ರಚನೆಗಾರರು: ಕೋರಹೀಯರು
1ಯೆಹೋವನೇ ಮಹೋನ್ನತನು.
ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
2ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
ಅದೇ ಆ ಮಹಾರಾಜನ ಪರ್ವತ.
3ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
4ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
5ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
ಭಯದಿಂದ ಓಡಿಹೋದರು.
6ಭಯವು ಅವರನ್ನು
ಪ್ರಸವವೇದನೆಯಂತೆ ಆವರಿಸಿಕೊಂಡಿತು.
7ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
ನೀನು ಅವರನ್ನು ನಾಶಮಾಡಿದೆ.
8ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.
9ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10ದೇವರೇ, ನೀನು ಪ್ರಖ್ಯಾತನಾಗಿರುವೆ.
ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
ಯೆಹೂದದ ಊರುಗಳು ಉಲ್ಲಾಸಿಸಲಿ.
12ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
ಅದರ ಬುರುಜುಗಳನ್ನು ಎಣಿಸಿರಿ.
13ಅದರ ಕೋಟೆಗಳನ್ನು ನೋಡಿರಿ.
ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14ಈ ದೇವರೇ ಎಂದೆಂದಿಗೂ ನಮ್ಮ ದೇವರು!
ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!