27
ಜನರಿಗಾಗಿ ಕಲ್ಲಿನಿಂದ ಮಾಡಿದ ಸ್ಮಾರಕ ಕಲ್ಲುಗಳು
ಮೋಶೆ ಮತ್ತು ಸಮೂಹದ ಹಿರಿಯರು ಜನರೊಂದಿಗೆ ಮಾತನಾಡಿದರು. ಮೋಶೆಯು ಹೇಳಿದ್ದೇನೆಂದರೆ: “ನಾನು ಆಜ್ಞಾಪಿಸಿದ ಎಲ್ಲಾ ವಿಧಿಗಳನ್ನು ಅನುಸರಿಸಿರಿ. ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ಕೊಡುವ ದೇಶವನ್ನು ಪ್ರವೇಶಿಸುವಿರಿ. ಆ ದಿವಸ ದೊಡ್ಡ ದೊಡ್ಡ ಕಲ್ಲುಗಳನ್ನು ರಾಶಿ ಹಾಕಿ ಅದನ್ನು ಗಾರೆ ಮಾಡಿರಿ. ಅದರ ಮೇಲೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಬರೆಯಿರಿ. ನೀವು ನದಿಯನ್ನು ದಾಟಿದಾಗ ಈ ಕಾರ್ಯವನ್ನು ಮಾಡಬೇಕು. ಅನಂತರ, ಆತನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಸಮೃದ್ಧಿಯಾದ ದೇಶದೊಳಕ್ಕೆ ಹೋಗಿರಿ.
“ನೀವು ಆ ದೇಶದೊಳಗೆ ಪ್ರವೇಶ ಮಾಡಿದ ನಂತರ ನಾನು ಹೇಳಿದ್ದೆಲ್ಲವನ್ನು ನೀವು ಪರಿಪಾಲಿಸಬೇಕು. ಏಬಾಲ್ ಬೆಟ್ಟದ ಮೇಲೆ ಸ್ಮಾರಕ ಸ್ತಂಭವನ್ನು ನಿಲ್ಲಿಸಬೇಕು. ಅದಕ್ಕೆ ಗಾರೆ ಮಾಡಿ. ಮೇಲೆ ಅಲ್ಲಿಯೇ ಕಲ್ಲಿನಿಂದ ಒಂದು ಯಜ್ಞವೇದಿಕೆಯನ್ನು ಕಟ್ಟಿರಿ. ಆ ಕಲ್ಲುಗಳನ್ನು ಕೆತ್ತಲು ಕಬ್ಬಿಣದ ಸಾಧನಗಳನ್ನು ಉಪಯೋಗಿಸಬಾರದು. ಕಡಿದ ಕಲ್ಲುಗಳಿಂದ ಯಜ್ಞವೇದಿಕೆಯನ್ನು ಕಟ್ಟಬಾರದು. ಆ ಯಜ್ಞವೇದಿಕೆಯ ಮೇಲೆ ನಿಮ್ಮ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಿರಿ. ನೀವು ಅಲ್ಲಿ ಯಜ್ಞವನ್ನರ್ಪಿಸಿ ಸಮಾಧಾನಯಜ್ಞದ ಭೋಜನವನ್ನು ಮಾಡಬೇಕು. ಅಲ್ಲಿ ದೇವರ ಸನ್ನಿಧಾನದಲ್ಲಿ ಊಟ ಮಾಡಿ ಸಂತೋಷಪಡಿರಿ. ಆ ಕಲ್ಲುಗಳ ಮೇಲೆ ಈ ಉಪದೇಶಗಳನ್ನೆಲ್ಲ ಸ್ಪಷ್ಟವಾಗಿ ಓದಲು ಸುಲಭವಾದ ರೀತಿಯಲ್ಲಿ ಬರೆಯಬೇಕು.
ನೀತಿ ಕ್ರಮಗಳಲ್ಲಿರುವ ಶಾಪಕ್ಕೆ ಜನರ ಸಮ್ಮತ
“ಮೋಶೆಯೂ ಯಾಜಕರೂ ಇಸ್ರೇಲ್ ಸಮೂಹದವರೊಂದಿಗೆ ಮಾತನಾಡಿದರು. ಆಗ ಮೋಶೆಯು, “ಇಸ್ರೇಲರೇ, ಮೌನವಾಗಿ ನನ್ನ ಮಾತುಗಳನ್ನು ಕೇಳಿರಿ. ಈ ದಿನ ನೀವು ದೇವರಾದ ಯೆಹೋವನ ಸ್ವಕೀಯ ಪ್ರಜೆಯಾಗಿರುತ್ತೀರಿ. 10 ಆದ್ದರಿಂದ ಆತನು ಹೇಳಿದ್ದೆಲ್ಲವನ್ನೂ ಮಾಡಿರಿ. ನಾನು ಈ ಹೊತ್ತು ನಿಮಗೆ ಹೇಳುವಂಥ ಆತನ ಅಪ್ಪಣೆಗಳಿಗೂ ವಿಧಿನಿಯಮಗಳಿಗೂ ವಿಧೇಯರಾಗಿರಿ” ಎಂದು ಹೇಳಿದನು.
11 ಅದೇ ದಿವಸ ಮೋಶೆಯು ಜನರಿಗೆ ಹೇಳಿದ್ದೇನೆಂದರೆ: 12 “ಜೋರ್ಡನ್ ನದಿ ದಾಟಿದ ನಂತರ, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್ ಮತ್ತು ಬೆನ್ಯಾಮೀನನ ಕುಲದವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತು ದೇವರ ಆಶೀರ್ವಾದವನ್ನು ಓದಬೇಕು. 13 ಅದೇ ಪ್ರಕಾರ ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್ ಮತ್ತು ನಫ್ತಾಲಿ ಕುಲದವರು ಏಬಾಲ್ ಬೆಟ್ಟದ ಮೇಲೆ ನಿಂತು ದೇವರ ಶಾಪವಚನವನ್ನು ಓದಬೇಕು.
14 “ಲೇವಿಯರು ಗಟ್ಟಿಯಾದ ಸ್ವರದಲ್ಲಿ ಇಸ್ರೇಲರೆಲ್ಲರಿಗೆ ಹೀಗೆ ಹೇಳಬೇಕು:
 
15 “ ‘ಸುಳ್ಳುದೇವರನ್ನು ಮಾಡಿ ಗುಪ್ತ ಸ್ಥಳದಲ್ಲಿಡುವವನು ಶಾಪಗ್ರಸ್ತನಾಗಲಿ; ಆ ದೇವರುಗಳು ಮನುಷ್ಯನ ಕೈಕೆಲಸವೇ; ಕಲ್ಲು, ಮರ, ಹಿತ್ತಾಳೆಗಳಿಂದ ಮಾಡಿದವುಗಳೇ. ಯೆಹೋವನು ಅವುಗಳನ್ನು ದ್ವೇಷಿಸುತ್ತಾನೆ.’
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
16 “ಲೇವಿಯರು, ‘ತಂದೆತಾಯಿಗಳನ್ನು ಸನ್ಮಾನಿಸದವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
17 “ಲೇವಿಯರು, ‘ನೆರೆಯವನ ಗಡಿಕಲ್ಲಿನ ಸ್ಥಳ ಬದಲಾಯಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು ‘ಆಮೆನ್’ ಎಂದು ಹೇಳಬೇಕು.
18 “ಲೇವಿಯರು, ‘ಕುರುಡರಿಗೆ ತಪ್ಪುದಾರಿ ತೋರಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು. “ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
19 “ಲೇವಿಯರು, ‘ಪರದೇಶಸ್ಥರಿಗೆ, ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯವಾದ ತೀರ್ಪನ್ನು ಕೊಡದವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
20 “ಲೇವಿಯರು, ‘ತಂದೆಯ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡವನು ಶಾಪಗ್ರಸ್ತನಾಗಲಿ. ಅವನು ತನ್ನ ತಂದೆಗೆ ಅವಮಾನ ಮಾಡಿದನು’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
21 “ಲೇವಿಯರು, ‘ಯಾವನಾದರೂ ಪ್ರಾಣಿಯೊಂದಿಗೆ ಸಂಭೋಗಿಸಿದರೆ ಅವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
22 ಲೇವಿಯರು, ‘ತನ್ನ ತಂಗಿಯನ್ನಾಗಲಿ ಅಥವಾ ಮಲತಾಯಿಯನ್ನಾಗಲಿ ಕೂಡುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
23 “ಲೇವಿಯರು, ‘ತನ್ನ ಅತ್ತೆಯೊಡನೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
24 “ಲೇವಿಯರು, ‘ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದವನು ಹಿಡಿಯಲ್ಪಡದಿದ್ದರೂ ಸಹ ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
25 “ಲೇವಿಯರು, ‘ನಿರಪರಾಧಿಯನ್ನು ಕೊಲ್ಲಲು ಹಣ ತೆಗೆದುಕೊಳ್ಳುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.
26 “ಲೇವಿಯರು, ‘ಧರ್ಮಶಾಸ್ತ್ರವನ್ನು ಪ್ರೋತ್ಸಾಹಿಸುವದಕ್ಕೂ ಅವುಗಳನ್ನು ಅನುಸರಿಸುವದಕ್ಕೂ ನಿರಾಕರಿಸುವವನು ಶಾಪಗ್ರಸ್ತನಾಗಲಿ’ ಎಂದು ಹೇಳಬೇಕು.
“ಆಗ ಎಲ್ಲಾ ಜನರು, ‘ಆಮೆನ್’ ಎಂದು ಹೇಳಬೇಕು.”