ಸರ್ವಜ್ಞಾನಿ, ಸರ್ವವ್ಯಾಪಿ ಅದ ದೇವರು 
 ೧೩೯
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. 
 ೧ ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳಿದುಕೊಂಡಿದ್ದೀ; 
 ೨ ನಾನು ಕುಳಿತುಕೊಳ್ಳುವುದು, ಏಳುವುದು ನಿನಗೆ ಗೊತ್ತಿದೆ, 
ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತಿ. 
 ೩ ನಾನು ನಡೆಯುವುದನ್ನು, ಮಲಗುವುದನ್ನು ಶೋಧಿಸಿ ಗ್ರಹಿಸಿಕೊಳ್ಳುತ್ತಿ, 
ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. 
 ೪ ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ, 
ನೀನು ಅರಿಯದೆ ಇರುವಂಥದು ಒಂದೂ ಇಲ್ಲ. 
 ೫ ಸುತ್ತಲೂ ನನ್ನನ್ನು ಆವರಿಸಿ, ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದಿ. 
 ೬ ಇಂಥ ಜ್ಞಾನವು ನನಗೆ ಬಹು ಆಶ್ಚರ್ಯವಾಗಿದೆ; 
ಅದು ಉನ್ನತವಾದದ್ದು, ನನಗೆ ನಿಲುಕುವುದಿಲ್ಲ. 
 ೭ ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? 
ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ? 
 ೮ ಮೇಲಣ ಲೋಕಕ್ಕೆ ಏರಿಹೋದರೆ ಅಲ್ಲಿ ನೀನಿರುತ್ತಿ, 
ಪಾತಾಳಕ್ಕೆ ಹೋಗಿ ಮಲಗಿಕೊಂಡೇನೆಂದರೆ ಅಲ್ಲಿಯೂ ನೀನಿರುವಿ. 
 ೯ ಅರುಣನ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಿ, 
ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಲು ಪ್ರಯತ್ನಿಸಿದರೆ, 
 ೧೦ ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು; 
ನಿನ್ನ ಬಲಗೈ ನನ್ನನ್ನು ಹಿಡಿದಿರುವುದು. 
 ೧೧ ಕಾರ್ಗತ್ತಲೆಯು ನನ್ನನ್ನು ಕವಿಯುವುದು, 
“ಹಗಲು ಹೋಗಿ ನನ್ನ ಸುತ್ತಲು ಇರುಳಾಗುವುದು” ಎಂದು ಹೇಳಿಕೊಂಡರೇನು? 
 ೧೨ ನಿನಗೆ ಕತ್ತಲೆಯು ಕತ್ತಲೆಯಲ್ಲ; ಇರುಳು ಹಗಲಾಗಿಯೇ ಇರುತ್ತದೆ, 
ಕತ್ತಲು ಬೆಳಕುಗಳೆರಡೂ ನಿನಗೆ ಒಂದೇ. 
 ೧೩ ನನ್ನ ಅಂತರೀಂದ್ರಿಯಗಳನ್ನು ಉಂಟುಮಾಡಿದವನೂ, 
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? 
 ೧೪ ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, 
ನಿನ್ನನ್ನು ಕೊಂಡಾಡುತ್ತೇನೆ. 
ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, 
ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ. 
 ೧೫ ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ, 
ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ, 
ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. 
 ೧೬ ನಾನು ಇನ್ನೂ ಕೇವಲ ಪಿಂಡವಾಗಿರುವಾಗ, 
ನಿನ್ನ ಕಣ್ಣುಗಳು ನನ್ನನ್ನು ನೋಡಿದವು, 
ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ, 
ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು. 
 ೧೭ ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ, 
ಅವುಗಳು ಎಷ್ಟೋ ಅಸಂಖ್ಯವಾಗಿವೆ. 
 ೧೮ ಅವುಗಳನ್ನು ಲೆಕ್ಕಿಸುವುದಾದರೆ ಸಮುದ್ರದ ಮರಳಿಗಿಂತ ಹೆಚ್ಚಾಗಿವೆ, 
ನಾನು ಎಚ್ಚರವಾಗಲು ಮೊದಲಿನಂತೆಯೇ ನಿನ್ನ ಬಳಿಯಲ್ಲಿರುತ್ತೇನೆ. 
 ೧೯ ಯೆಹೋವನೇ, ನೀನು ದುಷ್ಟರನ್ನು ಸಂಹರಿಸಿಬಿಟ್ಟರೆ, 
ಎಷ್ಟೋ ಒಳ್ಳೆಯದು. 
ಕೊಲೆಪಾತಕರೇ, ನನ್ನಿಂದ ತೊಲಗಿಹೋಗಿರಿ. 
 ೨೦ ದೇವರೇ, ಅವರು ನಿನ್ನ ಶತ್ರುಗಳು, 
ಅಯೋಗ್ಯ ಕಾರ್ಯಕ್ಕಾಗಿ ನಿನ್ನ ಹೆಸರೆತ್ತುತ್ತಾರೆ, ಸುಳ್ಳಾಣೆಯಿಡುತ್ತಾರೆ. 
 ೨೧ ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನಲ್ಲವೋ? 
ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವುದಿಲ್ಲವೋ? 
 ೨೨ ನಾನು ಅವರನ್ನು ಸಂಪೂರ್ಣವಾಗಿ ದ್ವೇಷಿಸುತ್ತೇನೆ, 
ಅವರು ನನಗೂ ವೈರಿಗಳೇ ಆಗಿದ್ದಾರೆ. 
 ೨೩ ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ, 
ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ. 
 ೨೪ ನನ್ನಲ್ಲಿ ಕೇಡಿನ ಮಾರ್ಗ ಇರುತ್ತದೋ ಏನೋ ನೋಡಿ, 
ಸನಾತನ ಮಾರ್ಗದಲ್ಲಿ ನನ್ನನ್ನು ನಡೆಸು.