9
ಸೌಲನು ತನ್ನ ತಂದೆಯ ಕತ್ತೆಗಳನ್ನು ಹುಡುಕುವನು
ಬೆನ್ಯಾಮೀನ್ ಕುಲದ ಕೀಷನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ಕೀಷನು ಅಬೀಯೇಲನ ಮಗ. ಅಬೀಯೇಲನು ಚೆರೋರನ ಮಗ. ಚೆರೋರನು ಬೆಕೋರತನ ಮಗ. ಬೆಕೋರತನು ಅಫೀಹನ ಮಗ. ಇವರೆಲ್ಲರು ಬೆನ್ಯಾಮೀನನ ಕುಲಕ್ಕೆ ಸೇರಿದವರು. ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಸೌಲನು ಸುಂದರನಾದ ಯುವಕನಾಗಿದ್ದನು. ಸೌಲನಿಗಿಂತ ಸುಂದರರು ಅಲ್ಲಿರಲಿಲ್ಲ. ಸೌಲನು ಇತರ ಇಸ್ರೇಲ್ ಗಂಡಸರಿಗಿಂತ ಎತ್ತರವಾಗಿದ್ದನು.
ಒಂದು ದಿನ ಕೀಷನ ಕತ್ತೆಗಳು ಕಳೆದುಹೋದವು. ಆದ್ದರಿಂದ ಕೀಷನು ಸೌಲನಿಗೆ, “ಸೇವಕನೊಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಸೌಲನು ಕತ್ತೆಗಳನ್ನು ಹುಡುಕಲು ಆರಂಭಿಸಿದನು. ಸೌಲನು ಮತ್ತು ಅವನ ಸೇವಕನು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಹುಡುಕಿದರೂ ಅವರಿಗೆ ಕತ್ತೆಗಳು ಸಿಗಲಿಲ್ಲ. ಆದ್ದರಿಂದ ಅವರು ಶಾಲೀಮ್ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಕ್ಕಲಿಲ್ಲ. ಆದ್ದರಿಂದ ಅವರು ಬೆನ್ಯಾಮೀನನ ಪ್ರದೇಶದಲ್ಲೆಲ್ಲಾ ಹುಡುಕಿದರು; ಅಲ್ಲಿಯೂ ಅವರ ಕತ್ತೆಗಳು ಸಿಗಲಿಲ್ಲ.
ಕೊನೆಗೆ, ಸೌಲನು ಮತ್ತು ಅವನ ಸೇವಕನು ಚೂಫ್ ಎಂಬ ಹೆಸರಿನ ಪಟ್ಟಣಕ್ಕೆ ಬಂದರು. ಸೌಲನು ಸೇವಕನಿಗೆ, “ನಾವು ಮರಳಿ ಹೋಗೋಣ. ನಮ್ಮ ತಂದೆಯು ಕತ್ತೆಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ನಮ್ಮ ಬಗ್ಗೆ ಚಿಂತಿಸಲಾರಂಭಿಸುತ್ತಾನೆ” ಎಂದು ಹೇಳಿದನು.
ಆದರೆ ಆ ಸೇವಕನು, “ಈ ಪಟ್ಟಣದಲ್ಲಿ ಒಬ್ಬ ದೇವರ ಮನುಷ್ಯನಿದ್ದಾನೆ. ಜನರು ಅವನನ್ನು ಗೌರವಿಸುತ್ತಾರೆ. ಅವನು ಹೇಳುವ ವಿಷಯಗಳೆಲ್ಲ ನಿಜವಾಗುತ್ತವೆ. ಆದ್ದರಿಂದ ಈ ಪಟ್ಟಣಕ್ಕೆ ಹೋಗೋಣ ಬಹುಶಃ ನಾವು ಮುಂದೆ ಎಲ್ಲಿಗೆ ಹೋಗಬೇಕೆಂಬುದನ್ನು ಈ ದೇವರ ಮನುಷ್ಯನು ತಿಳಿಸಬಹುದು” ಎಂದು ಉತ್ತರಿಸಿದನು.
ಸೌಲನು ತನ್ನ ಸೇವಕನಿಗೆ, “ನಾವು ಪಟ್ಟಣದೊಳಗೆ ಹೋಗೋಣ, ಆದರೆ ಆ ಮನುಷ್ಯನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ನಮ್ಮ ಚೀಲದಲ್ಲಿದ್ದ ಆಹಾರವೆಲ್ಲ ಮುಗಿದಿದೆ. ಆ ದೇವರ ಮನುಷ್ಯನಿಗೆ ನೀಡಲು ನಮ್ಮಲ್ಲಿ ಕಾಣಿಕೆಯೂ ಇಲ್ಲ. ಹೀಗಾಗಿ ನಾವು ಅವನಿಗೆ ಏನು ಕೊಡಬೇಕು?” ಎಂದು ಕೇಳಿದನು.
ಆ ಸೇವಕನು ಸೌಲನಿಗೆ, “ಇಲ್ಲಿ ನೋಡು, ನನ್ನ ಬಳಿ ಸ್ವಲ್ಪ ಹಣವಿದೆ. ಇದನ್ನು ಆ ದೇವರ ಮನುಷ್ಯನಿಗೆ ಕೊಡೋಣ. ನಾವು ಎಲ್ಲಿಗೆ ಹೋಗಬೇಕೆಂಬುದನ್ನು ಅವನು ತಿಳಿಸುತ್ತಾನೆ” ಎಂದು ಉತ್ತರಿಸಿದನು.
(ಹಿಂದಿನ ಕಾಲದಲ್ಲಿ ಇಸ್ರೇಲರು ಪ್ರವಾದಿಯನ್ನು “ದರ್ಶಿ” ಎಂದು ಕರೆಯುತ್ತಿದ್ದರು. ದೇವರಿಂದ ಏನಾದರೂ ಕೇಳಬೇಕಾಗಿದ್ದರೆ, “ದರ್ಶಿಯ ಬಳಿಗೆ ಹೋಗೋಣ” ಎನ್ನುತ್ತಿದ್ದರು.)
10 ಸೌಲನು ತನ್ನ ಸೇವಕನಿಗೆ, “ಒಳ್ಳೆಯ ಆಲೋಚನೆ; ನಡೆ ಹೋಗೋಣ” ಎಂದು ಹೇಳಿದನು. ಅವರು ಆ ಪಟ್ಟಣದಲ್ಲಿ ದೇವರ ಮನುಷ್ಯನಿದ್ದಲ್ಲಿಗೆ ಹೋದರು. 11 ಸೌಲನು ಮತ್ತು ಆ ಸೇವಕನು ಬೆಟ್ಟದ ಮೇಲೆ ನಡೆಯುತ್ತಾ ಆ ಪಟ್ಟಣಕ್ಕೆ ಹೋದರು. ಆ ದಾರಿಯಲ್ಲಿ ಅವರು ಕೆಲವು ಸ್ತ್ರೀಯರನ್ನು ಸಂಧಿಸಿದರು. ಆ ಸ್ತ್ರೀಯರು ನೀರನ್ನು ತರಲು ಹೋಗುತ್ತಿದ್ದರು. ಸೌಲನು ಮತ್ತು ಆ ಸೇವಕನು, “ದರ್ಶಿಯು ಇಲ್ಲಿರುವನೇ?” ಎಂದು ಆ ಯುವತಿಯರನ್ನು ಕೇಳಿದರು.
12 ಆ ಯುವತಿಯರು, “ಹೌದು ದರ್ಶಿಯು ಇಲ್ಲಿದ್ದಾನೆ. ಅವನು ದಾರಿಯಲ್ಲಿ ನಿಮಗಿಂತ ಸ್ವಲ್ಪ ಮುಂದೆ ಹೋಗುತ್ತಿದ್ದಾನೆ. ಈ ಹೊತ್ತು ನಮ್ಮ ಊರಿನವರು ಗುಡ್ಡದ ಮೇಲೆ ಯಜ್ಞವನ್ನು ಅರ್ಪಿಸುವುದರಿಂದ ಅವನು ಇಲ್ಲಿಗೆ ಬಂದಿದ್ದಾನೆ. 13 ನೀವು ಪಟ್ಟಣದೊಳಕ್ಕೆ ಹೋದರೆ ಅವನನ್ನು ಕಾಣಬಹುದು. ನೀವು ಬೇಗನೆ ನೋಡಬೇಕೆಂದಿದ್ದರೆ, ಅವನು ಊಟ ಮಾಡುವುದಕ್ಕಾಗಿ ಆರಾಧನೆಯ ಸ್ಥಳಕ್ಕೆ ಹೋಗುವುದಕ್ಕಿಂತ ಮೊದಲೇ ಅವನನ್ನು ಕಾಣಬೇಕು. ದರ್ಶಿಯು ಯಜ್ಞವನ್ನು ಆಶೀರ್ವದಿಸಬೇಕಾಗಿರುವುದರಿಂದ ಅವನು ಅಲ್ಲಿಗೆ ಹೋಗುವವರೆಗೆ ಜನರು ಊಟಮಾಡುವುದಿಲ್ಲ. ಆದ್ದರಿಂದ ನೀವು ಬೇಗನೆ ಹೋದರೆ ಅವನನ್ನು ಕಾಣಬಹುದು” ಎಂದು ಹೇಳಿದರು.
14 ಸೌಲನು ಮತ್ತು ಆ ಸೇವಕನು ಗುಡ್ಡವನ್ನು ಹತ್ತಿ ಪಟ್ಟಣದ ಕಡೆ ನಡೆದರು. ಅವರು ಪಟ್ಟಣವನ್ನು ಪ್ರವೇಶಿಸುತ್ತಿದ್ದಾಗ, ಸಮುವೇಲನು ಅವರ ಕಡೆ ಬರುತ್ತಿರುವುದನ್ನು ಕಂಡರು. ಸಮುವೇಲನು ಆಗ ತಾನೇ ಪಟ್ಟಣದಿಂದ ಹೊರಬಂದು, ಆರಾಧನೆಯ ಸ್ಥಳದ ಕಡೆ ಹೊರಟಿದ್ದನು.
15 ಹಿಂದಿನ ದಿನ, ಯೆಹೋವನು ಸಮುವೇಲನಿಗೆ, 16 “ನಾಳೆ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ಒಬ್ಬ ಮನುಷ್ಯನನ್ನು ಕಳುಹಿಸುತ್ತೇನೆ. ಅವನು ಬೆನ್ಯಾಮೀನ್ ಕುಟುಂಬಕ್ಕೆ ಸೇರಿದವನು. ನೀನು ಅವನನ್ನು ಅಭಿಷೇಕಿಸು. ನನ್ನ ಜನರಾದ ಇಸ್ರೇಲರಿಗೆ ಅವನು ರಾಜನಾಗುತ್ತಾನೆ. ಈ ಮನುಷ್ಯನು ನನ್ನ ಜನರನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ. ನನ್ನ ಜನರ ಸಂಕಟವನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳನ್ನು ನಾನು ಆಲಿಸಿದ್ದೇನೆ” ಎಂದು ತಿಳಿಸಿದ್ದನು.
17 ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ನಿನಗೆ ಹೇಳಿದ ಮನುಷ್ಯ ಇವನೇ. ಇವನು ನನ್ನ ಜನರನ್ನು ಆಳುತ್ತಾನೆ” ಎಂದು ಹೇಳಿದನು.
18 ಸೌಲನು ಹೊರಬಾಗಿಲಿನ ಬಳಿಯಿಂದ ಸಮುವೇಲನ ಬಳಿಗೆ ಬಂದನು. ಸೌಲನು ಸಮುವೇಲನನ್ನು, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ನನಗೆ ಹೇಳಿ” ಎಂದು ಕೇಳಿದನು.
19 ಸಮುವೇಲನು, “ನಾನೇ ಆ ದರ್ಶಿ. ನನ್ನೊಡನೆ ಆರಾಧನೆಯ ಸ್ಥಳಕ್ಕೆ ಬಾ. ನೀನು ಮತ್ತು ನಿನ್ನ ಸೇವಕ ಈ ದಿನ ನನ್ನ ಜೊತೆಯಲ್ಲಿ ಊಟಮಾಡಬೇಕು. ನಾನು ನಿಮ್ಮನ್ನು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಕಳುಹಿಸುತ್ತೇನೆ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ. 20 ಮೂರು ದಿನಗಳ ಹಿಂದೆ ಕಳೆದು ಹೋದ ನಿನ್ನ ಕತ್ತೆಗಳಿಗಾಗಿ ಚಿಂತಿಸಬೇಡ. ಅವುಗಳೆಲ್ಲ ಸಿಕ್ಕಿವೆ. ಈಗ ಇಸ್ರೇಲರಿಗೆಲ್ಲ ನೀನು ಬೇಕಾಗಿರುವೆ. ಅವರಿಗೆ ನೀನು ಮತ್ತು ನಿನ್ನ ತಂದೆಯ ಕುಟುಂಬದ ಜನರೆಲ್ಲ ಬೇಕಾಗಿದ್ದಾರೆ” ಎಂದು ಹೇಳಿದನು.
21 ಅದಕ್ಕೆ ಸೌಲನು, “ನಾನು ಬೆನ್ಯಾಮೀನ್ ಕುಲದವನು. ಅದು ಇಸ್ರೇಲರಲ್ಲಿ ಒಂದು ಚಿಕ್ಕ ಕುಲ. ನನ್ನ ಕುಟುಂಬವು ಬೆನ್ಯಾಮೀನ್ ಕುಲದಲ್ಲಿ ತೀರ ಕನಿಷ್ಠವಾದುದು. ಇಸ್ರೇಲರಿಗೆ ನಾನು ಬೇಕಾಗಿದ್ದೇನೆ ಎಂದು ಏಕೆ ಹೇಳುತ್ತಿರುವೆ?” ಎಂದು ಕೇಳಿದನು.
22 ಆಗ ಸಮುವೇಲನು ಸೌಲನನ್ನು ಮತ್ತು ಅವನ ಸೇವಕನನ್ನು ಊಟದ ಸ್ಥಳಕ್ಕೆ ಕರೆದುಕೊಂಡು ಹೋದನು. ಒಟ್ಟಿಗೆ ಊಟ ಮಾಡಲು ಮತ್ತು ಯಜ್ಞವಸ್ತುಗಳನ್ನು ಹಂಚಿಕೊಳ್ಳಲು ಸುಮಾರು ಮೂವತ್ತು ಜನರನ್ನು ಆಹ್ವಾನಿಸಲಾಗಿತ್ತು. ಸಮುವೇಲನು ಸೌಲನಿಗೆ ಮತ್ತು ಅವನ ಸೇವಕನಿಗೆ ಊಟದ ಮೇಜಿನಲ್ಲಿ ಅತೀ ಮುಖ್ಯವಾದ ಸ್ಥಳವನ್ನು ನೀಡಿದನು. 23 ಸಮುವೇಲನು ಅಡಿಗೆಯವನಿಗೆ, “ನಾನು ನಿನಗೆ ಕೊಟ್ಟಿದ್ದ ಮಾಂಸವನ್ನು ತೆಗೆದುಕೊಂಡು ಬಾ; ಪ್ರತ್ಯೇಕವಾಗಿಡಬೇಕೆಂದು ನಾನು ನಿನಗೆ ಹೇಳಿದ್ದ ಭಾಗವೇ ಅದು” ಎಂದು ಹೇಳಿದನು.
24 ಅಡಿಗೆಯವನು ತೊಡೆಯ ಮಾಂಸವನ್ನು ತೆಗೆದುಕೊಂಡು ಬಂದು ಸೌಲನ ಎದುರಿಗೆ ಮೇಜಿನ ಮೇಲಿಟ್ಟನು. ಸಮುವೇಲನು, “ನಾನು ನಿನಗಾಗಿ ಈ ಮಾಂಸವನ್ನು ಪ್ರತ್ಯೇಕವಾಗಿರಿಸಿದ್ದೇನೆ. ಇದನ್ನು ತಿನ್ನು, ಏಕೆಂದರೆ ಇದನ್ನು ಈ ವಿಶೇಷವಾದ ಸಂದರ್ಭದಲ್ಲಿ ನಿನಗೆ ಕೊಡುವುದಕ್ಕಾಗಿಯೇ ಪ್ರತ್ಯೇಕಿಸಲಾಗಿತ್ತು” ಎಂದು ಹೇಳಿದನು. ಆದ್ದರಿಂದ ಸೌಲನು ಸಮುವೇಲನ ಜೊತೆಯಲ್ಲಿ ಆ ದಿನ ಊಟಮಾಡಿದನು.
25 ಅವರು ಊಟಮಾಡಿದ ನಂತರ, ಆರಾಧನಾ ಸ್ಥಳದಿಂದ ಇಳಿದುಬಂದು, ಪಟ್ಟಣಕ್ಕೆ ಹಿಂದಿರುಗಿದರು. ಸಮುವೇಲನು ಮಲಗಲು ಸೌಲನಿಗಾಗಿ ಮಾಳಿಗೆಯ ಮೇಲೆ ಹಾಸಿಗೆಯನ್ನು ಸಿದ್ಧಪಡಿಸಿದನು. ಸೌಲನು ಅಲ್ಲಿ ಮಲಗಿಕೊಂಡನು.
26 ಮಾರನೆಯ ದಿನ ಬೆಳಗಿನ ಜಾವ, ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ, “ಎದ್ದೇಳು, ನಿನ್ನನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲೆದ್ದನು ಮತ್ತು ಸಮುವೇಲನೊಂದಿಗೆ ಮನೆಯಿಂದ ಹೊರಗೆ ಹೊರಟನು.
27 ಸೌಲನೂ ಅವನ ಸೇವಕನೂ ಸಮುವೇಲನೂ ಪಟ್ಟಣದ ಅಂಚಿನಲ್ಲಿ ಒಟ್ಟಾಗಿ ನಡೆಯುತ್ತಿದ್ದಾಗ, ಸಮುವೇಲನು ಸೌಲನಿಗೆ, “ನಿನ್ನ ಸೇವಕನಿಗೆ ನಮ್ಮಿಂದ ಮುಂದೆ ಹೋಗಲು ತಿಳಿಸು. ನಾನು ದೇವರ ಸಂದೇಶವನ್ನು ನಿನಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. ಆದಕಾರಣ ಸೇವಕನು ಅವರಿಂದ ಮುಂದೆ ನಡೆದನು.