6
ಸ್ತ್ರೀಯರು 
 1 ಮಹಿಳಾಮಣಿಯೇ, ನಿನ್ನಿನಿಯನು ಹೋದುದೆಲ್ಲಿಗೆ? 
ನಿನ್ನೊಂದಿಗೆ ಸೇರಿ ನಾವು ಅವನನ್ನು ಹುಡುಕೋಣವೇ? 
ಹೇಳು, ನಿನ್ನ ನಲ್ಲನು ಹೋದುದೆಲ್ಲಿಗೆ? 
ನಲ್ಲೆ 
 2 ನನ್ನ ಕಾಂತನು ಉದ್ಯಾನವನಗಳಲ್ಲಿ ಮಂದೆಯನ್ನು ಮೇಯಿಸುತ್ತಾ, ನೆಲದಾವರೆಗಳನ್ನು ಕೊಯ್ಯಬೇಕೆಂದು 
ಸುಗಂಧಸಸ್ಯದ ಪಾತಿಗಳಿರುವ ತನ್ನ ತೋಟಕ್ಕೆ ಹೋಗಿದ್ದಾನೆ. 
 3 ಎನ್ನಿನಿಯನು ನನ್ನವನೇ, ನಾನು ಅವನವಳೇ, 
ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ. 
ಐದನೆಯ ಗೀತೆ - ನಲ್ಲ 
 4 ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದರಿ, 
ಯೆರೂಸಲೇಮಿನ ಹಾಗೆ ಮನೋಹರಿ, 
ಧ್ವಜಗಳ್ಳುಳ್ಳ ಸೈನ್ಯದ ಹಾಗೆ ಭಯಂಕರಿ! 
 5 ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, 
ಅವು ನನ್ನನ್ನು ಹೆದರಿಸುತ್ತವೆ. 
ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆಯಂತಿದೆ. 
 6 ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪಿನಂತಿವೆ ನಿನ್ನ ಹಲ್ಲುಗಳು, 
ಯಾವುದೂ ಒಂಟಿಯಾಗಿರದೆ ಎಲ್ಲವೂ ಒಟ್ಟಾಗಿ ಜೋಡಿಯಾಗಿವೆ. 
 7 ಮುಸುಕಿನೊಳಗಿನ ನಿನ್ನ ಕೆನ್ನೆಯು ಹೋಳು ಮಾಡಿದ ದಾಳಿಂಬೆಯ ತಿರುಳಿನಂತಿದೆ. 
 8 ಅರಸನಿಗೆ ರಾಣಿಯರು ಅರುವತ್ತು ಮಂದಿ, 
ಉಪಪತ್ನಿಯರು ಎಂಬತ್ತು ಮಂದಿ, 
ಯುವತಿಯರು ಲೆಕ್ಕವಿಲ್ಲದಷ್ಟು. 
 9 ನನ್ನ ಪಾರಿವಾಳವು, ನನ್ನ ನಿರ್ಮಲೆಯು ಒಬ್ಬಳೇ, 
ಇವಳು ಏಕಮಾತ್ರ ಪುತ್ರಿ ತಾಯಿಗೆ, ಮುದ್ದುಮಗಳು ಹೆತ್ತವಳಿಗೆ. 
ಧನ್ಯಳೆಂದು ಹೊಗಳಿದರು ಯುವತಿಯರು ನೋಡಿ, 
ರಾಣಿಯರೂ, ಉಪಪತ್ನಿಯರೂ ಕೊಂಡಾಡಿದರು ಈ ರೀತಿ. 
 10 ಅರುಣೋದಯದಂತೆ ಉದಯಿಸುವಂತಿರುವಳು, 
ಚಂದ್ರನಂತೆ ಸೌಮ್ಯ ಸುಂದರಿಯಿವಳು, ಸೂರ್ಯನಂತೆ ಶುಭ್ರಳು, 
ಧ್ವಜಗಳುಳ್ಳ ಸೈನ್ಯದ ಹಾಗೆ ಭಯಂಕರಳು ಆಗಿರುವ ಇವಳಾರು? 
 11 ದ್ರಾಕ್ಷಿಯು ಚಿಗುರಿದೆಯೋ, ದಾಳಿಂಬೆ ಗಿಡಗಳು ಹೂಬಿಟ್ಟಿವೆಯೋ ಎಂದು ತಗ್ಗಿನಲ್ಲಿ ಬೆಳೆದ 
ಸಸ್ಯಗಳನ್ನು ನೋಡಲು ಬಾದಾಮಿಯ ತೋಟಕ್ಕೆ ನಾನು ಹೋಗಿದ್ದೆ. 
 12 ಇದ್ದಕ್ಕಿದ್ದ ಹಾಗೆ ನಾಯಕನಾಗಿ ನಾನು ಬಯಸಿದಂತೆ ದೇಶ 
ಪ್ರಧಾನರ ರಥಗಳ ನಡುವೆ ನಾನಿರುವುದನ್ನು ಅರಿತೆನು. 
ನಲ್ಲೆ 
 13 ಶೂಲಮ್ ಊರಿನವಳೇ, ತಿರುಗು, ಹಿಂತಿರುಗು, 
ನಾನು ನಿನ್ನನ್ನು ನೋಡಬೇಕು; ತಿರುಗು, ಇತ್ತ ತಿರುಗು. 
ಎರಡು ಸಾಲಿನಲ್ಲಿ ನರ್ತಿಸುವ ನರ್ತಕಿಯರ ನಡುವೆ ನರ್ತಿಸುವವಳನ್ನು ನೋಡುವಂತೆ 
ಶೂಲಮ್ ಊರಿನವಳಾದ ನನ್ನನ್ನು ನೀನು ನೋಡುವುದೇಕೆ?