ರಚನೆಗಾರ: ದಾವೀದ.
1ಮೂಢರು ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುವರು.
ಅವರು ಕೆಟ್ಟುಹೋಗಿದ್ದಾರೆ; ದುಷ್ಕೃತ್ಯಗಳನ್ನು ನಡೆಸುವವರಾಗಿದ್ದಾರೆ.
ಅವರು ಒಳ್ಳೆಯದನ್ನು ಮಾಡುವುದೇ ಇಲ್ಲ.
2ಮನುಷ್ಯರಲ್ಲಿ ತನಗೋಸ್ಕರ ಹುಡುಕುತ್ತಿರುವ ಬುದ್ಧಿವಂತರು ಇದ್ದಾರೋ
ಎಂದು ದೇವರು ಪರಲೋಕದಿಂದ ನೋಡುತ್ತಿದ್ದಾನೆ.
3ಆದರೆ ಪ್ರತಿಯೊಬ್ಬರೂ ದೇವರಿಗೆ ವಿಮುಖರಾಗಿದ್ದಾರೆ.
ಪ್ರತಿಯೊಬ್ಬನೂ ಕೆಟ್ಟುಹೋಗಿದ್ದಾನೆ.
ಯಾವನೂ ಒಳ್ಳೆಯದನ್ನು ಮಾಡುತ್ತಿಲ್ಲ.
ಇಲ್ಲ, ಒಬ್ಬನಾದರೂ ಮಾಡುತ್ತಿಲ್ಲ!
4ದೇವರು ಹೀಗೆನ್ನುತ್ತಾನೆ: “ಆ ದುಷ್ಟರಿಗೆ ಖಂಡಿತವಾಗಿ ಸತ್ಯವು ತಿಳಿದಿದೆ!
ಆದರೆ ಅವರು ನನ್ನಲ್ಲಿ ಪ್ರಾರ್ಥಿಸುತ್ತಿಲ್ಲ.
ಆಹಾರ ತಿನ್ನುವಂತೆ ಅವರು ನನ್ನ ಜನರನ್ನು ನಾಶಮಾಡಲು ಸಿದ್ಧರಾಗಿದ್ದಾರೆ.”
5ಆ ದುಷ್ಟರು ಹಿಂದೆಂದೂ ಭಯಗೊಂಡಿಲ್ಲದ ರೀತಿಯಲ್ಲಿ ಭಯಭ್ರಾಂತರಾಗುವರು!
ಅವರು ಇಸ್ರೇಲರ ಶತ್ರುಗಳು.
ದೇವರು ಅವರನ್ನು ತಿರಸ್ಕರಿಸಿದ್ದಾನೆ.
ಆದ್ದರಿಂದ ದೇವಜನರು ಅವರನ್ನು ಸೋಲಿಸುವರು,
ದೇವರು ಆ ದುಷ್ಟರ ಎಲುಬುಗಳನ್ನು ಚದರಿಸಿಬಿಡುವನು.
6ಚೀಯೋನ್ ಪರ್ವತದ ಮೇಲಿರುವಾತನು
ಇಸ್ರೇಲಿಗೆ ಜಯವನ್ನು ತರುವನು!
ಆಗ ದೇವರು ತನ್ನ ಜನರನ್ನು ಸೆರೆವಾಸದಿಂದ ಬರಮಾಡುವನು.
ಯಾಕೋಬನೇ ಉಲ್ಲಾಸಿಸು!
ಇಸ್ರೇಲೇ ಬಹು ಸಂತೋಷಪಡು.