯನು ಮೇಲೇರಿದಾಗ, ಆಳವಾದ ಬೇರಿಲ್ಲದ ಕಾರಣ ಆ ಸಸಿಗಳು ಒಣಗಿಹೋದವು.
7 ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು, ಒಳ್ಳೆಯ ಗಿಡಗಳನ್ನು ಬೆಳೆಯದಂತೆ ತಡೆದವು. ಆದ್ದರಿಂದ ಆ ಗಿಡಗಳು ಫಲ ಕೊಡಲಿಲ್ಲ.
8 ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಆ ಬೀಜಗಳು ಮೊಳೆತು, ಬೆಳೆದು, ಫಲಬಿಟ್ಟವು. ಕೆಲವು ಗಿಡಗಳು ಮೂವತ್ತರಷ್ಟು ಹೆಚ್ಟಾಗಿ, ಇನ್ನು ಕೆಲವು ಗಿಡಗಳು ಅರವತ್ತರಷ್ಟು ಹೆಚ್ಚಾಗಿ ಮತ್ತು ಬೇರೆ ಕೆಲವು ಗಿಡಗಳು ನೂರರಷ್ಟು ಹೆಚ್ಚಾಗಿ ಫಲಕೊಟ್ಟವು.”
9 ನಂತರ ಯೇಸು, “ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!” ಎಂದು ಹೇಳಿದನು.
ಯೇಸು ಸಾಮ್ಯಗಳನ್ನು ಬಳಸಲು ಕಾರಣವೇನು?
(ಮತ್ತಾಯ 13:10-17; ಲೂಕ 8:9-10)
10 ತರುವಾಯ, ಯೇಸು ಒಬ್ಬನೇ ಇದ್ದಾಗ ಹನ್ನೆರಡು ಮಂದಿ ಅಪೊಸ್ತಲರು ಮತ್ತು ಯೇಸುವಿನ ಇತರ ಶಿಷ್ಯರು ಆ ಸಾಮ್ಯಗಳ ಕುರಿತು ಆತನನ್ನು ಕೇಳಿದರು.
11 ಯೇಸು, “ದೇವರ ರಾಜ್ಯದ ಸತ್ಯದ ಗುಟ್ಟನ್ನು ನೀವು ಮಾತ್ರ ತಿಳಿದುಕೊಳ್ಳತಕ್ಕದ್ದು. ಆದರೆ ಇತರ ಎಲ್ಲಾ ಜನರಿಗೆ ನಾನು ಸಾಮ್ಯಗಳ ಮೂಲಕವಾಗಿ ಎಲ್ಲವನ್ನೂ ಹೇಳುತ್ತೇನೆ.
12 ಏಕೆಂದರೆ:
‘ಅವರು ಕಣ್ಣಾರೆ ನೋಡಿಯೂ ಕಾಣರು.
ಕಿವಿಯಾರೆ ಕೇಳಿಯೂ ಗ್ರಹಿಸರು.
ಅವರು ನೋಡಿ ಗ್ರಹಿಸಿಕೊಂಡರೆ, ಪರಿವರ್ತನೆಗೊಂಡು ಪಾಪಕ್ಷಮೆ ಹೊಂದಿಯಾರು’” ಎಂದನು. ಯೆಶಾಯ 6:9-10
ಬಿತ್ತಲ್ಪಟ್ಟ ಬೀಜದ ಕುರಿತು ಯೇಸು ಕೊಟ್ಟ ವಿವರಣೆ
(ಮತ್ತಾಯ 13:18-23; ಲೂಕ 8:11-15)
13 ನಂತರ ಯೇಸು ತನ್ನ ಶಿಷ್ಯರಿಗೆ, “ನಿಮಗೆ ಈ ಸಾಮ್ಯ ಅರ್ಥವಾಯಿತೇ? ನೀವು ಇದನ್ನೇ ಅರ್ಥಮಾಡಿಕೊಳ್ಳದಿದ್ದರೆ ಬೇರೆ ಯಾವ ಸಾಮ್ಯವನ್ನು ಅರ್ಥಮಾಡಿಕೊಳ್ಳುವಿರಿ?
14 ರೈತನು ದೇವರ ವಾಕ್ಯವನ್ನು ಬಿತ್ತುವವನಿಗೆ ಹೋಲಿಕೆಯಾಗಿದ್ದಾನೆ.
15 ಕೆಲವು ಜನರು ದೇವರ ವಾಕ್ಯವನ್ನು ಕೇಳುತ್ತಾರೆ. ಆದರೆ ಅವರಲ್ಲಿ ಬಿತ್ತಿದ ವಾಕ್ಯವನ್ನು ಸೈತಾನನು ಬಂದು ತೆಗೆದುಬಿಡುತ್ತಾನೆ. ಈ ಜನರೇ ದಾರಿಯ ಮಗ್ಗುಲಾಗಿದ್ದಾರೆ.
16 “ಇನ್ನು ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ಸಂತೋಷದಿಂದ ಅದನ್ನು ಬೇಗನೆ ಸ್ವೀಕರಿಸಿಕೊಳ್ಳುತ್ತಾರೆ.
17 ಆದರೆ ಆ ವಾಕ್ಯವು ತಮ್ಮಲ್ಲಿ ಆಳವಾಗಿ ಬೇರೂರಲು ಅವರು ಅವಕಾಶ ನೀಡುವುದಿಲ್ಲ. ಅವರು ಆ ವಾಕ್ಯವನ್ನು ಸ್ವಲ್ಪಕಾಲ ಮಾತ್ರ ಸ್ವೀಕರಿಸಿಕೊಂಡಿರುತ್ತಾರೆ. ಆ ವಾಕ್ಯದ ದೆಸೆಯಿಂದ ತೊಂದರೆಯಾಗಲಿ ಹಿಂಸೆಯಾಗಲಿ ಬಂದಾಗ ಅವರು ಅದನ್ನು ಬಹುಬೇಗನೆ ತ್ಯಜಿಸುತ್ತಾರೆ. ಇವರೇ ಬೀಜಬಿದ್ದ ಬಂಡೆಯ ನೆಲವಾಗಿದ್ದಾರೆ.
18 “ಇನ್ನು ಕೆಲವರು ಮುಳ್ಳಿನ ಗಿಡಗಳ ನೆಲದಂತಿರುವರು. ಈ ಜನರು ವಾಕ್ಯವನ್ನು ಕೇಳುತ್ತಾರೆ.
19 ಆದರೆ ಈ ಜೀವಿತದ ಚಿಂತೆಗಳು, ಹಣದ ಮೇಲಿನ ವ್ಯಾಮೋಹ ಮತ್ತು ಇತರ ಎಲ್ಲಾ ವಿಧವಾದ ಆಸೆಗಳು ಅವರಲ್ಲಿ ಬಿದ್ದ ವಾಕ್ಯಕ್ಕೆ ಬೆಳೆಯಲು ಅವಕಾಶ ಕೊಡುವುದಿಲ್ಲ. ಆದ್ದರಿಂದ ಅವರ ಜೀವಿತದಲ್ಲಿ ವಾಕ್ಯವು ಫಲ ಫಲಿಸುವುದಿಲ್ಲ.
20 “ಇನ್ನು ಕೆಲವರು ಬೀಜಬಿದ್ದ ಒಳ್ಳೆಯ ನೆಲದಂತಿದ್ದಾರೆ. ಅವರು ವಾಕ್ಯವನ್ನು ಸ್ವೀಕರಿಸಿಕೊಂಡು ಫಲವನ್ನು ಫಲಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೂವತ್ತರಷ್ಟು ಹೆಚ್ಚಾಗಿ, ಇನ್ನು ಕೆಲವು ಸಂದರ್ಭಗಳಲ್ಲಿ ಅರವತ್ತರಷ್ಟು ಹೆಚ್ಚಾಗಿ, ಮತ್ತೆ ಕೆಲವು ಸಂಧರ್ಭಗಳಲ್ಲಿ ನೂರರಷ್ಟು ಹೆಚ್ಚಾಗಿ ಫಲ ಫಲಿಸುತ್ತಾರೆ” ಎಂದು ಹೇಳಿದನು.
ಉರಿಯುವ ದೀಪದಂತಿರಿ
(ಲೂಕ 8:16-18)
21 ನಂತರ ಯೇಸು ಅವರಿಗೆ, “ನೀವು ಉರಿಯುತ್ತಿರುವ ದೀಪವನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಇಡುತ್ತೀರಾ? ಇಲ್ಲ! ದೀಪವನ್ನು ದೀಪಸ್ತಂಭದ ಮೇಲೆ ಇಡುವಿರಿ.
22 ಆಗ ಪ್ರತಿಯೊಂದೂ ಸ್ಪಷ್ಟವಾಗಿ ಗೋಚರವಾಗುವುದು. ರಹಸ್ಯವಾದ ಪ್ರತಿಯೊಂದೂ ಬಟ್ಟಬಯಲಾಗುವುದು.
23 ನನ್ನ ಮಾತುಗಳನ್ನು ಕೇಳುತ್ತಿರುವ ಜನರೇ, ಆಲಿಸಿರಿ!
24 ನೀವು ಕೇಳುತ್ತಿರುವ ಪ್ರತಿಯೊಂದು ವಿಷಯವನ್ನು ಎಚ್ಚರಿಕೆಯಿಂದ ಆಲೋಚಿಸಿರಿ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ನೀವು ಕೊಟ್ಟದ್ದಕ್ಕಿಂತ ಹೆಚ್ಚಾಗಿ ಕೊಡುವರು.
25 ಯಾವನಲ್ಲಿ ಹೆಚ್ಚಾಗಿರುತ್ತದೆಯೋ ಅವನಿಗೆ ಇನ್ನೂ ಕೊಡಲಾಗುವುದು. ಯಾವನಲ್ಲಿ ಇರುವುದಿಲ್ಲವೋ ಅವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು” ಎಂದು ಹೇಳಿದನು.
ಬಿತ್ತಲ್ಪಟ್ಟ ಬೀಜವನ್ನು ಕುರಿತು ಯೇಸು ಹೇಳಿದ ಸಾಮ್ಯ
26 ನಂತರ ಯೇಸು, “ದೇವರ ರಾಜ್ಯವು ಭೂಮಿಯಲ್ಲಿ ಬೀಜ ಬಿತ್ತಿದ ಮನುಷ್ಯನಂತಿದೆ.
27 ಬೀಜವು ಹಗಲಿರುಳು ಬೆಳೆಯುತ್ತದೆ. ರೈತನು ಮಲಗಿರುವಾಗಲೂ ಎಚ್ಚರದಿಂದಿರುವಾಗಲೂ ಬೀಜ ಬೆಳೆಯುತ್ತಲೇ ಇರುವುದು. ಬೀಜ ಹೇಗೆ ಬೆಳೆಯುತ್ತದೆಂಬುದು ರೈತನಿಗೆ ತಿಳಿಯುವುದಿಲ್ಲ.
28 ಭೂಮಿಯು ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೇ ತಾನೇ ಉತ್ಪತ್ತಿಮಾಡುತ್ತದೆ.
29 ತೆನೆಯು ಬಲಿತಾಗ ರೈತನು ಗಿಡವನ್ನು ಕೊಯ್ಯುವನು. ಇದನ್ನೇ ಸುಗ್ಗಿಕಾಲ ಎನ್ನುವರು” ಎಂದು ಹೇಳಿದನು.
ದೇವರ ರಾಜ್ಯವು ಸಾಸಿವೆ ಕಾಳಿನಂತಿದೆ
(ಮತ್ತಾಯ 13:31-32, 34-35; ಲೂಕ 13:18-19)
30 ನಂತರ ಯೇಸು, “ದೇವರ ರಾಜ್ಯದ ಬಗ್ಗೆ ವಿವರಿಸಲು ನಾನು ನಿಮಗೆ ಯಾವ ಸಾಮ್ಯವನ್ನು ಹೇಳಲಿ?
31 ದೇವರ ರಾಜ್ಯವು ಸಾಸಿವೆ ಕಾಳಿನಂತಿರುತ್ತದೆ. ನೀವು ಭೂಮಿಯಲ್ಲಿ ಬಿತ್ತುವ ಕಾಳುಗಳಲ್ಲಿ ಸಾಸಿವೆ ಕಾಳು ಅತ್ಯಂತ ಸಣ್ಣದಾಗಿದೆ.
32 ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.
33 ಯೇಸು ಇಂಥ ಅನೇಕ ಸಾಮ್ಯಗಳ ಮೂಲಕ ಜನರಿಗೆ ಅರ್ಥವಾಗುವಂತೆ ಉಪದೇಶಿಸಿದನು.
34 ಯೇಸುವು ಜನರಿಗೆ ಯಾವಾಗಲೂ ಸಾಮ್ಯಗಳ ಮೂಲಕ ಉಪದೇಶಿಸಿದನು. ಆದರೆ ತನ್ನ ಶಿಷ್ಯರು ಮಾತ್ರ ಇರುವಾಗ ಎಲ್ಲವನ್ನೂ ಅವರಿಗೆ ವಿವರಿಸಿ ತಿಳಿಸುತ್ತಿದ್ದನು.
ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ
(ಮತ್ತಾಯ 8:23-27; ಲೂಕ 8:22-25)
35 ಆ ದಿನ ಸಂಜೆ, ಯೇಸು ತನ್ನ ಶಿಷ್ಯರಿಗೆ “ನನ್ನೊಂದಿಗೆ ಬನ್ನಿ, ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು.
36 ಯೇಸು ಮತ್ತು ಆತನ ಶಿಷ್ಯರು ಅಲ್ಲಿದ್ದ ಜನರನ್ನು ಅಲ್ಲಿಯೇ ಬಿಟ್ಟುಹೋದರು. ಯೇಸು ಕುಳಿತುಕೊಂಡು ಉಪದೇಶಿಸುತ್ತಿದ್ದ ದೋಣಿಯಲ್ಲಿಯೇ ಅವರು ಹೋದರು. ಅವರೊಂದಿಗೆ ಬೇರೆ ದೋಣಿಗಳೂ ಇದ್ದವು.
37 ಅವರು ಹೋಗುತ್ತಿರಲು ಸರೋವರದ ಮೇಲೆ ಬಿರುಗಾಳಿ ಬೀಸಿತು. ಎತ್ತರವಾದ ಅಲೆಗಳು ದೋಣಿಗೆ ಅಪ್ಪಳಿಸತೊಡಗಿದ್ದರಿಂದ ದೋಣಿಯು ನೀರಿನಿಂದ ತುಂಬಿಹೋಯಿತು.
38 ಯೇಸುವು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು. ಶಿಷ್ಯರು ಆತನ ಬಳಿಗೆ ಹೋಗಿ, ಆತನನ್ನು ಎಬ್ಬಿಸಿ, “ಗುರುವೇ, ನೀನು ನಮ್ಮ ಬಗ್ಗೆ ಚಿಂತಿಸುವುದಿಲ್ಲವೆ? ನಾವು ಮುಳುಗಿಹೋಗುತ್ತಿದ್ದೇವೆ!” ಎಂದರು.
39 ಯೇಸು ಎಚ್ಚೆತ್ತು ಬಿರುಗಾಳಿ ಮತ್ತು ಅಲೆಗಳಿಗೆ, “ಪ್ರಶಾಂತವಾಗಿರಿ! ಮೊರೆಯದಿರಿ!” ಎಂದು ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತುಹೋಯಿತು ಮತ್ತು ಸರೋವರವು ಪ್ರಶಾಂತವಾಯಿತು.
40 ಯೇಸು ತನ್ನ ಶಿಷ್ಯರಿಗೆ, “ನೀವೇಕೆ ಹೆದರುತ್ತೀರಿ? ನಿಮ್ಮಲ್ಲಿ ಇನ್ನೂ ನಂಬಿಕೆಯಿಲ್ಲವೇ?” ಎಂದು ಕೇಳಿದನು.
41 ಶಿಷ್ಯರು ಬಹಳ ಭಯಪಟ್ಟು, “ಈತನು ಯಾರಿರಬಹುದು? ಗಾಳಿ ಮತ್ತು ನೀರು ಸಹ ಈತನ ಮಾತನ್ನು ಕೇಳುತ್ತವೆಯಲ್ಲಾ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.