11
ದಾವೀದನು ಇಸ್ರೇಲರ ಅರಸನಾದನು
ಎಲ್ಲಾ ಇಸ್ರೇಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವು ನಿನ್ನ ಸಂತತಿಯವರು. ಹಿಂದೆ ನೀನು ನಮ್ಮನ್ನು ಯುದ್ಧದಲ್ಲಿ ನಡೆಸಿರುವೆ. ಆಗ ಸೌಲನು ಅರಸನಾಗಿದ್ದರೂ ನೀನು ನಮ್ಮ ಯುದ್ಧದಲ್ಲಿ ನಾಯಕನಾಗಿದ್ದೆ. ಯೆಹೋವನು ನಿನಗೆ, ‘ದಾವೀದನೇ, ನೀನು ನಿನ್ನ ಜನರಾದ ಇಸ್ರೇಲರ ಪಾಲಕನಾಗಿರಬೇಕು. ನನ್ನ ಜನರಿಗೆ ನೀನು ನಾಯಕನಾಗಿರಬೇಕು’ ” ಎಂದು ಹೇಳಿದ್ದಾನಲ್ಲವೆ ಅಂದರು.
ಹೆಬ್ರೋನಿಗೆ ಬಂದ ಇಸ್ರೇಲರೆಲ್ಲಾ ಅಲ್ಲಿ ಯೆಹೋವನ ಮುಂದೆ ದಾವೀದನೊಂದಿಗೆ ಒಪ್ಪಂದ ಮಾಡಿಕೊಂಡರು. ಆ ಅಧಿಪತಿಗಳೆಲ್ಲಾ ದಾವೀದನನ್ನು ಅಭಿಷೇಕಿಸಿ ಅವನನ್ನು ಇಸ್ರೇಲರ ಅರಸನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನವಾಗಿತ್ತು. ಪ್ರವಾದಿಯಾದ ಸಮುವೇಲನ ಮೂಲಕ ಯೆಹೋವನು ಈ ವಾಗ್ದಾನವನ್ನು ಮಾಡಿದ್ದನು.
ದಾವೀದನು ಜೆರುಸಲೇಮನ್ನು ಆಕ್ರಮಿಸಿಕೊಂಡನು
ದಾವೀದನೂ ಎಲ್ಲಾ ಇಸ್ರೇಲರೂ ಜೆರುಸಲೇಮಿಗೆ ಹೊರಟರು. ಆ ಕಾಲದಲ್ಲಿ ಜೆರುಸಲೇಮನ್ನು ಯೆಬೂಸ್ ಎಂದು ಕರೆಯುತ್ತಿದ್ದರು. ಯಾಕೆಂದರೆ ಜೆರುಸಲೇಮ್ ಪಟ್ಟಣದಲ್ಲಿ ಯೆಬೂಸಿಯರು ವಾಸಿಸುತ್ತಿದ್ದರು. ಆ ಪಟ್ಟಣದಲ್ಲಿದ್ದ ಜನರು ದಾವೀದನಿಗೆ, “ನೀನು ನಮ್ಮ ಪಟ್ಟಣದೊಳಗೆ ಬರಲು ಸಾಧ್ಯವೇ ಇಲ್ಲ” ಎಂದು ಹೇಳಿದರು. ಆದರೆ ದಾವೀದನು ಅವರನ್ನು ಸೋಲಿಸಿ ಚೀಯೋನ್ ಕೋಟೆಯನ್ನು ಗೆದ್ದುಕೊಂಡನು. ಅಂದಿನಿಂದ ಆ ಸ್ಥಳವು ದಾವೀದನ ನಗರವೆಂದು ಕರೆಯಲ್ಪಟ್ಟಿತು.
“ಯೆಬೂಸಿಯರ ವಿರುದ್ಧವಾಗಿ ದಾಳಿಮಾಡಿ ಅವರನ್ನು ಸೋಲಿಸುವವನೇ ನನ್ನ ಸೇನಾಧಿಪತಿಯಾಗುವನು” ಎಂದು ದಾವೀದನು ಹೇಳಿದಾಗ ಚೆರೂಯಳ ಮಗನಾದ ಯೋವಾಬನು ಯೆಬೂಸಿಯರ ಮೇಲೆ ಯುದ್ಧಮಾಡಿ ಜಯಗಳಿಸಿದನು ಮತ್ತು ಇಸ್ರೇಲರ ಸೈನ್ಯಕ್ಕೆ ಅಧಿಪತಿಯಾದನು.
ದಾವೀದನು ಕೋಟೆಯೊಳಗೆ ತನಗೆ ಮನೆ ಮಾಡಿಕೊಂಡನು. ಆದ್ದರಿಂದ ಅದಕ್ಕೆ ದಾವೀದನಗರ ಎಂಬ ಹೆಸರು ಬಂತು. ಪಟ್ಟಣದ ಸುತ್ತಲೂ ದಾವೀದನು ಕೋಟೆಯನ್ನು ಕಟ್ಟಿಸಿದನು. ಮಿಲ್ಲೋವಿನಿಂದ ಪ್ರಾರಂಭಿಸಿ ಕೋಟೆಯವರೆಗೆ ಪಟ್ಟಣವನ್ನು ಕಟ್ಟಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಸರಿಪಡಿಸಿದನು. ದಾವೀದನು ದಿನದಿಂದ ದಿನಕ್ಕೆ ಬಲಶಾಲಿಯಾದನು. ಸರ್ವಶಕ್ತನಾದ ದೇವರು ಅವನೊಂದಿಗಿದ್ದನು.
ಮೂರು ಮಂದಿ ವೀರರು
10 ದಾವೀದನ ಸೈನ್ಯದಲ್ಲಿ ಪರಾಕ್ರಮಿಗಳಿದ್ದರು. ಈ ಪರಾಕ್ರಮಿಗಳು ದಾವೀದನ ರಾಜ್ಯದಲ್ಲಿ ದಾವೀದನೊಂದಿಗೆ ಮಹಾಬಲಿಷ್ಠರಾದರು. ಅವರು ಮತ್ತು ಎಲ್ಲಾ ಇಸ್ರೇಲರು ದಾವೀದನಿಗೆ ಬೆಂಬಲ ನೀಡಿ ಅವನನ್ನು ರಾಜನನ್ನಾಗಿ ಮಾಡಿದರು. ಇದು ಯೆಹೋವನ ವಾಗ್ದಾನದ ಪ್ರಕಾರವೇ ನಡೆಯಿತು.
11 ದಾವೀದನ ಸೈನ್ಯದಲ್ಲಿದ್ದ ಪರಾಕ್ರಮಿಗಳು ಯಾರೆಂದರೆ:
ಹೆಕ್ಮೋನಿಯನಾದ ಯಾಷೊಬ್ಬಾಮನು. ಇವನು ರಥಾಶ್ವಗಳ ಅಧಿಕಾರಿಗಳಿಗೆ ಅಧಿಪತಿಯಾಗಿದ್ದನು; ಒಂದೇ ಸಾರಿ ಮುನ್ನೂರು ಮಂದಿಯನ್ನು ತನ್ನ ಬರ್ಜಿಯಿಂದ ಕೊಂದಿದ್ದನು.
12 ಎರಡನೆಯವನು, ಅಹೋಹ್ಯನಾದ ದೋದೋವನ ಮಗನಾದ ಎಲ್ಲಾಜಾರ. ಇವನು ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಒಬ್ಬನು. 13 ಪಸ್ಥಮ್ಮೀಮ್ ಎಂಬ ಸ್ಥಳದಲ್ಲಿ ಇವನು ದಾವೀದನೊಂದಿಗಿದ್ದನು. ಅಲ್ಲಿಗೆ ಫಿಲಿಷ್ಟಿಯರು ಯುದ್ಧಮಾಡಲು ಬಂದಿದ್ದರು. ಆ ಸ್ಥಳದ ಒಂದು ಹೊಲದಲ್ಲಿ ಬಾರ್ಲಿಯ ಬೆಳೆಯು ಬೆಳೆದು ನಿಂತಿತ್ತು. ಫಿಲಿಷ್ಟಿಯರ ಎದುರಿನಿಂದ ಇಸ್ರೇಲರು ಓಡಿದರು. 14 ಆದರೆ ಆ ಮೂರು ಮಂದಿ ಪರಾಕ್ರಮಶಾಲಿಗಳು ಆ ಜವೆಗೋಧಿಯ ಹೊಲದಲ್ಲಿ ನಿಂತು ಕಾದಾಡಿದರು. ಫಿಲಿಷ್ಟಿಯರು ಸೋತುಹೋದರು. ಆ ದಿವಸ ಯೆಹೋವನು ಇಸ್ರೇಲರಿಗೆ ದೊಡ್ಡ ಜಯವನ್ನು ಉಂಟುಮಾಡಿದನು.
15 ಒಂದು ಸಲ ದಾವೀದನು ಅದುಲ್ಲಾಮ್ ಗವಿಯೊಳಗಿದ್ದಾಗ, ರೆಫಾಯಿಮ್ ತಗ್ಗಿನಲ್ಲಿ ಫಿಲಿಷ್ಟಿಯರು ಪಾಳೆಯಮಾಡಿದ್ದರು. ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಈ ಮೂರು ಮಂದಿ ಗುಹೆಯಲ್ಲಿದ್ದ ದಾವೀದನೊಂದಿಗೆ ಸೇರಿಕೊಳ್ಳಲು ಹೊಟ್ಟೆಯ ಮೇಲೆ ತೆವಳಿಕೊಂಡೇ ಅವನ ಬಳಿಗೆ ಬಂದರು.
16 ಇನ್ನೊಂದು ಸಮಯದಲ್ಲಿ ದಾವೀದನು ಕೋಟೆಯೊಳಗಿದ್ದನು. ಫಿಲಿಷ್ಟಿಯರ ಸೈನ್ಯ ಬೆತ್ಲೆಹೇಮಿನಲ್ಲಿತ್ತು. 17 ದಾಹಗೊಂಡಿದ್ದ ದಾವೀದನು ತನ್ನ ಊರಿನ ನೀರು ಕುಡಿಯಲು ಬಯಸಿ, “ಬೆತ್ಲೆಹೇಮಿನ ನಗರದ್ವಾರದ ಬಳಿಯಲ್ಲಿರುವ ಬಾವಿಯಿಂದ ಯಾರಾದರೂ ನೀರು ತಂದುಕೊಡುವುದಾದರೆ ಎಷ್ಟೋ ಒಳ್ಳೆಯದು” ಎಂದು ಅವನು ತಿಳಿಸಿದನು. 18 ಆಗ ಆ ಮೂವರು ಪರಾಕ್ರಮಿಗಳು ಫಿಲಿಷ್ಟಿಯರ ಸೈನ್ಯದೊಂದಿಗೆ ಹೋರಾಡುತ್ತಾ ಬೆತ್ಲೆಹೇಮಿನ ಬಾಗಿಲ ಬಳಿಯಲ್ಲಿದ್ದ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. ಆದರೆ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಆ ನೀರನ್ನು ಯೆಹೋವನಿಗೆ ಸಮರ್ಪಿಸಿ ನೆಲದ ಮೇಲೆ ಹೊಯಿದುಬಿಟ್ಟನು. 19 “ದೇವರೇ, ನಾನು ಈ ನೀರನ್ನು ಕುಡಿಯಲಾರೆನು. ಯಾಕೆಂದರೆ ನನಗಾಗಿ ತಮ್ಮ ಪ್ರಾಣ ಕೊಡಲು ಹೆದರದೆ ನೀರನ್ನು ತಂದವರ ರಕ್ತವಿದು” ಎಂದು ದಾವೀದನು ಅರಿಕೆಮಾಡಿ ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ರೀತಿಯಾಗಿ ಅನೇಕ ಪರಾಕ್ರಮದ ಕಾರ್ಯಗಳನ್ನು ಈ ಮೂರು ಮಂದಿ ವೀರರು ಮಾಡಿದರು.
ಇತರ ಪರಾಕ್ರಮಶಾಲಿಗಳು
20 ಯೋವಾಬನ ತಮ್ಮನಾದ ಅಬ್ಷೈಯು ಬೇರೆ ಮೂರು ಮಂದಿ ಪರಾಕ್ರಮಿಗಳ ನಾಯಕನಾಗಿದ್ದನು. ಆ ಮೂವರು ಪರಾಕ್ರಮಿಗಳಷ್ಟೇ ಇವನೂ ಪ್ರಖ್ಯಾತನಾಗಿದ್ದನು. ಅವನು ತನ್ನ ಬರ್ಜಿಯಿಂದ ಮುನ್ನೂರು ಮಂದಿಯೊಂದಿಗೆ ಯುದ್ಧಮಾಡಿ ಅವರನ್ನು ಹತಮಾಡಿದನು. 21 ಅಬ್ಷೈಯು ಮೂವತ್ತು ಮಂದಿ ರಣವೀರರಿಗಿಂತಲೂ ಎರಡರಷ್ಟು ಪರಾಕ್ರಮಿಯಾಗಿದ್ದನು. ಅವನು ಅವರಿಗೆ ನಾಯಕನಾದನು.
22 ಬೆನಾಯನು ಯೆಹೋಯಾದನ ಮಗ. ಇವನು ಕಬ್ಜಯೇಲಿನಿಂದ ಬಂದವನು. ಇವನು ತುಂಬಾ ಶಕ್ತಿಶಾಲಿಯಾಗಿದ್ದನು. ಮೋವಾಬ್ಯರಲ್ಲಿ ಹೆಸರುವಾಸಿಯಾದ ಇಬ್ಬರು ಪರಾಕ್ರಮಶಾಲಿಗಳನ್ನು ಇವನು ಕೊಂದನು. ಒಂದು ದಿವಸ ಹಿಮ ಸುರಿಯುತ್ತಿರುವಾಗಲೇ ಗುಂಡಿಯೊಳಗೆ ಬಿದ್ದಿದ್ದ ಸಿಂಹವನ್ನು ಒಬ್ಬನೇ ಕೊಂದುಹಾಕಿದನು. 23 ಈಜಿಪ್ಟಿನಲ್ಲಿ ಅತ್ಯಂತ ಎತ್ತರವಾಗಿದ್ದ ಮಹಾಸೈನಿಕನೊಬ್ಬನನ್ನು ಬೆನಾಯನು ಕೊಂದುಹಾಕಿದನು. ಅವನು ಏಳೂವರೆ ಅಡಿ ಎತ್ತರವಾಗಿದ್ದನು. ಅವನ ಕೈಯಲ್ಲಿದ್ದ ಈಟಿಯು ದೊಡ್ಡ ಕಂಬದಂತೆ ಇತ್ತು. ಬೆನಾಯನ ಕೈಯಲ್ಲಿ ಒಂದು ದೊಣ್ಣೆಮಾತ್ರ ಇತ್ತು. ಬೆನಾಯನು ಅವನ ಹತ್ತಿರ ಹೋಗಿ ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದಲೇ ಅವನನ್ನು ಸಾಯಿಸಿದನು. 24 ಇಂಥಾ ಅನೇಕ ಪರಾಕ್ರಮದ ಕೃತ್ಯಗಳನ್ನು ಯೆಹೋಯಾದನ ಮಗನಾದ ಬೆನಾಯನು ಮಾಡಿದ್ದನು. ಆ ಮೂರು ಮಂದಿ ವೀರರಂತೆಯೇ ಇವನೂ ಹೆಸರುವಾಸಿಯಾಗಿದ್ದನು. 25 ಬೆನಾಯನು ಮೂವತ್ತು ಪರಾಕ್ರಮಿಗಳಿಗಿಂತಲೂ ಹೆಚ್ಚು ಹೆಸರುವಾಸಿಯಾಗಿದ್ದನು. ಆದರೆ ಇವನು ಆ ಮೂವರು ಪರಾಕ್ರಮಿಗಳಲ್ಲಿ ಒಬ್ಬನಾಗಿರಲಿಲ್ಲ. ದಾವೀದನು ಇವನನ್ನು ಅಂಗರಕ್ಷಕರಿಗೆ ನಾಯಕನನ್ನಾಗಿ ಮಾಡಿದನು.
ಮೂವತ್ತು ಮಂದಿ ಯುದ್ಧವೀರರು
26 ಮೂವತ್ತು ಮಂದಿ ಯುದ್ಧವೀರರು ಯಾರೆಂದರೆ:
 
ಯೋವಾಬನ ತಮ್ಮನಾದ ಅಸಾಹೇಲನು.
ಬೆತ್ಲೆಹೇಮಿನವನಾದ ದೋದೋವಿನ ಮಗನಾದ ಎಲ್ಖಾನಾನನು;
27 ಹರೋರಿನವನಾದ ಶಮ್ಮೋತನು; ಪೆಲೋನ್ಯನಾದ ಹೆಲೆಚನು;
28 ತೆಕೋವದವನಾದ ಇಕ್ಕೇಷನ ಮಗನಾದ ಈರ.
ಅನತೋತಿನವನಾದ ಅಬೀಯೇಜರನು.
29 ಹುಷತ್ಯನಾದ ಸಿಬ್ಕ್ಯೆ,
ಅಹೋಹಿನವನಾದ ಈಲೈ;
30 ನೆಟೋಫದ ಮಹರೈ,
ನೆಟೋಫದ ಬಾಣನ ಮಗನಾದ ಹೇಲೆದನು.
31 ಬೆನ್ಯಾಮೀನ್ ಪ್ರಾಂತ್ಯದ ಗಿಬೆಯದಿಂದ ಬಂದ ರೀಬೈಯ ಮಗನಾದ ಈತೈ;
ಪಿರಾತೋನ್ಯನಾದ ಬೆನಾಯನು,
32 ನಹಲೇಗಾಷಿನವನಾದ ಹೂರೈ;
ಅರಾಬಾ ತಗ್ಗಿನವನಾದ ಅಬೀಯೇಲ;
33 ಬಹರೂಮ್ಯನಾದ ಅಜ್ಮಾವೆತ;
ಶಾಲ್ಬೋನ್ಯನಾದ ಎಲೆಯಖ್ಬ;
34 ಗಿಜೋನ್ಯನಾದ ಹಾಷೇಮನ ಗಂಡುಮಕ್ಕಳು:
ಹರಾರ್ಯನಾದ ಶಾಗಿಯ ಮಗ ಯೋನಾತಾನ;
35 ಹರಾರ್ಯನಾದ ಶಾಕಾರನ ಮಗನಾದ ಅಹೀಯಾಮ್;
ಊರನ ಮಗನಾದ ಎಲೀಫಲ್;
36 ಮೆಕೆರಾತ್ಯನಾದ ಹೇಫೆರನು;
ಪೆಲೋನ್ಯನಾದ ಅಹೀಯ;
37 ಕರ್ಮೆಲ್ಯನಾದ ಹೆಚ್ರೋ;
ಎಜ್ಬೈಯ ಮಗನಾದ ನಾರೈ;
38 ನಾತಾನನ ಸಹೋದರನಾದ ಯೋವೇಲ;
ಹಗ್ರೀಯ ಮಗನಾದ ಮಿಬ್ಹಾರ್;
39 ಅಮ್ಮೋನಿಯನಾದ ಚೆಲೆಕ;
ಬೇರೋತ್ ಊರಿನವನಾದ ನಹರೈ. (ಇವನು ಚೆರೂಯಳ ಮಗನಾದ ಯೋವಾಬನ ಆಯುಧವಾಹಕನಾಗಿದ್ದನು);
40 ಇತ್ರೀಯನಾದ ಈರ;
ಇತ್ರೀಯನಾದ ಗಾರೇಬ;
41 ಹಿತ್ತೀಯನಾದ ಊರೀಯ;
ಅಹ್ಲೈಯ ಮಗನಾದ ಜಾಬಾದ್;
42 ರೂಬೇನ್ ಕುಲದ ಶೀಜನ ಮಗನಾದ ಅದೀನ (ಇವನು ರೂಬೇನ್ ಕುಲದವರಿಗೆ ಅಧಿಪತಿಯಾಗಿದ್ದನು ಮತ್ತು ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಒಬ್ಬನಾಗಿದ್ದನು);
43 ಮಾಕನ ಮಗನಾದ ಹಾನಾನ್;
ಮೆತನದವನಾದ ಯೋಷಾಫಾಟನು;
44 ಅಷ್ಯೆರಾತ್ಯನಾದ ಉಜ್ಜೀಯನು;
ಅರೋಯೇರಿನವನಾದ ಹೋತಾಮನ ಗಂಡುಮಕ್ಕಳು; ಶಾಮಾ ಮತ್ತು ಯೆಗೀಯೇಲ್;
45 ಶಿಮ್ರಿಯ ಮಗನಾದ ಎದೀಗಯೇಲ;
ಎದೀಗಯೇಲನ ತಮ್ಮನೂ ತೀಚೀಯನೂ ಆದ ಯೋಹ;
46 ಮಹವೀಯನಾದ ಎಲೀಯೇಲ;
ಎಲ್ನಾಮನ ಗಂಡುಮಕ್ಕಳಾದ ಯೆರೀಬೈ ಮತ್ತು ಯೋಷವ್ಯನು;
ಮೋವಾಬ್ಯನಾದ ಇತ್ಮ;
47 ಎಲೀಯೇಲ್, ಓಬೇದ್, ಮೆಚೋಬಾಯನಾದ ಯಾಸೀಯೇಲ್.