ದೇವದೂತರಿಂದ ಕೊನೆಯ ಉಪದ್ರವಗಳು
15
ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.
ಬೆಂಕಿಯನ್ನು ಬೆರಸಿದ ಗಾಜಿನ ಸಮುದ್ರದಂತೆ ಕಾಣಿಸುವ ಏನೋ ಒಂದು ನನಗೆ ಕಾಣಿಸಿತು. ಮೃಗವನ್ನು, ಅದರ ವಿಗ್ರಹವನ್ನು ಮತ್ತು ಅದರ ಹೆಸರಿನ ಸಂಖ್ಯೆಯನ್ನು ಸೋಲಿಸಿ ಜಯಗಳಿಸಿದವರೆಲ್ಲರೂ ಸಮುದ್ರ ತೀರದಲ್ಲಿ ನಿಂತಿದ್ದರು. ದೇವರು ಅವರಿಗೆ ನೀಡಿದ ತಂತಿವಾದ್ಯಗಳು ಅವರಲ್ಲಿದ್ದವು. ಅವರು ದೇವರ ಸೇವಕನಾದ ಮೋಶೆಯ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ,
ನೀನು ಮಹತ್ತಾದ ಕಾರ್ಯಗಳನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ಮಾಡುವೆ.
ಸರ್ವಜನಾಂಗಗಳ ರಾಜನೇ,
ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ;
ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ.
ನೀನು ಮಾತ್ರ ಪರಿಶುದ್ಧನಾದವನು.
ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ
ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”
ಇದಾದ ನಂತರ ನಾನು ನೋಡಿದಾಗ ಪರಲೋಕದ ಆಲಯವು (ದೇವದರ್ಶನ ಗುಡಾರವು) ತೆರೆಯಿತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಆಲಯದಿಂದ ಹೊರಗೆ ಬಂದರು. ಅವರು ಶುಭ್ರವಾದ ಮತ್ತು ಪ್ರಕಾಶಮಾನವಾದ ನಾರುಮಡಿಯನ್ನು ಧರಿಸಿದ್ದರು. ಅವರು ಎದೆಯ ಸುತ್ತಲೂ ಚಿನ್ನದ ಪಟ್ಟಿಗಳನ್ನು ಕಟ್ಟಿಕೊಂಡಿದ್ದರು. ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ನೀಡಿತು. ಈ ಪಾತ್ರೆಗಳು ಯುಗಯುಗಾಂತರಗಳಲ್ಲಿಯೂ ಜೀವಿಸುವ ದೇವರ ಕೋಪದಿಂದ ತುಂಬಿದ್ದವು. ದೇವರ ವೈಭವ ಮತ್ತು ಶಕ್ತಿಯ ಹೊಗೆಯಿಂದ ಆಲಯವು ತುಂಬಿಹೋಯಿತು. ಏಳು ದೇವದೂತರ ಏಳು ಉಪದ್ರವಗಳು ಮುಗಿಯುವ ತನಕ ಆಲಯದಲ್ಲಿ ಪ್ರವೇಶಿಸಲು ಯಾರಿಗೂ ಸಾಧ್ಯವಿರಲಿಲ್ಲ.