ಯಾರು ಸುರುಳಿಯನ್ನು ಬಿಚ್ಚಬಲ್ಲರು?
5
1 ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ನೋಡಿದೆನು. ಅದರ ಎರಡು ಕಡೆಗಳಲ್ಲಿಯೂ ಬರಹವಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
2 ಬಲಿಷ್ಠನಾದ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ಈ ಸುರುಳಿಯ ಮುದ್ರೆಗಳನ್ನು ತೆಗೆಯುವುದಕ್ಕೆ ಯೋಗ್ಯನಾದವನು ಯಾರು?” ಎಂದು ಪ್ರಕಟಿಸಿದನು.
3 ಆದರೆ ಪರಲೋಕದಲ್ಲಾಗಲಿ ಭೂಮಂಡಲದಲ್ಲಾಗಲಿ ಪಾತಾಳದಲ್ಲಾಗಲಿ ಈ ಸುರುಳಿಯನ್ನು ಬಿಚ್ಚಿ ನೋಡುವವರು ಯಾರೂ ಇರಲಿಲ್ಲವಾದ್ದರಿಂದ
4 ನಾನು ಮತ್ತೆಮತ್ತೆ ಗೋಳಾಡಿದೆನು.
5 ಆದರೆ ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ಯೂದ ಕುಲದ ಸಿಂಹವಾಗಿರುವಾತನು (ಕ್ರಿಸ್ತ) ಜಯಗಳಿಸಿದನು. ಆತನು ದಾವೀದನ ಸಂತತಿಯವನು. ಆತನು ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ತೆರೆಯಲು ಸಮರ್ಥನಾಗಿದ್ದಾನೆ” ಎಂದು ಹೇಳಿದನು.
6 ನಂತರ ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮಧ್ಯೆ ಒಂದು ಕುರಿಮರಿಯನ್ನು ನಾನು ನೋಡಿದೆನು. ಹಿರಿಯರು ಸಹ ಆ ಕುರಿಮರಿಯ ಸುತ್ತಲೂ ಇದ್ದರು. ಆ ಕುರಿಮರಿಯು ಕೊಲ್ಲಲ್ಪಟ್ಟಂತಿತ್ತು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇವು ಈ ಲೋಕಕ್ಕೆಲ್ಲಾ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳಾಗಿದ್ದವು.
7 ಆ ಕುರಿಮರಿಯು ಬಂದು ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಿಂದ ಸುರುಳಿಯನ್ನು ತೆಗೆದುಕೊಂಡಿತು.
8 ಆಗ ನಾಲ್ಕು ಜೀವಿಗಳು ಮತ್ತು ಇಪ್ಪತ್ನಾಲ್ಕು ಮಂದಿ ಹಿರಿಯರು ಆ ಕುರಿಮರಿಯ ಮುಂದೆ ಮೊಣಕಾಲೂರಿ ನಮಸ್ಕರಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ತಂತಿವಾದ್ಯವಿತ್ತು. ಧೂಪವು ತುಂಬಿದ್ದ ಚಿನ್ನದ ಪಾತ್ರೆಗಳನ್ನು ಅವರು ಹಿಡಿದುಕೊಂಡಿದ್ದರು. ಪಾತ್ರೆಗಳು ದೇವರ ಪರಿಶುದ್ಧ ಜನರ ಪ್ರಾರ್ಥನೆಗಳಾಗಿದ್ದವು.
9 ಅವರೆಲ್ಲರೂ ಕುರಿಮರಿಗೋಸ್ಕರ ಒಂದು ಹೊಸ ಹಾಡನ್ನು ಹಾಡಿದರು:
“ನೀನು ಕೊಲ್ಲಲ್ಪಟ್ಟವನಾದ್ದರಿಂದ,
ಸುರುಳಿಯನ್ನು ತೆಗೆದುಕೊಂಡು,
ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿರುವೆ.
ನೀನು ನಿನ್ನ ರಕ್ತದಿಂದ (ಮರಣದಿಂದ) ಸಕಲ ಕುಲ, ಭಾಷೆ,
ಜನಾಂಗಗಳಿಂದ ಜನರನ್ನು ದೇವರಿಗಾಗಿ ಕೊಂಡುಕೊಂಡಿರುವೆ.
10 ಅವರನ್ನು ಒಂದು ರಾಜ್ಯವನ್ನಾಗಿ ಮಾಡಿದೆ; ನಮ್ಮ ದೇವರಿಗೋಸ್ಕರ ಯಾಜಕರನ್ನಾಗಿ ಮಾಡಿದೆ;
ಅವರು ಲೋಕದಲ್ಲಿ ಆಳುವರು.”
11 ನಂತರ ನಾನು ನೋಡಿದಾಗ, ಅನೇಕ ದೇವದೂತರ ಧ್ವನಿಗಳನ್ನು ಕೇಳಿದೆನು. ಈ ದೇವದೂತರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸುತ್ತಲೂ ಇದ್ದರು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನು ಕೋಟಿಯಾಗಿಯೂ ಇತ್ತು.
12 ಈ ದೇವದೂತರು ಗಟ್ಟಿಯಾದ ಧ್ವನಿಯಿಂದ ಇಂತೆಂದರು:
“ವಧಿತನಾದ ಕುರಿಮರಿಯು ಅಧಿಕಾರವನ್ನು, ಸಂಪತ್ತನ್ನು, ಜ್ಞಾನವನ್ನು, ಬಲವನ್ನು,
ಗೌರವವನ್ನು, ಪ್ರಭಾವವನ್ನು, ಸ್ತೋತ್ರವನ್ನು ಪಡೆಯಲು ಯೋಗ್ಯನಾಗಿದ್ದಾನೆ!”
13 ಇದಲ್ಲದೆ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಭೂಮಿಯ ಕೆಳಭಾಗದಲ್ಲೂ ಸಮುದ್ರದಲ್ಲೂ ಇರುವ ಪ್ರತಿಯೊಂದು ಜೀವಿಗಳು ಹೀಗೆ ಹೇಳುವುದನ್ನು ಕೇಳಿದೆನು:
“ಸಿಂಹಾಸನದ ಮೇಲೆ ಕುಳಿತಿರುವಾತನಿಗೂ ಕುರಿಮರಿಯಾದಾತನಿಗೂ
ಸ್ತೋತ್ರ, ಗೌರವ, ಪ್ರಭಾವ, ಅಧಿಕಾರಗಳು ಯುಗಯುಗಾಂತರಗಳಲ್ಲಿಯೂ ಇರಲಿ!”
14 ಆ ನಾಲ್ಕು ಜೀವಿಗಳು “ಆಮೆನ್!” ಎಂದು ಹೇಳಿದವು. ಹಿರಿಯರು ಮೊಣಕಾಲೂರಿ ಆರಾಧಿಸಿದರು.