21
ಪೌಲನು ಜೆರುಸಲೇಮಿಗೆ ಹೋಗುವನು
ನಾವೆಲ್ಲರೂ ಹಿರಿಯರನ್ನು ಬೀಳ್ಕೊಟ್ಟ ಬಳಿಕ ನೌಕಾಯಾನ ಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ದ್ವೀಪಕ್ಕೆ ಹೋದೆವು ಮತ್ತು ಅಲ್ಲಿಂದ ಪತಾರಕ್ಕೆ ಹೋದೆವು. ಫೆನಿಷ್ಯಕ್ಕೆ ಹೋಗುವ ಹಡಗನ್ನು ನಾವು ಅಲ್ಲಿ ಕಂಡೆವು. ನಾವು ಆ ಹಡಗನ್ನೇರಿ ಪ್ರಯಾಣ ಮಾಡಿದೆವು.
ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಅದು ನಮ್ಮ ಉತ್ತರದಿಕ್ಕಿನಲ್ಲಿ ಕಾಣುತ್ತಿತ್ತು. ಆದರೆ ನಾವು ಹಡಗನ್ನು ಅಲ್ಲಿ ನಿಲ್ಲಿಸದೆ ಸಿರಿಯ ದೇಶಕ್ಕೆ ಪ್ರಯಾಣ ಮಾಡಿ ಟೈರ್ ಪಟ್ಟಣದಲ್ಲಿ ಹಡಗನ್ನು ನಿಲ್ಲಿಸಿದೆವು. ಯಾಕೆಂದರೆ ಹಡಗಿನಿಂದ ಸರಕನ್ನು ಇಳಿಸಬೇಕಾಗಿತ್ತು. ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು. ಆದರೆ ನಮ್ಮ ಸಂದರ್ಶನವು ಮುಗಿದ ಮೇಲೆ ನಾವು ಅಲ್ಲಿಂದ ಹೊರಟು ಪ್ರಯಾಣವನ್ನು ಮುಂದುವರಿಸಿದೆವು. ಯೇಸುವಿನ ಎಲ್ಲಾ ಶಿಷ್ಯರು, ಸ್ತ್ರೀಯರು ಮತ್ತು ಮಕ್ಕಳು ಸಹ ನಮ್ಮನ್ನು ಬೀಳ್ಕೊಡುವುದಕ್ಕಾಗಿ ನಮ್ಮೊಂದಿಗೆ ಪಟ್ಟಣದಿಂದ ಹೊರಗೆ ಬಂದರು. ನಾವೆಲ್ಲರೂ ಸಮುದ್ರ ತೀರದಲ್ಲಿ ಮೊಣಕಾಲೂರಿ ಪ್ರಾರ್ಥಿಸಿದೆವು. ಬಳಿಕ ನಾವು ಒಬ್ಬರಿಗೊಬ್ಬರು ಅಂತಿಮ ವಂದನೆಗಳನ್ನು ಸಲ್ಲಿಸಿ ಹಡಗನ್ನು ಹತ್ತಿದೆವು. ಶಿಷ್ಯರು ತಮ್ಮ ಮನೆಗಳಿಗೆ ಹಿಂತಿರುಗಿದರು.
ನಾವು ಟೈರ್ ನಿಂದ ನಮ್ಮ ಪ್ರಯಾಣವನ್ನು ಮುಂದುವರೆಸಿ ಪ್ಟೊಲೊಮಾಯ ಎಂಬಲ್ಲಿಗೆ ಹೋದೆವು. ಅಲ್ಲಿಯ ಸಹೋದರರನ್ನು (ವಿಶ್ವಾಸಿಗಳು) ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು. ಮರುದಿನ ನಾವು ಪ್ಟೊಲೊಮಾಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಹೋದೆವು. ಅಲ್ಲಿ ನಾವು ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ತಂಗಿದೆವು. ಸುವಾರ್ತೆಯನ್ನು ತಿಳಿಸುವುದೇ ಫಿಲಿಪ್ಪನ ಕೆಲಸವಾಗಿತ್ತು. ಏಳುಮಂದಿ ಸಹಾಯಕರುಗಳಲ್ಲಿ* ಸಹಾಯಕರು ವಿಶೇಷ ಕಾರ್ಯಕ್ಕಾಗಿ ಆರಿಸಲ್ಪಟ್ಟವರು. ನೋಡಿರಿ: ಅಪೊಸ್ತಲರ ಕಾರ್ಯಗಳು 6:1-6. ಅವನೂ ಒಬ್ಬನಾಗಿದ್ದನು. ಮದುವೆಯಾಗಿಲ್ಲದ ನಾಲ್ಕುಮಂದಿ ಹೆಣ್ಣುಮಕ್ಕಳು ಅವನಿಗಿದ್ದರು. ಅವರೆಲ್ಲರಿಗೂ ಪ್ರವಾದಿಸುವ ವರವಿತ್ತು.
10 ನಾವು ಅಲ್ಲಿಗೆ ಹೋಗಿ ಅನೇಕ ದಿನಗಳಾದ ಮೇಲೆ, ಅಗಬ ಎಂಬ ಪ್ರವಾದಿಯು ಜುದೇಯದಿಂದ ಬಂದನು. 11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ಅದರಿಂದ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು, “ಪವಿತ್ರಾತ್ಮನು ನನಗೆ ಹೇಳುವುದೇನೆಂದರೆ, ‘ಈ ನಡುಪಟ್ಟಿಯನ್ನು ಕಟ್ಟಿಕೊಳ್ಳುವ ವ್ಯಕ್ತಿಯನ್ನು ಜೆರುಸಲೇಮಿನ ಯೆಹೂದ್ಯರು ಇದೇ ರೀತಿ ಕಟ್ಟಿಹಾಕುವರು. ಬಳಿಕ ಅವರು ಅವನನ್ನು ಯೆಹೂದ್ಯರಲ್ಲದ ಜನರಿಗೆ ಒಪ್ಪಿಸಿಕೊಡುವರು’ ” ಎಂದು ಹೇಳಿದನು.
12 ನಾವೆಲ್ಲರೂ ಈ ಮಾತುಗಳನ್ನು ಕೇಳಿದೆವು. ಆದ್ದರಿಂದ ನಾವು ಮತ್ತು ಯೇಸುವಿನ ಇತರ ಶಿಷ್ಯರು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಬೇಡಿಕೊಂಡೆವು. 13 ಆದರೆ ಪೌಲನು, “ನೀವು ಯಾಕೆ ಅಳುತ್ತಿರುವಿರಿ? ನೀವು ನನಗೆ ಬಹು ದುಃಖವನ್ನು ಯಾಕೆ ಉಂಟು ಮಾಡುತ್ತಿದ್ದೀರಿ? ನಾನು ಜೆರುಸಲೇಮಿನಲ್ಲಿ ಬಂಧಿಸಲ್ಪಡುವುದಕ್ಕಲ್ಲದೆ ಪ್ರಭು ಯೇಸುವಿನ ಹೆಸರಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ!” ಎಂದು ಹೇಳಿದನು.
14 ಜೆರುಸಲೇಮಿಗೆ ಹೋಗದಂತೆ ನಾವು ಅವನನ್ನು ಒಪ್ಪಿಸಲಾಗಲಿಲ್ಲ. ಆದ್ದರಿಂದ ಬೇಡಿಕೊಳ್ಳುವುದನ್ನು ನಿಲ್ಲಿಸಿ, “ಪ್ರಭುವಿನ ಚಿತ್ತವು ನೆರವೇರಲೆಂದು ಪ್ರಾರ್ಥಿಸುತ್ತೇವೆ” ಎಂದೆವು.
15 ಬಳಿಕ ನಾವು ಸಿದ್ಧರಾಗಿ ಜೆರುಸಲೇಮಿಗೆ ಹೊರಟೆವು. 16 ಸೆಜರೇಯ ಪಟ್ಟಣದಿಂದ ಯೇಸುವಿನ ಶಿಷ್ಯರಲ್ಲಿ ಕೆಲವರು ನಮ್ಮೊಂದಿಗೆ ಬಂದರು. ಈ ಶಿಷ್ಯರು ನಾವು ಇಳಿದುಕೊಳ್ಳಬೇಕಾಗಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ನಮ್ಮನ್ನು ಕರೆದೊಯ್ದರು. ಯೇಸುವಿನ ಆದಿ ಶಿಷ್ಯರಲ್ಲಿ ಮ್ನಾಸೋನನು ಒಬ್ಬನಾಗಿದ್ದನು.
ಪೌಲನು ಯಾಕೋಬನನ್ನು ಸಂದರ್ಶಿಸುವನು
17 ನಾವು ಜೆರುಸಲೇಮನ್ನು ತಲುಪಿದಾಗ ನಮ್ಮನ್ನು ಕಂಡು ವಿಶ್ವಾಸಿಗಳಿಗೆ ಸಂತೋಷವಾಯಿತು. 18 ಮರುದಿನ ಯಾಕೋಬನನ್ನು ಸಂದರ್ಶಿಸಲು ಪೌಲನು ನಮ್ಮನ್ನು ಕರೆದುಕೊಂಡು ಹೋದನು. ಹಿರಿಯರೆಲ್ಲರು ಅಲ್ಲಿದ್ದರು. 19 ಪೌಲನು ಅವರೆಲ್ಲರನ್ನು ವಂದಿಸಿದನು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ಅನೇಕ ಕಾರ್ಯಗಳನ್ನು ಮಾಡುವುದಕ್ಕಾಗಿ ದೇವರು ತನ್ನನ್ನು ಉಪಯೋಗಿಸಿಕೊಂಡ ಬಗೆಯನ್ನೂ ತನ್ನ ಮೂಲಕವಾಗಿ ದೇವರು ಮಾಡಿದ ಎಲ್ಲಾ ಕಾರ್ಯಗಳ ಕುರಿತಾಗಿಯೂ ಅವನು ಅವರಿಗೆ ತಿಳಿಸಿದನು.
20 ಈ ಸಂಗತಿಗಳನ್ನು ಕೇಳಿದ ಹಿರಿಯರು ದೇವರನ್ನು ಕೊಂಡಾಡಿದರು. ಬಳಿಕ ಅವರು ಪೌಲನಿಗೆ, “ಸಹೋದರನೇ, ವಿಶ್ವಾಸಿಗಳಿಗಾಗಿ ಪರಿವರ್ತನೆಗೊಂಡಿರುವ ಸಾವಿರಾರು ಮಂದಿ ಯೆಹೂದ್ಯರನ್ನು ನೀನು ಇಲ್ಲಿ ಕಾಣಬಹುದು. ಆದರೆ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದು ಬಹಳ ಮುಖ್ಯವೆಂಬುದು ಇವರ ಆಲೋಚನೆ. 21 ಈ ಯೆಹೂದ್ಯರು ನಿನ್ನ ಉಪದೇಶದ ಬಗ್ಗೆ ಕೇಳಿದ್ದಾರೆ. ಬೇರೆ ದೇಶಗಳಲ್ಲಿ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರಿಗೆ, “ನೀವು ಮೋಶೆಯ ಧರ್ಮಶಾಸ್ತ್ರವನ್ನು ತ್ಯಜಿಸಿರಿ; ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಬೇಡಿರಿ ಯೆಹೂದ್ಯರ ಸಂಪ್ರದಾಯಗಳಿಗೆ ವಿಧೇಯರಾಗಬೇಡಿರಿ ಎಂಬುದಾಗಿ ಹೇಳುತ್ತಿರುವಿಯೆಂದು ಅವರು ಕೇಳಿದ್ದಾರೆ.
22 “ಈಗ ನಾವು ಏನು ಮಾಡೋಣ? ನೀನು ಬಂದಿರುವ ವಿಷಯವು ಇಲ್ಲಿರುವ ಯೆಹೂದ್ಯ ವಿಶ್ವಾಸಿಗಳಿಗೆ ತಿಳಿಯುವುದು. 23 ಆದರೆ ಈಗ ನೀನು ಏನು ಮಾಡಬೇಕೆಂಬುದನ್ನು ನಾವು ನಿನಗೆ ತಿಳಿಸುತ್ತೇವೆ: ನಮ್ಮ ಜನರಲ್ಲಿ ನಾಲ್ಕುಮಂದಿ ದೇವರಿಗೆ ಹರಕೆ ಮಾಡಿಕೊಂಡಿದ್ದಾರೆ. 24 ನೀನು ಅವರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಅವರ ಶುದ್ಧಾಚಾರದ ಸಂಪ್ರದಾಯದಲ್ಲಿ ಭಾಗವಹಿಸು. ಅವರ ಖರ್ಚುವೆಚ್ಚನ್ನೆಲ್ಲ ಕೊಡು. ಬಳಿಕ ಅವರು ತಮ್ಮ ತಲೆಬೋಳಿಸಿಕೊಳ್ಳಲಿ. ನೀನು ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿದ ಸಂಗತಿಗಳು ಸತ್ಯವಲ್ಲವೆಂದು ಅವರೆಲ್ಲರಿಗೂ ಮನದಟ್ಟಾಗುವುದು. ಸ್ವತಃ ನೀನೇ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗುತ್ತಿರುವುದನ್ನು ಅವರೆಲ್ಲರೂ ಕಣ್ಣಾರೆ ಕಾಣುವರು.
25 “ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ನಾವು ಒಂದು ಪತ್ರವನ್ನು ಈಗಾಗಲೇ ಕಳುಹಿಸಿದ್ದೇವೆ.
 
‘ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನಬೇಡಿ.
ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.
ಯಾವ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ’
ಎಂದು ಆ ಪತ್ರದಲ್ಲಿ ಬರೆಯಲಾಗಿದೆ” ಎಂದರು.
ಪೌಲನ ಬಂಧನ
26 ಆಗ ಪೌಲನು ಆ ನಾಲ್ಕುಮಂದಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಮರುದಿನ ಪೌಲನು, ಶುದ್ಧಾಚಾರದ ವ್ರತದಲ್ಲಿ ಭಾಗವಹಿಸಿದನು. ಬಳಿಕ ಅವನು ದೇವಾಲಯಕ್ಕೆ ಹೋಗಿ ಶುದ್ಧಾಚಾರದ ಸಂಪ್ರದಾಯ ಮುಗಿಯುವ ದಿನವನ್ನು ಪ್ರಕಟಿಸಿದನು. ಕೊನೆಯ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗಾಗಿಯೂ ಯಜ್ಞವನ್ನರ್ಪಿಸಬೇಕಾಗಿತ್ತು.
27 ಆ ಏಳು ದಿನಗಳ ಅವಧಿ ಮುಗಿಯುವುದರಲ್ಲಿತ್ತು. ಆದರೆ ಏಷ್ಯಾದಿಂದ ಬಂದಿದ್ದ ಕೆಲವು ಯೆಹೂದ್ಯರು ಪೌಲನನ್ನು ಕಂಡು ಜನಸಮೂಹವನ್ನು ಉದ್ದೇಶಿಸಿ, 28 “ಯೆಹೂದ್ಯ ಜನರೇ, ನಮಗೆ ಸಹಾಯಮಾಡಿ! ಮೋಶೆಯ ಧರ್ಮಶಾಸ್ತ್ರಕ್ಕೂ ನಮ್ಮ ಜನರಿಗೂ ಮತ್ತು ಈ ಸ್ಥಳಕ್ಕೂ (ದೇವಾಲಯ) ವಿರೋಧವಾಗಿ ಎಲ್ಲಾ ಕಡೆಗಳಲ್ಲಿ ಜನರಿಗೆ ಉಪದೇಶಿಸುತ್ತಿದ್ದವನು ಇವನೇ. ಈಗ ಇವನು ಕೆಲವು ಗ್ರೀಕರನ್ನು ದೇವಾಲಯದೊಳಕ್ಕೆ ಕರೆದುಕೊಂಡು ಬಂದಿದ್ದಾನೆ! ಈ ಪವಿತ್ರ ಸ್ಥಳವನ್ನು ಇವನು ಅಶುದ್ಧಗೊಳಿಸಿದ್ದಾನೆ!” ಎಂದು ಕೂಗಿಹೇಳಿ ಗಲಿಬಿಲಿ ಮಾಡಿದರು. 29 (ಜೆರುಸಲೇಮಿನಲ್ಲಿ ಪೌಲನೊಂದಿಗಿದ್ದ ತ್ರೊಫಿಮ ಎಂಬವನನ್ನು ಆ ಯೆಹೂದ್ಯರು ನೋಡಿದ್ದರು. ಎಫೆಸದ ತ್ರೊಫಿಮನು ಗ್ರೀಕನಾಗಿದ್ದನು. ಪೌಲನು ಇವನನ್ನು ಪವಿತ್ರ ಸ್ಥಳದೊಳಗೆ ಕರೆದುಕೊಂಡು ಹೋಗಿದ್ದಾನೆಂದು ಅವರು ಭಾವಿಸಿಕೊಂಡರು.)
30 ಜೆರುಸಲೇಮಿನ ಜನರೆಲ್ಲರು ಬಹು ಕೋಪಗೊಂಡರು. ಅವರೆಲ್ಲರು ಓಡಿಹೋಗಿ ಪೌಲನನ್ನು ಹಿಡಿದು ದೇವಾಲಯದೊಳಗಿಂದ ಎಳೆದುಕೊಂಡು ಬಂದರು. ಆ ಕೂಡಲೇ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. 31 ಅವರು ಪೌಲನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಇಡೀ ಪಟ್ಟಣದಲ್ಲೇ ಗಲಭೆಯುಂಟಾಗಿದೆ ಎಂಬ ಸುದ್ದಿಯು ಜೆರುಸಲೇಮಿನಲ್ಲಿದ್ದ ರೋಮ್ ಸೇನಾಧಿಪತಿಗೆ ತಿಳಿಯಿತು. 32 ತಕ್ಷಣವೇ ಅವನು ಕೆಲವು ಸೇನಾಧಿಕಾರಿಗಳನ್ನು ಮತ್ತು ಸೈನಿಕರನ್ನು ತನ್ನೊಂದಿಗೆ ಕರೆದುಕೊಂಡು ಜನಸಮೂಹದ ಕಡೆಗೆ ಹೋದನು. ಸೇನಾಧಿಪತಿಯನ್ನು ಮತ್ತು ಅವನ ಸೈನಿಕರನ್ನು ಕಂಡ ಜನರು ಪೌಲನಿಗೆ ಹೊಡೆಯುವುದನ್ನು ನಿಲ್ಲಿಸಿದರು.
33 ಸೇನಾಧಿಪತಿಯು ಹೋಗಿ ಪೌಲನನ್ನು ಬಂಧಿಸಿ ಎರಡು ಸರಪಣಿಗಳಿಂದ ಅವನನ್ನು ಕಟ್ಟಲು ಸೈನಿಕರಿಗೆ ಹೇಳಿದನು. ಬಳಿಕ ಸೇನಾಧಿಪತಿಯು, “ಈ ಮನುಷ್ಯನು ಯಾರು? ಇವನು ಏನು ತಪ್ಪು ಮಾಡಿದನು?” ಎಂದು ವಿಚಾರಿಸಿದನು. 34 ಅಲ್ಲಿದ್ದ ಜನರಲ್ಲಿ ಕೆಲವರು ಒಂದು ವಿಷಯದ ಬಗ್ಗೆ ಬೊಬ್ಬೆಹಾಕುತ್ತಿದ್ದರೆ, ಉಳಿದವರು ಇತರ ವಿಷಯಗಳ ಬಗ್ಗೆ ಬೊಬ್ಬೆಹಾಕುತ್ತಿದ್ದರು. ಈ ಗಲಿಬಿಲಿಯಿಂದಾಗಿಯೂ ಕೂಗಾಟದಿಂದಾಗಿಯೂ ಏನು ನಡೆಯಿತೆಂಬುದರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲಾಗಲಿಲ್ಲ. ಆದ್ದರಿಂದ ಸೇನಾಧಿಪತಿಯು ಪೌಲನನ್ನು ಸೈನ್ಯದ ಕೋಟೆಯೊಳಕ್ಕೆ ತೆಗೆದುಕೊಂಡು ಹೋಗಲು ಸೈನಿಕರಿಗೆ ತಿಳಿಸಿದನು. 35-36 ಎಲ್ಲಾ ಜನರು ಅವರನ್ನು ಹಿಂಬಾಲಿಸಿದರು. ಸೈನಿಕರು ಮೆಟ್ಟಿಲುಗಳ ಬಳಿಗೆ ಬಂದಾಗ ಪೌಲನನ್ನು ರಕ್ಷಿಸಲು ಹೊತ್ತುಕೊಂಡು ಹೋದರು. ಯಾಕೆಂದರೆ ಅವನಿಗೆ ಕೇಡುಮಾಡಲು ಸಿದ್ಧರಾಗಿದ್ದ ಜನರು, “ಅವನನ್ನು ಕೊಲ್ಲಿರಿ!” ಎಂದು ಕೂಗುತ್ತಿದ್ದರು.
37 ಸೈನಿಕರು ಪೌಲನನ್ನು ಸೈನ್ಯದ ಕೋಟೆಯೊಳಗೆ ಕೊಂಡೊಯ್ಯುತ್ತಿದ್ದಾಗ, ಪೌಲನು ಸೇನಾಧಿಪತಿಗೆ, “ನಾನು ನಿನ್ನೊಂದಿಗೆ ಸ್ವಲ್ಪ ಮಾತಾಡಬಹುದೇ?” ಎಂದು ಕೇಳಿದನು.
ಸೇನಾಧಿಪತಿಯು, “ಓಹೋ, ನಿನಗೆ ಗ್ರೀಕ್ ಭಾಷೆ ಗೊತ್ತಿದೆಯಾ? 38 ಹಾಗಾದರೆ, ನಾನು ಯೋಚಿಸಿದ ವ್ಯಕ್ತಿ ನೀನಲ್ಲ. ಸ್ವಲ್ಪಕಾಲದ ಹಿಂದೆ ಗಲಭೆ ಆರಂಭಿಸಿದ ಈಜಿಪ್ಟಿನವನೇ ನೀನೆಂದು ನಾನು ಭಾವಿಸಿದ್ದೆ. ಆ ಈಜಿಪ್ಟಿನವನು ನಾಲ್ಕುಸಾವಿರ ಮಂದಿ ಕೊಲೆಗಾರರನ್ನು ಮರಳುಗಾಡಿಗೆ ಕರೆದುಕೊಂಡು ಹೋದನು” ಎಂದು ಹೇಳಿದನು.
39 ಪೌಲನು, “ಇಲ್ಲ, ನಾನು ತಾರ್ಸದ ಯೆಹೂದ್ಯನು. ತಾರ್ಸವು ಸಿಲಿಸಿಯ ದೇಶದಲ್ಲಿದೆ. ನಾನು ಆ ಪ್ರಮುಖ ನಗರದ ಪ್ರಜೆ. ದಯವಿಟ್ಟು ಜನರೊಂದಿಗೆ ಮಾತಾಡಲು ನನಗೆ ಅಪ್ಪಣೆಯಾಗಲಿ” ಎಂದು ಹೇಳಿದನು.
40 ಜನರೊಂದಿಗೆ ಮಾತಾಡಲು ಸೇನಾಧಿಪತಿ ಪೌಲನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಪೌಲನು ಮೆಟ್ಟಿಲುಗಳ ಮೇಲೆ ನಿಂತುಕೊಂಡನು. ಬಳಿಕ, ಮೌನವಾಗಿರುವಂತೆ ಜನರಿಗೆ ಕೈಸನ್ನೆ ಮಾಡಿದನು. ಜನರು ಮೌನವಾದರು. ಆಗ ಪೌಲನು ಅವರೊಂದಿಗೆ ಯೆಹೂದ್ಯರ ಭಾಷೆಯಲ್ಲಿ ಮಾತಾಡಿದನು.

*21:8: ಸಹಾಯಕರು ವಿಶೇಷ ಕಾರ್ಯಕ್ಕಾಗಿ ಆರಿಸಲ್ಪಟ್ಟವರು. ನೋಡಿರಿ: ಅಪೊಸ್ತಲರ ಕಾರ್ಯಗಳು 6:1-6.