ನಹೂಮ
1
ಎಲ್ಕೋಷ್ ಎಂಬ ಊರಿನವನಾದ ನಹೂಮನಿಗೆ ಆದ ದೇವದರ್ಶನದ ಪುಸ್ತಕ. ನಿನೆವೆ ಪಟ್ಟಣದ ವಿಷಯವಾಗಿ ದುಃಖಕರವಾದ ಸಂದೇಶ.
ನಿನೆವೆಯ ಮೇಲೆ ಯೆಹೋವನು ಕೋಪಗೊಂಡಿದ್ದಾನೆ
ಯೆಹೋವನು ಸ್ವಾಭಿಮಾನವುಳ್ಳ ದೇವರಾಗಿದ್ದಾನೆ.
ಆತನು ಪಾಪಿಗಳ ಮೇಲೆ ಸೇಡನ್ನು ತೀರಿಸುವ ದೇವರು.
ಆತನು ಬಹಳವಾಗಿ ಕೋಪಗೊಂಡಿದ್ದಾನೆ.
ಯೆಹೋವನು ಪಾಪಿಗಳನ್ನು ಶಿಕ್ಷಿಸುವ ದೇವರು. ಆತನು ವೈರಿಗಳನ್ನು ಶಿಕ್ಷಿಸುವನು.
ಆತನ ವೈರಿಗಳ ಮೇಲೆ ಕೋಪವು ಸದಾಕಾಲವಿರುವುದು.
ಯೆಹೋವನು ತಾಳ್ಮೆಯುಳ್ಳ ದೇವರು
ಮತ್ತು ಬಲಿಷ್ಠನಾದ ದೇವರಾಗಿದ್ದಾನೆ!
ಪಾಪಿಗಳನ್ನು ಆತನು ಶಿಕ್ಷಿಸುವನು. ಆತನಿಂದ ಅವರು ತಪ್ಪಿಸಿಕೊಳ್ಳಲಾರರು.
ದುಷ್ಟಜನರನ್ನು ಶಿಕ್ಷಿಸಲು ಯೆಹೋವನು ಬರುವನು.
ಆತನು ತನ್ನ ಸಾಮರ್ಥ್ಯವನ್ನು ಬಿರುಗಾಳಿಯಲ್ಲಿಯೂ ಸುಂಟರಗಾಳಿಯಲ್ಲಿಯೂ ತೋರ್ಪಡಿಸುವನು.
ಮನುಷ್ಯನು ನೆಲದ ಧೂಳಿನ ಮೇಲೆ ನಡೆಯುತ್ತಾರೆ, ಯೆಹೋವನಾದರೋ ಮೋಡಗಳ ಮೇಲೆ ನಡೆಯುತ್ತಾನೆ.
ಯೆಹೋವನು ಸಮುದ್ರಕ್ಕೆ ಗದರಿಸಿದಾಗ ಅದು ಒಣಗಿಹೋಗುವುದು.
ಆತನು ಎಲ್ಲಾ ನದಿಗಳನ್ನು ಬತ್ತಿಸಿಬಿಡುವನು.
ಕರ್ಮೆಲ್ ಮತ್ತು ಬಾಷಾನಿನ ಫಲವತ್ತಾದ ನೆಲಗಳು ಒಣಗಿ ಪಾಳುಬೀಳುವವು.
ಲೆಬನೋನಿನ ಪುಷ್ಪವು ಬಾಡಿಹೋಗುವದು.
ಯೆಹೋವನು ಬರುತ್ತಾನೆ.
ಪರ್ವತಗಳು ಭಯದಿಂದ ನಡುಗುವವು.
ಬೆಟ್ಟಗಳು ಕರಗಿಹೋಗುವವು.
ಯೆಹೋವನು ಬರುತ್ತಾನೆ,
ಮತ್ತು ಭೂಮಿಯು ಭಯದಿಂದ ನಡುಗುವುದು.
ಇಡೀ ಪ್ರಪಂಚ ಮತ್ತು ಅದರಲ್ಲಿರುವ
ಜನರೆಲ್ಲಾ ಭಯದಿಂದ ನಡುಗುವರು.
ಯೆಹೋವನ ಮಹಾ ರೌದ್ರಕ್ಕೆದುರಾಗಿ ಯಾರೂ ನಿಲ್ಲಲಾರರು.
ಯಾರೂ ಆ ಮಹಾ ಕೋಪವನ್ನು ಸಹಿಸಲು ಸಾಧ್ಯವಿಲ್ಲ.
ಆತನ ಕೋಪವು ಬೆಂಕಿಯಂತೆ ದಹಿಸುವದು.
ಆತನು ಬರುವಾಗ ಬಂಡೆಯು ಪುಡಿಯಾಗುವುದು.
ಯೆಹೋವನು ಒಳ್ಳೆಯವನು.
ಕಷ್ಟದ ಸಮಯದಲ್ಲಿ ಆತನು ಆಶ್ರಯಸ್ಥಾನ.
ಆತನ ಮೇಲೆ ಭರವಸವಿಡುವವರನ್ನು ಸಂರಕ್ಷಿಸುತ್ತಾನೆ.
ಆದರೆ ಆತನು ತನ್ನ ವೈರಿಗಳನ್ನು ಪೂರ್ತಿಯಾಗಿ ನಾಶಮಾಡುತ್ತಾನೆ.
ತೆರೆಯಂತೆ ಅವರನ್ನು ಕೊಚ್ಚಿಕೊಂಡು ಹೋಗುತ್ತಾನೆ.
ಕತ್ತಲೆಯ ಕಡೆಗೆ ವೈರಿಗಳನ್ನು ಅಟ್ಟಿಬಿಡುವನು.
ಯೆಹೋವನಿಗೆ ವಿರುದ್ಧವಾಗಿ ಏಕೆ ಯೋಜನೆ ಹಾಕುತ್ತೀರಿ?
ನೀವು ಯಾವ ಕುಯುಕ್ತಿಯನ್ನೂ ಮಾಡದ ಹಾಗೆ
ಆತನು ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುತ್ತಾನೆ.
10 ಮಡಕೆಯ ಅಡಿಯಲ್ಲಿ ಉರಿಯುವ ಮುಳ್ಳುಕಡ್ಡಿಗಳಂತೆ
ನೀವು ಸಂಪೂರ್ಣವಾಗಿ ನಾಶವಾಗುವಿರಿ.
ಜಂಬುಹುಲ್ಲಿನಂತೆ
ನೀವು ಸುಟ್ಟು ಭಸ್ಮವಾಗುವಿರಿ.
 
11 ಅಶ್ಶೂರವೇ, ನಿನ್ನಿಂದ ಒಬ್ಬ ಮನುಷ್ಯನು ಬಂದು, ಯೆಹೋವನಿಗೆ ವಿರುದ್ಧವಾದ ಯೋಜನೆಗಳನ್ನು ಹಾಕಿದನು.
ದುರಾಲೋಚನೆಯನ್ನು ಕೊಟ್ಟನು.
12 ಯೆಹೋವನು ಯೆಹೂದನಿಗೆ ಇಂತೆಂದೆನು:
“ಅಶ್ಶೂರದ ಜನರು ಬಲಶಾಲಿಗಳು.
ಅವರಲ್ಲಿ ಅಸಂಖ್ಯಾತ ಸೈನಿಕರಿದ್ದಾರೆ. ಆದರೆ ಅವರೆಲ್ಲಾ ತುಂಡರಿಸಲ್ಪಡುವರು.
ಅವರೆಲ್ಲಾ ಹತರಾಗುವರು.
ನನ್ನ ಜನರೇ, ನೀವು ಕಷ್ಟ ಅನುಭವಿಸುವಂತೆ ಮಾಡಿದೆನು.
ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ.
13 ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಬಿಟ್ಟಿದ್ದೇನೆ. ಅಶ್ಶೂರದವರ ಹಿಡಿತದಿಂದ ನಿಮ್ಮನ್ನು ಪಾರುಮಾಡಿದ್ದೇನೆ.
ನಿಮ್ಮ ಭುಜದಿಂದ ನೊಗವನ್ನು ತೆಗೆದುಹಾಕುವೆನು.
ನಿಮ್ಮನ್ನು ಬಂಧಿಸಿದ್ದ ಸಂಕೋಲೆಯನ್ನು ಮುರಿದುಹಾಕುವೆನು.”
 
14 ಅಶ್ಶೂರದ ಅರಸನೇ, ನಿನ್ನ ವಿಷಯವಾಗಿ ಯೆಹೋವನು ಕೊಟ್ಟ ಆಜ್ಞೆ ಏನೆಂದರೆ,
“ನಿನ್ನ ಹೆಸರನ್ನು ಧರಿಸುವ ಸಂತತಿಯವರು ಯಾರೂ ಇರುವುದಿಲ್ಲ.
ನಿನ್ನ ಕೆತ್ತನೆಯ ವಿಗ್ರಹಗಳನ್ನು ನಾನು ನಾಶಮಾಡುವೆನು.
ನಿನ್ನ ದೇವರುಗಳ ಆಲಯದಲ್ಲಿರುವ ಲೋಹದ ಬೊಂಬೆಗಳನ್ನು ಕೆಡವಿಬಿಡುವೆನು.
ನಿನ್ನ ಅಂತ್ಯವು ಬೇಗನೆ ಬರಲಿರುವುದರಿಂದ
ನಿನಗೆ ಸಮಾಧಿಯನ್ನು ತಯಾರುಮಾಡುತ್ತಿದ್ದೇನೆ.”
 
15 ಯೆಹೂದವೇ, ನೋಡು!
ಬೆಟ್ಟಗಳ ಮೇಲಿನಿಂದ ಬರುವವನನ್ನು ನೋಡು. ಅವನು ಶುಭಸಮಾಚಾರವನ್ನು ತರುವನು.
ಸಮಾಧಾನ ಉಂಟೆಂದು ಅವನು ಸಾರುತ್ತಾನೆ.
ಯೆಹೂದವೇ, ನಿನ್ನ ವಿಶೇಷ ಹಬ್ಬಗಳನ್ನು ಆಚರಿಸು.
ನೀನು ವಾಗ್ದಾನ ಮಾಡಿದ್ದನ್ನು ನೆರವೇರಿಸು.
ಕೆಲಸಕ್ಕೆ ಬಾರದ ಆ ಜನರು ನಿನ್ನ ಬಳಿಗೆ ಬಂದು ನಿನ್ನ ಮೇಲೆ ದಾಳಿ ಮಾಡುವದಿಲ್ಲ.
ಯಾಕೆಂದರೆ ಆ ದುಷ್ಟ ಜನರೆಲ್ಲಾ ನಾಶವಾಗಿರುತ್ತಾರೆ.