12
 1 ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣಗಾಳಿಯೇ. 
ಅದು ಮೋಸವನ್ನೂ, ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡೆಸುತ್ತದೆ; 
ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತದೆ. 
 2 ಯೆಹೋವನು ಯೆಹೂದದ ಮೇಲೆ ವ್ಯಾಜ್ಯಕ್ಕೆ ತೊಡಗಿದ್ದಾನೆ, 
ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು, 
ಅದರ ದುಷ್ಕೃತ್ಯಗಳಿಗೆ ಪ್ರತಿಕಾರಮಾಡುವನು. 
 3  * 12:3 ಆದಿ 25:26.ಯಾಕೋಬನು ಗರ್ಭದಲ್ಲಿ ತನ್ನ ಅಣ್ಣನ ಹಿಮ್ಮಡಿಯನ್ನು ಎಳೆದನು, 
ಪೂರ್ಣಪ್ರಾಯದಲ್ಲಿ ದೇವರೊಂದಿಗೆ ಹೋರಾಡಿದನು† 12:3 ದೇವರೊಂದಿಗೆ ಹೋರಾಡಿದನು ಆದಿ 32:24-26.; 
 4 ಹೌದು, ದೇವದೂತನ ಸಂಗಡ ಹೋರಾಡಿ ಗೆದ್ದನು; ಅಳುತ್ತಾ ಆತನ ಕೃಪೆಯನ್ನು ಬೇಡಿಕೊಂಡನು. 
ಯೆಹೋವನೆಂಬ ಸೇನಾಧೀಶ್ವರನಾದ ದೇವರು ಅವನನ್ನು ಬೇತೇಲಿನಲ್ಲಿಯು ಕಂಡು ಅಲ್ಲಿ ಅವನೊಡನೆ‡ 12:4 ಅವನೊಡನೆ ನಮ್ಮೊಡನೆ ಮಾತನಾಡಿದನು. 
 5 ಯೆಹೋವನೆಂಬುದೇ ಆತನನ್ನು ಸ್ಮರಿಸುವ ನಾಮಧೇಯ. 
 6 ಇಸ್ರಾಯೇಲೇ, ನೀನೂ ನಿನ್ನ ದೇವರ ಕಡೆಗೆ ತಿರುಗಿಕೋ; 
ನೀತಿ, ಪ್ರೀತಿಗಳನ್ನು ಅನುಸರಿಸಿ ನಿನ್ನ ದೇವರನ್ನು ಎಡೆಬಿಡದೆ ನಿರೀಕ್ಷಿಸಿಕೊಂಡಿರು. 
 7 ಕಾನಾನು! ಅದರ ಕೈಯಲ್ಲಿ ಮೋಸದ ತ್ರಾಸು ಇದೆ; ಕಸಕೊಳ್ಳಬೇಕೆಂಬದೇ ಅದರ ಆಶೆ. 
 8 ಎಫ್ರಾಯೀಮು, “ನಾನು ಐಶ್ವರ್ಯವಂತನೇ ಹೌದು, ಆಸ್ತಿಯನ್ನು ಪಡೆದಿದ್ದೇನೆ; 
ನನ್ನ ದುಡಿತದಲ್ಲೆಲ್ಲಾ ಪಾಪವೆನಿಸಿಕೊಳ್ಳುವ ದೋಷವೇನೂ ತೋರಲಿಲ್ಲ” ಎಂದು ಅಂದುಕೊಳ್ಳುತ್ತದೋ? 
 9 ನೀನು ಐಗುಪ್ತ ದೇಶದಲ್ಲಿ ಇದ್ದಂದಿನಿಂದ ನಾನೇ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; 
ಜಾತ್ರೆಯ ಕಾಲದಲ್ಲಿ ವನವಾಸಮಾಡುವಂತೆ ಗುಡಾರಗಳಲ್ಲಿ ವಾಸಿಸುವ ಗತಿಗೆ ನಿನ್ನನ್ನು ಪುನಃ ತರುವೆನು. 
 10 ನಾನು ಪ್ರವಾದಿಗಳಿಗೆ ನುಡಿದಿದ್ದೇನೆ, ಬಹಳ ದಿವ್ಯದರ್ಶನಗಳನ್ನು ದಯಪಾಲಿಸಿದ್ದೇನೆ. 
ಪ್ರವಾದಿಗಳ ಮೂಲಕ ಸೂಚಕಕಾರ್ಯಗಳನ್ನು ನಡೆಸಿದ್ದೇನೆ. 
 11 ಗಿಲ್ಯಾದು ಅಧರ್ಮಮಯವೋ? ಅದು ಶೂನ್ಯದ ಗತಿಗೆ ಬರುವುದು; 
ಗಿಲ್ಗಾಲಿನಲ್ಲಿ ಗೋಮೇಧವು ನಡೆಯುವುದೋ? 
ಅಲ್ಲಿನ ಯಜ್ಞವೇದಿಗಳು ಹೊಲದ ನೇಗಿಲ ಗೆರೆಗಳಲ್ಲಿ ಕಲ್ಲುಕುಪ್ಪೆಗಳಾಗಿ ಸಿಕ್ಕುವವು. 
 12 ಯಾಕೋಬನು ಪದ್ದನ್ ಅರಾಮಿಗೆ ಓಡಿಹೋದನು; 
ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ ಕುರಿಗಳನ್ನು ಕಾದನು. 
 13 ಯೆಹೋವನು ಇಸ್ರಾಯೇಲನ್ನು ಪ್ರವಾದಿಯ ಮುಖಾಂತರ ಐಗುಪ್ತದೊಳಗಿಂದ ಪಾರುಮಾಡಿದನು; 
ಪ್ರವಾದಿಯ ಮೂಲಕ ಅದು ರಕ್ಷಿಸಲ್ಪಟ್ಟಿತು. 
 14 ಎಫ್ರಾಯೀಮು ಯೆಹೋವನನ್ನು ಅತಿ ತೀಕ್ಷ್ಣವಾಗಿ ರೇಗಿಸಿದೆ, 
ಆದಕಾರಣ ಅದರ ಒಡೆಯನು ಅದರ ರಕ್ತಾಪರಾಧವನ್ನು ಅದರ ಮೇಲೆ ಹೊರಿಸಿ, 
ಅದು ಮಾಡಿದ ಅವಮಾನವನ್ನು ಅದಕ್ಕೆ ಹಿಂದಿರುಗಿಸುವನು.