7
ದೇವಾಲಯ ಕಟ್ಟಲು ದಾವೀದನ ಅಪೇಕ್ಷೆ
ದಾವೀದನು ತನ್ನ ಅರಮನೆಯಲ್ಲಿ ಸುಖವಾಗಿ ವಾಸಿಸುವಂತೆಯೂ ಅವನ ಸುತ್ತಲಿನ ಶತ್ರುಗಳಿಂದ ಭಯವಿಲ್ಲದಂತೆಯೂ ಯೆಹೋವನು ಮಾಡಿದನು. ಆಗ ರಾಜನಾದ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದಿಂದ ನಿರ್ಮಿಸಿದ ವೈಭವದ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಪವಿತ್ರ ಪೆಟ್ಟಿಗೆಯನ್ನು ಇನ್ನೂ ಗುಡಾರದಲ್ಲಿಯೇ ಇಟ್ಟಿದ್ದೇನೆ. ಅದಕ್ಕಾಗಿ ಒಂದು ಆಲಯವನ್ನು ಕಟ್ಟಬೇಕು” ಎಂದು ಹೇಳಿದನು.
ನಾತಾನನು ರಾಜನಾದ ದಾವೀದನಿಗೆ, “ನೀನು ನಿಜವಾಗಿಯೂ ಏನನ್ನು ಮಾಡಬೇಕೆಂದಿರುವೆಯೋ ಅದನ್ನು ಮಾಡು; ಯೆಹೋವನು ನಿನ್ನೊಂದಿಗಿದ್ದಾನೆ” ಎಂದು ಹೇಳಿದನು.
ಆದರೆ ಅಂದು ರಾತ್ರಿ ನಾತಾನನಿಗೆ ಯೆಹೋವನು ಹೀಗೆ ಹೇಳಿದನು:
 
“ನೀನು ನನ್ನ ಸೇವಕನಾದ ದಾವೀದನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸು: ‘ನನ್ನ ವಾಸಕ್ಕಾಗಿ ಆಲಯವನ್ನು ಕಟ್ಟುವ ವ್ಯಕ್ತಿಯು ನೀನಲ್ಲ. ಈಜಿಪ್ಟಿನಿಂದ ಇಸ್ರೇಲರನ್ನು ಹೊರತಂದ ಸಮಯದಲ್ಲಿ ನಾನು ಆಲಯದಲ್ಲಿ ವಾಸಮಾಡಲಿಲ್ಲ. ನಾನು ಗುಡಾರದಲ್ಲಿ ವಾಸಮಾಡುತ್ತಾ ಸಂಚರಿಸಿದೆನು. ಗುಡಾರವೇ ನನ್ನ ಆಲಯವಾಗಿತ್ತು. ನನಗಾಗಿ ದೇವದಾರು ಮರದಿಂದ ಆಲಯ ಕಟ್ಟುವಂತೆ ಇಸ್ರೇಲರ ಯಾವ ಕುಲದವರನ್ನಾಗಲಿ ನಾನು ಕೇಳಿಕೊಳ್ಳಲಿಲ್ಲ ಎಂಬುದಾಗಿ ಯೆಹೋವನು ತಿಳಿಸುತ್ತಾನೆ’ ಎಂದು ಹೇಳು.
“ನೀನು ಇದನ್ನು ನನ್ನ ಸೇವಕನಾದ ದಾವೀದನಿಗೆ ಹೇಳಲೇಬೇಕು: ‘ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ಹುಲ್ಲುಗಾವಲಿನಲ್ಲಿ ಕುರಿಕಾಯುತ್ತಿದ್ದ ನಿನ್ನನ್ನು ನಾನು ನನ್ನ ಜನರಾದ ಇಸ್ರೇಲರಿಗೆ ನಾಯಕನಾಗಿ ಮಾಡಲು ಕರೆತಂದೆನು. ನೀನು ಹೋದ ಸ್ಥಳಗಳಲ್ಲೆಲ್ಲಾ ನಿನ್ನೊಂದಿಗಿದ್ದೆನು. ನಿನ್ನ ಶತ್ರುಗಳನ್ನು ಸೋಲಿಸಿದೆನು. ನಾನು ನಿನ್ನನ್ನು ಲೋಕದ ಇತರ ಮಹಾಪುರುಷರಂತೆಯೇ ಪ್ರಸಿದ್ಧಿಗೊಳಿಸುವೆನು. 10-11 ನಾನು ನನ್ನ ಜನರಾದ ಇಸ್ರೇಲರಿಗೆ ಒಂದು ಸ್ಥಳವನ್ನು ಆರಿಸಿಕೊಂಡು ಅವರನ್ನು ನೆಲೆಗೊಳಿಸಿದ್ದೇನೆ. ವಾಸಿಸುವುದಕ್ಕಾಗಿ ಅವರ ಸ್ವಂತ ಸ್ಥಳವನ್ನು ಅವರಿಗೆ ಕೊಟ್ಟಿದ್ದೇನೆ. ಆದ್ದರಿಂದ ಈಗ ಅವರು ಅಲೆದಾಡುವ ಅಗತ್ಯವೇ ಇಲ್ಲ. ಮೊದಲು ನನ್ನ ಜನರಾದ ಇಸ್ರೇಲರನ್ನು ಮುನ್ನಡೆಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದೆನು. ದುಷ್ಟಜನರು ಅವರಿಗೆ ತೊಂದರೆ ಕೊಟ್ಟರು. ಆದರೆ ಅದು ಈಗ ಸಂಭವಿಸುವುದಿಲ್ಲ. ನಿನಗೆ ಶತ್ರು ಭಯವಿಲ್ಲದಂತೆ ಮಾಡುತ್ತೇನೆ; ನಿನ್ನ ಕುಟುಂಬದಿಂದಲೇ ರಾಜರುಗಳನ್ನು ಬರಮಾಡುತ್ತೇನೆ.
12 “ ‘ನಿನ್ನ ದಿನಗಳು ಮುಗಿದುಹೋಗುತ್ತವೆ; ನೀನು ನಿನ್ನ ಪೂರ್ವಿಕರ ಜೊತೆಯಲ್ಲಿ ಸೇರುತ್ತಿ. ಆ ಸಮಯದಲ್ಲಿ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ರಾಜನನ್ನಾಗಿ ಮಾಡಿ ಅವನ ರಾಜ್ಯವನ್ನು ಭದ್ರಗೊಳಿಸುತ್ತೇನೆ. 13 ಅವನು ನನ್ನ ಹೆಸರಿಗಾಗಿ ಒಂದು ಆಲಯವನ್ನು ನಿರ್ಮಿಸುತ್ತಾನೆ. ಅವನ ರಾಜ್ಯವು ಸದಾಕಾಲಕ್ಕೂ ಇರುವಂತೆ ನಾನು ಮಾಡುತ್ತೇನೆ. 14 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ಅವನು ಪಾಪಗಳನ್ನು ಮಾಡಿದರೆ ಇತರ ಜನರ ಮೂಲಕ ನಾನು ಅವನನ್ನು ದಂಡಿಸುವೆನು. ಅವರೇ ನನ್ನ ಚಾವಟಿಗಳಾಗಿರುತ್ತಾರೆ. 15 ಆದರೆ ನಾನು ಅವನನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವನು ಯಾವಾಗಲೂ ನನ್ನ ಕರುಣಾಶ್ರಯದಲ್ಲಿರುವನು. ಸೌಲನ ಮೇಲಿಟ್ಟಿದ್ದ ಪ್ರೀತಿಯನ್ನು ಮತ್ತು ದಯೆಯನ್ನು ಹಿಂತೆಗೆದುಕೊಂಡೆನು. ಸೌಲನನ್ನು ನಿನ್ನ ಎದುರಿನಿಂದ ನಾನು ದೂರ ತಳ್ಳಿದೆನು. ನಾನು ನಿನ್ನ ಕುಟುಂಬಕ್ಕೆ ಹಾಗೆ ಮಾಡುವುದಿಲ್ಲ. 16 ನಿನ್ನ ಕುಟುಂಬ ಮತ್ತು ರಾಜ್ಯ ಎಂದೆಂದಿಗೂ ಸ್ಥಿರವಾಗಿರುವುದು. ನಿನ್ನ ಸಿಂಹಾಸನವು ಶಾಶ್ವತವಾಗಿರುವುದು.’ ”
 
17 ಆ ದರ್ಶನದಲ್ಲಿ ದೇವರು ತನಗೆ ಹೇಳಿದ ಪ್ರತಿಯೊಂದನ್ನು ನಾತಾನನು ದಾವೀದನಿಗೆ ತಿಳಿಸಿದನು.
ದಾವೀದನು ದೇವರಲ್ಲಿ ಪ್ರಾರ್ಥಿಸುವನು
18 ಆಗ ರಾಜನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತು,
 
“ನನ್ನ ಒಡೆಯನಾದ ಯೆಹೋವನೇ, ನಾನೆಷ್ಟರವನು? ನನ್ನ ಕುಲ ಎಷ್ಟರದು? ನೀನು ನನ್ನನ್ನೇಕೆ ಇಷ್ಟು ಉದ್ಧರಿಸಿದೆ? 19 ನಾನು ಕೇವಲ ನಿನ್ನ ಸೇವಕನು. ನೀನು ನನ್ನ ಮೇಲೆ ಬಹಳ ದಯೆ ತೋರಿಸಿರುವೆ. ನನಗೆ ಮಾತ್ರವಲ್ಲದೆ ನೀನು ನನ್ನ ಮುಂದಿನ ಸಂತಾನದ ಬಗ್ಗೆಯೂ ಇದೇ ರೀತಿಯ ದಯಾಪರವಾದ ಮಾತುಗಳನ್ನು ಆಡಿರುವೆ. ನನ್ನ ಒಡೆಯನಾದ ಯೆಹೋವನೇ, ನರಪ್ರಾಣಿಯಾದ ನನ್ನೊಂದಿಗೆ ಇಂಥ ಮಹತ್ತಾದ ಕಾರ್ಯ ಮಾಡಬಹುದೇ? 20 ನಾನು ನಿನಗೆ ಇನ್ನೇನು ಹೇಳಲಿ? ನಿನ್ನ ಜೊತೆ ಹೇಗೆ ಮಾತನಾಡುತ್ತಲೇ ಇರಲಿ? ನನ್ನ ಒಡೆಯನಾದ ಯೆಹೋವನೇ, ನಾನು ನಿನ್ನ ಸೇವಕನೆಂಬುದು ನಿನಗೆ ತಿಳಿದಿದೆ. 21 ನೀನು ಈ ಕಾರ್ಯವನ್ನು ನಿನ್ನ ವಾಗ್ದಾನದ ಪ್ರಕಾರವಾಗಿಯೂ ನಿನ್ನ ಚಿತ್ತದ ಪ್ರಕಾರವಾಗಿಯೂ ಮಾಡಿರುವೆ ಮತ್ತು ನಿನ್ನ ಸೇವಕನಿಗೆ ಅದನ್ನು ತಿಳಿಸಿರುವೆ. 22 ದೇವರಾದ ಯೆಹೋವನೇ, ನಾನು ಕೇಳಿದ ಪ್ರಕಾರ ನೀನೇ ದೊಡ್ಡವನು; ನಿನ್ನ ಸಮಾನರು ಬೇರೆ ಯಾರೂ ಇಲ್ಲ; ನಿನ್ನ ಹೊರತು ಬೇರೆ ದೇವರಿಲ್ಲ.
23 “ನಿನ್ನ ಜನರಾದ ಇಸ್ರೇಲರಂಥವರು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ, ಅವರು ವಿಶೇಷವಾದ ಜನರು. ಅವರು ಗುಲಾಮರಾಗಿದ್ದರು, ಆದರೆ ಅವರನ್ನು ಈಜಿಪ್ಟಿನಿಂದ ನೀನು ಹೊರತಂದು ಸ್ವತಂತ್ರರನ್ನಾಗಿ ಮಾಡಿರುವೆ. ನೀನು ಅವರನ್ನು ನಿನ್ನ ಜನರನ್ನಾಗಿ ಮಾಡಿಕೊಂಡೆ. ಇಸ್ರೇಲರಿಗಾಗಿ ನೀನು ಉತ್ತಮವಾದ ಮತ್ತು ಮಹತ್ತಾದ ಕಾರ್ಯಗಳನ್ನು ಮಾಡಿದೆ. ನಿನ್ನ ದೇಶಕ್ಕಾಗಿ ನೀನು ಮಹತ್ಕಾರ್ಯಗಳನ್ನು ಮಾಡಿದೆ. 24 ಇಸ್ರೇಲಿನ ಜನರನ್ನು ಎಂದೆಂದಿಗೂ ನಿನ್ನ ಸ್ವಂತ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನು ಅವರಿಗಾಗಿ ದೇವರಾದೆ.
25 “ದೇವರಾದ ಯೆಹೋವನೇ, ಈಗ ನೀನು ನನ್ನ ಬಗ್ಗೆ ಮಾತನಾಡಿರುವೆ. ನಾನು ನಿನ್ನ ಸೇವಕ. ನೀನು ನನ್ನ ಕುಲದ ಬಗ್ಗೆಯೂ ವಾಗ್ದಾನ ಮಾಡಿರುವೆ. ನಿನ್ನ ವಾಗ್ದಾನಗಳನ್ನು ನೆರವೇರಿಸು. ನೀನು ವಾಗ್ದಾನ ಮಾಡಿದ ಕಾರ್ಯಗಳನ್ನು ಮಾಡು. 26 ಆಗ ನಿನ್ನ ಹೆಸರು ಎಂದೆಂದೂ ಗೌರವಿಸಲ್ಪಡುತ್ತದೆ. ಜನರೆಲ್ಲರೂ ‘ಸರ್ವಶಕ್ತನಾದ ಯೆಹೋವನೇ ಇಸ್ರೇಲರ ದೇವರು!’ ಎಂದು ಹೇಳುವರು. ಅಲ್ಲದೆ ‘ನಿನ್ನ ಸೇವಕನಾದ ದಾವೀದನ ಕುಟುಂಬವು ನಿನ್ನ ಸನಿಧಿಯಲ್ಲಿ ಸ್ಥಿರವಾಗುವುದು’ ಎಂದು ಹೇಳುವರು.
27 “ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನೇ, ನೀನು ನನಗೆ ಮುಂದಿನ ಸಂಗತಿಗಳನ್ನು ತೋರಿಸಿರುವೆ. ‘ನಾನು ನಿನ್ನ ಕುಟುಂಬವನ್ನು ಸ್ಥಿರಪಡಿಸುವೆನು’ ಎಂದು ಹೇಳಿರುವೆ. ಆ ಕಾರಣದಿಂದಲೇ ನಿನ್ನ ಸೇವಕನಾದ ನಾನು ನಿನ್ನಲ್ಲಿ ಈ ಪ್ರಾರ್ಥನೆಯನ್ನು ಸಲ್ಲಿಸಲು ತೀರ್ಮಾನಿಸಿದ್ದೇನೆ. 28 ನನ್ನ ಒಡೆಯನಾದ ಯೆಹೋವನೇ, ನೀನೇ ದೇವರು. ನಿನ್ನ ಮಾತುಗಳು ಸತ್ಯವಾದವು. ನಿನ್ನ ಸೇವಕನಾದ ನನಗೆ ಅತೀ ಉತ್ತಮವಾದ ವಾಗ್ದಾನಗಳನ್ನು ಮಾಡಿರುವೆ. 29 ದಯವಿಟ್ಟು ನನ್ನ ಕುಟುಂಬವನ್ನು ಆಶೀರ್ವದಿಸು. ಅದು ನಿನ್ನ ಸನ್ನಿಧಿಯಲ್ಲಿ ಎಂದೆಂದಿಗೂ ಮುಂದುವರಿಯಲಿ. ದೇವರಾದ ಯೆಹೋವನೇ, ಆಶ್ಚರ್ಯಕರವಾದ ವಾಗ್ದಾನಗಳನ್ನು ನೀನು ನನಗೆ ಮಾಡಿರುವೆ. ನಿನ್ನ ಆಶೀರ್ವಾದದಿಂದ ನನ್ನ ಕುಟುಂಬವು ಎಂದೆಂದಿಗೂ ಆಶೀರ್ವಾದವನ್ನು ಹೊಂದಲಿ” ಎಂದು ಪ್ರಾರ್ಥಿಸಿದನು.