9
ಶೆಬದ ರಾಣಿಯು ಸೊಲೊಮೋನನನ್ನು ಸಂದರ್ಶಿಸಿದ್ದು
ಸೊಲೊಮೋನನ ಪ್ರಖ್ಯಾತಿಯನ್ನು ಶೆಬದ ರಾಣಿಯು ಕೇಳಿ ಅವನನ್ನು ಕಠಿಣವಾದ ಪ್ರಶ್ನೆಗಳಿಂದ ಪರೀಕ್ಷಿಸುವದಕ್ಕಾಗಿ ಜೆರುಸಲೇಮಿಗೆ ಬಂದಳು. ಆಕೆಯು ದೊಡ್ಡ ಪರಿವಾರದೊಂದಿಗೆ ಬಂದಳು. ಜೊತೆಗೆ ಒಂಟೆಗಳ ಮೇಲೆ ಸುಗಂಧದ್ರವ್ಯವನ್ನೂ ಅಪರಿಮಿತವಾದ ಬಂಗಾರವನ್ನೂ ವಜ್ರವೈಢೂರ್ಯಗಳನ್ನೂ ಹೇರಿಕೊಂಡು ಬಂದಳು. ಅಲ್ಲಿ ಆಕೆ ಸೊಲೊಮೋನನ ಸಂಗಡ ಮಾತನಾಡಿ ತನ್ನಲ್ಲಿದ್ದ ಎಷ್ಟೋ ಪ್ರಶ್ನೆಗಳನ್ನು ಕೇಳಿದಳು. ಅವನು ಆಕೆಯ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಆಕೆಯ ಯಾವ ಪ್ರಶ್ನೆಯೂ ಅವನಿಗೆ ಕಷ್ಟಕರವೆನಿಸಲಿಲ್ಲ. ಶೆಬದ ರಾಣಿಯು ಅವನ ಜ್ಞಾನವನ್ನೂ ಅವನು ಕಟ್ಟಿಸಿದ ಮನೆಯನ್ನೂ ನೋಡಿದಳು. ಸೊಲೊಮೋನನ ಮೇಜಿನ ಮೇಲೆ ಇಟ್ಟಿರುವ ಆಹಾರವನ್ನು ನೋಡಿದಳು. ಅವನ ಸೇವಕರು ಮಾಡುವ ಸೇವೆಯ ರೀತಿಯನ್ನು ಪರಿಶೀಲಿಸಿದಳು. ಅವರು ಧರಿಸುವ ಉಡುಪು, ಸಮವಸ್ತ್ರಗಳು, ದೇವಾಲಯಕ್ಕೆ ಹೋಗುವಾಗ ಮಾಡುವ ಮೆರವಣಿಗೆಗಳನ್ನು ಮತ್ತು ಯಜ್ಞಗಳನ್ನು ನೋಡಿದಳು. ಪ್ರತಿಯೊಂದು ವಿಷಯವನ್ನು ಆಕೆ ಗಮನಿಸಿದಾಗ ಅಚ್ಚರಿಗೊಂಡಳು.
ಆಕೆ ಅರಸನಾದ ಸೊಲೊಮೋನನಿಗೆ, “ನನ್ನ ದೇಶದಲ್ಲಿ ನಾನು ನಿನ್ನ ವಿಷಯವಾಗಿ ಕೇಳಿದ ಸಂಗತಿಗಳು, ನಿನ್ನ ಜ್ಞಾನ, ನಿನ್ನ ಕೆಲಸಕಾರ್ಯಗಳು ಎಲ್ಲವೂ ಸತ್ಯವಾಗಿವೆ. ನಾನು ಇಲ್ಲಿಗೆ ಬಂದು ಅವುಗಳನ್ನೆಲ್ಲಾ ಕಣ್ಣಾರೆ ನೋಡುವ ತನಕ ನಾನು ಅವುಗಳನ್ನು ನಂಬಿರಲಿಲ್ಲ. ಆದರೆ ನಾನು ಕೇಳಿದ್ದು ನಿನ್ನ ಜ್ಞಾನದ ಅರ್ಧದಷ್ಟೂ ಇಲ್ಲವೆಂದು ಈಗ ನನಗೆ ತಿಳಿಯಿತು. ನಾನು ಕೇಳಿದ್ದಕ್ಕಿಂತಲೂ ನೀನು ಮಹಾಜ್ಞಾನಿಯಾಗಿರುವೆ. ನಿನ್ನ ಹೆಂಡತಿಯರೂ ನಿನ್ನ ಅಧಿಕಾರಿಗಳೂ ಧನ್ಯರು. ನಿನ್ನ ಸೇವೆಮಾಡುವ ಇವರು ನಿನ್ನ ಜ್ಞಾನೋಪದೇಶವನ್ನು ಯಾವಾಗಲೂ ಕೇಳುವರು. ನಿನ್ನ ದೇವರಿಗೆ ಸ್ತೋತ್ರವಾಗಲಿ. ಆತನು ನಿನ್ನಲ್ಲಿ ಸಂತೋಷಿಸಿ ತನ್ನ ಸಿಂಹಾಸನದಲ್ಲಿ ನಿನ್ನನ್ನು ಕುಳ್ಳಿರಿಸಿದ್ದಾನೆ. ನಿನ್ನ ದೇವರು ಇಸ್ರೇಲನ್ನು ಪ್ರೀತಿಸುತ್ತಾನೆ ಮತ್ತು ಶಾಶ್ವತವಾಗಿ ಪೋಷಿಸುತ್ತಾನೆ. ಅದಕ್ಕಾಗಿಯೇ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡುವುದಕ್ಕಾಗಿ ನಿನ್ನನ್ನು ಇಸ್ರೇಲಿನ ಅರಸನನ್ನಾಗಿ ಮಾಡಿದ್ದಾನೆ” ಎಂದು ಹೇಳಿದಳು.
ಆ ಬಳಿಕ ಶೆಬದ ರಾಣಿಯು ಸೊಲೊಮೋನ್ ಅರಸನಿಗೆ ನಾಲ್ಕು ಸಾವಿರದ ನೂರ ನಲವತ್ತು ಕಿಲೋಗ್ರಾಂ ಬಂಗಾರ, ಲೆಕ್ಕವಿಲ್ಲದಷ್ಟು ಸುಗಂಧದ್ರವ್ಯಗಳು ಮತ್ತು ಬೆಲೆಬಾಳುವ ವಜ್ರಗಳನ್ನು ಕೊಟ್ಟಳು. ಅಷ್ಟು ಅತ್ಯುತ್ತಮವಾದ ಸುಗಂಧದ್ರವ್ಯಗಳನ್ನು ಯಾರೂ ಸೊಲೊಮೋನನಿಗೆ ಕೊಟ್ಟಿರಲಿಲ್ಲ.
10 ಹೂರಾಮನ ಮತ್ತು ಸೊಲೊಮೋನನ ಸೇವಕರು ಓಫೀರಿನಿಂದ ಬಂಗಾರವನ್ನು ತಂದರು; ಅಲ್ಲದೆ ಸುಗಂಧದ ಮರಗಳನ್ನೂ ವಜ್ರವೈಢೂರ್ಯಗಳನ್ನೂ ತಂದರು. 11 ಸುಗಂಧದ ಮರಗಳಿಂದ ಸೊಲೊಮೋನನು ದೇವಾಲಯದ ಮತ್ತು ಅರಮನೆಯ ಮೆಟ್ಟಲುಗಳನ್ನು ಮಾಡಿಸಿದನು; ಅಲ್ಲದೆ ಗಾಯಕರಿಗಾಗಿ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ಅದರಿಂದ ತಯಾರಿಸಿದನು. ಯೆಹೂದ ಪ್ರಾಂತ್ಯದಲ್ಲಿ ಯಾರೂ ಅಂತಹ ಸುಂದರವಾದ ಸುಗಂಧವಸ್ತುಗಳನ್ನು ನೋಡಿರಲಿಲ್ಲ.
12 ಶೆಬದ ರಾಣಿಯು ಕೇಳಿದ್ದನ್ನೆಲ್ಲಾ ಸೊಲೊಮೋನನು ಕೊಟ್ಟನು. ಆಕೆಯು ಅವನಿಗೆ ತಂದದ್ದಕ್ಕಿಂತ ಹೆಚ್ಚಾಗಿ ಆಕೆಗೆ ಕೊಟ್ಟನು. ಅನಂತರ ಶೆಬದ ರಾಣಿಯೂ ಆಕೆಯ ಪರಿವಾರವೂ ತಮ್ಮ ದೇಶಕ್ಕೆ ತೆರಳಿದರು.
ಸೊಲೊಮೋನನ ಅಪರಿಮಿತವಾದ ಐಶ್ವರ್ಯ
13 ಸೊಲೊಮೋನನು ಒಂದು ವರ್ಷದಲ್ಲಿ ಇಪ್ಪತ್ತೆರಡು ಸಾವಿರದ ಒಂಭೈನೂರ ಎಪ್ಪತ್ತೇಳು ಕಿಲೋಗ್ರಾಂ ಬಂಗಾರವನ್ನು ಸಂಗ್ರಹಿಸಿದನು. 14 ಇತರ ದೇಶಗಳ ವ್ಯಾಪಾರಸ್ಥರು: ಅರೇಬಿಯದ ಎಲ್ಲಾ ರಾಜರುಗಳು ಮತ್ತು ದೇಶಾಧಿಪತಿಗಳು ಸೊಲೊಮೋನನಿಗೆ ಬೆಳ್ಳಿಬಂಗಾರಗಳನ್ನು ತಂದುಕೊಡುತ್ತಿದ್ದರು.
15 ಸೊಲೊಮೋನನು ಇನ್ನೂರು ದೊಡ್ಡ ಗಾತ್ರದ ಗುರಾಣಿಗಳನ್ನು ಚಿನ್ನದ ತಗಡಿನಿಂದ ಮಾಡಿಸಿದನು. ಪ್ರತಿಯೊಂದು ಗುರಾಣಿಗೆ ಸುಮಾರು ಎಳು ಕಿಲೋಗ್ರಾಂಗಳಷ್ಟು ಚಿನ್ನವು ಹಿಡಿಯಿತು. 16 ಇದಲ್ಲದೆ ಮುನ್ನೂರು ಸಣ್ಣ ಗುರಾಣಿಗಳನ್ನೂ ಸೊಲೊಮೋನನು ಚಿನ್ನದ ತಗಡಿನಿಂದ ಮಾಡಿಸಿದನು; ಒಂದೊಂದು ಗುರಾಣಿಗೆ ಸುಮಾರು ನಾಲ್ಕು ಪೌಂಡ್ ಬಂಗಾರ ಹಿಡಿಯಿತು. ಈ ಗುರಾಣಿಗಳನ್ನೆಲ್ಲಾ ಸೊಲೊಮೋನನು “ಲೆಬನೋನಿನ ತೋಪು” ಎಂಬ ಅರಮನೆಯಲ್ಲಿ ಶೇಖರಿಸಿಟ್ಟನು.
17 ರಾಜನಾದ ಸೊಲೊಮೋನನು ದಂತದಿಂದ ಒಂದು ದೊಡ್ಡ ಸಿಂಹಾಸನವನ್ನು ಮಾಡಿಸಿದನು. ಸಿಂಹಾಸನವನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. 18 ಸಿಂಹಾಸನವನ್ನು ಹತ್ತಲು ಆರು ಮೆಟ್ಟಲುಗಳಿದ್ದವು. ಅದಕ್ಕೆ ಬಂಗಾರದಿಂದ ಮಾಡಿದ ಪಾದಪೀಠವಿತ್ತು. ಸಿಂಹಾಸನದ ಎರಡು ಕಡೆಗಳಲ್ಲೂ ಕೈಗಳನ್ನಿಡಲು ಏರ್ಪಾಟು ಮಾಡಲಾಗಿತ್ತು; ಅವುಗಳ ಸಮೀಪದಲ್ಲಿ ಎರಡು ಸಿಂಹಗಳ ಆಕೃತಿಯನ್ನು ಮಾಡಿಟ್ಟಿದ್ದರು. 19 ಆರು ಮೆಟ್ಟಲುಗಳ ಮೇಲೆ ಹನ್ನೆರಡು ಸಿಂಹಗಳ ಆಕೃತಿಯನ್ನು ಇಟ್ಟಿದ್ದರು. ಪ್ರತಿಯೊಂದು ಮೆಟ್ಟಲಿನ ಎರಡೂ ಕಡೆಗಳಲ್ಲಿ ಒಂದೊಂದು ಸಿಂಹದ ಆಕೃತಿಯಿತ್ತು. ಇಂಥಾ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.
20 ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳೇ. “ಲೆಬನೋನಿನ ತೋಪು” ಎಂಬ ಅರಮನೆಯಲ್ಲಿ ಇಟ್ಟಿದ್ದ ಎಲ್ಲಾ ವಸ್ತುಗಳು ಅಪ್ಪಟ ಬಂಗಾರದಿಂದಲೇ ಮಾಡಿದವುಗಳಾಗಿದ್ದವು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ.
21 ರಾಜನಾದ ಸೊಲೊಮೋನನ ಬಳಿಯಲ್ಲಿ ತಾರ್ಷೀಷಿಗೆ ಹೋಗಲು ಹಡಗುಗಳಿದ್ದವು. ಹೂರಾಮನ ನಾವಿಕರು ಅವುಗಳನ್ನು ನಡಿಸಿದರು. ಮೂರು ವರ್ಷಕ್ಕೊಮ್ಮೆ ಹಡಗುಗಳು ತಾರ್ಷೀಷಿನಿಂದ ಹಿಂದಿರುಗುತ್ತಿದ್ದವು. ಅವು ಚಿನ್ನ, ಬೆಳ್ಳಿ, ದಂತ, ಕೋತಿ ಮತ್ತು ನವಿಲುಗಳನ್ನು ಸೊಲೊಮೋನನಿಗೆ ತರುತ್ತಿದ್ದವು.
22 ರಾಜನಾದ ಸೊಲೊಮೋನನು ಭೂಲೋಕದ ಎಲ್ಲಾ ರಾಜರುಗಳಿಗಿಂತ ಜ್ಞಾನದಲ್ಲಿಯೂ ಐಶ್ವರ್ಯದಲ್ಲಿಯೂ ಹೆಚ್ಚು ಪ್ರಸಿದ್ಧನಾದನು. 23 ದೇವರು ಅವನಿಗೆ ದಯಪಾಲಿಸಿದ ಜ್ಞಾನವನ್ನು ನೋಡಿ ಅವನಿಂದ ಜ್ಞಾನವಾಕ್ಯಗಳನ್ನು ಕೇಳಲು ಲೋಕದ ರಾಜರುಗಳು ಅವನ ಬಳಿಗೆ ಬರುತ್ತಿದ್ದರು. 24 ಪ್ರತಿ ವರ್ಷವೂ ಆ ರಾಜರುಗಳು ಸೊಲೊಮೋನನಿಗೆ ಬಹುಮಾನಗಳನ್ನು ತರುತ್ತಿದ್ದರು. ಬೆಳ್ಳಿಬಂಗಾರದ ವಸ್ತುಗಳನ್ನು, ಬಟ್ಟೆಗಳನ್ನು, ಆಯುಧಗಳನ್ನು, ಸುಗಂಧವಸ್ತುಗಳನ್ನು, ಕುದುರೆಗಳನ್ನು ಮತ್ತು ಹೇಸರಕತ್ತೆಗಳನ್ನು ಕಾಣಿಕೆಯಾಗಿ ಅವನಿಗೆ ಕೊಡುತ್ತಿದ್ದರು.
25 ಸೊಲೊಮೋನನ ರಥಗಳಿಗೂ ರಥಾಶ್ವಗಳಿಗೂ ನಾಲ್ಕು ಸಾವಿರ ಲಾಯಗಳಿದ್ದವು. ಅವನ ಬಳಿಯಲ್ಲಿ ಹನ್ನೆರಡು ಸಾವಿರ ರಾಹುತರು ಇದ್ದರು. ಅವರನ್ನು ಪ್ರತ್ಯೇಕವಾದ ಪಟ್ಟಣಗಳಲ್ಲಿಯೂ ಜೆರುಸಲೇಮಿನಲ್ಲಿಯೂ ಇರಿಸಿದನು. 26 ಯೂಫ್ರೇಟೀಸ್ ನದಿಯಿಂದ ಹಿಡಿದು ಫಿಲಿಷ್ಟಿಯರ ರಾಜ್ಯ ಮತ್ತು ಈಜಿಪ್ಟಿನ ಮೇರೆಯ ತನಕವಿದ್ದ ಎಲ್ಲಾ ಅರಸರುಗಳಿಗೆ ಸೊಲೊಮೋನನೇ ರಾಜನಾಗಿದ್ದನು. 27 ಸೊಲೊಮೋನನಿಂದಾಗಿ ಜೆರುಸಲೇಮಿನಲ್ಲಿ ಬೆಳ್ಳಿಯು ಹೆಚ್ಚಾಗಿ, ಕಲ್ಲುಗಳಷ್ಟು ಸಾಮಾನ್ಯವಾಗಿತ್ತು. ಮಾತ್ರವಲ್ಲದೆ ದೇವದಾರು ಮರಗಳು ಬೆಟ್ಟಪ್ರದೇಶದಲ್ಲಿ ಬೆಳೆಯುವ ಸಿಕಮೋರ್ ಮರಗಳಂತೆ ಧಾರಾಳವಾಗಿದ್ದವು. 28 ಜನರು ಸೊಲೊಮೋನನಿಗೋಸ್ಕರ ಈಜಿಪ್ಟ್ ಮತ್ತು ಬೇರೆ ದೇಶಗಳಿಂದ ಕುದುರೆಗಳನ್ನು ತಂದು ಕೊಡುತ್ತಿದ್ದರು.
ಸೊಲೊಮೋನನ ಮರಣ
29 ಸೊಲೊಮೋನನು ಪ್ರಾರಂಭದಿಂದ ಅಂತ್ಯದ ತನಕ ಮಾಡಿದ ಎಲ್ಲಾ ವಿಷಯಗಳನ್ನು ಪ್ರವಾದಿಯಾದ ನಾತಾನನು ಬರೆದ ಲೇಖನಗಳಲ್ಲಿಯೂ, ಶೀಲೋವದ ಅಹೀಯನ ಪ್ರವಾದನೆಯಲ್ಲಿಯೂ ಮತ್ತು ದೇವದರ್ಶಿಯಾದ ಇದ್ದೋವಿನ ದರ್ಶನಗಳ ಪುಸ್ತಕದಲ್ಲಿಯೂ ಬರೆಯಲಾಗಿದೆ. ದೇವದರ್ಶಿಯಾದ ಇದ್ದೋ, ನೆಬಾಟನ ಮಗನಾದ ಯಾರೊಬ್ಬಾಮನ ವಿಷಯವಾಗಿಯೂ ಬರೆದಿದ್ದಾನೆ. 30 ಜೆರುಸಲೇಮಿನಲ್ಲಿ ಸೊಲೊಮೋನನು ನಲವತ್ತು ವರ್ಷಗಳ ಕಾಲ ಇಸ್ರೇಲರನ್ನು ಆಳಿದನು. 31 ಆ ಬಳಿಕ ಸೊಲೊಮೋನನು ತನ್ನ ಪೂರ್ವಿಕರೊಂದಿಗೆ ಸೇರಿದನು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಸೊಲೊಮೋನನ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು.