ಭಕ್ತನ ಸ್ತುತಿ 
 ೨೮
ದಾವೀದನ ಕೀರ್ತನೆ. 
 ೧ ಯೆಹೋವನೇ, ನನ್ನ ಶರಣನೇ, ನಿನಗೆ ಮೊರೆಯಿಡುತ್ತೇನೆ; 
ಕೇಳದೆ ಇರಬೇಡ. 
ನೀನು ಕಿವಿಗೊಡದೆ ಹೋದರೆ ನಾನು ಸತ್ತವರಿಗೆ ಸಮಾನನಾಗುವೆನಲ್ಲವೇ. 
 ೨ ನೀನು ವಾಸಿಸುವ ಮಹಾಪರಿಶುದ್ಧಸ್ಥಾನದ ಕಡೆಗೆ 
ನಾನು ಕೈಯೆತ್ತಿ ಮೊರೆಯಿಡುತ್ತೇನಲ್ಲಾ; 
ನನ್ನ ವಿಜ್ಞಾಪನೆಯನ್ನು ಲಾಲಿಸು. 
 ೩ ನೀನು ದುಷ್ಟರೊಡನೆಯೂ, ದುರ್ಜನಗಳ ಸಂಗಡಲೂ 
ನನ್ನನ್ನೂ ಎಳೆದುಕೊಂಡು ಹೋಗಬೇಡ. 
ಅವರು ಹೊರಗೆ ಒಳ್ಳೆಯದಾಗಲಿ ಎಂದು ಹೇಳಿದರೂ, 
ಒಳಗೆ ಕೇಡಾಗಲಿ ಎಂದು ಯೋಚಿಸುವವರು. 
 ೪ ಅವರ ದುಷ್ಕೃತ್ಯಗಳಿಗೂ, ಕೆಡುಕಗಳಿಗೂ ಸರಿಯಾದ ಪ್ರತಿಫಲವನ್ನು ಅವರಿಗೆ ಕೊಡು; 
ಅವರು ಮತ್ತೊಬ್ಬರಿಗೆ ಮಾಡಿದಂತೆಯೇ ಅವರಿಗೆ ಮಾಡು. 
 ೫ ಅವರು ಯೆಹೋವನ ಕಾರ್ಯಗಳನ್ನೂ ಮತ್ತು 
ಆತನ ಕೈಕೆಲಸಗಳನ್ನೂ ವಿವೇಚಿಸಿ ತಿಳಿದುಕೊಳ್ಳದೆ ಹೋದರು; 
ಆದುದರಿಂದ ಆತನು ಅವರನ್ನು ಹಾಳುಮಾಡುವನೇ ಹೊರತು ವೃದ್ಧಿಪಡಿಸುವುದಿಲ್ಲ. 
 ೬ ಯೆಹೋವನು ನನ್ನ ವಿಜ್ಞಾಪನೆಗಳನ್ನು ಕೇಳಿದ್ದಾನೆ; 
ಆತನಿಗೆ ಸ್ತೋತ್ರವಾಗಲಿ. 
 ೭ ಯೆಹೋವನು ನನಗೆ ಬಲವೂ, ಗುರಾಣಿಯೂ ಆಗಿದ್ದಾನೆ; 
ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು. 
ಆದಕಾರಣ ನನ್ನ ಹೃದಯವು ಹರ್ಷಿಸುವುದು; 
ಕೀರ್ತನಾರೂಪವಾಗಿ ಆತನನ್ನು ಸ್ತುತಿಸುವೆನು. 
 ೮ ಯೆಹೋವನು ತನ್ನ ಜನರಿಗೆ ಬಲವೂ, 
ತಾನು ಅಭಿಷೇಕಿಸಿದವನಿಗೆ ಆಶ್ರಯದುರ್ಗವೂ ಆಗಿದ್ದಾನೆ. 
 ೯ ಯೆಹೋವನೇ, ನಿನ್ನ ಜನರನ್ನು ರಕ್ಷಿಸು; 
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು. 
ನೀನು ಅವರ ಕುರುಬನಾಗಿರು; 
ಅವರನ್ನು ಯಾವಾಗಲೂ ಪರಿಪಾಲಿಸುತ್ತಾ ಆಧಾರವಾಗಿರು.