Ecclesiastes 
ಪ್ರಸಂಗಿ  
 ೧
ಲೋಕದೊಳಗಿನ ನಿಸ್ಸಾರತೆ 
 ೧ ಯೆರೂಸಲೇಮಿನಲ್ಲಿ ಅರಸನಾಗಿದ್ದ ದಾವೀದನ ಮಗನಾದ ಪ್ರಸಂಗಿಯ ಮಾತುಗಳು.  ೨ ಪ್ರಸಂಗಿಯು ಹೀಗೆ ಹೇಳುತ್ತಾನೆ. 
“ವ್ಯರ್ಥವೇ ವ್ಯರ್ಥ, 
ವ್ಯರ್ಥವೇ ವ್ಯರ್ಥ, 
ಸಮಸ್ತವೂ ವ್ಯರ್ಥ. 
 ೩ ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಲಾಭವೇನು? 
 ೪ ಒಂದು ಸಂತತಿಯು ಹೋಗುವುದು, 
ಇನ್ನೊಂದು ಸಂತತಿಯು ಬರುವುದು, 
ಆದರೆ ಭೂಮಿಯು ಶಾಶ್ವತವಾಗಿ ನಿಲ್ಲುವುದು. 
 ೫ ಸೂರ್ಯನು ಉದಯಿಸುತ್ತಾನೆ. 
ಸೂರ್ಯನು ಮುಳುಗುತ್ತಾನೆ. 
ತಾನು ಉದಯಿಸುವ ಸ್ಥಾನಕ್ಕೆ ಅವಸರವಾಗಿ ಹಿಂತಿರುಗಿ ಹೋಗುತ್ತಾನೆ. 
 ೬ ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ. 
ಉತ್ತರದ ಕಡೆಗೆ ತಿರುಗುವದು. 
ಅದು ಸುತ್ತುತ್ತಾ ಸುತ್ತುತ್ತಾ ಹೋಗಿ, 
ಗಾಳಿ ಸುತ್ತಳತೆಯ ಪ್ರಕಾರ ಹಿಂದಿರುಗುತ್ತವೆ. 
 ೭ ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ. 
ಆದರೂ ಸಮುದ್ರವು ತುಂಬುವುದಿಲ್ಲ. 
ನದಿಗಳು ಎಲ್ಲಿಂದ ಬಂದಿವೆಯೋ 
ಅದೇ ಸ್ಥಳಕ್ಕೆ ಹಿಂತಿರುಗುತ್ತವೆ. 
 ೮ ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿದೆ. 
ಇದನ್ನು ಮನುಷ್ಯನು ವಿವರಿಸಲಾರನು. 
ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು, 
ಕೇಳುವುದರಿಂದ ಕಿವಿಯು ದಣಿಯದು. 
 ೯ ಇದ್ದದ್ದೇ ಇರುವುದು, 
ನಡೆದದ್ದೇ ನಡೆಯುವುದು. 
ಸೂರ್ಯನ ಕೆಳಗೆ ಹೊಸದಾದದ್ದು ಯಾವುದೂ ಇಲ್ಲ. 
 ೧೦ ‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ? 
ನಮಗಿಂತ ಮೊದಲು ಇದ್ದದ್ದು, 
ಪುರಾತನ ಕಾಲದಿಂದ ಇದ್ದದ್ದೇ. 
 ೧೧ ಪುರಾತನ ಕಾಲದಲ್ಲಿ ನಡೆದ ಸಂಗತಿಗಳ ಜ್ಞಾಪಕವು ಈಗಿನ ಜನರಿಗೆ ಇಲ್ಲ. 
ಮುಂದಿನ ಕಾಲದಲ್ಲಿ ನಡೆಯುವ ಸಂಗತಿಗಳ ಜ್ಞಾಪಕವು ಮುಂದಿನ ಕಾಲದ ಜನರಿಗೆ ಇರುವುದಿಲ್ಲ.” 
 ೧೨ ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರಿಗೆ ಅರಸನಾಗಿದ್ದೆನು.  ೧೩ ಆಕಾಶದ ಕೆಳಗಡೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ಞಾನದಿಂದ ವಿಚಾರಿಸಿ ವಿಮರ್ಶಿಸುವುದಕ್ಕೆ ನನ್ನ ಮನಸ್ಸನ್ನು ಇಟ್ಟೆನು. ದೇವರು ಮನುಷ್ಯರ ಮೇಲೆ ನೇಮಿಸಿರುವ ಕೆಲಸವೆಲ್ಲಾ ಬಹು ಪ್ರಯಾಸವೇ.  ೧೪ ಲೋಕದಲ್ಲಿ ನಡೆಯುವ ಎಲ್ಲಾ ಕೆಲಸಗಳನ್ನು ನೋಡಿದ್ದೇನೆ. ಆಹಾ, ಗಾಳಿಯನ್ನು ಹಿಂದಟ್ಟುವ ಹಾಗೆ ಸಮಸ್ತವೂ ವ್ಯರ್ಥ. 
 ೧೫ ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ! 
ಇಲ್ಲದ್ದನ್ನು ಲೆಕ್ಕಿಸುವುದಕ್ಕೆ ಅಸಾಧ್ಯ! 
 ೧೬ ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ, “ನೋಡು, ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ. ನನ್ನ ಹೃದಯವು ಜ್ಞಾನವನ್ನೂ, ತಿಳಿವಳಿಕೆಯನ್ನೂ ವಿಶೇಷವಾಗಿ ಹೊಂದಿದೆ” ಎಂದುಕೊಂಡೆನು.  ೧೭ ಆಗ ಜ್ಞಾನವನ್ನೂ, ಹುಚ್ಚುತನವನ್ನೂ, ಬುದ್ದಿಹೀನತೆಯನ್ನೂ ಗ್ರಹಿಸಲು ನಾನು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿಂದಟ್ಟುವ ಹಾಗೆ ಎಂದು ನಾನು ಅರಿತುಕೊಂಡೆನು.  ೧೮ ಏಕೆಂದರೆ ಬಹಳ ಜ್ಞಾನವಿದ್ದಲ್ಲಿ ಬಹಳ ಸಂಕಟ. ಹೆಚ್ಚು ತಿಳಿವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಥೆ ಇದೆ.