1 ರಾಜರುಗಳು
1
ಆ ಕಾಲದಲ್ಲಿ ರಾಜನಾದ ದಾವೀದನು ಬಹಳ ಮುದುಕನಾಗಿದ್ದನು. ಅವನ ದೇಹವು ಬೆಚ್ಚಗಾಗುತ್ತಲೇ ಇರಲಿಲ್ಲ. ಅವನ ಸೇವಕರು ಅವನಿಗೆ ಕಂಬಳಿಗಳನ್ನು ಹೊದಿಸಿದರೂ ಅವನ ದೇಹವು ತಣ್ಣಗೇ ಇರುತ್ತಿತ್ತು. ಆದ್ದರಿಂದ ಅವನ ಸೇವಕರು ಅವನಿಗೆ, “ನಾವು ನಿನ್ನ ಆರೈಕೆಗಾಗಿ ಒಬ್ಬ ಯುವಕನ್ನಿಕೆಯನ್ನು ಹುಡುಕುವೆವು. ಅವಳು ನಿನ್ನನ್ನು ಒತ್ತರಿಸಿಕೊಂಡು ಮಲಗಿ ಬೆಚ್ಚಗಿಡುತ್ತಾಳೆ” ಎಂದು ಹೇಳಿದರು. ಆದ್ದರಿಂದ ರಾಜನ ಸೇವಕರು ಇಸ್ರೇಲಿನ ಎಲ್ಲ ಕಡೆಗಳಲ್ಲೂ ಯುವತಿಯೊಬ್ಬಳನ್ನು ಹುಡುಕಲಾರಂಭಿಸಿದರು. ಅವರು ರಾಜನನ್ನು ಬೆಚ್ಚಗಿಡಲು ಒಬ್ಬ ಸುಂದರ ಹುಡುಗಿಯನ್ನು ಹುಡುಕಲಾರಂಭಿಸಿದರು. ಅವರಿಗೆ ಅಬೀಷಗ್ ಎಂಬ ಹೆಸರಿನ ಯುವತಿಯು ಸಿಕ್ಕಿದಳು. ಅವಳು ಶೂನೇಮ್ ನಗರದವಳು. ಅವರು ಆ ಯುವತಿಯನ್ನು ರಾಜನ ಬಳಿಗೆ ಕರೆದುಕೊಂಡು ಬಂದರು. ಆ ಯುವತಿಯು ಬಹಳ ಸೌಂದರ್ಯವತಿಯಾಗಿದ್ದಳು. ಅವಳು ರಾಜನ ಆರೈಕೆಯನ್ನು ಮಾಡಿದಳು ಮತ್ತು ಅವನ ಸೇವೆಯನ್ನೂ ಮಾಡಿದಳು. ರಾಜನಾದ ದಾವೀದನು ಅವಳನ್ನು ಕೂಡಲಿಲ್ಲ.
ರಾಜನಾದ ದಾವೀದನ ಮಗನಾದ ಅದೋನೀಯನು ಬಹಳ ಗರ್ವಿಷ್ಠನಾದನು. ಅವನು, “ನಾನೇ ರಾಜನಾಗುತ್ತೇನೆ” ಎಂದು ಹೇಳಿಕೊಂಡನು. (ಅದೋನೀಯನ ತಾಯಿಯ ಹೆಸರು ಹಗ್ಗೀತ.) ಅದೋನೀಯನು ರಾಜನಾಗಬೇಕೆಂಬುದಾಗಿ ಬಹಳ ಆಸೆಪಟ್ಟನು. ಆದ್ದರಿಂದ ಅವನು ತನಗಾಗಿ ಒಂದು ರಥವನ್ನು, ಕುದುರೆಗಳನ್ನು ಮತ್ತು ರಥದ ಮುಂದೆ ಓಡುವಂತಹ ಐವತ್ತು ಜನರನ್ನು ಪಡೆದನು. ರಾಜನಾದ ದಾವೀದನು ತನ್ನ ಮಗನಾದ ಅದೋನೀಯನನ್ನು ಎಂದೂ ತಿದ್ದಲಿಲ್ಲ. ದಾವೀದನು, “ನೀನು ಹೀಗೇಕೆ ಮಾಡುತ್ತಿರುವೆ?” ಎಂದು ಅವನನ್ನು ಒಂದು ಸಾರಿಯಾದರೂ ಕೇಳಲಿಲ್ಲ. ಅದೋನೀಯನು ಅಬ್ಷಾಲೋಮನ ಬಳಿಕ ಹುಟ್ಟಿದ ಮಗ. ಅದೋನೀಯನು ಬಹಳ ಸುಂದರನಾಗಿದ್ದನು.
ಅದೋನೀಯನು ಚೆರೂಯಳ ಮಗನಾದ ಯೋವಾಬ ಮತ್ತು ಯಾಜಕನಾದ ಎಬ್ಯಾತಾರನೊಂದಿಗೆ ಮಾತನಾಡಿದನು. ತಾನು ರಾಜನಾಗಬೇಕೆಂಬ ಅದೋನೀಯನ ಯೋಜನೆಗೆ ಅವರು ಬೆಂಬಲ ನೀಡಿದರು. ಆದರೆ ಅದೋನೀಯನ ಕಾರ್ಯವನ್ನು ಒಪ್ಪದ ಅನೇಕರು ದಾವೀದನಿಗೆ ನಂಬಿಗಸ್ತರಾಗಿದ್ದರು. ಇವರು ಯಾರೆಂದರೆ: ಯಾಜಕನಾದ ಚಾದೋಕ, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ, ಶಿಮ್ಮೀ, ರೇಗೀ ಮತ್ತು ರಾಜನಾದ ದಾವೀದನ ವಿಶೇಷ ಅಂಗರಕ್ಷಕರು. ಇವರಲ್ಲಿ ಯಾರೂ ಅದೋನೀಯನ ಸಂಗಡ ಸೇರಲಿಲ್ಲ.
ಒಂದು ದಿನ, ಅದೋನೀಯನು ಎನ್‌ರೋಗೆಲಿನ ಹತ್ತಿರದ ಚೋಹೆಲೆತ್ ಎಂಬ ಬಂಡೆಯ ಬಳಿ ಕೆಲವು ಕುರಿಗಳನ್ನು, ಹಸುಗಳನ್ನು ಮತ್ತು ಕೊಬ್ಬಿದ ಕರುಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅದೋನೀಯನು ತನ್ನ ಸಹೋದರರನ್ನು (ರಾಜನ ಇತರ ಗಂಡುಮಕ್ಕಳನ್ನು) ಮತ್ತು ಯೆಹೂದದ ಅಧಿಕಾರಿಗಳನ್ನು ಆಹ್ವಾನಿಸಿದನು. 10 ಆದರೆ ಅದೋನೀಯನು ಪ್ರವಾದಿಯಾದ ನಾತಾನನನ್ನಾಗಲಿ ಬೆನಾಯನನ್ನಾಗಲಿ ಅವನ ತಂದೆಯ ವಿಶೇಷ ಅಂಗರಕ್ಷಕರನ್ನಾಗಲಿ ಅವನ ಸೋದರ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ.
11 ನಾತಾನನಿಗೆ ಇದು ತಿಳಿದಾಗ, ಅವನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಬಳಿಗೆ ಹೋಗಿ, “ಹಗ್ಗೀತಳ ಮಗನಾದ ಅದೋನೀಯನು ಮಾಡುತ್ತಿರುವುದನ್ನು ನೀನು ಕೇಳಿದೆಯಾ? ಅವನು ತನ್ನನ್ನು ತಾನೇ ರಾಜನನ್ನಾಗಿ ಮಾಡಿಕೊಂಡಿದ್ದಾನೆ ಮತ್ತು ನಮ್ಮ ಒಡೆಯನಾದ ರಾಜ ದಾವೀದನಿಗೆ ಇದು ತಿಳಿದಿಲ್ಲ. 12 ನಿನ್ನ ಜೀವ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವ ಅಪಾಯದಲ್ಲಿರುವಂತಿದೆ. ಆದರೆ ನೀನು ನಿನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ನಾನು ನಿನಗೆ ತಿಳಿಸುತ್ತೇನೆ. 13 ರಾಜನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ರಾಜನೇ, ನನ್ನ ಮಗನಾದ ಸೊಲೊಮೋನನು ನಿನ್ನ ನಂತರದ ರಾಜನೆಂದು ನೀನು ನನಗೆ ವಾಗ್ದಾನ ಮಾಡಿದ್ದೆ. ಹೀಗಿರುವಾಗ ಅದೋನೀಯನು ನೂತನ ರಾಜನಾದದ್ದು ಏಕೆ?’ ಎಂದು ಹೇಳು. 14 ನೀನು ಅವನೊಂದಿಗೆ ಮಾತನಾಡುತ್ತಿರುವಾಗ ನಾನು ಒಳಗೆ ಬಂದು ಅದೋನೀಯನ ಬಗ್ಗೆ ನೀನು ಹೇಳಿದ್ದೆಲ್ಲವೂ ನಿಜ ಎಂದು ಹೇಳುತ್ತೇನೆ” ಎಂಬುದಾಗಿ ತಿಳಿಸಿದನು.
15 ಆದ್ದರಿಂದ ಬತ್ಷೆಬೆಳು ರಾಜನನ್ನು ನೋಡಲು ಅವನ ಮಲಗುವ ಕೊಠಡಿಗೆ ಹೋದಳು. ರಾಜನು ಬಹಳ ವೃದ್ಧನಾಗಿದ್ದನು. ಶೂನೇಮಿನ ಯುವತಿಯಾದ ಅಬೀಷಗಳು ಅಲ್ಲಿ ಅವನ ಆರೈಕೆಯನ್ನು ಮಾಡುತ್ತಿದ್ದಳು. 16 ರಾಜನ ಎದುರಿನಲ್ಲಿ ಬತ್ಷೆಬೆಳು ಬಾಗಿ ನಮಸ್ಕರಿಸಿದಳು. ರಾಜನು, “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.
17 ಬತ್ಷೆಬೆಳು, “ನನ್ನ ಒಡೆಯನೇ, ನಿನ್ನ ದೇವರಾದ ಯೆಹೋವನ ಆಣೆಯಾಗಿ ನೀನು ನನಗೆ ಒಂದು ವಾಗ್ದಾನವನ್ನು ಮಾಡಿದ್ದೆ. ‘ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನು. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತು ಆಳುವನು’ ಎಂಬುದೇ ಆ ಪ್ರಮಾಣ. 18 ಆದರೆ ಈಗ ಅದೋನೀಯನು ತನ್ನನ್ನು ರಾಜನಾಗಿ ಮಾಡಿಕೊಳ್ಳುತ್ತಿದ್ದಾನೆ. ಇದು ನಿನಗೆ ತಿಳಿದಿಲ್ಲ. 19 ಅದೋನೀಯನು ಅನೇಕ ಹಸುಗಳನ್ನು, ಕೊಬ್ಬಿದ ಕರುಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದ್ದಾನೆ. ಅವನು ನಿನ್ನ ಎಲ್ಲಾ ಗಂಡುಮಕ್ಕಳನ್ನು ಆಹ್ವಾನಿಸಿದ್ದನು. ಅವನು ಯಾಜಕನಾದ ಎಬ್ಯಾತಾರನನ್ನು ಮತ್ತು ನಿನ್ನ ಸೇನಾಧಿಪತಿಯಾದ ಯೋವಾಬನನ್ನು ಆಹ್ವಾನಿಸಿದ್ದನು. ಆದರೆ ಅವನು ನಿನ್ನ ಸೇವೆಮಾಡುವ ನಿನ್ನ ಮಗನಾದ ಸೊಲೊಮೋನನನ್ನು ಆಹ್ವಾನಿಸಲಿಲ್ಲ. 20 ನನ್ನ ಒಡೆಯನಾದ ರಾಜನೇ, ನಿನ್ನ ನಂತರ ಯಾರು ರಾಜನಾಗಬೇಕೆಂಬ ನಿನ್ನ ತೀರ್ಮಾನಕ್ಕಾಗಿ ಇಸ್ರೇಲರೆಲ್ಲರೂ ಕಾಯುತ್ತಿದ್ದಾರೆ. 21 ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ ಸೊಲೊಮೋನನನ್ನು ಮತ್ತು ನನ್ನನ್ನು ಅಪರಾಧಿಗಳೆಂದು ಜನರೆಲ್ಲರೂ ಹೇಳುವರು” ಎಂದು ಹೇಳಿದಳು.
22 ರಾಜನೊಡನೆ ಬತ್ಷೆಬೆಳು ಮಾತಾಡುತ್ತಿರುವಷ್ಟರಲ್ಲಿ ಪ್ರವಾದಿಯಾದ ನಾತಾನನು ಅವನನ್ನು ನೋಡಲು ಬಂದನು. 23 ಸೇವಕರು ರಾಜನಿಗೆ, “ಪ್ರವಾದಿಯಾದ ನಾತಾನನು ಬಂದಿರುವನು” ಎಂದು ಹೇಳಿದರು. ಆಗ ನಾತಾನನು ಪ್ರವೇಶಿಸಿ, ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. 24 ಆಗ ನಾತಾನನು, “ನನ್ನ ರಾಜನೇ, ನನ್ನ ಒಡೆಯನೇ, ನಿನ್ನ ನಂತರ ಅದೋನೀಯನು ನೂತನ ರಾಜನಾಗಿ ಜನರನ್ನು ಆಳಲೆಂದು ನೀನು ತೀರ್ಮಾನಿಸಿ ಪ್ರಕಟಿಸಿರುವೆಯಾ? 25 ಈ ದಿನ ಅವನು ಅನೇಕ ಹೋರಿಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅವನು ನಿನ್ನ ಇತರ ಗಂಡುಮಕ್ಕಳನ್ನು, ಸೇನಾಧಿಪತಿಗಳನ್ನು ಮತ್ತು ಯಾಜಕನಾದ ಎಬ್ಯಾತಾರನನ್ನು ಆಹ್ವಾನಿಸಿದ್ದನು. ಅವರು ಈಗ ಅವನೊಡನೆ ತಿನ್ನುತ್ತಾ ಕುಡಿಯುತ್ತಾ ಇದ್ದಾರೆ. ‘ರಾಜನಾದ ಅದೋನೀಯನು ಚಿರಾಯುವಾಗಿರಲಿ’ ಎಂದು ಅವರು ಹೇಳುತ್ತಿದ್ದಾರೆ. 26 ಆದರೆ ಅವನು ನನ್ನನ್ನಾಗಲಿ ಯಾಜಕನಾದ ಚಾದೋಕನನ್ನಾಗಲಿ ಯೆಹೋಯಾದಾವನ ಮಗನಾದ ಬೆನಾಯನನ್ನಾಗಲಿ ನಿನ್ನ ಮಗನಾದ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ. 27 ನನ್ನ ಒಡೆಯನಾದ ರಾಜನೇ, ನಮಗೆ ಹೇಳದೆ ಇದನ್ನು ಮಾಡಿದೆಯಾ? ದಯವಿಟ್ಟು ಹೇಳು, ನಿನ್ನ ನಂತರ ರಾಜನಾಗುವವನು ಯಾರು?” ಎಂದು ಕೇಳಿದನು.
28 ಆಗ ರಾಜನಾದ ದಾವೀದನು, “ಒಳಗೆ ಬರಲು ಬತ್ಷೆಬೆಳಿಗೆ ಹೇಳಿ!” ಎಂದು ಹೇಳಿದನು. ಬತ್ಷೆಬೆಳು ರಾಜನ ಎದುರಿಗೆ ಬಂದಳು.
29 ಆಗ ರಾಜನು ಈ ಪ್ರಮಾಣವನ್ನು ಮಾಡಿದನು: “ದೇವರಾದ ಯೆಹೋವನು ನನ್ನನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಿದನು. ದೇವರಾಣೆಯಾಗಿಯೂ ನಾನು ನಿನಗೆ ಈ ಪ್ರಮಾಣವನ್ನು ಮಾಡುತ್ತೇನೆ. 30 ಅಂದು ನಾನು ನಿನಗೆ ಮಾಡಿದ ಪ್ರಮಾಣವನ್ನು ಇಂದು ಪೂರೈಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ನಾನು ನಿನಗೆ ಆ ಪ್ರಮಾಣವನ್ನು ಮಾಡಿದ್ದೆನು. ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನೆಂದೂ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ನಿನಗೆ ಪ್ರಮಾಣ ಮಾಡಿದ್ದೆನು. ನಾನು ನನ್ನ ವಾಗ್ದಾನವನ್ನು ಈಡೇರಿಸುತ್ತೇನೆ” ಎಂದು ಹೇಳಿದನು.
31 ಆಗ ಬತ್ಷೆಬೆಳು ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. ಅವಳು, “ರಾಜನಾದ ದಾವೀದನು ಚಿರಾಯುವಾಗಿರಲಿ!” ಎಂದು ಹೇಳಿದಳು.
ಸೊಲೊಮೋನನು ಹೊಸ ರಾಜನಾಗಿ ಆರಿಸಲ್ಪಟ್ಟದ್ದು
32 ಆಗ ರಾಜನಾದ ದಾವೀದನು, “ಯಾಜಕನಾದ ಚಾದೋಕನಿಗೆ, ಪ್ರವಾದಿಯಾದ ನಾತಾನನಿಗೆ ಮತ್ತು ಯೆಹೋಯಾದಾವನ ಮಗನಾದ ಬೆನಾಯನಿಗೆ ಇಲ್ಲಿಗೆ ಬರಲು ಹೇಳು” ಎಂದು ಹೇಳಿದನು. ಈ ಮೂವರು ರಾಜನ ಬಳಿಗೆ ಬಂದರು. 33 ಆಗ ರಾಜನು ಅವರಿಗೆ, “ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ. 34 ಅಲ್ಲಿ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಅವನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಲಿ. ಅನಂತರ ತುತ್ತೂರಿಯನ್ನು ಊದಿರಿ; ಎಲ್ಲರೂ ‘ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಆರ್ಭಟಿಸಲಿ. 35 ನಂತರ ಅವನೊಂದಿಗೆ ಹಿಂದಿರುಗಿ ಇಲ್ಲಿಗೆ ಬನ್ನಿ. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಹೊಸ ರಾಜನಾಗಿ ರಾಜ್ಯಭಾರ ಮಾಡಲಿ. ನಾನು ಸೊಲೊಮೋನನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.
36 ಯೆಹೋಯಾದಾವನ ಮಗನಾದ ಬೆನಾಯನು, “ಆಮೆನ್, ನಿನ್ನ ದೇವರಾದ ಯೆಹೋವನು ಇದನ್ನು ಕಾರ್ಯಗತಗೊಳಿಸಲಿ. 37 ನನ್ನ ಒಡೆಯನಾದ ರಾಜನೇ, ನಿನಗೆ ಯಾವಾಗಲೂ ಸಹಾಯಮಾಡಿದ ಯೆಹೋವನು ಸೊಲೊಮೋನನಿಗೂ ಸಹಾಯ ಮಾಡಲಿ. ನಿನ್ನ ರಾಜ್ಯಕ್ಕಿಂತಲೂ ಸೊಲೊಮೋನನ ರಾಜ್ಯವು ಹೆಚ್ಚು ಬಲಿಷ್ಠವಾಗಲಿ.” ಎಂದು ಉತ್ತರಿಸಿದನು.
38 ಚಾದೋಕನು, ನಾತಾನನು, ಬೆನಾಯನು ಮತ್ತು ರಾಜನ ಅಧಿಕಾರಿಗಳು ರಾಜನಾದ ದಾವೀದನಿಗೆ ವಿಧೇಯರಾದರು. ಅವರು ಸೊಲೊಮೋನನನ್ನು ರಾಜನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿ, ಅವನೊಂದಿಗೆ ಗೀಹೋನಿಗೆ ಹೋದರು. 39 ಯಾಜಕನಾದ ಚಾದೋಕನು ಪವಿತ್ರಗುಡಾರದಿಂದ ಎಣ್ಣೆಯನ್ನು ತೆಗೆದುಕೊಂಡು ಬಂದನು. ಸೊಲೊಮೋನನು ರಾಜನೆಂದು ತೋರಿಸಲು ಅವನ ತಲೆಯ ಮೇಲೆ ಚಾದೋಕನು ಎಣ್ಣೆಯನ್ನು ಸುರಿದನು. ದಾವೀದನ ಜನರು ತುತ್ತೂರಿಯನ್ನು ಊದಿದರು. ಆಗ ಎಲ್ಲಾ ಜನರೂ, “ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು. 40 ಜನರೆಲ್ಲರೂ ಸೊಲೊಮೋನನನ್ನು ಹಿಂಬಾಲಿಸುತ್ತಾ ನಗರಕ್ಕೆ ಬಂದರು. ಅವರು ಕೊಳಲುಗಳನ್ನು ಊದುತ್ತಾ ಸಂತಸದಿಂದ ಕೂಗಾಡುತ್ತಾ ಬಂದರು. ಅವರು ಮಾಡಿದ ಶಬ್ದವು ಭೂಮಿಯನ್ನೇ ನಡುಗಿಸುವಂತಿತ್ತು.
41 ಆ ಸಮಯಕ್ಕೆ ಅದೋನೀಯನು ಮತ್ತು ಅವನೊಂದಿಗಿದ್ದ ಅತಿಥಿಗಳು ಊಟವನ್ನು ಮುಗಿಸುತ್ತಿದ್ದರು. ಅವರಿಗೆ ತುತ್ತೂರಿಯ ಶಬ್ದವು ಕೇಳಿಸಿತು. ಯೋವಾಬನು, “ಆ ಶಬ್ದವು ಏನು? ನಗರದಲ್ಲಿ ಏನು ನಡೆಯುತ್ತಿದೆ?” ಎಂದು ಕೇಳಿದನು.
42 ಯೋವಾಬನು ಮಾತನಾಡುತ್ತಿದ್ದಂತೆ, ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು, “ಇಲ್ಲಿಗೆ ಬಾ! ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ನೀನು ನನಗೆ ಶುಭ ಸಮಾಚಾರವನ್ನೇ ತಂದಿರುವೆ” ಎಂದು ಹೇಳಿದನು.
43 ಆದರೆ ಯೋನಾತಾನನು, “ಇಲ್ಲ! ಇದು ನಿನಗೆ ಶುಭ ಸಮಾಚಾರವಲ್ಲ! ನಮ್ಮ ರಾಜನಾದ ದಾವೀದನು ಸೊಲೊಮೋನನನ್ನು ನೂತನ ರಾಜನನ್ನಾಗಿ ಮಾಡಿದನು. 44 ರಾಜನಾದ ದಾವೀದನು ಯಾಜಕನಾದ ಚಾದೋಕನನ್ನು, ಪ್ರವಾದಿಯಾದ ನಾತಾನನನ್ನು, ಯೆಹೋಯಾದಾವನ ಮಗನಾದ ಬೆನಾಯನನ್ನು ಮತ್ತು ರಾಜನ ಎಲ್ಲಾ ಅಧಿಕಾರಿಗಳನ್ನು ಅವನೊಂದಿಗೆ ಕಳುಹಿಸಿದನು. ಅವರು ಸೊಲೊಮೋನನನ್ನು ರಾಜನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿದರು. 45 ನಂತರ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಗೀಹೋನ್ ಬುಗ್ಗೆಯ ಹತ್ತಿರ ಸೊಲೊಮೋನನನ್ನು ಅಭಿಷೇಕಿಸಿದರು. ಅನಂತರ ಅವರು ನಗರಕ್ಕೆ ಹೋದರು. ಅವರನ್ನು ಜನರು ಹಿಂಬಾಲಿಸಿದರು. ಈಗ ನಗರದ ಜನರು ತುಂಬಾ ಸಂತೋಷದಿಂದ ಇದ್ದಾರೆ. ಆ ಶಬ್ದವನ್ನೇ ನೀವು ಕೇಳುತ್ತಿರುವುದು. 46-47 ಸೊಲೊಮೋನನು ಈಗ ರಾಜನ ಸಿಂಹಾಸನದ ಮೇಲೆ ಕುಳಿತಿದ್ದಾನೆ. ರಾಜನಾದ ದಾವೀದನು ಒಳ್ಳೆಯ ಕಾರ್ಯಮಾಡಿದನೆಂದು ಹೇಳಲು ರಾಜನ ಸೇವಕರೆಲ್ಲರೂ ಬಂದಿದ್ದಾರೆ. ‘ನಿನ್ನ ದೇವರು ಸೊಲೊಮೋನನನ್ನು ನಿನಗಿಂತಲೂ ಪ್ರಖ್ಯಾತನನ್ನಾಗಿ ಮಾಡಲಿ. ದೇವರು ಸೊಲೊಮೋನನ ರಾಜ್ಯವನ್ನು ನಿನ್ನ ರಾಜ್ಯಕ್ಕಿಂತಲೂ ಹೆಚ್ಚು ಬಲಿಷ್ಠಗೊಳಿಸಲಿ. ಅವನು ನಿನಗಿಂತಲೂ ಉತ್ತಮನಾಗಲಿ!’ ಎಂದು ಅವರು ಹೇಳುತ್ತಿದ್ದಾರೆ. ರಾಜನಾದ ದಾವೀದನೂ ಅಲ್ಲಿದ್ದನು. ಅವನು ತನ್ನ ಹಾಸಿಗೆಯಲ್ಲಿ ತಲೆಬಾಗಿಸಿಕೊಂಡು, 48 ‘ನಾನು ಕಣ್ಣಾರೆ ಕಾಣುವಂತೆ ನನ್ನ ಮಕ್ಕಳಲ್ಲಿ ಒಬ್ಬನನ್ನು ಇಂದು ಸಿಂಹಾಸನದ ಮೇಲೆ ಕುಳ್ಳಿರಿಸಿದ ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಹೇಳಿದ್ದಾನೆ” ಎಂದನು.
49 ಆಗ ಅದೋನೀಯನ ಅತಿಥಿಗಳೆಲ್ಲರೂ ಭಯಗೊಂಡು ಓಡಿಹೋದರು. 50 ಅದೋನೀಯನೂ ಹೆದರಿಕೊಂಡು ಯಜ್ಞವೇದಿಕೆಯ ಬಳಿಗೆ ಹೋಗಿ, ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು.* ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು ಇದು ಅವನು ಕರುಣೆಯನ್ನು ಕೇಳುವಂತೆ ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಅಪರಾಧದ ಬಗ್ಗೆ ಮುಗ್ಧನಾಗಿದ್ದರೆ, ಅವನು ಪವಿತ್ರವಾದ ಸ್ಥಳಕ್ಕೆ ಓಡಿಹೋದರೆ, ಅವನು ಯಜ್ಞವೇದಿಕೆಯ ಮೂಲೆಗಳನ್ನು ಹಿಡಿದುಕೊಂಡರೆ, ಆಗ ಅವನನ್ನು ದಂಡಿಸಬಾರದು. 51 ಆಗ ಯಾರೋ ಒಬ್ಬರು ಸೊಲೊಮೋನನಿಗೆ, “ಅದೋನೀಯನು ನಿನಗೆ ಬಹಳವಾಗಿ ಹೆದರಿಕೊಂಡು ಪವಿತ್ರಗುಡಾರದ ಯಜ್ಞವೇದಿಕೆಯ ಬಳಿಗೆ ಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಬಿಡದೆ ಹಿಡಿದುಕೊಂಡೇ ಇದ್ದಾನೆ, ‘ನನ್ನನ್ನು ಕೊಲ್ಲುವುದಿಲ್ಲವೆಂದು ಪ್ರಮಾಣ ಮಾಡುವಂತೆ ರಾಜನಾದ ಸೊಲೊಮೋನನಿಗೆ ತಿಳಿಸಿ’ ಎಂಬುದಾಗಿ ಅದೋನೀಯನು ಕೇಳಿಕೊಳ್ಳುತ್ತಿದ್ದಾನೆ” ಎಂದು ಹೇಳಿದನು.
52 ಆದ್ದರಿಂದ ಸೊಲೊಮೋನನು, “ಅದೋನೀಯನು ತಾನು ಒಳ್ಳೆಯ ಮನುಷ್ಯನೆಂದು ನಿರೂಪಿಸಿದರೆ ಅವನ ತಲೆಯ ಒಂದು ಕೂದಲಿಗೂ ತೊಂದರೆಯಾಗುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ಆದರೆ ಅವನೇನಾದರೂ ಕೇಡನ್ನು ಮಾಡಿದರೆ ಸಾಯುವನು” ಎಂದು ಹೇಳಿದನು. 53 ರಾಜನಾದ ಸೊಲೊಮೋನನು ಅದೋನೀಯನನ್ನು ಕರೆತರಲು ಕೆಲವು ಜನರನ್ನು ಕಳುಹಿಸಿದನು. ಅವರು ಅದೋನೀಯನನ್ನು ರಾಜನಾದ ಸೊಲೊಮೋನನ ಬಳಿಗೆ ಕರೆದುತಂದರು. ಅದೋನೀಯನು ರಾಜನಾದ ಸೊಲೊಮೋನನ ಬಳಿಗೆ ಬಂದು, ಸಾಷ್ಟಾಂಗನಮಸ್ಕಾರ ಮಾಡಿದನು. ಸೊಲೊಮೋನನು, “ಮನೆಗೆ ಹೋಗು” ಎಂದನು.

*1:50: ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು ಇದು ಅವನು ಕರುಣೆಯನ್ನು ಕೇಳುವಂತೆ ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಅಪರಾಧದ ಬಗ್ಗೆ ಮುಗ್ಧನಾಗಿದ್ದರೆ, ಅವನು ಪವಿತ್ರವಾದ ಸ್ಥಳಕ್ಕೆ ಓಡಿಹೋದರೆ, ಅವನು ಯಜ್ಞವೇದಿಕೆಯ ಮೂಲೆಗಳನ್ನು ಹಿಡಿದುಕೊಂಡರೆ, ಆಗ ಅವನನ್ನು ದಂಡಿಸಬಾರದು.