140
ಸ್ತುತಿಗೀತೆ. ರಚನೆಗಾರ: ದಾವೀದ. 
1 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು. 
ಕ್ರೂರಿಗಳಿಂದ ನನ್ನನ್ನು ಕಾಪಾಡು. 
2 ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ. 
3 ಅವರ ನಾಲಿಗೆಗಳು ಸರ್ಪಗಳಂತಿವೆ. 
ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ. 
4 ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು. 
ಕ್ರೂರಿಗಳಿಂದ ನನ್ನನ್ನು ಕಾಪಾಡು. 
ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ. 
5 ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ; 
ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ; 
ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ. 
6 ಯೆಹೋವನೇ, ನನ್ನ ದೇವರು ನೀನೇ. 
ನನ್ನ ಪ್ರಾರ್ಥನೆಗೆ ಕಿವಿಗೊಡು. 
7 ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ. 
ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ. 
8 ಯೆಹೋವನೇ, ಆ ದುಷ್ಟರ ದುರಾಶೆಯೂ 
ದುರಾಲೋಚನೆಯೂ ನೆರವೇರಲು ಬಿಡಬೇಡ. 
9 ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ. 
ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು. 
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು 
ಬೆಂಕಿಯೊಳಗೆ ಎಸೆದುಬಿಡು; 
ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು. 
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ. 
ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು. 
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ. 
ದೇವರು ಅಸಹಾಯಕರಿಗೆ ಸಹಾಯಮಾಡುವನು. 
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು; 
ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.