ಯೆಹೂದ ಮತ್ತು ಜೆರುಸಲೇಮಿಗೆ ದೈವಸಂದೇಶ
1ಆಮೋಚನ ಮಗನಾದ ಯೆಶಾಯನು ಯೆಹೂದ ಮತ್ತು ಜೆರುಸಲೇಮಿನ ಬಗ್ಗೆ ನೋಡಿದ ದರ್ಶನ.
2ಕೊನೆಯ ದಿನಗಳಲ್ಲಿ ಯೆಹೋವನಾಲಯದ ಪರ್ವತವು
ಎಲ್ಲಾ ಬೆಟ್ಟಗಳಿಗಿಂತಲೂ ಮಹೋನ್ನತವಾದ ಪರ್ವತವಾಗಿರುವುದು.
3ಅಲ್ಲಿಗೆ ಎಲ್ಲಾ ದೇಶಗಳಿಂದ ಜನರು ಸತತವಾಗಿ ತೊರೆಗಳಂತೆ ಬರುವರು.
ಹೊರಟುಬಂದ ಆ ಜನರು, “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ.
ಯಾಕೋಬನ ದೇವರ ಆಲಯಕ್ಕೆ ಹೋಗೋಣ.
ಆತನು ನಮಗೆ ಜೀವಮಾರ್ಗವನ್ನು ಅಲ್ಲಿ ಬೋಧಿಸುವನು.
ನಾವು ಆತನನ್ನು ಹಿಂಬಾಲಿಸೋಣ” ಎಂದು ಹೇಳುವರು.
ಯೆಹೋವನ ಸಂದೇಶ, ಬೋಧನೆಗಳು ಜೆರುಸಲೇಮಿನಲ್ಲಿರುವ
ಚೀಯೋನ್ ಪರ್ವತದಿಂದ ಪ್ರಾರಂಭವಾಗಿ ಇಡೀ ಪ್ರಪಂಚಕ್ಕೆ ಹರಡುವದು.
4ಈಗ ಎಲ್ಲಾ ದೇಶಗಳಿಗೆ ದೇವರೇ ನ್ಯಾಯಾಧೀಶನಾಗಿರುವನು.
ಅನೇಕ ಜನರ ತರ್ಕಗಳನ್ನು ದೇವರು ಕೊನೆಗಾಣಿಸುವನು.
ಆ ಜನರು ಯುದ್ಧಕ್ಕಾಗಿ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು;
ತಮ್ಮ ಖಡ್ಗಗಳಿಂದ ಅವರು ನೇಗಿಲುಗಳನ್ನು ತಯಾರಿಸುವರು;
ತಮ್ಮ ಬರ್ಜಿಗಳಿಂದ ಸಸಿಗಳನ್ನು ಕೊಯ್ಯುವ ಕುಡುಗೋಲುಗಳನ್ನು ಮಾಡುವರು.
ಪರಸ್ಪರ ಹೊಡೆದಾಡಿಕೊಳ್ಳುವದನ್ನು ಜನಾಂಗಗಳು ನಿಲ್ಲಿಸುವರು.
ಇನ್ನೆಂದಿಗೂ ಜನಾಂಗಗಳು ಯುದ್ಧಾಭ್ಯಾಸ ತರಬೇತಿಯನ್ನು ಹೊಂದುವುದಿಲ್ಲ.
5ಯಾಕೋಬನ ಮನೆತನದವರೇ, ನೀವು ಯೆಹೋವನ ಬೆಳಕನ್ನು ಹಿಂಬಾಲಿಸುವವರಾಗಬೇಕು.
6ನೀವು ನಿಮ್ಮ ಜನರನ್ನು ತೊರೆದದ್ದರಿಂದ ನಾನು ನಿಮಗೆ ಹೀಗೆ ಹೇಳಿದೆನು. ಪೂರ್ವದೇಶದ ಜನರಿಗಿರುವ ತಪ್ಪು ತಿಳುವಳಿಕೆಯು ನಿಮ್ಮ ಜನರಲ್ಲಿ ತುಂಬಿಹೋಯಿತು. ಫಿಲಿಷ್ಟಿಯರಂತೆ ನಿಮ್ಮ ಜನರು ಭವಿಷ್ಯ ಹೇಳಲು ಪ್ರಯತ್ನಿಸಿ ಆ ತಪ್ಪು ತಿಳುವಳಿಕೆಗೆ ಮಾರುಹೋದರು. 7ನಿಮ್ಮ ದೇಶವು ಬೆಳ್ಳಿಬಂಗಾರಗಳಿಂದಲೂ ಮಿತಿಯಿಲ್ಲದ ನಿಕ್ಷೇಪಗಳಿಂದಲೂ ಕುದುರೆಗಳಿಂದಲೂ ಅಸಂಖ್ಯಾತವಾದ ರಥಗಳಿಂದಲೂ ತುಂಬಿಹೋಯಿತು. 8ನಿಮ್ಮ ದೇಶವು ಕೈಯಿಂದ ಮಾಡಿದ ವಿಗ್ರಹಗಳಿಂದ ತುಂಬಿದ್ದು ಜನರು ಅವುಗಳನ್ನು ಆರಾಧಿಸುತ್ತಾರೆ. 9ಜನರು ಕೆಟ್ಟದಾರಿಯಲ್ಲಿ ಹೋಗುತ್ತಿದ್ದಾರೆ; ಹೀನಸ್ಥಿತಿಯಲ್ಲಿ ಮುಂದುವರಿಯುತ್ತಿದ್ದಾರೆ. ದೇವರೇ, ನೀನು ಅವರನ್ನು ಖಂಡಿತವಾಗಿಯೂ ಕ್ಷಮಿಸಬೇಡ.
10ಬಂಡೆಗಳ ಹಿಂಬದಿಯಲ್ಲಿಯೂ ಹೊಲಸಿನಲ್ಲಿಯೂ ಅವಿತುಕೊಳ್ಳಿರಿ. ನೀವು ಯೆಹೋವನಿಗೆ ಭಯಪಟ್ಟು ಆತನ ಮಹಾಶಕ್ತಿಗೆ ಮರೆಯಾಗಿ ಅವಿತುಕೊಳ್ಳಬೇಕು.
11ಗರ್ವಿಷ್ಠರ ಗರ್ವವು ಕುಗ್ಗಿಸಲ್ಪಡುವುದು; ಅಹಂಕಾರಿಗಳ ಅಹಂಕಾರವು ತಗ್ಗಿಸಲ್ಪಡುವುದು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು.
12ಸರ್ವಶಕ್ತನಾದ ಯೆಹೋವನು ಒಂದು ವಿಶೇಷ ದಿನವನ್ನು ಯೋಜಿಸಿರುತ್ತಾನೆ. ಆ ದಿನದಲ್ಲಿ ಯೆಹೋವನು ಅಹಂಕಾರಿಗಳನ್ನೂ ಜಂಬಕೊಚ್ಚಿಕೊಳ್ಳುವವರನ್ನೂ ಶಿಕ್ಷಿಸುವನು. ಆಗ ಆ ಅಹಂಕಾರಿಗಳನ್ನು ಜನರು ದೊಡ್ಡಜನರೆಂದು ಪರಿಗಣಿಸುವುದಿಲ್ಲ. 13ಆ ಅಹಂಕಾರದ ಜನರು ಲೆಬನೋನಿನ ದೇವದಾರು ಮರಗಳಂತಿರುವರು. ಬಾಷಾನಿನ ಮಹಾದೇವದಾರು ಮರಗಳಂತಿರುವರು. ಆದರೆ ಯೆಹೋವನು ಅವರನ್ನು ಶಿಕ್ಷಿಸುವನು. 14ಆ ಅಹಂಕಾರಿಗಳು ಉನ್ನತವಾದ ಪರ್ವತಗಳಂತೆಯೂ, ಎತ್ತರವಾದ ಬೆಟ್ಟಗಳಂತೆಯೂ ಇದ್ದಾರೆ. 15ಅವರು ಎತ್ತರವಾದ ಬುರುಜುಗಳಂತೆಯೂ ಬಲಿಷ್ಠವಾದ ಕೋಟೆಗೋಡೆಯಂತೆಯೂ ಇರುವರು. ಆದರೆ ದೇವರು ಅವರನ್ನು ಶಿಕ್ಷಿಸುವನು. 16ಆ ಅಹಂಕಾರಿಗಳು ತಾರ್ಷೀಷಿನ ದೊಡ್ಡ ಹಡಗುಗಳಂತಿದ್ದಾರೆ. ಈ ಹಡಗುಗಳಲ್ಲಿ ಶ್ರೇಷ್ಠವಾದ ವಸ್ತುಗಳು ತುಂಬಿವೆ. ಆದರೆ ದೇವರು ಆ ಅಹಂಕಾರಿಗಳನ್ನು ಶಿಕ್ಷಿಸುವನು.
17ಆ ಸಮಯದಲ್ಲಿ ಜನರು ತಮ್ಮ ಅಹಂಕಾರವನ್ನು ತೋರಿಸುವುದಿಲ್ಲ. ಈಗ ಅಹಂಕಾರಿಗಳಾಗಿರುವವರು ನೆಲದತನಕ ಬಗ್ಗಿಹೋಗುವರು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು. 18ಎಲ್ಲಾ ವಿಗ್ರಹಗಳು ಇಲ್ಲವಾಗುವವು. 19ಜನರು ಬಂಡೆಗಳ ಸಂದುಗಳಲ್ಲಿಯೂ ನೆಲದ ಬಿರುಕುಗಳಲ್ಲಿಯೂ ಅಡಗಿಕೊಳ್ಳುವರು. ಜನರು ಯೆಹೋವನಿಗೂ ಆತನ ಪರಾಕ್ರಮಕ್ಕೂ ಭಯಪಡುವರು. ಯೆಹೋವನು ಎದ್ದು ಈ ಪ್ರಪಂಚವನ್ನು ಅಲುಗಾಡಿಸುವಾಗ ಇವೆಲ್ಲಾ ಸಂಭವಿಸುವವು.
20ಆ ಸಮಯದಲ್ಲಿ ಜನರು ತಮ್ಮ ಬೆಳ್ಳಿಬಂಗಾರಗಳ ವಿಗ್ರಹಗಳನ್ನೆತ್ತಿ ಬಿಸಾಡಿಬಿಡುವರು. ಈ ವಿಗ್ರಹಗಳನ್ನು ಜನರು ಪೂಜಿಸುವದಕ್ಕಾಗಿ ಮಾಡಿಕೊಂಡರು. ಬಾವಲಿಗಳೂ, ಇಲಿಗಳೂ ವಾಸಿಸುವ ಸಂದುಗಳಲ್ಲಿ ಈ ವಿಗ್ರಹಗಳನ್ನು 21ಜನರು ಬಿಸಾಡಿ, ಸಂದುಗೊಂದುಗಳಲ್ಲಿ ಅಡಗಿಕೊಳ್ಳುವರು. ಯೆಹೋವನಿಗೂ ಆತನ ಮಹಾಶಕ್ತಿಗೂ ಹೆದರಿ ಅವರು ಹಾಗೆ ಮಾಡುವರು. ಯೆಹೋವನು ಎದ್ದು ಭೂಮಿಯನ್ನು ಅಲುಗಾಡಿಸುವ ಸಮಯದಲ್ಲಿ ಇವೆಲ್ಲಾ ಸಂಭವಿಸುವವು.
22ನಿಮ್ಮ ರಕ್ಷಣೆಗಾಗಿ ನೀವು ಇತರರ ಮೇಲೆ ನಂಬಿಕೆ ಇಡಕೂಡದು. ಅವರು ಕೇವಲ ಸಾಯುವ ಮನುಷ್ಯರಷ್ಟೇ. ಆದ್ದರಿಂದ ಅವರನ್ನು ನೀವು ದೇವರಂತೆ ಬಲಿಷ್ಠರೆಂದು ನೆನಸಬಾರದು.