Psalms 
ಕೀರ್ತನೆಗಳು  
ಪ್ರಥಮ ಭಾಗವು (1 – 41) 
 ೧
ಸನ್ಮಾರ್ಗಸ್ಥರು ಮತ್ತು ದುರ್ಮಾರ್ಗಸ್ಥರು 
(ಯೆರೆಮೀಯನು 17:5-8; ಮತ್ತಾಯನು 7:13,14) 
 ೧ ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, 
ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, 
ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, 
 ೨ ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, 
ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು. 
 ೩ ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು. 
ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ. 
ಅದರ ಎಲೆ ಬಾಡುವುದೇ ಇಲ್ಲ. 
ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. 
 ೪ ದುಷ್ಟರೋ ಹಾಗಲ್ಲ; 
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತೆ ಇದ್ದಾರೆ. 
 ೫ ಆದುದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲಿಯೂ, 
ಪಾಪಾತ್ಮರು ನೀತಿವಂತರ ಸಭೆಯಲ್ಲಿಯೂ ನಿಲ್ಲುವುದಿಲ್ಲ. 
 ೬ ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; 
ದುಷ್ಟರ ಮಾರ್ಗವೋ ನಾಶವಾಗುವುದು.