47
ರಚನೆಗಾರರು: ಕೋರಹೀಯರು. 
1 ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ; 
ದೇವರಿಗೆ ಆನಂದಘೋಷ ಮಾಡಿರಿ! 
2 ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ. 
ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ. 
3 ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ 
ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ. 
4 ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು; 
ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು. 
5 ಯೆಹೋವನು ಆನಂದಘೋಷದೊಡನೆಯೂ 
ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು. 
6 ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ. 
ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ. 
7 ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ; 
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ. 
8 ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ; 
ದೇವರು ಎಲ್ಲಾ ಜನಾಂಗಗಳನ್ನು ಆಳುವನು. 
9 ಜನಾಂಗಗಳ ನಾಯಕರು 
ಅಬ್ರಹಾಮನ ದೇವಜನರೊಡನೆ ಕೂಡಿಬರುವರು. 
ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ. 
ದೇವರು ಅವರಿಗೆ ಸರ್ವಾಧಿಕಾರಿ!