12
ಈಜಿಪ್ಟಿನ ರಾಜನಾದ ಶೀಶಕನು ಜೆರುಸಲೇಮಿನ ಮೇಲೆ ಧಾಳಿಮಾಡಿದ್ದು
ರೆಹಬ್ಬಾಮನು ಬಲಾಢ್ಯನಾದ ರಾಜನಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ ನಂತರ ಅವನೂ ಯೆಹೂದದ ಜನರೂ ದೇವರಾದ ಯೆಹೋವನ ಕಟ್ಟಳೆಗಳನ್ನು ಅನುಸರಿಸಲು ನಿರಾಕರಿಸಿದರು.
ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಶೀಶಕನು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಶೀಶಕನು ಈಜಿಪ್ಟಿನ ರಾಜ. ರೆಹಬ್ಬಾಮನೂ ಯೆಹೂದ ಪ್ರಾಂತ್ಯದ ಜನರೂ ಯೆಹೋವನಿಗೆ ಅವಿಧೇಯರಾದದ್ದೇ ಈ ಮುತ್ತಿಗೆಗೆ ಕಾರಣ. ಶೀಶಕನ ಬಳಿಯಲ್ಲಿ ಹನ್ನೆರಡು ಸಾವಿರ ರಥಗಳು, ಅರವತ್ತುಸಾವಿರ ರಾಹುತರು ಮತ್ತು ಲೆಕ್ಕಿಸಲಾರದಷ್ಟು ಸೈನಿಕರು ಇದ್ದರು. ಅವನ ಆ ದೊಡ್ಡ ಸೈನ್ಯದಲ್ಲಿ ಲಿಬ್ಯ, ಇಥಿಯೋಪ್ಯ ಮತ್ತು ಸುಕ್ಕೀಯ ದೇಶದ ಸಿಪಾಯಿಗಳಿದ್ದರು. ಶೀಶಕನು ಯೆಹೂದ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಂಡು ಜೆರುಸಲೇಮಿನತ್ತ ನಡೆದನು.
ಆಗ ಪ್ರವಾದಿಯಾದ ಶೆಮಾಯನು, ಶೀಶಕನಿಗೆ ಹೆದರಿಕೊಂಡು ಜೆರುಸಲೇಮಿನಲ್ಲಿ ಒಟ್ಟಾಗಿ ಸೇರಿ ಬಂದಿದ್ದ ರೆಹಬ್ಬಾಮನ ಮತ್ತು ಇಸ್ರೇಲಿನ ಪ್ರಧಾನರ ಬಳಿಗೆ ಬಂದು, “ಯೆಹೋವನು ಹೇಳುವುದೇನೆಂದರೆ, ರೆಹಬ್ಬಾಮನೇ, ನೀನು ಮತ್ತು ಯೆಹೂದದ ಜನರು ನನ್ನನ್ನು ತೊರೆದಿದ್ದೀರಿ. ನನ್ನ ಕಟ್ಟಳೆಗಳನ್ನು ಅನುಸರಿಸಲು ನಿರಾಕರಿಸಿದ್ದೀರಿ. ಈಗ ನಾನು ನಿಮಗೆ ಸಹಾಯ ಮಾಡದೆ ಶೀಶಕನನ್ನು ಎದುರಿಸಲು ನಿಮ್ಮನ್ನು ಬಿಟ್ಟುಬಿಡುವೆನು” ಎಂದು ಹೇಳಿದನು.
ಆಗ ಯೆಹೂದ ಪ್ರಾಂತ್ಯದ ನಾಯಕರುಗಳೂ ರೆಹಬ್ಬಾಮನೂ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ತಮ್ಮನ್ನು ದೇವರ ಮುಂದೆ ತಗ್ಗಿಸಿಕೊಂಡರು. “ಯೆಹೋವನು ನೀತಿವಂತನೇ ಸರಿ” ಎಂದರು.
ಅರಸನೂ ಯೆಹೂದದ ನಾಯಕರೂ ತನ್ನೆದುರಿನಲ್ಲಿ ತಗ್ಗಿಸಿಕೊಂಡದ್ದನ್ನು ಯೆಹೋವನು ನೋಡಿ ಶೆಮಾಯನ ಮೂಲಕ ಈ ಸಂದೇಶವನ್ನು ಕಳುಹಿಸಿದನು. “ಅರಸನೂ ನಾಯಕರೂ ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಪಡಿಸದೆ ಬೇಗನೆ ರಕ್ಷಿಸುವೆನು. ಜೆರುಸಲೇಮಿನ ಮೇಲೆ ನನ್ನ ಕೋಪವು ಸುರಿಯುವಂತೆ ನಾನು ಶೀಶಕನನ್ನು ಉಪಯೋಗಿಸುವದಿಲ್ಲ. ಆದರೆ ಜೆರುಸಲೇಮಿನ ಜನರು ಶೀಶಕನ ಸೇವಕರಾಗುವರು. ಯಾಕೆಂದರೆ ನನ್ನ ಸೇವೆಮಾಡುವುದಕ್ಕೂ ಇತರ ರಾಜರುಗಳ ಸೇವೆಮಾಡುವುದಕ್ಕೂ ವ್ಯತ್ಯಾಸವಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕಾಗಿದೆ.”
ಶೀಶಕನು ಜೆರುಸಲೇಮಿನೊಳಗೆ ನುಗ್ಗಿ ದೇವಾಲಯದಲ್ಲಿಟ್ಟಿದ್ದ ಭಂಡಾರಗಳನ್ನೆಲ್ಲಾ ಸೂರೆಮಾಡಿದನು. ರಾಜನ ಅರಮನೆಯದಲ್ಲಿದ್ದ ವಸ್ತುಗಳನ್ನೂ ಸೊಲೊಮೋನನು ಮಾಡಿಸಿದ್ದ ಬಂಗಾರದ ಗುರಾಣಿಗಳನ್ನೂ ಸೂರೆಮಾಡಿ ತನ್ನ ದೇಶಕ್ಕೆ ಒಯ್ದನು. 10 ರೆಹಬ್ಬಾಮನು ಬಂಗಾರದ ಗುರಾಣಿಗಳ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ ರಾಜನ ಅರಮನೆಯನ್ನು ಕಾಯುವ ಕಾವಲುಗಾರರ ವಶಕ್ಕೆ ಅವುಗಳನ್ನು ಕೊಟ್ಟನು. 11 ರಾಜನು ದೇವಾಲಯವನ್ನು ಪ್ರವೇಶಿಸುವಾಗ, ಕಾವಲುಗಾರರು ಆ ಗುರಾಣಿಗಳನ್ನು ಹೊರತರುವರು. ತರುವಾಯ ಅವುಗಳನ್ನು ಮೊದಲಿದ್ದ ಸ್ಥಳದಲ್ಲಿಯೇ ಇಡುವರು.
12 ರೆಹಬ್ಬಾಮನು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಮೇಲಿದ್ದ ದೇವರ ಕೋಪವು ಶಾಂತವಾಯಿತು. ಹೀಗೆ ಯೆಹೋವನು ಅವನನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. ಯಾಕೆಂದರೆ ಯೆಹೂದದಲ್ಲಿ ಇನ್ನೂ ಕೆಲವು ನೀತಿವಂತರಿದ್ದರು.* ನೀತಿವಂತರು ಬಹುಶಃ, ರೆಹಬ್ಬಾಮನಂತೆ ಪಶ್ಚಾತ್ತಾಪಪಟ್ಟ ಇತರರನ್ನು ಇದು ಸೂಚಿಸುತ್ತಿರಬಹುದು. ದೇವರು ಅವರನ್ನು ಉಳಿಸಿ ಕಾಪಾಡಿದನು.
13 ರಾಜನಾದ ರೆಹಬ್ಬಾಮನು ತನ್ನ ರಾಜ್ಯವನ್ನು ಸ್ಥಿರಪಡಿಸಿಕೊಂಡು ಬಲಗೊಂಡನು. ಅವನು ಪಟ್ಟಕ್ಕೆ ಬಂದಾಗ ನಲವತ್ತೊಂದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಯೆಹೋವನು ತಾನೇ ತನ್ನ ಹೆಸರನ್ನು ಸ್ಥಾಪಿಸುವದಕ್ಕೋಸ್ಕರ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಜೆರುಸಲೇಮನ್ನು ಆರಿಸಿಕೊಂಡಿದ್ದನು. ರೆಹಬ್ಬಾಮನ ತಾಯಿಯ ಹೆಸರು ನಯಮಾ. ಆಕೆ ಅಮ್ಮೋನ್ ದೇಶದವಳು. 14 ರೆಹಬ್ಬಾಮನು ಯೆಹೋವನನ್ನು ಅನುಸರಿಸದೆ ಅವಿಧೇಯನಾಗಿ ಕೆಟ್ಟಕಾರ್ಯಗಳನ್ನು ಮಾಡಿದನು.
15 ಪ್ರವಾದಿಯಾದ ಶೆಮಾಯ ಮತ್ತು ದರ್ಶಿಯಾದ ಇದ್ದೋ ಬರೆದ ಚರಿತ್ರೆಗಳ ವಂಶಾವಳಿಗಳಲ್ಲಿ ರೆಹಬ್ಬಾಮನು ತಾನು ರಾಜನಾಗಿದ್ದಾಗ ತನ್ನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಎಲ್ಲಾ ವಿಷಯಗಳು ಬರೆಯಲ್ಪಟ್ಟಿವೆ. ಅವನ ಆಳ್ವಿಕೆಯ ಕಾಲದಲ್ಲೆಲ್ಲಾ ಅವನಿಗೂ ಯಾರೊಬ್ಬಾಮನಿಗೂ ಯುದ್ಧಗಳು ನಡೆಯುತ್ತಲೇ ಇದ್ದವು. 16 ರೆಹಬ್ಬಾಮನು ತೀರಿಕೊಂಡಾಗ ಅವನ ದೇಹವನ್ನು ದಾವೀದನಗರದಲ್ಲಿ ಹೂಳಿಟ್ಟರು. ಅವನ ನಂತರ ಅವನ ಮಗನಾದ ಅಬೀಯನು ಹೊಸ ರಾಜನಾಗಿ ಆಳಲು ಪ್ರಾರಂಭಿಸಿದನು.

*12:12: ನೀತಿವಂತರು ಬಹುಶಃ, ರೆಹಬ್ಬಾಮನಂತೆ ಪಶ್ಚಾತ್ತಾಪಪಟ್ಟ ಇತರರನ್ನು ಇದು ಸೂಚಿಸುತ್ತಿರಬಹುದು. ದೇವರು ಅವರನ್ನು ಉಳಿಸಿ ಕಾಪಾಡಿದನು.