39
ರಚನೆಗಾರ: ದಾವೀದ. 
1 “ನಾನು ಜಾಗರೂಕನಾಗಿ ಮಾತಾಡುವೆ. 
ನನ್ನ ನಾಲಿಗೆ ನನ್ನನ್ನು ಪಾಪಕ್ಕೆ ಸಿಕ್ಕಿಸದಂತೆ ನೋಡಿಕೊಳ್ಳುವೆ. 
ದುಷ್ಟರ ಮಧ್ಯದಲ್ಲಿ ಬಾಯಿಮುಚ್ಚಿಕೊಂಡಿರುವೆ” ಎಂದುಕೊಂಡೆನು. 
2 ನಾನು ಮೌನವಾಗಿದ್ದೆನು. 
ಒಳ್ಳೆಯದನ್ನೂ ಹೇಳದೆ ಸುಮ್ಮನಿದ್ದೆನು. 
ಆದರೆ ನನ್ನ ವೇದನೆಯು ಹೆಚ್ಚಾಯಿತು. 
3 ನಾನು ಬಹುಕೋಪಗೊಂಡಿದ್ದೆ. 
ಅದರ ಕುರಿತು ಆಲೋಚಿಸಿದಷ್ಟೂ ಕೋಪವು ಅಧಿಕವಾಯಿತು. 
ಆಗ ನಾನು ಬಾಯಿತೆರೆದು, 
4 ಯೆಹೋವನೇ, ನನ್ನ ಗತಿಯನ್ನು ತಿಳಿಸು! 
ನನ್ನ ಈ ಅಲ್ಪ ಜೀವಿತವು ಇನ್ನೆಷ್ಟು ಕಾಲವಿರುವುದು? 
ನಾನೆಷ್ಟು ಕಾಲ ಬದುಕುವೆ? 
5 ನೀನು ನನಗೆ ಕೇವಲ ಅಲ್ಪಾಯುಷ್ಯವನ್ನು ಕೊಟ್ಟಿರುವೆ. 
ನನ್ನ ಅಲ್ಪ ಜೀವಿತವು ನಿನ್ನ ದೃಷ್ಟಿಯಲ್ಲಿ ಗಣನೆಗೂ ಬಾರದು. 
ಮನುಷ್ಯನ ಜೀವಿತವು ಕೇವಲ ಮೋಡದಂತೆ ಕ್ಷಣಿಕವಾಗಿದೆ. ಯಾವನೂ ಸದಾಕಾಲ ಬದುಕುವುದಿಲ್ಲ! 
6 ನಮ್ಮ ಜೀವಿತವು ಕೇವಲ ಕನ್ನಡಿಯ ಪ್ರತಿಬಿಂಬದಂತಿದೆ. 
ನಾವು ಗಡಿಬಿಡಿಯಿಂದ ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತೇವೆ. 
ನಾವು ಸತ್ತ ಮೇಲೆ ಅವು ಯಾರ ಪಾಲಾಗುವುದೋ ನಮಗೆ ತಿಳಿಯದು. 
7 ಯೆಹೋವನೇ, ನನಗಿರುವ ನಿರೀಕ್ಷೆ ಯಾವುದು? 
ನನ್ನ ನಿರೀಕ್ಷೆಯು ನೀನೇ. 
8 ನನ್ನ ಎಲ್ಲಾ ಅಪರಾಧಗಳಿಂದ ನನ್ನನ್ನು ಬಿಡಿಸು. 
ಮೂರ್ಖರ ನಿಂದೆಗೆ ನನ್ನನ್ನು ಗುರಿಮಾಡಬೇಡ. 
9 ನಾನು ಬಾಯಿತೆರೆದು ಮಾತಾಡುವುದಿಲ್ಲ. 
ನೀನು ನ್ಯಾಯಕ್ಕೆ ತಕ್ಕಂತೆ ಮಾಡಿರುವೆ. 
10 ನನ್ನನ್ನು ಶಿಕ್ಷಿಸುವುದನ್ನು ನಿಲ್ಲಿಸು. 
ಇಲ್ಲವಾದರೆ, ನಾನು ಸತ್ತೇ ಹೋಗುವೆನು. 
11 ನೀನು ಅಪರಾಧಗಳಿಗೆ ತಕ್ಕಂತೆ ಜನರನ್ನು ದಂಡಿಸಿ, ನಿನ್ನ ಜೀವಮಾರ್ಗವನ್ನು ಅವರಿಗೆ ಉಪದೇಶಿಸುವೆ. 
ನುಸಿಯು ಬಟ್ಟೆಯನ್ನು ತಿಂದುಬಿಡುವಂತೆ ಜನರಿಗೆ ಇಷ್ಟವಾದವುಗಳನ್ನು ನೀನು ನಾಶಮಾಡುವೆ. 
ಹೌದು, ನಮ್ಮ ಜೀವಿತಗಳು ಬೇಗನೆ ಕಣ್ಮರೆಯಾಗುವ ಒಂದು ಚಿಕ್ಕ ಮೋಡದಂತಿವೆ. 
12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು! 
ನನ್ನ ಮೊರೆಗೆ ಕಿವಿಗೊಡು! 
ನನ್ನ ಕಣ್ಣೀರನ್ನು ನೋಡು! 
ನಾನು ಈ ಜೀವಿತವನ್ನು ಕೇವಲ ಒಬ್ಬ ಪ್ರಯಾಣಿಕನಂತೆ ನಿನ್ನೊಂದಿಗೆ ಸಾಗಿಸುತ್ತಿರುವೆ. 
ನನ್ನ ಎಲ್ಲಾ ಪೂರ್ವಿಕರಂತೆ, ನಾನು ಇಲ್ಲಿ ಕೇವಲ ಸ್ವಲ್ಪಕಾಲ ಜೀವಿಸುವೆನು. 
13 ನೀನು ಕೋಪದಿಂದ ನನ್ನ ಕಡೆಗೆ ನೋಡಬೇಡ! ಸಾಯುವುದಕ್ಕಿಂತ ಮೊದಲು ನನಗೆ ಸಂತೋಷವಿರಲಿ. 
ಇನ್ನು ಸ್ವಲ್ಪಕಾಲದಲ್ಲಿ ನಾನು ಇಲ್ಲವಾಗುವೆನು!