36
ರಚನೆಗಾರ: ದಾವೀದ. 
 1 ದುಷ್ಟನು ಪಾಪದಿಂದ ಪ್ರಭಾವಿತನಾಗಿ, “ನಾನು ದೇವರಿಗೆ ಭಯಪಡುವುದೂ ಇಲ್ಲ 
ಆತನನ್ನು ಗೌರವಿಸುವುದೂ ಇಲ್ಲ” ಎಂದುಕೊಳ್ಳುವನು. 
 2 ಅವನು ತನ್ನನ್ನು ವಂಚಿಸಿಕೊಳ್ಳುವನು. 
ಅವನು ತನ್ನ ತಪ್ಪುಗಳನ್ನು ಕಾಣುವುದೂ ಇಲ್ಲ, 
ಅವುಗಳಿಗಾಗಿ ಕ್ಷಮೆಯನ್ನು ಕೇಳುವುದೂ ಇಲ್ಲ. 
 3 ಅವನ ಮಾತುಗಳು ಕೇವಲ ಸುಳ್ಳುಗಳಾಗಿವೆ. 
ಅವನು ಜ್ಞಾನಿಯಾಗುವುದೂ ಇಲ್ಲ, ಒಳ್ಳೆಯದನ್ನು ಕಲಿತುಕೊಳ್ಳುವುದೂ ಇಲ್ಲ. 
 4 ರಾತ್ರಿಯಲ್ಲಿ, ಅವನು ಕೇಡನ್ನೇ ಆಲೋಚಿಸುವನು. 
ಮರುದಿನ ಮುಂಜಾನೆ ಎದ್ದಾಗ, 
ಒಳ್ಳೆಯದನ್ನು ಮಾಡದೆ ಕೇಡನ್ನು ಮಾಡಲು ಸಿದ್ಧನಾಗಿರುವನು. 
 5 ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ. 
ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ. 
 6 ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ. 
ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ. 
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ. 
 7 ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ. 
ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು. 
 8 ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು. 
ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು. 
 9 ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು! 
ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ. 
 10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ. 
ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು. 
 11 ಗರ್ವಿಷ್ಠರ ಬಲೆಗೆ ನನ್ನನ್ನು ಬೀಳಿಸಬೇಡ; 
ದುಷ್ಟರ ಕೈಹಿಡಿತಕ್ಕೆ ನನ್ನನ್ನು ಸಿಕ್ಕಿಸಬೇಡ. 
 12 “ದುಷ್ಟರು ಬಿದ್ದು ಜಜ್ಜಲ್ಪಟ್ಟದ್ದು ಇಲ್ಲಿಯೇ. 
ಅವರು ಮತ್ತೆಂದಿಗೂ ಮೇಲೇಳುವುದಿಲ್ಲ” 
ಎಂದು ಅವರ ಸಮಾಧಿಯ ಮೇಲೆ ಬರೆಯಿಸು.