9
ಯೇಹುವನ್ನು ಅಭಿಷೇಕಿಸುವಂತೆ ಒಬ್ಬ ಯುವಪ್ರವಾದಿಗೆ ಎಲೀಷನು ತಿಳಿಸಿದನು
ಪ್ರವಾದಿಯಾದ ಎಲೀಷನು ಪ್ರವಾದಿಗಳ ಗುಂಪಿನಿಂದ ಒಬ್ಬನನ್ನು ಕರೆದು ಅವನಿಗೆ, “ಎಣ್ಣೆಯಿರುವ ಈ ಸಣ್ಣ ಸೀಸೆಯನ್ನು ನಿನ್ನ ಕೈಗಳಲ್ಲಿ ತೆಗೆದುಕೊಂಡು ರಾಮೋತ್‌ಗಿಲ್ಯಾದಿಗೆ ಹೋಗು. ನೀನು ಅಲ್ಲಿಗೆ ಹೋದಾಗ ಯೆಹೋಷಾಫಾಟನ ಮಗನಾದ ಯೇಹುವನ್ನು ಕಂಡುಹಿಡಿ. ಯೆಹೋಷಾಫಾಟನು ನಿಂಷಿಯ ಮಗ. ಅಲ್ಲಿಗೆ ಹೋಗಿ ಅವನನ್ನು ಅವನ ಸೋದರರ ಮಧ್ಯದಿಂದ ಮೇಲಕ್ಕೆಬ್ಬಿಸಿ ಒಂದು ಒಳಕೋಣೆಗೆ ಕರೆದುಕೊಂಡು ಹೋಗು. ಯೇಹುವಿನ ತಲೆಯ ಮೇಲೆ ಈ ಸಣ್ಣ ಸೀಸೆಯಲ್ಲಿರುವ ಎಣ್ಣೆಯನ್ನು ಸುರಿದುಬಿಡು. ನಂತರ ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಿದ್ದೇನೆ!’ ಎಂದು ಹೇಳು. ಆ ಬಳಿಕ ಬಾಗಿಲನ್ನು ತೆಗೆದು ಓಡಿಬಿಡು. ಅಲ್ಲಿ ಇರಬೇಡ!” ಎಂದು ಹೇಳಿದನು.
ತರುಣ ಪ್ರವಾದಿಯು ರಾಮೋತ್‌ಗಿಲ್ಯಾದಿಗೆ ಹೋದನು. ಆ ತರುಣನು ಅಲ್ಲಿಗೆ ಬಂದಾಗ ಸೇನಾಧಿಪತಿಗಳು ಕುಳಿತಿರುವುದನ್ನು ನೋಡಿ, “ಸೇನಾಧಿಪತಿಯೇ, ನಿನಗೆ ಒಂದು ಸಂದೇಶವಿದೆ” ಎಂದು ಹೇಳಿದನು.
ಯೇಹುವು, “ನಾವೆಲ್ಲರೂ ಇಲ್ಲಿದ್ದೇವೆ. ನಮ್ಮಲ್ಲಿ ಸಂದೇಶವಿರುವುದು ಯಾರಿಗೆ?” ಎಂದು ಕೇಳಿದನು.
ಆ ತರುಣನು, “ಸಂದೇಶವು ಸೇನಾಧಿಪತಿಯಾದ ನಿನಗೆ” ಎಂದು ಹೇಳಿದನು.
ಯೇಹು ಮೇಲೆದ್ದು ಮನೆಯೊಳಕ್ಕೆ ಹೋದನು. ಆಗ ಆ ತರುಣ ಪ್ರವಾದಿಯು ಯೇಹುವಿನ ತಲೆಯ ಮೇಲೆ ಎಣ್ಣೆಯನ್ನು ಸುರಿದು ಯೇಹುವಿಗೆ, “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುವನು: ‘ಯೆಹೋವನ ಜನರಾದ ಇಸ್ರೇಲರಿಗೆ ನೂತನ ರಾಜನನ್ನಾಗಿ ನಾನು ನಿನ್ನನ್ನು ಅಭಿಷೇಕಿಸುತ್ತಿದ್ದೇನೆ. ನೀನು ನಿನ್ನ ರಾಜನಾದ ಅಹಾಬನ ಕುಟುಂಬವನ್ನು ನಾಶಗೊಳಿಸಲೇಬೇಕು. ನನ್ನ ಸೇವಕರಾದ ಪ್ರವಾದಿಗಳ ಸಾವಿಗೆ ಮತ್ತು ಯೆಹೋವನ ಸೇವಕರನ್ನು ಕೊಲ್ಲಿಸಿದುದಕ್ಕೆ ಈಜೆಬೆಲಳನ್ನು ನಾನು ಈ ರೀತಿ ಶಿಕ್ಷಿಸುತ್ತೇನೆ. ಅಹಾಬನ ಕುಟುಂಬವೆಲ್ಲ ಸಾಯುತ್ತದೆ. ಅಹಾಬನ ಕುಟುಂಬದಲ್ಲಿ ಒಬ್ಬ ಗಂಡಸಾದರೂ ಜೀವಿಸಿರಲು ನಾನು ಬಿಡುವುದಿಲ್ಲ. ಆ ಗಂಡಸು ಇಸ್ರೇಲಿನಲ್ಲಿ ಸ್ವತಂತ್ರವಾಗಿರಲಿ ಇಲ್ಲವೆ ಗುಲಾಮನಾಗಿರಲಿ ಅದು ನನಗೆ ಮುಖ್ಯವಲ್ಲ. ನೆಬಾಟನ ಮಗನಾದ ಯಾರೊಬ್ಬಮನ ಕುಟುಂಬದಂತೆ ಮತ್ತು ಅಹೀಯನ ಮಗನಾದ ಬಾಷನ ಕುಟುಂಬದಂತೆ ಅಹಾಬನ ಕುಟುಂಬವನ್ನು ನಾಶಮಾಡುತ್ತೇನೆ. 10 ಇಜ್ರೇಲಿನ ಪ್ರದೇಶದಲ್ಲಿ ಈಜೆಬೆಲಳನ್ನು ನಾಯಿಗಳು ಕಿತ್ತುತಿನ್ನುತ್ತವೆ. ಈಜೆಬೆಲಳನ್ನು ಸಮಾಧಿಮಾಡುವುದಿಲ್ಲ’ ” ಎಂದು ಹೇಳಿದನು.
ಬಳಿಕ ಯುವ ಪ್ರವಾದಿಯು ಬಾಗಿಲನ್ನು ತೆರೆದು ಓಡಿಹೋದನು.
ಯೇಹುವು ರಾಜನೆಂದು ಸೇವಕರು ಘೋಷಿಸುವರು
11 ಯೇಹುವು ತನ್ನ ರಾಜನ ಅಧಿಕಾರಿಗಳ ಬಳಿಗೆ ಹಿಂದಿರುಗಿದನು. ಒಬ್ಬ ಅಧಿಕಾರಿಯು ಯೇಹುವಿಗೆ, “ಶುಭವಾರ್ತೆಯೇ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇಕೆ?” ಎಂದು ಕೇಳಿದರು.
ಯೇಹುವು ಸೇವಕರಿಗೆ, “ನೀವು ಆ ಮನುಷ್ಯನನ್ನು ಬಲ್ಲವರಾಗಿದ್ದೀರಿ; ಅವನ ಹುಚ್ಚಾಟದ ಮಾತುಗಳೂ ನಿಮಗೆ ತಿಳಿದಿವೆ” ಎಂದು ಉತ್ತರಿಸಿದನು.
12 ಆ ಅಧಿಕಾರಿಗಳು, “ಇಲ್ಲ! ನಮಗೆ ನಿಜವನ್ನು ಹೇಳು. ಅವನು ಹೇಳಿದುದೇನು?” ಎಂದು ಕೇಳಿದರು. ಆ ತರುಣ ಪ್ರವಾದಿಯು ತಿಳಿಸಿದ್ದ ಸಂಗತಿಗಳನ್ನು ಯೇಹುವು ಆ ಅಧಿಕಾರಿಗಳಿಗೆ ಹೇಳಿದನು. ಯೇಹುವು ಅವರಿಗೆ, “ಅವನು ಹೇಳಿದ್ದೇನೆಂದರೆ, ಯೆಹೋವನು ಹೀಗೆನ್ನುವನು: ಇಸ್ರೇಲಿನ ನೂತನ ರಾಜನನ್ನಾಗಿ ನಿನ್ನನ್ನು ನಾನು ಅಭಿಷೇಕಿಸಿದ್ದೇನೆ” ಎಂದು ಹೇಳಿದನು.
13 ಆಗ ಪ್ರತಿಯೊಬ್ಬ ಅಧಿಕಾರಿಯೂ ತಮ್ಮತಮ್ಮ ನಿಲುವಂಗಿಗಳನ್ನು ತೆಗೆದು, ಅವುಗಳನ್ನು ಮೆಟ್ಟಿಲುಗಳ ಮೇಲೆ, ಯೇಹುವಿನ ಮುಂದೆ ಇಟ್ಟರು. ಅನಂತರ ಅವರು ತುತ್ತೂರಿಯನ್ನೂದಿ, “ಯೇಹು ರಾಜನು!” ಎಂದು ಘೋಷಿಸಿದರು.
ಯೇಹು ಇಜ್ರೇಲಿಗೆ ಹೋಗುವನು
14 ಯೆಹೋಷಾಫಾಟನ ಮಗನೂ ನಿಂಷಿಯ ಮೊಮ್ಮಗನೂ ಆದ ಯೇಹುವು ಯೋರಾವುನ ವಿರುದ್ಧ ಒಳಸಂಚುಮಾಡಿದನು.
ಆ ಸಮಯದಲ್ಲಿ ರಾಮೋತ್‌ಗಿಲ್ಯಾದನ್ನು ಅರಾಮ್ಯರ ರಾಜನಾದ ಹಜಾಯೇಲನಿಂದ ರಕ್ಷಿಸಲು, ಯೋರಾವುನೂ ಇಸ್ರೇಲರೂ ಪ್ರಯತ್ನಿಸಿದ್ದರು. 15 ಆದರೆ ರಾಜನಾದ ಯೋರಾವುನಿಗೆ ಅರಾಮ್ಯರು ಗಾಯಗೊಳಿಸಿದ್ದರಿಂದ ಅವನು ವಾಸಿಮಾಡಿಕೊಳ್ಳಲು ಇಜ್ರೇಲಿಗೆ ಹಿಂದಿರುಗಿ ಬಂದಿದ್ದನು. (ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯೋರಾವುನು ಹೋರಾಟ ಮಾಡಿದಾಗ ಅರಾಮ್ಯರು ಅವನನ್ನು ಗಾಯಗೊಳಿಸಿದ್ದರು.)
ಯೇಹು ಅಧಿಕಾರಿಗಳಿಗೆ, “ನಾನು ನೂತನ ರಾಜನೆಂದು ನೀವು ಒಪ್ಪಿಕೊಂಡರೆ, ಈ ಸುದ್ದಿಯನ್ನು ಇಜ್ರೇಲಿನಲ್ಲಿ ಹೇಳಲು ಯಾರೂ ನಗರದಿಂದ ತಪ್ಪಿಸಿಕೊಂಡು ಹೋಗಲು ಅವಕಾಶ ಕೊಡದಿರಿ” ಎಂದು ಹೇಳಿದನು.
16 ಯೋರಾವುನು ಇಜ್ರೇಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು. ಯೇಹು ರಥದಲ್ಲಿ ಇಜ್ರೇಲಿಗೆ ಹೋದನು. ಯೆಹೂದದ ಅರಸನಾದ ಅಹಜ್ಯನೂ ಯೋರಾವುನನ್ನು ನೋಡಲು ಇಜ್ರೇಲಿಗೆ ಬಂದಿದ್ದನು.
17 ಇಜ್ರೇಲಿನ ಬುರುಜಿನಲ್ಲಿ ಒಬ್ಬ ಕಾವಲುಗಾರನು ನಿಂತಿದ್ದನು. ಅವನು ಯೇಹುವಿನ ದೊಡ್ಡಗುಂಪು ಬರುತ್ತಿರುವುದನ್ನು ನೋಡಿದನು. ಅವನು, “ನಾನು ಜನರ ದೊಡ್ಡ ಗುಂಪನ್ನು ನೋಡುತ್ತಿರುವೆನು” ಎಂದು ಹೇಳಿದನು.
ಯೋರಾವುನು, “ಅವರನ್ನು ಸಂಧಿಸಲು ಯಾರನ್ನಾದರೂ ಕುದುರೆಯ ಮೇಲೆ ಕಳುಹಿಸಿ, ‘ಶುಭವಾರ್ತೆಯುಂಟೋ?’ ಎಂದು ಅವನು ಅವರನ್ನು ಕೇಳಲಿ” ಎಂದು ಹೇಳಿದನು.
18 ಯೇಹುವನ್ನು ಸಂಧಿಸಲು ಒಬ್ಬನು ಕುದುರೆಯ ಮೇಲೆ ಹೋಗಿ, “ರಾಜನಾದ ಯೋರಾವುನು ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಾನೆ” ಅಂದನು.
ಯೇಹುವು, “ನಮ್ಮ ಶುಭದಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
ಕಾವಲುಗಾರನು ಯೋರಾವುನಿಗೆ, “ಆ ಗುಂಪಿನ ಬಳಿಗೆ ಹೋದ ಸಂದೇಶಕನು, ಈವರೆವಿಗೂ ಹಿಂದಿರುಗಿ ಬರಲೇ ಇಲ್ಲ” ಎಂದು ಹೇಳಿದನು.
19 ಆಗ ಯೋರಾವುನು ಎರಡನೆಯವನನ್ನು ಕುದುರೆಯ ಮೇಲೆ ಕಳುಹಿಸಿದನು. ಅವನು ಯೇಹುವಿನ ಗುಂಪಿನ ಬಳಿಗೆ ಬಂದು, “ರಾಜನಾದ ಯೋರಾವುನು, ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಿರುವನು” ಎಂದು ಹೇಳಿದನು.
ಯೇಹುವು, “ನಮ್ಮ ಶುಭದಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
20 ಕಾವಲುಗಾರನು ಯೋರಾವುನಿಗೆ, “ಆ ಗುಂಪಿನ ಬಳಿಗೆ ಹೋದ ಎರಡನೆಯವನೂ ಈವರೆವಿಗೂ ಹಿಂದುರುಗಿ ಬರಲೇ ಇಲ್ಲ. ರಥವನ್ನು ಓಡಿಸುತ್ತಿರುವವನು ಹುಚ್ಚನಂತೆ ರಥವನ್ನು ಓಡಿಸುತ್ತಿರುವುದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವಿರಬೇಕು!” ಎಂದು ಹೇಳಿದನು.
21 ಯೋರಾವುನು, “ನನ್ನ ರಥವನ್ನು ಸಿದ್ಧಗೊಳಿಸು!” ಎಂದು ಹೇಳಿದನು.
ಯೋರಾವುನ ಸೇವಕನು ರಥವನ್ನು ಸಿದ್ಧಗೊಳಿಸಿದನು. ಇಸ್ರೇಲಿನ ರಾಜನಾದ ಯೋರಾವುನು ಮತ್ತು ಯೆಹೂದದ ರಾಜನಾದ ಅಹಜ್ಯನು ಯೇಹುವನ್ನು ಭೇಟಿಮಾಡಲು ತಮ್ಮ ರಥಗಳಲ್ಲಿ ಹೋದರು. ಅವರು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಯೇಹುವನ್ನು ಸಂಧಿಸಿದರು.
22 ಯೋರಾವುನು ಯೇಹುವನ್ನು, “ಶುಭವಾರ್ತೆಯುಂಟೋ?” ಎಂದು ಕೇಳಿದನು.
ಯೇಹುವು, “ನಿನ್ನ ತಾಯಿಯಾದ ಈಜೆಬೆಲಳು ಅನೇಕ ಅನೈತಿಕ ಮತ್ತು ಮಾಂತ್ರಿಕ ಕಾರ್ಯಗಳನ್ನು ಮಾಡುತ್ತಿರುವ ತನಕ ಶುಭವಿರುವುದಿಲ್ಲ” ಎಂದು ಉತ್ತರಿಸಿದನು.
23 ಯೋರಾವುನು ಓಡಿಹೋಗಲು ತನ್ನ ಕುದುರೆಗಳನ್ನು ತಿರುಗಿಸಿಕೊಂಡನು. ಯೋರಾವುನು ಅಹಜ್ಯನಿಗೆ, “ಅಹಜ್ಯನೇ, ಇದು ಒಂದು ತಂತ್ರ!” ಎಂದು ಹೇಳಿದನು.
24 ಆದರೆ ಯೇಹು ತನ್ನ ಬಿಲ್ಲನ್ನು ಸೆಳೆದು, ಶಕ್ತಿಯನ್ನೆಲ್ಲ ಒಗ್ಗೂಡಿಸಿ ಯೋರಾವುನ ಬೆನ್ನಿಗೆ ಬಾಣದಿಂದ ಹೊಡೆದನು. ಬಾಣವು ಯೋರಾವುನ ಹೃದಯವನ್ನು ಛೇದಿಸಿತು. ಯೋರಾವುನು ತನ್ನ ರಥದಲ್ಲಿಯೇ ಸತ್ತುಬಿದ್ದನು.
25 ಯೇಹು ತನ್ನ ರಥದ ಸಾರಥಿಯಾದ ಬಿದ್ಕರನಿಗೆ, “ಯೋರಾವುನ ದೇಹವನ್ನು ಎತ್ತಿ ಇಜ್ರೇಲಿಯನಾದ ನಾಬೋತನ ಹೊಲದಲ್ಲಿ ಎಸೆದುಬಿಡು. ನಾನು ಮತ್ತು ನೀನು ಯೋರಾವುನ ತಂದೆಯಾದ ಅಹಾಬನ ಸಂಗಡ ಹೋಗುತ್ತಿರುವಾಗ 26 ಯೆಹೋವನು, ‘ನೀನು ನಿನ್ನೆ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ಯಾವ ಹೊಲದಲ್ಲಿ ಸುರಿಸಿದೆಯೋ ಅದೇ ಹೊಲದಲ್ಲಿ ನಿನಗೆ ಮುಯ್ಯಿ ತೀರಿಸುವೆನು’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುವುದಲ್ಲವೇ? ಯೆಹೋವನ ಮಾತು ನೆರವೇರುವಂತೆ ಯೋರಾವುನ ದೇಹವನ್ನು ತೆಗೆದು ಅದೇ ಹೊಲದಲ್ಲಿ ಎಸೆದುಬಿಡು!” ಎಂದು ಹೇಳಿದನು.
27 ಯೆಹೂದದ ರಾಜನಾದ ಅಹಜ್ಯನು ಇದನ್ನು ಕಂಡು ತೋಟದ ಮನೆಯ ಮೂಲಕ ಓಡಿಹೋದನು. ಯೇಹು ಅವನನ್ನು ಹಿಂಬಾಲಿಸಿಕೊಂಡು ಹೋಗಿ, “ಅಹಜ್ಯನನ್ನೂ ಅವನ ರಥದಲ್ಲಿಯೇ ಹೊಡೆಯಿರಿ!” ಎಂದು ಹೇಳಿದನು.
ಯೇಹುವಿನ ಜನರು ಅಹಜ್ಯನನ್ನು ಇಬ್ಲೆಯಾಮಿನ ಬಳಿಯಿರುವ ಗೂರ್‌ನಲ್ಲಿ ಹೊಡೆದುಹಾಕಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋದರೂ ಅಲ್ಲಿ ಸತ್ತುಹೋದನು. 28 ಅಹಜ್ಯನ ಸೇವಕರು ಅವನ ದೇಹವನ್ನು ಜೆರುಸಲೇಮಿಗೆ ತಂದರು. ಅವನನ್ನು ದಾವೀದ ನಗರದಲ್ಲಿ ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿ ಮಾಡಿದರು.
29 ಯೋರಾವುನು ಇಸ್ರೇಲಿನ ರಾಜನಾಗಿದ್ದ ಹನ್ನೊಂದನೆಯ ವರ್ಷದಲ್ಲಿ ಅಹಜ್ಯನು ಯೆಹೂದದ ರಾಜನಾದನು.
ಈಜೆಬೆಲಳ ಭೀಕರ ಸಾವು
30 ಯೇಹುವು ಇಜ್ರೇಲಿಗೆ ಹೋದನು. ಈಜೆಬೆಲಳಿಗೆ ಈ ಸುದ್ದಿಯು ತಿಳಿಯಿತು. ಅವಳು ತಲೆಕೂದಲನ್ನು ಸುಂದರವಾಗಿ ಕಟ್ಟಿಕೊಂಡು, ಅಲಂಕರಿಸಿಕೊಂಡಳು. ನಂತರ ಅವಳು ಹೊರಗೆ ನೋಡುತ್ತಾ ಕಿಟಕಿಯ ಹತ್ತಿರ ನಿಂತುಕೊಂಡಳು. 31 ಯೇಹು ನಗರದೊಳಕ್ಕೆ ಪ್ರವೇಶಿಸಿದನು. ಈಜೆಬೆಲಳು, “ಜಿಮ್ರಿ, ಕ್ಷೇಮವೇ! ಅವನಂತೆಯೇ ನೀನೂ ನಿನ್ನ ಒಡೆಯನನ್ನು ಕೊಂದುಹಾಕಿದೆ!” ಎಂದಳು.
32 ಯೇಹು ಕಿಟಕಿಯ ಕಡೆ ಮೇಲೆ ನೋಡಿದನು. ಅವನು, “ನನ್ನ ಪಕ್ಷದಲ್ಲಿರುವವರು ಯಾರು? ಯಾರಿದ್ದೀರಿ?” ಎಂದನು.
ಆ ಕಿಟಕಿಯಿಂದ ಇಬ್ಬರು ಮೂವರು ಕಂಚುಕಿಗಳು ಯೇಹುವಿನತ್ತ ನೋಡಿದರು. 33 ಯೇಹುವು “ಈಜೆಬೆಲಳನ್ನು ಹೊರಕ್ಕೆ ಎಸೆಯಿರಿ!” ಎಂದು ಅವರಿಗೆ ಹೇಳಿದನು.
ಆಗ ಕಂಚುಕಿಗಳು ಈಜೆಬೆಲಳನ್ನು ಕೆಳಕ್ಕೆ ಎಸೆದರು. ಈಜೆಬೆಲಳ ರಕ್ತವು ಗೋಡೆಗಳ ಮೇಲೆ ಮತ್ತು ಕುದುರೆಗಳ ಮೇಲೆ ಚಿಮ್ಮಿತು. ಕುದುರೆಗಳು ಈಜೆಬೆಲಳ ದೇಹದ ಮೇಲೆ ತುಳಿದಾಡಿದವು. 34 ಯೇಹುವು ಮನೆಯೊಳಕ್ಕೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು. ನಂತರ ಅವನು, “ಈಗ ಶಾಪಗ್ರಸ್ತಳಾದ ಆ ಸ್ತ್ರೀಯನ್ನು ನೋಡಿ. ಅವಳು ರಾಜನ ಮಗಳಾದ್ದರಿಂದ ಸಮಾಧಿ ಮಾಡಿ” ಎಂದು ಹೇಳಿದನು.
35 ಈಜೆಬೆಲಳನ್ನು ಸಮಾಧಿಮಾಡಲು ಜನರು ಹೋದರು. ಆದರೆ ಅವರಿಗೆ ಅವಳ ದೇಹವು ಸಿಗಲಿಲ್ಲ. ಅವರಿಗೆ ಅವಳ ತಲೆಬುರುಡೆ, ಕೈಕಾಲುಗಳು ಮಾತ್ರ ಸಿಕ್ಕಿದವು. 36 ಜನರು ಹಿಂದಿರುಗಿ ಬಂದು ಯೇಹುವಿಗೆ ಅದನ್ನು ಹೇಳಿದರು. ಯೇಹುವು, “ಯೆಹೋವನು ತನ್ನ ಸೇವಕನೂ ತಿಷ್ಬೀಯನೂ ಆದ ಎಲೀಯನಿಗೆ ಈ ರೀತಿ ಸಂದೇಶ ನೀಡಲು ಹೇಳಿದ್ದನು. ಎಲೀಯನು ಹೇಳಿದ್ದೇನೆಂದರೆ: ಇಜ್ರೇಲ್ ಪ್ರದೇಶದಲ್ಲಿ ಈಜೆಬೆಲಳ ದೇಹವನ್ನು ನಾಯಿಗಳು ತಿನ್ನುತ್ತವೆ. 37 ಇಜ್ರೇಲ್ ಪ್ರದೇಶದ ಹೊಲದಲ್ಲಿ ಈಜೆಬೆಲಳ ದೇಹವು ಸಗಣಿಯಂತಿರುತ್ತದೆ. ಈಜೆಬೆಲಳ ದೇಹವನ್ನು ಜನರು ಗುರುತಿಸಲಾಗುವುದಿಲ್ಲ!” ಎಂದು ಹೇಳಿದ್ದನು.