88
ಸ್ತುತಿಗೀತೆ. 
ರಚನೆಗಾರರು: ಕೋರಹೀಯರಿಗೆ ಸೇರಿದ ಜೇರಹ ಕುಟುಂಬದ ಹೇಮಾನ. 
 1 ಯೆಹೋವ ದೇವರೇ, ನೀನೇ ನನ್ನ ರಕ್ಷಕನು. 
ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ. 
 2 ನನ್ನ ಪ್ರಾರ್ಥನೆಗಳಿಗೆ ದಯವಿಟ್ಟು ಗಮನಕೊಡು. 
ಕರುಣೆಗೋಸ್ಕರ ನಾನಿಡುವ ಮೊರೆಗಳನ್ನು ಆಲಿಸು. 
 3 ನನ್ನ ಜೀವವು ನೋವಿನಿಂದ ತುಂಬಿಹೋಯಿತು. 
ಮರಣವು ನನಗೆ ಸಮೀಪವಾಗಿದೆ. 
 4 ಜನರು ನನ್ನನ್ನು ಸತ್ತವನಂತೆಯೂ 
ಬದುಕಲಾರದ ಬಲಹೀನನಂತೆಯೂ ಪರಿಗಣಿಸಿದ್ದಾರೆ. 
 5 ಸತ್ತವರ ಮಧ್ಯದಲ್ಲಿ ನನಗಾಗಿ ಹುಡುಕು. 
ಸಮಾಧಿಯಲ್ಲಿ ಬಿದ್ದಿರುವ ಶವದಂತಾಗಿದ್ದೇನೆ, 
ನೀನು ಮರೆತುಬಿಟ್ಟ ಸತ್ತ ಜನರಂತೆ ಆಗಿದ್ದೇನೆ. 
ನಿನ್ನಿಂದಲೂ ನಿನ್ನ ಪರಿಪಾಲನೆಯಿಂದಲೂ ದೂರವಾದವನಾಗಿದ್ದೇನೆ. 
 6 ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ; 
ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ. 
 7 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದಲೇ 
ನನ್ನನ್ನು ಶಿಕ್ಷಿಸಿದೆ. 
 8 ಸ್ನೇಹಿತರು ನನ್ನನ್ನು ತೊರೆದುಬಿಟ್ಟರು. 
ಹೊಲೆಯಾದ ಮನುಷ್ಯನಂತೆ ಅವರೆಲ್ಲರೂ ನನ್ನನ್ನು ದೂರ ಮಾಡಿದ್ದಾರೆ. 
ನನ್ನನ್ನು ಮನೆಯೊಳಗೆ ದೊಬ್ಬಿ ಬೀಗ ಹಾಕಿದ್ದಾರೆ; ನಾನು ಹೊರಗೆ ಹೋಗಲಾರೆನು. 
 9 ನನ್ನ ಎಲ್ಲಾ ಸಂಕಟಗಳಿಂದ ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ. 
ಯೆಹೋವನೇ, ನಾನು ನಿನಗೆ ಎಡಬಿಡದೆ ಪ್ರಾರ್ಥಿಸುವೆನು! 
ನನ್ನ ಕೈಗಳನ್ನು ಎತ್ತಿ ನಿನಗೆ ಪ್ರಾರ್ಥಿಸುವೆನು! 
 10 ಯೆಹೋವನೇ, ಸತ್ತ ಜನರಿಗಾಗಿ ನೀನು ಮಹತ್ಕಾರ್ಯಗಳನ್ನು ಮಾಡುವೆಯಾ? 
ಇಲ್ಲ! ದೆವ್ವಗಳು ಎದ್ದುನಿಂತು ನಿನ್ನನ್ನು ಕೊಂಡಾಡುತ್ತವೆಯೋ? ಇಲ್ಲ! 
 11 ಸತ್ತ ಜನರು ತಮ್ಮ ಸಮಾಧಿಗಳಲ್ಲಿ ನಿನ್ನ ಪ್ರೀತಿಯ ಬಗ್ಗೆ ಮಾತಾಡಲಾರರು. 
ಸತ್ತವರು, ಸತ್ತವರ ಲೋಕದಲ್ಲಿ ನಿನ್ನ ನಂಬಿಗಸ್ತಿಕೆಯ ಬಗ್ಗೆ ಮಾತಾಡಲಾರರು. 
 12 ಸತ್ತು ಕತ್ತಲೆಯಲ್ಲಿ ಬಿದ್ದಿರುವ ಜನರು ನಿನ್ನ ಅದ್ಭುತಕಾರ್ಯಗಳನ್ನು ನೋಡಲಾರರು. 
ಸತ್ತವರು, ಮರೆಯಲ್ಪಟ್ಟವರ ಲೋಕದಲ್ಲಿ ನಿನ್ನ ನೀತಿಯ ಬಗ್ಗೆ ಮಾತಾಡಲಾರರು. 
 13 ಯೆಹೋವನೇ, ನಿನ್ನ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ. 
ಪ್ರತಿ ಮುಂಜಾನೆಯೂ ನಿನಗೆ ಪ್ರಾರ್ಥಿಸುತ್ತಿದ್ದೇನೆ. 
 14 ಯೆಹೋವನೇ, ನೀನು ನನ್ನನ್ನು ತೊರೆದುಬಿಟ್ಟಿದ್ದೇಕೆ? 
ನೀನು ನನಗೆ ಕಿವಿಗೊಡದಿರುವುದೇಕೆ? 
 15 ನಾನು ಚಿಕ್ಕಂದಿನಿಂದಲೂ ಬಲಹೀನನಾಗಿದ್ದೇನೆ ಮತ್ತು ಕಾಯಿಲೆಯವನಾಗಿದ್ದೇನೆ. 
ನಿನ್ನ ಕೋಪದಿಂದ ನಾನು ಸಂಕಟಪಡುತ್ತಿರುವೆ. ನಾನು ನಿಸ್ಸಹಾಯನಾಗಿರುವೆ. 
 16 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದ 
ನಿನ್ನ ದಂಡನೆಯು ನನ್ನನ್ನು ಕೊಲ್ಲುತ್ತಿದೆ. 
 17 ಬಾಧೆಗಳೂ ನೋವುಗಳೂ ಯಾವಾಗಲೂ ನನ್ನೊಂದಿಗಿವೆ. 
ಬಾಧೆಗಳಿಂದಲೂ ನೋವುಗಳಿಂದಲೂ ಮುಳುಗಿ ಹೋಗುತ್ತಿದ್ದೇನೆ. 
 18 ಯೆಹೋವನೇ, ಸ್ನೇಹಿತರೆಲ್ಲರನ್ನೂ ಪ್ರಿಯರನ್ನೂ ನೀನು ನನ್ನಿಂದ ದೂರಮಾಡಿದೆ. 
ಕೇವಲ ಕತ್ತಲೆಯೊಂದೇ ನನ್ನೊಂದಿಗೆ ಉಳಿದುಕೊಂಡಿದೆ.