ನೂತನ ಜೆರುಸಲೇಮ್
21
ನಂತರ ನೂತನ ಪರಲೋಕವನ್ನು ಮತ್ತು ನೂತನ ಭೂಮಿಯನ್ನು* ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭೂಮಿ ಅದೃಶ್ಯವಾಗಿದ್ದವು. ಅಲ್ಲಿ ಸಮುದ್ರವಿರಲಿಲ್ಲ. ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜೆರುಸಲೇಮ್. ವಧುವು ತನ್ನ ಪತಿಗಾಗಿ ಶೃಂಗರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.
ಸಿಂಹಾಸನದಿಂದ ಒಂದು ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು, “ಈಗ ದೇವರ ಮನೆಯು ಜನರ ಸಂಗಡವಿದೆ. ಆತನು ಅವರೊಂದಿಗೆ ನೆಲೆಸುತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರಾಗಿರುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.
ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.
ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ. ಜಯಗಳಿಸುವವನು ಇದೆಲ್ಲವನ್ನು ಪಡೆಯುತ್ತಾನೆ. ನಾನು ಅವನ ದೇವರಾಗಿರುತ್ತೇನೆ, ಅವನು ನನ್ನ ಮಗನಾಗಿರುತ್ತಾನೆ. ಆದರೆ ಹೇಡಿಗಳಿಗೆ, ನಂಬಿಕೆಯಿಲ್ಲದವರಿಗೆ, ಅಸಹ್ಯಕೃತ್ಯ ಮಾಡುವವರಿಗೆ, ಕೊಲೆಗಾರರಿಗೆ, ಲೈಂಗಿಕ ಪಾಪಮಾಡುವವರಿಗೆ, ಮಾಟಮಂತ್ರಗಾರರಿಗೆ, ವಿಗ್ರಹಾರಾಧಕರಿಗೆ, ಸುಳ್ಳುಗಾರರಿಗೆ ಸಿಕ್ಕುವ ಸ್ಥಳ ಬೆಂಕಿಗಂಧಕಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”
ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು. 10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.
11 ಆ ನಗರವು ದೇವರ ಪ್ರಭಾವದಿಂದ ಪ್ರಕಾಶಿಸುತ್ತಿತ್ತು. ಅದು ಬಹು ಬೆಲೆಬಾಳುವ ವಜ್ರದಂತೆ ಪ್ರಕಾಶಿಸುತ್ತಿತ್ತು. ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. 12 ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು. 13 ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 ಆ ನಗರದ ಗೋಡೆಗಳನ್ನು ಹನ್ನೆರಡು ಅಡಿಪಾಯದ ಕಲ್ಲುಗಳ ಮೇಲೆ ಕಟ್ಟಲಾಗಿತ್ತು. ಆ ಕಲ್ಲುಗಳ ಮೇಲೆ ಕುರಿಮರಿಯಾದಾತನ ಹನ್ನರೆಡು ಮಂದಿ ಅಪೊಸ್ತಲರ ಹೆಸರುಗಳನ್ನು ಬರೆಯಲಾಗಿತ್ತು.
15 ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಚಿನ್ನದ ಅಳತೆಗೋಲಿತ್ತು. ಆ ನಗರವನ್ನು, ಅದರ ಬಾಗಿಲುಗಳನ್ನು ಮತ್ತು ಅದರ ಗೋಡೆಯನ್ನು ದೇವದೂತನು ಆ ಕೋಲಿನಿಂದ ಅಳೆಯುತ್ತಿದ್ದನು. 16 ನಗರವನ್ನು ಚೌಕೋನವಾಗಿ ನಿರ್ಮಿಸಲಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳೆದನು. ನಗರವು 1,500 ಮೈಲಿ ಉದ್ದ, 1,500 ಮೈಲಿ ಅಗಲ ಮತ್ತು 1,500 ಮೈಲಿ ಎತ್ತರವಾಗಿತ್ತು. 17 ದೇವದೂತನು ಗೋಡೆಯನ್ನೂ ಅಳೆದನು. ಅದು ಮನುಷ್ಯರ ಮೊಳದಲ್ಲಿ 144 ಮೊಳವಿತ್ತು. ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು. 18 ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟವಾದ ಚಿನ್ನದಿಂದ ನಿರ್ಮಿಸಲಾಗಿತ್ತು.
19 ನಗರದ ಗೋಡೆಯ ಅಡಿಪಾಯದ ಕಲ್ಲುಗಳಲ್ಲಿ ಸಕಲ ವಿಧವಾದ ಬೆಲೆಬಾಳುವ ರತ್ನಗಳಿದ್ದವು. ಮೊದಲನೆ ಮೂಲೆಗಲ್ಲು ವಜ್ರ, ಎರಡನೆಯದು ವೈಢೂರ್ಯ, ಮೂರನೆಯದು ಪಚ್ಚೆ, 20 ನಾಲ್ಕನೆಯದು ಪದ್ಮರಾಗ, ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ ಮತ್ತು ಹನ್ನೆರಡನೆಯದು ನೀಲಸ್ಫಟಿಕ. 21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.
22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ. 23 ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.
24 ಕುರಿಮರಿಯಾದಾತನು ನೀಡಿದ ಬೆಳಕಿನಿಂದ ಲೋಕದ ಜನರು ನಡೆಯುತ್ತಾರೆ. ಲೋಕದ ರಾಜರುಗಳು ತಮ್ಮ ಸಿರಿಸಂಪತ್ತನ್ನು ನಗರಕ್ಕೆ ತರುತ್ತಾರೆ. 25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ. 26 ಜನಾಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. 27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.

* 21:1: ನೂತನ … ಭೂಮಿಯನ್ನು ನೋಡಿರಿ: ಯೆಶಾಯ 65:17; 66:22; 2 ಪೇತ್ರ 3:13.
† 21:16: 1,500 ಮೈಲಿ ಅಂದರೆ ಸುಮಾರು 2,200 ಕಿಲೋಮೀಟರ್‌ಗಳು.
‡ 21:17: 144 ಮೊಳ ಅಂದರೆ ಸುಮಾರು 72 ಮೀಟರ್ ಅಥವಾ 210 ಅಡಿಗಳು.