25
“ನಿಮ್ಮಲ್ಲಿ ಯಾರಿಗಾದರೂ ಇಬ್ಬರಿಗೆ ವಾಗ್ವಾದವಿದ್ದಲ್ಲಿ ಅವರು ಅದನ್ನು ನ್ಯಾಯಸ್ಥಾನಕ್ಕೆ ತೆಗೆದುಕೊಂಡು ಹೋಗಲಿ. ಅಲ್ಲಿ ನ್ಯಾಯಾಧೀಶರು ಯಾರು ಸರಿ ಯಾರು ತಪ್ಪು ಎಂದು ತೀರ್ಮಾನಿಸುವರು. ನ್ಯಾಯಾಧೀಶರು ಒಬ್ಬನಿಗೆ ಕೊರಡೆ ಏಟು ಕೊಡಬೇಕೆಂದು ತೀರ್ಮಾನಿಸಿದರೆ ಅವನು ಆ ಶಿಕ್ಷೆ ಹೊಂದುವವನನ್ನು ಬೋರಲು ಮಲಗಿಸಿ ನ್ಯಾಯಾಧೀಶನ ಕಣ್ಣು ಮುಂದೆ ಅವನಿಗೆ ಕೊರಡೆ ಏಟು ಹೊಡಿಸಬೇಕು. ಅವನ ಅಪರಾಧಕ್ಕನುಸಾರವಾಗಿ ಕೊರಡೆ ಏಟುಗಳ ಸಂಖ್ಯೆಯು ಏರುವದು. ಒಬ್ಬನಿಗೆ ನಲವತ್ತು ಕೊರಡೆ ಏಟುಗಳಿಗಿಂತ ಹೆಚ್ಚಾಗಿ ಹೊಡೆಯಬಾರದು. ಅದಕ್ಕಿಂತ ಹೆಚ್ಚು ಹೊಡೆದರೆ ಅವನ ಪ್ರಾಣವು ನಿಮ್ಮ ದೃಷ್ಟಿಗೆ ಅಮೂಲ್ಯವಾಗಿಲ್ಲವೆಂದು ತಿಳಿದುಬರುತ್ತದೆ.
“ಕಣವನ್ನು ತುಳಿಯಲು ಎತ್ತುಗಳನ್ನು ಉಪಯೋಗಿಸುವಾಗ ಅವುಗಳು ಧಾನ್ಯ ತಿನ್ನುತ್ತವೆ ಎಂದು ಅವುಗಳ ಬಾಯಿಗಳನ್ನು ಕಟ್ಟಬಾರದು.
“ಇಬ್ಬರು ಅಣ್ಣತಮ್ಮಂದಿರು ಜೀವಿಸುತ್ತಿರುವಾಗ ಒಬ್ಬನು ಮಕ್ಕಳಿಲ್ಲದೆ ಸತ್ತುಹೋದರೆ ಅವನ ಹೆಂಡತಿಯು ಕುಟುಂಬದಿಂದ ಹೊರಗೆ ಮದುವೆಯಾಗಬಾರದು. ಅವಳ ಮೈದುನ ಆಕೆಯನ್ನು ಮದುವೆಯಾಗಿ, ತನ್ನ ಮೈದುನ ಧರ್ಮವನ್ನು ನೆರವೇರಿಸಬೇಕು. ಅವಳಿಗೆ ಅವನಿಂದ ಹುಟ್ಟುವ ಮೊದಲನೆಯ ಮಗು ಅವಳ ಮೊದಲನೆಯ ಗಂಡನಿಗೆ ಸೇರಿದ್ದೆಂದು ಪರಿಗಣಿಸಲ್ಪಡಬೇಕು. ಹೀಗೆ ಸತ್ತುಹೋದ ಅಣ್ಣನ ವಂಶವು ಮುಂದುವರಿಯುವುದು. ಆದರೆ ಮೈದುನನು, ಸತ್ತುಹೋದ ತನ್ನ ಅಣ್ಣನ ಸ್ಥಾನವನ್ನು ತೆಗೆದುಕೊಳ್ಳಲು ಇಷ್ಟಪಡದೆಹೋದಲ್ಲಿ, ಆಕೆಯು ಊರಿನ ಹಿರಿಯರ ಬಳಿಗೆ ಹೋಗಿ ಹಿರಿಯರಿಗೆ ಹೀಗೆ ಹೇಳಬೇಕು: ‘ನನ್ನ ಮೈದುನನು ತನ್ನ ಅಣ್ಣನ ಹೆಸರನ್ನು ಇಸ್ರೇಲಿನಲ್ಲಿ ಉಳಿಸಲು ಇಷ್ಟಪಡುವುದಿಲ್ಲ.’ ಆಗ ಊರಿನ ಹಿರಿಯರು ಆ ಮೈದುನನನ್ನು ಕರಿಸಿ ಅವನೊಂದಿಗೆ ಮಾತನಾಡಬೇಕು. ಅವನು ತನ್ನ ನಿರ್ಧಾರವನ್ನು ಬದಲಾಯಿಸದೆ, ‘ನನಗೆ ಅವಳನ್ನು ಹೆಂಡತಿಯಾಗಿ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರೆ, ಅವನ ಅಣ್ಣನ ಹೆಂಡತಿಯು ಮುಂದೆ ಬಂದು ಹಿರಿಯರ ಸಮ್ಮುಖದಲ್ಲಿ ಅವನ ಕಾಲಿನಿಂದ ಚಪ್ಪಲಿಗಳನ್ನು ತೆಗೆದು ಅವನ ಮುಖಕ್ಕೆ ಉಗಿಯಬೇಕು. ‘ತನ್ನ ಮೈದುನ ಧರ್ಮವನ್ನು ನೆರವೇರಿಸದೆ ತನ್ನ ಅಣ್ಣನಿಗೆ ವಂಶವನ್ನು ಕೊಡದವನಿಗೆ ಇದೇ ಗತಿ’ ಎಂದು ಹೇಳಬೇಕು. 10 ಆಗ ಅವನ ಸಂತಾನವು, ‘ಚಪ್ಪಲಿ ತೆಗೆಯಲ್ಪಟ್ಟ ಸಂತಾನ’ ಎಂದು ಕರೆಯಲ್ಪಡುವುದು.
11 “ಇಬ್ಬರು ಗಂಡಸರು ಜಗಳವಾಡುತ್ತಿರುವಾಗ ಒಬ್ಬನ ಹೆಂಡತಿಯು ಗಂಡನಿಗೆ ಸಹಾಯಮಾಡಲಿಕ್ಕೆ ಬಂದು ಜಗಳವಾಡುವ ಇನ್ನೊಬ್ಬ ಗಂಡಸಿನ ಗುಪ್ತಾಂಗವನ್ನು ಹಿಡಿಯಬಾರದು. 12 ಅಂಥವಳ ಕೈಯನ್ನು ಕಡಿದುಹಾಕಿರಿ; ದಯೆ ತೋರಿಸಬೇಡಿ.
13 “ಮೋಸದ ತೂಕದ ಕಲ್ಲುಗಳನ್ನು ಉಪಯೋಗಿಸಬೇಡಿ. 14 ನಿಮ್ಮ ಮನೆಯೊಳಗೆ ಮೋಸದ ತೂಕದ ಕಲ್ಲುಗಳನ್ನಿಡಬೇಡಿ. 15 ನೀವು ಸರಿಯಾದ ತೂಕದ ಕಲ್ಲುಗಳನ್ನು ಉಪಯೋಗಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಬಹುಕಾಲ ಬಾಳುವಿರಿ. 16 ಮೋಸವುಳ್ಳ ತೂಕದ ಕಲ್ಲುಗಳನ್ನು ಉಪಯೋಗಿಸುವವರನ್ನು ದೇವರಾದ ಯೆಹೋವನು ದ್ವೇಷಿಸುತ್ತಾನೆ. ಹೌದು, ಆತನು ಮೋಸ ಮಾಡುವವರನ್ನು ದ್ವೇಷಿಸುತ್ತಾನೆ.
ಅಮಾಲೇಕ್ಯರನ್ನು ನಾಶಮಾಡಬೇಕು
17 “ನೀವು ಈಜಿಪ್ಟಿನಿಂದ ಹೊರಬರುವಾಗ ಅಮಾಲೇಕ್ಯರು ನಿಮಗೆ ಏನು ಮಾಡಿದರೆಂಬುದನ್ನು ನೆನಪಿನಲ್ಲಿಡಿರಿ. 18 ಅಮಾಲೇಕ್ಯರು ದೇವರನ್ನು ಗೌರವಿಸಲಿಲ್ಲ. ನೀವು ಆಯಾಸಗೊಂಡು ಬಲಹೀನರಾಗಿದ್ದಾಗ ಅವರು ನಿಮ್ಮ ಮೇಲೆ ಬಿದ್ದರು. ನಿಮ್ಮ ಗುಂಪಿನಲ್ಲಿ ಹಿಂದೆ ಉಳಿದವರನ್ನೆಲ್ಲಾ ಕೊಂದರು. 19 ಆದ್ದರಿಂದಲೇ ಅಮಾಲೇಕ್ಯರನ್ನು ಈ ಭೂಮುಖದಲ್ಲಿರದಂತೆ ಮಾಡಬೇಕು. ನೀವು ನಿಮ್ಮ ದೇಶವನ್ನು ಪ್ರವೇಶಿಸುವಾಗ ನೀವು ಹಾಗೆ ಮಾಡಬೇಕು. ನಿಮ್ಮ ಸುತ್ತಮುತ್ತಲಿರುವ ವೈರಿಗಳಿಂದ ದೇವರು ನಿಮಗೆ ಶಾಂತಿಯನ್ನು ಅನುಗ್ರಹಿಸುವನು. ಆದರೆ ಅಮಾಲೇಕ್ಯರನ್ನು ನಾಶಮಾಡುವ ಕಾರ್ಯವನ್ನು ಮರೆಯಬೇಡಿರಿ.