ರಾಜಾಶೀರ್ವಾದ
ಸೊಲೊಮೋನನ ಕೀರ್ತನೆ.
ಕೀರ್ತ 21; 45
1ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು;
ರಾಜಕುಮಾರನಿಗೆ ನಿನ್ನ ನೀತಿಯನ್ನು ಅನುಗ್ರಹಿಸು.
2ಅವನು ನಿನ್ನ ಜನರಿಗೆ ನೀತಿಯಿಂದಲೂ,
ಕುಗ್ಗಿಹೋದ ನಿನ್ನವರಿಗೆ ನ್ಯಾಯವಾಗಿಯೂ ತೀರ್ಪುಕೊಡಲಿ.
3ಗುಡ್ಡ ದಿನ್ನೆಗಳೆಲ್ಲವು ನಿನ್ನ ಜನರಿಗೋಸ್ಕರ,
ನೀತಿಗನುಸಾರವಾಗಿ ಸುಕ್ಷೇಮವನ್ನು ಫಲಿಸಲಿ.
4ಅವನು ಬಡವರ ನ್ಯಾಯವನ್ನು ಸ್ಥಾಪಿಸಲಿ;
ದೀನರ ಮಕ್ಕಳನ್ನು ಉದ್ಧರಿಸಲಿ;
ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ.
5ಸೂರ್ಯನು, ಚಂದ್ರನು ಇರುವವರೆಗೂ,
ತಲತಲಾಂತರಗಳವರೆಗೂ ಅವರು ನಿನಗೆ ಭಯಪಡಲಿ.
6ಹುಲ್ಲುಕೊಯ್ದ ಮೇಹುಗಾಡಿನ ಮೇಲೆ ಸುರಿಯುವ ವೃಷ್ಟಿಯಂತೆಯೂ,
ಭೂಮಿಯನ್ನು ನೆನಸುವ ಹದಮಳೆಯಂತೆಯೂ ಅವನು ಇರಲಿ.
7ಅವನ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ;
ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ.
8ಅವನು ಸಮುದ್ರದಿಂದ ಸಮುದ್ರದ ವರೆಗೂ,
ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ.
9ಅರಣ್ಯವಾಸಿಗಳು ಅವನಿಗೆ ಅಡ್ಡಬೀಳಲಿ;
ಅವನ ವೈರಿಗಳು ಮಣ್ಣುಮುಕ್ಕಲಿ.
10ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ;
ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ.
11ಎಲ್ಲಾ ಅರಸರೂ ಅವನಿಗೆ ಸಾಷ್ಟಾಂಗವೆರಗಲಿ;
ಸರ್ವಜನಾಂಗಗಳು ಆತನನ್ನು ಸೇವಿಸಲಿ.
12ಏಕೆಂದರೆ ಅವನು ಮೊರೆಯಿಡುವ ಬಡವರನ್ನೂ,
ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು.
13ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.
14ಕುಯುಕ್ತಿ, ಬಲಾತ್ಕಾರಗಳಿಗೆ ತಪ್ಪಿಸಿ ಅವರ ಜೀವವನ್ನು ಕಾಯುವನು;
ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.
15ಅವನು ಬಾಳಲಿ; ಶೆಬಾ ಪ್ರಾಂತ್ಯದ ಬಂಗಾರವು ಅವನಿಗೆ ಸಮರ್ಪಣೆಯಾಗಲಿ.
ಅವನಿಗೋಸ್ಕರ ಯಾವಾಗಲೂ ದೇವರಲ್ಲಿ ವಿಜ್ಞಾಪನೆಯು ನಡೆಯಲಿ;
ದಿನದಿನವೂ ಅವನಿಗೆ ಆಶೀರ್ವಾದಗಳು ಉಂಟಾಗಲಿ.
16ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ;
ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರಲಿ.
ಹೊಲದಲ್ಲಿ ಕಾಯಿಪಲ್ಯದಂತೆ ಪಟ್ಟಣಗಳಲ್ಲಿ ಜನರು ಹೆಚ್ಚಲಿ.
17ಅವನ ನಾಮವು ಸ್ಥಿರವಾಗಿರಲಿ;
ಅವನ ಹೆಸರು ಸೂರ್ಯನಿರುವವರೆಗೆ ಇರಲಿ.
ಎಲ್ಲಾ ಜನಾಂಗಗಳವರು ಅವನನ್ನು ಧನ್ಯನೆಂದು ಹೇಳಿ,
ಅವನಿಗಿದ್ದ ಆಶೀರ್ವಾದವು ತಮಗೂ ಆಗಬೇಕೆಂದು ಕೋರುವವರಾಗಲಿ.
18ಮಹತ್ಕಾರ್ಯಗಳನ್ನು ನಡೆಸುವುದರಲ್ಲಿ ಅದ್ವಿತೀಯನೂ,
ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವು.
19ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲಕ್ಕೂ ಸ್ತುತಿ ಇರಲಿ;
ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.
20ಇಲ್ಲಿಗೆ ಇಷಯನ ಮಗನಾದ ದಾವೀದನ ಪ್ರಾರ್ಥನೆಗಳ ಸಮಾಪ್ತಿ.

Notes


*72:5 72:5 ತಲಲಾಂತರಗಳವರೆಲ್ಲರು ನಿನಗೆ ಭಯಪಡಲಿ.

72:7 72:7 ನೀತಿಯು ವೃದ್ಧಿಯಾಗಲಿ ಅಥವಾ ನೀತಿವಂತರು ವೃದ್ಧಿಯಾಗಲಿ.

72:9 72:9 ಅರಣ್ಯವಾಸಿಗಳು ಅಥವಾ ಅವನ ಶತ್ರುಗಳು.

§72:14 72:14 ಅವರ ಜೀವವು ಅಥವಾ ಅವರ ರಕ್ತವು.