6
ಗುಲಾಮರಿಗೆ ವಿಶೇಷವಾದ ಉಪದೇಶ
ಗುಲಾಮರು ತಮ್ಮ ಯಜಮಾನರಿಗೆ ಸಂಪೂರ್ಣ ಗೌರವ ಕೊಡಬೇಕು. ಆಗ ದೇವರ ಹೆಸರಾಗಲಿ ನಮ್ಮ ಉಪದೇಶವಾಗಲಿ ಟೀಕೆಗೆ ಗುರಿಯಾಗುವುದಿಲ್ಲ. ಕೆಲವರಿಗೆ ವಿಶ್ವಾಸಿಗಳಾದ ಯಜಮಾನರಿದ್ದಾರೆ. ಆದ್ದರಿಂದ ಆ ಗುಲಾಮರು ಮತ್ತು ಯಜಮಾನರು ಸಹೋದರರಾಗಿದ್ದಾರೆ. ಆದರೆ ಅವರು ತಮ್ಮ ಯಜಮಾನರಿಗೆ ಕಡಿಮೆ ಗೌರವ ಕೊಡದೆ ತಮ್ಮ ಯಜಮಾನರ ಸೇವೆಯನ್ನು ಇನ್ನೂ ಉತ್ತಮವಾಗಿ ಮಾಡಬೇಕು. ಏಕೆಂದರೆ ಅವರು ಒಳ್ಳೆಯ ಕೆಲಸಗಳಿಗಾಗಿ ತಮ್ಮನ್ನು ಪ್ರತಿಷ್ಠಿಸಿಕೊಳ್ಳುವ ವಿಶ್ವಾಸಿಗಳಾಗಿದ್ದಾರೆ ಮತ್ತು ಸ್ನೇಹಿತರಾಗಿದ್ದಾರೆ.* ಅಥವಾ “ಏಕೆಂದರೆ ಅವರು ತಾವು ಪ್ರೀತಿಸುವ ವಿಶ್ವಾಸಿಗಳಿಗೇ ಸಹಾಯ ಮಾಡುವವರಾಗಿದ್ದಾರೆ.”
ಈ ಕಾರ್ಯಗಳನ್ನು ಮಾಡುವಂತೆ ನೀನು ಜನರಿಗೆ ಉಪದೇಶಿಸಬೇಕು ಮತ್ತು ತಿಳಿಸಬೇಕು.
ದುರ್ಬೋಧನೆ ಮತ್ತು ನಿಜವಾದ ಶ್ರೀಮಂತಿಕೆ
ಕೆಲವು ಜನರು ಸುಳ್ಳುಸಂಗತಿಗಳನ್ನು ಬೋಧಿಸುತ್ತಾರೆ. ಆ ಜನರು ನಮ್ಮ ಪ್ರಭುವಾದ ಯೇಸುವಿನ ಸತ್ಯ ಬೋಧನೆಯನ್ನು ಒಪ್ಪುವುದಿಲ್ಲ. ದೇವರ ಸೇವೆಯನ್ನು ಸತ್ಯಕ್ಕನುಸಾರವಾಗಿ ಮಾಡಬೇಕೆಂಬ ಉಪದೇಶವನ್ನು ಅವರು ಸ್ವೀಕರಿಸಿಕೊಳ್ಳುವುದಿಲ್ಲ. ದುರ್ಬೋಧಕನು ಗರ್ವದಿಂದ ತುಂಬಿದವನಾಗಿರುತ್ತಾನೆ ಮತ್ತು ಅವನಿಗೆ ಏನೂ ಅರ್ಥವಾಗುವುದಿಲ್ಲ. ಅವನು ಕುತರ್ಕ ವಾಗ್ವಾದ ಮಾಡುವುದರಲ್ಲಿ ಆಸಕ್ತನಾಗಿದ್ದಾನೆ. ಇದರಿಂದ ಹೊಟ್ಟೆಕಿಚ್ಚು, ಜಗಳ, ನಿಂದನೆ ಮತ್ತು ದುಸ್ಸಂಶಯಗಳು ಉಂಟಾಗುತ್ತವೆ. ಇದಲ್ಲದೆ ಕೆಡುಕರಲ್ಲಿ ವಾದವಿವಾದಗಳು ಹುಟ್ಟುತ್ತವೆ. ಆ ಜನರು ಸತ್ಯವನ್ನು ತೊರೆದವರಾಗಿದ್ದಾರೆ. ದೇವರ ಸೇವೆಯು ಐಶ್ವರ್ಯವನ್ನು ಗಳಿಸುವ ಮಾರ್ಗವೆಂಬುದು ಅವರ ಆಲೋಚನೆ.
ದೇವರ ಸೇವೆ ಮಾಡುವವನು ತನ್ನಲ್ಲಿರುವುದರಲ್ಲಿ ಸಂತುಷ್ಟನಾಗಿದ್ದರೆ, ಅವನು ದೊಡ್ಡ ಶ್ರೀಮಂತನೇ ಸರಿ. ನಾವು ಲೋಕಕ್ಕೆ ಬಂದಾಗ ಏನನ್ನೂ ತೆಗೆದುಕೊಂಡು ಬರಲಿಲ್ಲ. ನಾವು ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಊಟ ಬಟ್ಟೆಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತೇವೆ. ಶ್ರೀಮಂತರಾಗಬೇಕೆನ್ನುವವರು ತಮ್ಮನ್ನು ತಾವೇ ಶೋಧನೆಗೆ ಗುರಿಪಡಿಸಿಕೊಳ್ಳುವರು. ಅವರು ಉರ್ಲಿನಲ್ಲಿ ಸಿಕ್ಕಿಹಾಕಿಕೊಂಡವರಾಗಿದ್ದಾರೆ. ಅವರು ಹಾನಿಕರವಾದ ಅನೇಕ ಮೂರ್ಖ ಆಸೆಗಳಲ್ಲಿ ಸಿಕ್ಕಿಬೀಳುವರು. ಅವು ಜನರನ್ನು ಹಾಳುಮಾಡಿ, ನಾಶಗೊಳಿಸುತ್ತವೆ. 10 ಹಣದಾಸೆಯು ಎಲ್ಲಾ ವಿಧವಾದ ಕೆಟ್ಟತನಕ್ಕೆ ಮೂಲವಾಗುತ್ತದೆ. ಕೆಲವು ಜನರು ಹೆಚ್ಚುಹೆಚ್ಚು ಹಣವನ್ನು ಗಳಿಸಿಕೊಳ್ಳುವುದಕ್ಕಾಗಿ ಸತ್ಯೋಪದೇಶವನ್ನು ತೊರೆದುಬಿಟ್ಟಿದ್ದಾರೆ. ಆದರೆ ಅವರು ತಮ್ಮನ್ನು ತಾವೇ ಹೆಚ್ಚು ವೇದನೆಗೆ ಗುರಿಪಡಿಸಿಕೊಂಡಿದ್ದಾರೆ.
ನೀವು ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳು
11 ಆದರೆ ನೀನು ದೇವರ ಮನುಷ್ಯ. ಆದ್ದರಿಂದ ಈ ಎಲ್ಲಾ ಸಂಗತಿಗಳಿಂದ ದೂರವಾಗಿರು. ದೇವರ ಸೇವೆಯನ್ನು ಮಾಡುತ್ತಾ ಉತ್ತಮಮಾರ್ಗದಲ್ಲಿ ಜೀವಿಸಲು ಪ್ರಯತ್ನಿಸು; ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತೆಗಳನ್ನು ಹೊಂದಿದವನಾಗಿರು. 12 ನಂಬಿಕೆಯಲ್ಲಿ ದೃಢವಾಗಿರುವುದು ಓಟದ ಸ್ಪರ್ಧೆಗೆ ಹೋಲಿಕೆಯಾಗಿದೆ. ಓಟದ ಸ್ಪರ್ಧೆಯಲ್ಲಿ ಗೆಲ್ಲಲು ನಿನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸು. ನಿತ್ಯಜೀವವನ್ನು ಪಡೆದುಕೊಳ್ಳಲು ಪ್ರಯಾಸಪಡು. ಅದನ್ನು ಹೊಂದಿಕೊಳ್ಳುವುದಕ್ಕಾಗಿ ನೀನು ಕರೆಯಲ್ಪಟ್ಟಿರುವೆ. ಕ್ರಿಸ್ತನಂಬಿಕೆಯ ಕುರಿತಾದ ಸತ್ಯವನ್ನು ನೀನು ಅನೇಕ ಜನರ ಎದುರಿನಲ್ಲಿ ಒಪ್ಪಿಕೊಂಡೆಯಲ್ಲಾ. 13 ಪೊಂತ್ಯ ಪಿಲಾತನ ಮುಂದೆ ಸಾಕ್ಷಿ ನೀಡಿದ ಕ್ರಿಸ್ತ ಯೇಸುವಿನ ಸನ್ನಿಧಿಯಲ್ಲಿಯೂ ಸರ್ವಸೃಷ್ಟಿಗೆ ಜೀವದಾಯಕನಾದ ದೇವರ ಸನ್ನಿಧಿಯಲ್ಲಿಯೂ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 14 ನಮ್ಮ ಪ್ರಭುವಾದ ಯೇಸುಕ್ರಿಸ್ತನು ಮತ್ತೆ ಪ್ರತ್ಯಕ್ಷನಾಗುವ ಕಾಲದವರೆಗೆ ನೀನು ಆ ಕಾರ್ಯಗಳನ್ನು ತಪ್ಪಿಲ್ಲದೆ, ನಿಂದಾರಹಿತನಾಗಿ ಮಾಡುತ್ತಿರು. 15 ದೇವರು ತಕ್ಕ ಸಮಯದಲ್ಲಿ ಅದನ್ನು ನೆರವೇರಿಸುವನು. ಆತನು ಭಾಗ್ಯವಂತನಾದ ಏಕಾಧಿಪತಿಯೂ ರಾಜಾಧಿರಾಜನೂ ಪ್ರಭುಗಳಿಗೆ ಪ್ರಭುವೂ ಆಗಿದ್ದಾನೆ. 16 ಸಾವಿಲ್ಲದವನು ಆತನೊಬ್ಬನೇ. ಆತನು ಉಜ್ವಲ ಬೆಳಕಿನಲ್ಲಿ ವಾಸವಾಗಿರುವುದರಿಂದ ಆತನ ಹತ್ತಿರಕ್ಕೆ ಜನರು ಹೋಗಲು ಸಾಧ್ಯವಿಲ್ಲ. ಆತನನ್ನು ಇದುವರೆಗೆ ಯಾರು ನೋಡಿಲ್ಲ; ನೋಡಲು ಸಾಧ್ಯವೂ ಇಲ್ಲ. ಆತನಿಗೆ ಗೌರವವೂ ಅಧಿಪತ್ಯವೂ ಸದಾಕಾಲವಿರಲಿ. ಆಮೆನ್.
17 ಇಹಲೋಕದ ವಿಷಯಗಳಲ್ಲಿ ಶ್ರೀಮಂತರಾಗಿರುವ ಜನರಿಗೆ ಈ ಆಜ್ಞೆಗಳನ್ನು ತಿಳಿಸು. ಗರ್ವಪಡದಂತೆಯೂ ಹಣವನ್ನು ಅವಲಂಬಿಸಿಕೊಳ್ಳದೆ ದೇವರಲ್ಲೇ ನಿರೀಕ್ಷೆಯಿಡುವಂತೆಯೂ ಅವರಿಗೆ ತಿಳಿಸು. ಹಣವು ಭರವಸೆಗೆ ಯೋಗ್ಯವಲ್ಲ. ದೇವರಾದರೋ ನಮ್ಮ ಸಂತೋಷಕ್ಕಾಗಿ ಸಮಸ್ತವನ್ನು ನಮಗೆ ಧಾರಾಳವಾಗಿ ದಯಪಾಲಿಸುತ್ತಾನೆ. 18 ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಶ್ರೀಮಂತರಿಗೆ ತಿಳಿಸು. ಸತ್ಕಾರ್ಯಗಳನ್ನು ಮಾಡುವುದರಲ್ಲೇ ಶ್ರೀಮಂತರಾಗಿರಬೇಕೆಂದು ಅವರಿಗೆ ತಿಳಿಸು. ಪರೋಪಕಾರದಲ್ಲೂ ಹಂಚಿಕೊಳ್ಳುವುದರಲ್ಲೂ ಸಂತಸಪಡಲು ಅವರಿಗೆ ತಿಳಿಸು. 19 ಆಗ ಪರಲೋಕದಲ್ಲಿ ಒಂದು ನಿಧಿಯನ್ನು ಅವರು ಕೂಡಿಟ್ಟು ಕೊಂಡಂತಾಗುತ್ತದೆ. ಆ ನಿಧಿಯೇ ಅವರ ಮುಂದಿನ ಜೀವಿತಕ್ಕೆ ಭದ್ರವಾದ ಅಸ್ತಿವಾರವಾಗಿದೆ. ಹೀಗೆ ಅವರು ನಿಜವಾದ ಜೀವಿತವನ್ನು ಹೊಂದಿಕೊಳ್ಳುವರು.
20 ತಿಮೊಥೆಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ಸುರಕ್ಷಿತವಾಗಿ ಕಾಪಾಡು. ಪ್ರಾಪಂಚಿಕವಾದ ಮೂರ್ಖ ಸಂಗತಿಗಳನ್ನು ಹೇಳುವ ಜನರಿಂದಲೂ ಸತ್ಯದ ವಿರುದ್ಧವಾಗಿ ವಾದ ಮಾಡುವ ಜನರಿಂದಲೂ ದೂರವಾಗಿರು. ಅವರು ಅದನ್ನು ಜ್ಞಾನವೆಂದು ಕರೆದರೂ ಅದು ನಿಜವಾದ ಜ್ಞಾನವಲ್ಲ. 21 ಕೆಲವರು ತಮಗೆ ಜ್ಞಾನ ಇದೆಯೆಂದು ಹೇಳಿ ಕೊಂಡರೂ ಸತ್ಯೋಪದೇಶವನ್ನು ತೊರೆದುಬಿಟ್ಟವರಾಗಿದ್ದಾರೆ.
ದೇವರ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

*6:2: ಅಥವಾ “ಏಕೆಂದರೆ ಅವರು ತಾವು ಪ್ರೀತಿಸುವ ವಿಶ್ವಾಸಿಗಳಿಗೇ ಸಹಾಯ ಮಾಡುವವರಾಗಿದ್ದಾರೆ.”