101
ರಚನೆಗಾರ: ದಾವೀದ. 
 1 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು. 
ಯೆಹೋವನೇ, ನಿನಗೆ ಗಾಯನ ಮಾಡುವೆನು. 
 2 ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು; 
ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು. 
ನೀನು ನನ್ನ ಬಳಿಗೆ ಬರುವುದು ಯಾವಾಗ? 
 3 ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ. 
ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ. 
ನಾನು ಅವರಂತೆ ಮಾಡುವುದಿಲ್ಲ! 
 4 ನಾನು ನಿನಗೆ ಯಥಾರ್ಥನಾಗಿರುವೆನು; 
ದುಷ್ಕೃತ್ಯಗಳನ್ನು ಮಾಡುವುದಿಲ್ಲ. 
 5 ನೆರೆಯವನ ಕುರಿತು ಗುಟ್ಟಾಗಿ 
ಚಾಡಿ ಹೇಳುವವನನ್ನು ನಾನು ತಡೆಯುವೆನು. 
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ 
ನಾನು ಅವರಿಗೆ ಅವಕಾಶ ಕೊಡುವುದಿಲ್ಲ. 
 6 ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ. 
ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು. 
ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ. 
 7 ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ. 
ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ. 
 8 ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ. 
ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.