3
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಲ್ಪಟ್ಟಿತು. 
ರಚನೆಗಾರ: ದಾವೀದ. 
 1 ಯೆಹೋವನೇ, ನನಗೆ ವೈರಿಗಳು ಎಷ್ಟೋ ಹೆಚ್ಚಾಗಿದ್ದಾರೆ. 
ಎಷ್ಟೋ ಜನರು ನನಗೆ ಶತ್ರುಗಳಾಗಿ ನಿಂತಿದ್ದಾರೆ. 
 2 ಅನೇಕರು ನನ್ನ ಬಗ್ಗೆ ಮಾತಾಡುತ್ತಾ, “ದೇವರು ಅವನನ್ನು ರಕ್ಷಿಸುವುದಿಲ್ಲ!” ಎಂದು ಹೇಳುತ್ತಿದ್ದಾರೆ. 
 3 ಆದರೆ ಯೆಹೋವನೇ, ನೀನೇ ನನ್ನ ಗುರಾಣಿ. 
ನೀನೇ ನನ್ನ ಗೌರವಕ್ಕೆ ಆಧಾರ. 
ನನ್ನನ್ನು ಜಯವೀರನನ್ನಾಗಿ ಮಾಡು. 
 4 ನಾನು ಯೆಹೋವನಿಗೆ ಪ್ರಾರ್ಥಿಸಲು, 
ಆತನು ತನ್ನ ಪವಿತ್ರ ಪರ್ವತದಿಂದ ಉತ್ತರಿಸುವನು. 
 5 ಯೆಹೋವನು ನನ್ನನ್ನು ಕಾಪಾಡುವುದರಿಂದ 
ನಾನು ಸುಖವಾಗಿ ನಿದ್ರಿಸಿ ಎಚ್ಚರಗೊಳ್ಳುವೆನು. 
 6 ಸಾವಿರಾರು ಶತ್ರು ಸೈನಿಕರು ನನ್ನನ್ನು ಮುತ್ತಿಕೊಂಡರೂ 
ನನಗೆ ಭಯವಿಲ್ಲ. 
 7 ಯೆಹೋವನೇ, ಎದ್ದೇಳು! 
ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು! 
ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ 
ಅವರ ಹಲ್ಲುಗಳು ಉದುರಿಹೋಗುತ್ತವೆ. 
 8 ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು. 
ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು.