1ಯೆಹೋವನಿಗೆ ಸ್ತೋತ್ರವಾಗಲಿ.
ಯೆಹೋವನ ಹೊಸ ಕಾರ್ಯಗಳಿಗಾಗಿ ಆತನಿಗೆ ಹೊಸ ಹಾಡನ್ನು ಹಾಡಿರಿ!
ಆತನ ಭಕ್ತರ ಸಭೆಯಲ್ಲಿ ಆತನನ್ನು ಸಂಕೀರ್ತಿಸಿರಿ.
2ಇಸ್ರೇಲರು ತಮ್ಮ ಸೃಷ್ಟಿಕರ್ತನಲ್ಲಿ ಉಲ್ಲಾಸಿಸಲಿ!
ಚೀಯೋನಿನ ಜನರು ತಮ್ಮ ರಾಜನಲ್ಲಿ ಹರ್ಷಿಸಲಿ.
3ಅವರು ನೃತ್ಯಮಾಡುತ್ತಾ ಝಲ್ಲರಿಗಳನ್ನು ಬಡಿಯುತ್ತಾ
ಹಾರ್ಪ್‌ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸ್ತುತಿಸಲಿ.
4ಯೆಹೋವನು ತನ್ನ ಜನರಲ್ಲಿ ಸಂತೋಷಿಸುವನು.
ಆತನು ತನ್ನ ದೀನಜನರಿಗಾಗಿ ಅದ್ಭುತಕಾರ್ಯವನ್ನು ಮಾಡಿ ಅವರನ್ನು ರಕ್ಷಿಸಿದನು!
5ಆತನ ಭಕ್ತರೇ, ನಿಮ್ಮ ವಿಜಯದಲ್ಲಿ ಉಲ್ಲಾಸಿಸಿರಿ!
ಹಾಸಿಗೆಯ ಮೇಲಿರುವಾಗಲೂ ಸಂತೋಷದಿಂದಿರಿ.
6ಜನರು ಆತನಿಗೆ ಗಟ್ಟಿಯಾಗಿ ಸ್ತೋತ್ರಮಾಡುತ್ತಾ
ತಮ್ಮ ಇಬ್ಭಾಯಿ ಕತ್ತಿಗಳನ್ನು ಕೈಗಳಲ್ಲಿ ತೆಗೆದುಕೊಳ್ಳಲಿ.
7ಅವರು ಹೋಗಿ ತಮ್ಮ ಶತ್ರುಗಳನ್ನು ದಂಡಿಸಲಿ;
ಅನ್ಯ ಜನರನ್ನು ದಂಡಿಸಲಿ.
8ದೇವಜನರು ಆ ರಾಜರುಗಳನ್ನು ಮತ್ತು ಪ್ರಮುಖರನ್ನು
ಸರಪಣಿಗಳಿಂದಲೂ ಕಬ್ಬಿಣದ ಬೇಡಿಗಳಿಂದಲೂ ಬಂಧಿಸುವರು.
9ಆತನ ಆಜ್ಞೆಗನುಸಾರವಾಗಿ ಆತನ ಭಕ್ತರು ತಮ್ಮ ಶತ್ರಗಳನ್ನು ದಂಡಿಸುವರು.
ಆತನು ತನ್ನ ಭಕ್ತರಿಗೆ ಒಳ್ಳೆಯವನಾಗಿದ್ದಾನೆ.
ಯೆಹೋವನಿಗೆ ಸ್ತೋತ್ರವಾಗಲಿ.