21
ಮನಸ್ಸೆಯು ತನ್ನ ಕೆಟ್ಟ ಆಳ್ವಿಕೆಯನ್ನು ಯೆಹೂದದಲ್ಲಿ ಆರಂಭಿಸಿದನು
ಮನಸ್ಸೆಯು ಆಳಲಾರಂಭಿಸಿದಾಗ ಅವನಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವನು ಐವತ್ತೈದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಪ್ಚಿಬಾ.
ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಇಸ್ರೇಲರು ತಮ್ಮ ದೇಶಕ್ಕೆ ಬಂದಾಗ ಯೆಹೋವನು ಹೊರಗಟ್ಟಿದ ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಮನಸ್ಸೆಯು ಮಾಡಿದನು. ಮನಸ್ಸೆಯು ತನ್ನ ತಂದೆಯಾದ ಹಿಜ್ಕೀಯನು ನಾಶಪಡಿಸಿದ್ದ ಉನ್ನತಸ್ಥಳಗಳನ್ನು ಮತ್ತೆ ನಿರ್ಮಿಸಿದನು. ಮನಸ್ಸೆಯು ಇಸ್ರೇಲಿನ ರಾಜನಾದ ಅಹಾಬನಂತೆ ಬಾಳನಿಗಾಗಿ ಯಜ್ಞವೇದಿಕೆಯನ್ನು ಮತ್ತು ಅಶೇರಸ್ತಂಭಗಳನ್ನು ನಿರ್ಮಿಸಿದನು. ಮನಸ್ಸೆಯು ಪರಲೋಕದ ನಕ್ಷತ್ರಗಳನ್ನು ಆರಾಧಿಸಿ ಅವುಗಳ ಸೇವೆಮಾಡಿದನು. ಮನಸ್ಸೆಯು ಸುಳ್ಳುದೇವತೆಗಳನ್ನು ಗೌರವಿಸಲು ದೇವಾಲಯದಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. (“ನಾನು ನನ್ನ ಹೆಸರನ್ನು ಜೆರುಸಲೇಮಿನಲ್ಲಿ ಸ್ಥಾಪಿಸುತ್ತೇನೆ” ಎಂದು ಯೆಹೋವನು ಮಾತನಾಡುವಾಗ ಹೇಳುತ್ತಿದ್ದ ಸ್ಥಳವು ಇದೇ ಆಗಿತ್ತು.) ಮನಸ್ಸೆಯು ಪರಲೋಕದ ನಕ್ಷತ್ರಗಳಿಗಾಗಿ ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. ಮನಸ್ಸೆಯು ತನ್ನ ಮಗನನ್ನು ಆಹುತಿಕೊಟ್ಟು ಅವನನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. ಮನಸ್ಸೆಯು ಭವಿಷ್ಯತ್ಕಾಲವನ್ನು ಅರಿಯಲು ಅನೇಕ ಮಾರ್ಗಗಳಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಪ್ರೇತಾತ್ಮಗಳನ್ನು ವಶಪಡಿಸಿಕೊಂಡಿರುವ ಮಾಂತ್ರಿಕರನ್ನು ಮತ್ತು ತಾಂತ್ರಿಕರನ್ನು ಭೇಟಿಮಾಡಿದನು.
ಯೆಹೋವನು ಕೆಟ್ಟದ್ದೆಂದು ಹೇಳಿದ ಅನೇಕಾನೇಕ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಯೆಹೋವನು ಕೋಪಗೊಳ್ಳಲು ಇದು ಕಾರಣವಾಯಿತು. ಮನಸ್ಸೆಯು ಅಶೇರ ವಿಗ್ರಹಗಳನ್ನು ಕೆತ್ತಿಸಿದನು. ಅವನು ಈ ವಿಗ್ರಹಗಳನ್ನು ಆಲಯದಲ್ಲಿ ಇರಿಸಿದನು. ಯೆಹೋವನು ದಾವೀದನಿಗೆ ಮತ್ತು ದಾವೀದನ ಮಗನಾದ ಸೊಲೊಮೋನನಿಗೆ ಈ ಆಲಯವನ್ನು ಕುರಿತು ಹೀಗೆ ಹೇಳಿದ್ದನು: “ಇಸ್ರೇಲಿನಲ್ಲಿರುವ ಎಲ್ಲಾ ನಗರಗಳಿಂದ ನಾನು ಜೆರುಸಲೇಮನ್ನು ಆರಿಸಿದ್ದೇನೆ. ನಾನು ನನ್ನ ಹೆಸರನ್ನು ಜೆರುಸಲೇಮಿನ ಆಲಯದಲ್ಲಿ ಎಂದೆಂದಿಗೂ ಇರಿಸುತ್ತೇನೆ. ಇಸ್ರೇಲಿನ ಜನರು ತಮ್ಮ ದೇಶವನ್ನು ತೊರೆದು ಅಲೆದಾಡದೆ ತಮ್ಮ ಪೂರ್ವಿಕರಿಗೆ ಕೊಡಲ್ಪಟ್ಟ ದೇಶದಲ್ಲಿಯೇ ನೆಲೆಸುವಂತೆ ನಾನು ಮಾಡುತ್ತೇನೆ. ನಾನು ನನ್ನ ಸೇವಕನಾದ ಮೋಶೆಯ ಮೂಲಕ ಅವರಿಗೆ ಬೋಧಿಸಿದ ಆಜ್ಞೆಗಳಿಗೆಲ್ಲಾ ಅವರು ವಿಧೇಯರಾಗಿದ್ದರೆ, ನಾನು ಅವರನ್ನು ಅವರ ದೇಶದಲ್ಲಿ ನೆಲೆಗೊಳಿಸುವೆನು.” ಆದರೆ ಜನರು ದೇವರ ಮಾತನ್ನು ಆಲಿಸಲಿಲ್ಲ. ಇಸ್ರೇಲರು ಕಾನಾನಿಗೆ ಬರುವುದಕ್ಕೆ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನಾಂಗಗಳು ಮಾಡಿದ್ದಕ್ಕಿಂತ ಹೆಚ್ಚು ಕೆಟ್ಟಕಾರ್ಯಗಳನ್ನು ಮನಸ್ಸೆಯಿಂದ ಪ್ರೇರಿತರಾಗಿ ಮಾಡಿದರು. ಇಸ್ರೇಲರು ಅವರ ದೇಶಗಳನ್ನು ವಶಪಡಿಸಿಕೊಳ್ಳಲು ಬಂದಾಗ ಯೆಹೋವನು ಆ ಜನಾಂಗಗಳನ್ನು ನಾಶಪಡಿಸಿದನು.
10 ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಂದ ಈ ಸಂಗತಿಗಳನ್ನು ತಿಳಿಸಿದನು. 11 “ಯೆಹೂದದ ರಾಜನಾದ ಮನಸ್ಸೆಯು ತನಗಿಂತಲೂ ಮುಂಚೆ ಇದ್ದ ಅಮೋರಿಯರಿಗಿಂತ ಹೆಚ್ಚು ಅಸಹ್ಯವಾದ ಕೃತ್ಯಗಳನ್ನು ಮಾಡಿದನು. ಮನಸ್ಸೆಯು ತನ್ನ ವಿಗ್ರಹಗಳಿಂದ ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದನು. 12 ಆದ್ದರಿಂದ ಇಸ್ರೇಲಿನ ದೇವರು ಹೀಗೆನ್ನುತ್ತಾನೆ: ‘ಇಗೋ, ಜೆರುಸಲೇಮಿಗೂ ಯೆಹೂದಕ್ಕೂ ಎಷ್ಟು ತೊಂದರೆಯನ್ನು ತರುತ್ತೇನೆಂದರೆ, ಅದನ್ನು ಕೇಳಿದ ಯಾರಾದರೂ ನಡುಗಿಬಿಡಬೇಕು. 13 ನಾನು ಸಮಾರ್ಯದ ಮೇಲೆ ಚಾಚಿದ ಮಟ್ಟಗೋಲನ್ನೂ ಅಹಾಬನ ಕುಟುಂಬದ ಮೇಲಿಟ್ಟ ತೂಕದ ಗುಂಡನ್ನೂ ಜೆರುಸಲೇಮಿನ ಮೇಲೆ ಚಾಚುತ್ತೇನೆ. ಒಬ್ಬನು ಒಂದು ಪಾತ್ರೆಯನ್ನು ಒರೆಸಿ, ಅದನ್ನು ಕೆಳಮುಖವಾಗಿ ತಿರುಗಿಸುವಂತೆ ನಾನು ಜೆರುಸಲೇಮಿಗೆ ಮಾಡುತ್ತೇನೆ. 14 ಆದರೂ ಅಲ್ಲಿ ನನ್ನ ಕೆಲವು ಜನರು ಉಳಿದುಕೊಳ್ಳುತ್ತಾರೆ. ನಾನು ಅವರನ್ನು ಬಿಟ್ಟುಬಿಡುತ್ತೇನೆ. ನಾನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುತ್ತೇನೆ. ಅವರ ಶತ್ರುಗಳು ಅವರನ್ನು ಸೆರೆಯಾಳುಗಳನ್ನಾಗಿ ಇಟ್ಟುಕೊಳ್ಳುವರು; ಯುದ್ಧಗಳಲ್ಲಿ ಸೈನಿಕರು ವಶಪಡಿಸಿಕೊಳ್ಳುವ ಬೆಲೆಯುಳ್ಳ ವಸ್ತುಗಳಂತೆ ಅವರಿರುವರು. 15 ಏಕೆಂದರೆ ನಾನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ನನ್ನ ಜನರು ಮಾಡಿದರು. ಅವರ ಪೂರ್ವಿಕರು ಈಜಿಪ್ಟಿನಿಂದ ಹೊರಬಂದ ದಿನದಿಂದ ಅವರು ನನ್ನನ್ನು ರೇಗಿಸಿದರು. 16 ಮನಸ್ಸೆಯು ಅನೇಕ ನಿರಪರಾಧಿಗಳನ್ನು ಕೊಂದುಹಾಕಿದನು; ಜೆರುಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ರಕ್ತದಿಂದ ತುಂಬಿಸಿದನು. ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದ್ದರ ಜೊತೆಗೆ ಅವನ ಈ ಪಾಪಗಳು ಕೂಡಿಕೊಂಡವು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೆಹೂದವು ಮಾಡುವಂತೆ ಮನಸ್ಸೆಯು ಪ್ರೇರೇಪಿಸಿದನು.’ ”
17  “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮನಸ್ಸೆಯು ಮಾಡಿದ ಎಲ್ಲಾ ಕಾರ್ಯಗಳನ್ನೂ ಅವನು ಮಾಡಿದ ಪಾಪಕೃತ್ಯಗಳನ್ನೂ ಬರೆಯಲಾಗಿದೆ. 18 ಮನಸ್ಸೆಯು ಸತ್ತುಹೋದನು ಮತ್ತು ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮನಸ್ಸೆಯನ್ನು “ಉಜ್ಜನ ವನ”ದಲ್ಲಿ ಸಮಾಧಿಮಾಡಿದರು. ಈ ವನವು ಅವನ ಸ್ವಂತ ಮನೆಯಲ್ಲಿತ್ತು. ಮನಸ್ಸೆಯ ನಂತರ ಅವನ ಮಗನಾದ ಆಮೋನನು ಹೊಸ ರಾಜನಾದನು.
ಆಮೋನನ ಸ್ವಲ್ಪಕಾಲದ ಆಳ್ವಿಕೆ
19 ಆಮೋನನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಎರಡು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಮೆಷುಲ್ಲೆಮೆತ್. ಅವಳು ಯೊಟ್ಟಾ ಊರಿನ ಹಾರೂಚನ ಮಗಳು.
20 ಆಮೋನನು ಅವನ ತಂದೆಯಾದ ಮನಸ್ಸೆಯಂತೆ ಯೆಹೋವನು ಕೆಟ್ಟದ್ದೆಂದು ಹೇಳಿದವುಗಳನ್ನೆಲ್ಲಾ ಮಾಡಿದನು. 21 ಆಮೋನನು ತನ್ನ ತಂದೆಯಂತೆ ಜೀವಿಸಿದ್ದನು. ತನ್ನ ತಂದೆಯು ಪೂಜಿಸಿದ ವಿಗ್ರಹಗಳನ್ನು ಆಮೋನನು ಪೂಜಿಸಿದನು. 22 ಆಮೋನನು ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ತ್ಯಜಿಸಿದನು ಮತ್ತು ಯೆಹೋವನಿಗೆ ಮೆಚ್ಚಿಗೆಯಾದ ಮಾರ್ಗದಲ್ಲಿ ಜೀವಿಸಲಿಲ್ಲ.
23 ಆಮೋನನ ಸೇವಕರು ಅವನ ವಿರುದ್ಧ ಒಳಸಂಚು ಮಾಡಿದರು ಮತ್ತು ಅವನ ಸ್ವಂತ ಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು. 24 ರಾಜನಾದ ಆಮೋನನ ವಿರುದ್ಧ ಒಳಸಂಚು ಮಾಡಿದ ಅವನ ಅಧಿಕಾರಿಗಳನ್ನು ಆ ದೇಶದ ಜನಸಾಮಾನ್ಯರು ಕೊಂದುಹಾಕಿದರು. ಆಮೋನನ ಮಗನಾದ ಯೋಷೀಯನನ್ನು ಜನರು ಅವನ ನಂತರ ಹೊಸ ರಾಜನನ್ನಾಗಿ ಮಾಡಿದರು.
25  “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಆಮೋನನು ಮಾಡಿದ ಇತರ ಕಾರ್ಯಗಳನ್ನು ಕುರಿತು ಬರೆಯಲಾಗಿದೆ. 26 ಆಮೋನನನ್ನು ಉಜ್ಜನವನದಲ್ಲಿ ಅವನ ಸ್ಮಶಾನದಲ್ಲಿ ಸಮಾಧಿಮಾಡಿದರು. ಆಮೋನನ ಮಗನಾದ ಯೋಷೀಯನು ಹೊಸ ರಾಜನಾದನು.