138
ಸ್ತುತಿಗೀತೆ. ರಚನೆಗಾರ: ದಾವೀದ. 
 1 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು. 
ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು. 
 2 ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು. 
ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು. 
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ. 
 3 ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ 
ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ. 
 4 ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ 
ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ. 
 5 ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು; 
ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು. 
 6 ಯೆಹೋವನೇ ಮಹೋನ್ನತನು. 
ಆದರೂ ಆತನು ದೀನರಿಗೋಸ್ಕರ ಚಿಂತಿಸುವನು. 
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ. 
ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ. 
 7 ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು. 
ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು. 
 8 ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು. 
ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು. 
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!