12
ರಚನೆಗಾರ: ದಾವೀದ. 
 1 ಯೆಹೋವನೇ, ನನ್ನನ್ನು ರಕ್ಷಿಸು! 
ಒಳ್ಳೆಯವರೆಲ್ಲಾ ಕೊನೆಗೊಂಡರು. 
ಭೂನಿವಾಸಿಗಳಲ್ಲಿ ನಿಜವಾದ ವಿಶ್ವಾಸಿಗಳು ಉಳಿದೇ ಇಲ್ಲ. 
 2 ಜನರು ತಮ್ಮ ನೆರೆಯವರಿಗೆ ಸುಳ್ಳು ಹೇಳುವರು. 
ಪ್ರತಿಯೊಬ್ಬರೂ ತಮ್ಮ ನೆರೆಯವರಿಗೆ ಸುಳ್ಳಿನಿಂದ ಮುಖಸ್ತುತಿ ಮಾಡುವರು. 
 3 ಸುಳ್ಳಾಡುವ ಆ ತುಟಿಗಳನ್ನೂ ಕಟ್ಟುಕಥೆಗಳನ್ನು ಹೇಳುವ 
ಆ ನಾಲಿಗೆಗಳನ್ನೂ ಯೆಹೋವನು ಕತ್ತರಿಸಿಹಾಕಲಿ. 
 4 “ನಾವು ಪ್ರಮುಖರಾಗಲು ನಮ್ಮ ಸುಳ್ಳುಗಳೇ ನಮಗೆ ಆಧಾರ. 
ನಮ್ಮ ನಾಲಿಗೆಗಳು ಇರುವಾಗ ನಮಗೆ ಒಡೆಯರಾಗಲು ಯಾರಿಗೆ ಸಾಧ್ಯ?” ಎಂದು ಅವರು ಹೇಳುತ್ತಾರೆ. 
 5 ಆದರೆ ಯೆಹೋವನು ಹೇಳುವುದೇನೆಂದರೆ: 
“ದುಷ್ಟರು ಕುಗ್ಗಿಹೋದವರಿಂದ ಕದ್ದುಕೊಂಡಿದ್ದಾರೆ. 
ಅಸಹಾಯಕರು ದುಃಖದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. 
ಆದ್ದರಿಂದ ನಾನು ಎದ್ದುನಿಂತು, ಆಯಾಸಗೊಂಡಿರುವ ಅವರನ್ನು ಕಾಪಾಡುವೆನು.” 
 6 ಯೆಹೋವನ ಮಾತುಗಳು 
ಬೆಂಕಿಯಲ್ಲಿ ಏಳು ಸಲ ಶುದ್ಧೀಕರಿಸಿದ ಬೆಳ್ಳಿಯಂತೆ ಸತ್ಯವಾಗಿವೆ. 
 7 ಯೆಹೋವನೇ, ಅಸಹಾಯಕರನ್ನು ಪರಿಪಾಲಿಸು. 
ಅವರನ್ನು ಶಾಶ್ವತವಾಗಿ ಸಂರಕ್ಷಿಸು. 
 8 ಆ ದುಷ್ಟರು ಪ್ರಮುಖರಂತೆ ವರ್ತಿಸಿದರೂ 
ಅವರು ಕೇವಲ ನಕಲಿ ಆಭರಣಗಳಂತಿದ್ದಾರೆ.