ರಚನೆಗಾರ: ದಾವೀದ.
1ಯೆಹೋವನೇ, ನನ್ನನ್ನು ರಕ್ಷಿಸು!
ಒಳ್ಳೆಯವರೆಲ್ಲಾ ಕೊನೆಗೊಂಡರು.
ಭೂನಿವಾಸಿಗಳಲ್ಲಿ ನಿಜವಾದ ವಿಶ್ವಾಸಿಗಳು ಉಳಿದೇ ಇಲ್ಲ.
2ಜನರು ತಮ್ಮ ನೆರೆಯವರಿಗೆ ಸುಳ್ಳು ಹೇಳುವರು.
ಪ್ರತಿಯೊಬ್ಬರೂ ತಮ್ಮ ನೆರೆಯವರಿಗೆ ಸುಳ್ಳಿನಿಂದ ಮುಖಸ್ತುತಿ ಮಾಡುವರು.
3ಸುಳ್ಳಾಡುವ ಆ ತುಟಿಗಳನ್ನೂ ಕಟ್ಟುಕಥೆಗಳನ್ನು ಹೇಳುವ
ಆ ನಾಲಿಗೆಗಳನ್ನೂ ಯೆಹೋವನು ಕತ್ತರಿಸಿಹಾಕಲಿ.
4“ನಾವು ಪ್ರಮುಖರಾಗಲು ನಮ್ಮ ಸುಳ್ಳುಗಳೇ ನಮಗೆ ಆಧಾರ.
ನಮ್ಮ ನಾಲಿಗೆಗಳು ಇರುವಾಗ ನಮಗೆ ಒಡೆಯರಾಗಲು ಯಾರಿಗೆ ಸಾಧ್ಯ?” ಎಂದು ಅವರು ಹೇಳುತ್ತಾರೆ.
5ಆದರೆ ಯೆಹೋವನು ಹೇಳುವುದೇನೆಂದರೆ:
“ದುಷ್ಟರು ಕುಗ್ಗಿಹೋದವರಿಂದ ಕದ್ದುಕೊಂಡಿದ್ದಾರೆ.
ಅಸಹಾಯಕರು ದುಃಖದಿಂದ ನಿಟ್ಟುಸಿರು ಬಿಡುತ್ತಿದ್ದಾರೆ.
ಆದ್ದರಿಂದ ನಾನು ಎದ್ದುನಿಂತು, ಆಯಾಸಗೊಂಡಿರುವ ಅವರನ್ನು ಕಾಪಾಡುವೆನು.”
6ಯೆಹೋವನ ಮಾತುಗಳು
ಬೆಂಕಿಯಲ್ಲಿ ಏಳು ಸಲ ಶುದ್ಧೀಕರಿಸಿದ ಬೆಳ್ಳಿಯಂತೆ ಸತ್ಯವಾಗಿವೆ.
7ಯೆಹೋವನೇ, ಅಸಹಾಯಕರನ್ನು ಪರಿಪಾಲಿಸು.
ಅವರನ್ನು ಶಾಶ್ವತವಾಗಿ ಸಂರಕ್ಷಿಸು.
8ಆ ದುಷ್ಟರು ಪ್ರಮುಖರಂತೆ ವರ್ತಿಸಿದರೂ
ಅವರು ಕೇವಲ ನಕಲಿ ಆಭರಣಗಳಂತಿದ್ದಾರೆ.