33
ಮೋಶೆ ಇಸ್ರೇಲರನ್ನು ಆಶೀರ್ವದಿಸಿದ್ದು
ದೇವರ ಮನುಷ್ಯನಾದ ಮೋಶೆಯು ತಾನು ಸಾಯುವ ಮೊದಲು ಇಸ್ರೇಲರನ್ನು ಆಶೀರ್ವದಿಸಿದನು. ಮೋಶೆಯು ಹೇಳಿದ್ದೇನೆಂದರೆ:
 
“ಸೇಯೀರ್‌ನಲ್ಲಿ ಮುಂಜಾನೆಯ ಬೆಳಕು ಪ್ರಕಾಶಿಸುವಂತೆ
ಪಾರಾನ್ ಬೆಟ್ಟಗಳ ಮೇಲಿನಿಂದ ಬೆಳಕು ಪ್ರಕಾಶಿಸುವಂತೆ
ಯೆಹೋವನು ಸೀನಾಯಿ ಬೆಟ್ಟದಿಂದ ಬಂದನು.
ಆತನು ಹತ್ತು ಸಾವಿರ ಪರಿಶುದ್ಧರೊಂದಿಗೆ ಬಂದನು.
ಆತನ ಬಲಶಾಲಿಗಳಾದ ಸೈನಿಕರು ಆತನೊಂದಿಗಿದ್ದರು.
ಹೌದು, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ.
ಪವಿತ್ರ ಜನರೆಲ್ಲರೂ ಆತನ ಕೈಗಳಲ್ಲಿರುವರು.
ಆತನ ಕಾಲ ಬಳಿಯಲ್ಲಿ ಕುಳಿತುಕೊಂಡು
ಬೋಧನೆಯನ್ನು ಕೇಳುವರು.
ಮೋಶೆಯು ಧರ್ಮಶಾಸ್ತ್ರವನ್ನು
ಯಾಕೋಬನ ವಂಶದವರಿಗೆ ಕೊಟ್ಟನು.
ಆಗ ಇಸ್ರೇಲಿನ ಜನರು ತಮ್ಮ ನಾಯಕರೊಂದಿಗೆ ಒಟ್ಟಾಗಿ ಸೇರಿದರು.
ಯೆಹೋವನು ತಾನೇ ಯೆಶುರೂನಿನಲ್ಲಿ* ಯೆಶುರೂನ ಇಸ್ರೇಲಿನ ಮತ್ತೊಂದು ಹೆಸರು. ಇದರರ್ಥ: “ಒಳ್ಳೆಯ” ಅಥವಾ “ಯಥಾರ್ಥ.” ಅರಸನಾದನು.
ರೂಬೇನನಿಗೆ ಆಶೀರ್ವಾದ
“ರೂಬೇನನು ನಾಶವಾಗದೆ ಉಳಿಯಲಿ,
ಆದರೆ ಅವನ ಕುಲದವರಲ್ಲಿ ಕೆಲವೇ ಮಂದಿ ಇರುವರು.”
ಯೆಹೂದನಿಗೆ ಆಶೀರ್ವಾದ
ಯೆಹೂದನ ವಿಷಯವಾಗಿ ಮೋಶೆ ಹೇಳಿದ ಮಾತುಗಳು:
 
“ಯೆಹೋವನೇ, ಯೆಹೂದದ ನಾಯಕನು ಸಹಾಯಕ್ಕಾಗಿ ಮೊರೆಯಿಡುವಾಗ ಅದನ್ನು ಆಲಿಸಿ
ಅವನ ಜನರ ಬಳಿಗೆ ಕರೆದುಕೊಂಡು ಬಂದು ಅವರೊಂದಿಗೆ ಸೇರಿಸು.
ಅವನನ್ನು ಬಲಗೊಳಿಸಿ
ಶತ್ರುಗಳೊಂದಿಗೆ ಯುದ್ಧಮಾಡಲು ಸಹಾಯಿಸು.”
ಲೇವಿಯರಿಗೆ ಆಶೀರ್ವಾದ
ಲೇವಿಯ ವಿಷಯವಾಗಿ ಮೋಶೆ ಹೇಳಿದ ಮಾತುಗಳು:
 
“ಲೇವಿಯು ನಿನ್ನ ನಿಜವಾದ ಹಿಂಬಾಲಕ.
ಅವನು ಊರೀಮ್‌ತುಮ್ಮೀಮ್ ಇಟ್ಟುಕೊಂಡಿರುವನು.
ಮಸ್ಸಾದಲ್ಲಿ ಲೇವಿಯರನ್ನು ನೀನು ಪರೀಕ್ಷಿಸಿದೆ.
ಮೆರೀಬ ಬುಗ್ಗೆಯ ಬಳಿ ಅವರು ನಿನ್ನವರೆಂದು ನಿನಗೆ ಖಚಿತವಾಯಿತು.
ಯೆಹೋವನೇ, ಅವರು ನಿನಗಾಗಿ ಚಿಂತಿಸಿದರು; ಸ್ವಂತ ಸಂಸಾರಕ್ಕಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದರು;
ಅವರು ನಿನಗಾಗಿ ತಮ್ಮ ತಂದೆತಾಯಿಗಳನ್ನು ನಿರ್ಲಕ್ಷಿಸಿದರು;
ಒಡಹುಟ್ಟಿದವರನ್ನೂ ಗುರುತಿಸಲಿಲ್ಲ.
ಅವರು ತಮ್ಮ ಮಕ್ಕಳಿಗೆ ಪ್ರಾಮುಖ್ಯತೆಯನ್ನು ಕೊಡಲಿಲ್ಲ;
ಅವರು ನಿನ್ನ ಕಟ್ಟಳೆಗಳನ್ನು ಅನುಸರಿಸಿ
ಒಡಂಬಡಿಕೆಯನ್ನು ಕಾಪಾಡಿದರು.
10 ಅವರು ಯಾಕೋಬ ವಂಶದವರಿಗೆ ನಿನ್ನ ವಿಧಿನಿಯಮಗಳನ್ನು ಕಲಿಸುವರು;
ನಿನ್ನ ಕಟ್ಟಳೆಗಳನ್ನು ಇಸ್ರೇಲರಿಗೆ ಬೋಧಿಸುವರು.
ಅವರು ನಿನ್ನ ಸನ್ನಿಧಾನದಲ್ಲಿ ಧೂಪಹಾಕುವರು.
ಬಲಿಪೀಠದಲ್ಲಿ ನಿನಗೆ ಯಜ್ಞಾರ್ಪಣೆ ಮಾಡುವರು.
 
11 “ಯೆಹೋವನೇ, ಲೇವಿಯರಿಗೆ ಇರುವಂಥದನ್ನು ಆಶೀರ್ವದಿಸು;
ಅವರು ಮಾಡಿದ್ದೆಲ್ಲಾ ನಿನಗೆ ಮೆಚ್ಚಿಕೆಯಾಗಲಿ.
ಅವರ ಮೇಲೆ ಬೀಳುವವರನ್ನು ನಾಶಮಾಡು,
ಅವರ ವೈರಿಗಳನ್ನು ಸೋಲಿಸು; ಅವರು ಮತ್ತೆ ಲೇವಿಯರ ಮೇಲೆ ಬೀಳದಂತೆ ಮಾಡು.”
ಬೆನ್ಯಾಮೀನನಿಗೆ ಆಶೀರ್ವಾದ
12 ಬೆನ್ಯಾಮೀನನ ವಿಷಯವಾಗಿ ಮೋಶೆಯು ಹೇಳಿದ್ದೇನೆಂದರೆ:
 
“ಯೆಹೋವನು ಬೆನ್ಯಾಮೀನನನ್ನು ಪ್ರೀತಿಸುತ್ತಾನೆ.
ಬೆನ್ಯಾಮೀನನು ಆತನ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುತ್ತಾನೆ.
ಯೆಹೋವನು ಅವನನ್ನು ಯಾವಾಗಲೂ ಸಂರಕ್ಷಿಸುತ್ತಾನೆ.
ಅವನ ಪ್ರಾಂತ್ಯದಲ್ಲಿ ಯೆಹೋವನು ವಾಸಿಸುವನು.”
ಯೋಸೇಫನಿಗೆ ಆಶೀರ್ವಾದ
13 ಯೋಸೇಫನ ಪ್ರಾಂತ್ಯವನ್ನು ಯೆಹೋವನು ಆಶೀರ್ವದಿಸಲಿ:
“ಯೆಹೋವನೇ, ಅವರಿಗೆ ಆಕಾಶದಿಂದ ಮಳೆ ಸುರಿಸು,
ನೆಲದಿಂದ ಬುಗ್ಗೆಯು ಹೊರಬರಲಿ;
14 ಸೂರ್ಯನು ಅವರಿಗೆ ಒಳ್ಳೆಯ ಫಲಗಳನ್ನು ಕೊಡಲಿ;
ಪ್ರತಿ ತಿಂಗಳು ಒಳ್ಳೆಯ ಫಲಗಳನ್ನು ಕೊಡಲಿ.
15 ಬೆಟ್ಟಗುಡ್ಡಗಳು ಉತ್ತಮವಾದ ಫಲಗಳನ್ನು ಫಲಿಸಲಿ.
16 ಭೂಮಿಯು ಒಳ್ಳೆಯದನ್ನು ಯೋಸೇಫನಿಗೆ ಕೊಡಲಿ.
ಯೋಸೇಫನು ತನ್ನ ಸಹೋದರರಿಂದ ಬೇರ್ಪಡಿಸಿಕೊಂಡಿರುವನು.
ಆದ್ದರಿಂದ ಉರಿಯುವ ಪೊದೆಯಲ್ಲಿರುವ ಯೆಹೋವನು ಉತ್ತಮವಾದವುಗಳನ್ನು ಯೋಸೇಫನಿಗೆ ಕೊಡಲಿ.
17 ಯೋಸೇಫನು ಬಲಶಾಲಿಯಾದ ಗೂಳಿಯಂತಿದ್ದಾನೆ.
ಅವನ ಇಬ್ಬರು ಮಕ್ಕಳು ಗೂಳಿಯ ಕೊಂಬುಗಳಂತೆ ಬೇರೆಯವರನ್ನು ದೂಡಿ ಲೋಕದ ಅಂಚಿಗೆ ತಳ್ಳಿಬಿಡುತ್ತಾರೆ.
ಮನಸ್ಸೆಯೊಂದಿಗೆ ಸಾವಿರಗಟ್ಟಲೆ ಜನರಿದ್ದಾರೆ.
ಎಫ್ರಾಯೀಮನೊಂದಿಗೆ ಹತ್ತು ಸಾವಿರಗಟ್ಟಲೆ ಜನರಿದ್ದಾರೆ.”
ಜೆಬುಲೂನನಿಗೆ ಮತ್ತು ಇಸ್ಸಾಕಾರನಿಗೆ ಆಶೀರ್ವಾದಗಳು
18 ಮೋಶೆಯು ಜೆಬುಲೂನ್ ವಿಷಯವಾಗಿ ಹೇಳಿದ್ದೇನೆಂದರೆ:
 
“ಜೆಬುಲೂನನೇ, ನೀನು ಹೊರಗೆ ಹೋಗುವಾಗ ಸಂತೋಷವಾಗಿರು.
ಇಸ್ಸಾಕಾರನೇ, ನೀನು ನಿನ್ನ ಗುಡಾರದೊಳಗಿರುವಾಗ ಸಂತೋಷದಿಂದಿರು.
19 ಅವರು ತಮ್ಮ ಪರ್ವತಗಳಿಗೆ ಜನರನ್ನು ಕರೆಯುವರು.
ಅಲ್ಲಿ ಅವರು ಉತ್ತಮ ಯಜ್ಞವನ್ನು ಅರ್ಪಿಸುವರು.
ಸಮುದ್ರದಿಂದ ಐಶ್ವರ್ಯವನ್ನು ತೆಗೆಯುವರು.
ಸಮುದ್ರ ದಡದಿಂದ ನಿಕ್ಷೇಪವನ್ನೆತ್ತುವರು.”
ಗಾದನಿಗೆ ಆಶೀರ್ವಾದಗಳು
20 ಗಾದನಿಗೆ ಮೋಶೆಯು ಹೇಳಿದ್ದೇನೆಂದರೆ:
 
“ಗಾದನಿಗೆ ವಿಸ್ತಾರವಾದ ಪ್ರಾಂತ್ಯವನ್ನು ಕೊಟ್ಟ ದೇವರಿಗೆ ಸ್ತೋತ್ರ.
ಗಾದನು ಸಿಂಹದಂತಿರುವನು; ಹೊಂಚುಹಾಕುತ್ತಾ ಕಾಯುತ್ತಾ ಇರುವನು.
ಫಕ್ಕನೆ ಪ್ರಾಣಿಯ ಮೇಲೆ ಹಾರಿ ಅದನ್ನು ಸೀಳಿಬಿಡುವನು.
21 ಅದರ ಒಳ್ಳೆಯ ಭಾಗವನ್ನು ತನಗೆ ಆರಿಸಿಕೊಳ್ಳುವನು.
ರಾಜನ ಭಾಗವನ್ನು ತಾನಿಟ್ಟುಕೊಳ್ಳುವನು.
ಜನರ ನಾಯಕರು ಆತನ ಬಳಿಗೆ ಬರುವರು.
ಯೆಹೋವನು ಒಳ್ಳೆಯದೆಂದು ಹೇಳುವ ಕಾರ್ಯಗಳನ್ನು ಮಾಡುವನು.
ಇಸ್ರೇಲ್ ಜನರಿಗೆ ಸರಿಯಾದ ಕಾರ್ಯವನ್ನೇ ಮಾಡುವನು.”
ದಾನನಿಗೆ ಆಶೀರ್ವಾದಗಳು
22 ಮೋಶೆಯು ದಾನನ ವಿಷಯವಾಗಿ ಹೀಗೆ ಹೇಳಿದನು:
 
“ದಾನನು ಪ್ರಾಯದಸಿಂಹದ ಮರಿ;
ಅವನು ಬಾಷಾನಿನಿಂದ ನೆಗೆಯುವನು.”
ನಫ್ತಾಲಿಗೆ ಆಶೀರ್ವಾದಗಳು
23 ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ ಮಾತುಗಳು:
 
“ನಫ್ತಾಲಿಯೇ, ನಿನಗೆ ಉತ್ತಮವಾದ ವಸ್ತುಗಳು ಅಧಿಕವಾಗಿ ದೊರೆಯುತ್ತವೆ.
ಯೆಹೋವನು ನಿನ್ನನ್ನು ನಿಜವಾಗಿಯೂ ಆಶೀರ್ವದಿಸುವನು.
ಗಲಿಲಾಯದ ಬಳಿಯಲ್ಲಿರುವ ಪ್ರಾಂತ್ಯವು ನಿನಗೆ ದೊರಕುವದು.”
ಆಶೇರನಿಗೆ ಆಶೀರ್ವಾದ
24 ಆಶೇರನ ವಿಷಯವಾಗಿ ಮೋಶೆಯ ಮಾತುಗಳು:
 
“ಮಕ್ಕಳಲ್ಲಿ, ಆಶೇರನೇ ಹೆಚ್ಚಾಗಿ ಆಶೀರ್ವದಿಸಲ್ಪಟ್ಟವನು.
ಅವನ ಅಣ್ಣತಮ್ಮಂದಿರೊಳಗೆ ಅವನೇ ಅಚ್ಚುಮೆಚ್ಚಿನವನಾಗಲಿ.
ಎಣ್ಣೆಯಲ್ಲಿ ಅವನು ತನ್ನ ಕಾಲುಗಳನ್ನು ತೊಳೆಯಲಿ.
25 ನಿನ್ನ ಬಾಗಿಲುಗಳಲ್ಲಿ ಬೀಗವಿರುವುದು. ಅವು ಕಬ್ಬಿಣದಿಂದಲೂ ಹಿತ್ತಾಳೆಯಿಂದಲೂ ಮಾಡಲ್ಪಟ್ಟಿವೆ.
ನಿನ್ನ ಜೀವಮಾನ ಕಾಲವೆಲ್ಲಾ ನೀನು ಬಲಶಾಲಿಯಾಗಿರುವೆ.”
ಮೋಶೆಯು ದೇವರನ್ನು ಸ್ತುತಿಸುವುದು
26 “ಯೆಶುರೂನೇ, ನಮ್ಮ ದೇವರ ಹಾಗೆ ಬೇರೆ ದೇವರುಗಳಿಲ್ಲ.
ಆತನು ಮೋಡಗಳ ಮೇಲೆ ಮಹಿಮಾರೂಢನಾಗಿ ಸವಾರಿ ಮಾಡುತ್ತಾ
ಆಕಾಶದಿಂದ ನಿನಗೆ ಸಹಾಯಕ್ಕೆ ಬರುವನು.
27 ಆತನು ನಿರಂತರಕ್ಕೂ ಜೀವಿಸುವವನಾಗಿದ್ದಾನೆ.
ಆತನೇ ನಿಮ್ಮ ಆಶ್ರಯಸ್ಥಾನ.
ಆತನ ಸಾಮರ್ಥ್ಯ ಸದಾಕಾಲವಿರುವುದು.
ಆತನು ನಿಮ್ಮನ್ನು ಸಂರಕ್ಷಿಸಿ ಕಾಪಾಡುವನು;
ನಿಮ್ಮ ದೇಶವನ್ನು ಬಿಟ್ಟುಹೋಗಲು ಜನರನ್ನು ದೂಡುವನು;
‘ವೈರಿಗಳನ್ನು ನಾಶಮಾಡಿರಿ’ ಎಂದು ಹೇಳುವನು.
28 ಇಸ್ರೇಲ್ ಸುರಕ್ಷಿತವಾಗಿ ಜೀವಿಸುವುದು.
ಯಾಕೋಬನ ಬಾವಿ ಅವರ ವಶದಲ್ಲಿದೆ.
ಧಾನ್ಯದ ಮತ್ತು ದ್ರಾಕ್ಷಾರಸದ ದೇಶವು ಅವರಿಗೆ ದೊರಕುತ್ತದೆ.
ಆ ದೇಶಕ್ಕೆ ಅಧಿಕವಾಗಿ ಮಳೆ ಸುರಿಯುವುದು.
29 ಇಸ್ರೇಲೇ, ನೀವು ಆಶೀರ್ವದಿಸಲ್ಪಟ್ಟವರು.
ನಿಮ್ಮ ದೇಶದ ಹಾಗೆ ಯಾವ ದೇಶವೂ ಇರದು.
ಯೆಹೋವನು ನಿಮ್ಮನ್ನು ರಕ್ಷಿಸಿದನು.
ಆತನು ನಿಮ್ಮನ್ನು ಕಾಪಾಡುವ ಬಲವಾದ ಗುರಾಣಿ.
ಆತನು ನಿಮಗೆ ಶಕ್ತಿಯುತವಾದ ಖಡ್ಗ.
ವೈರಿಗಳು ನಿಮಗೆ ಭಯಪಡುವರು.
ನೀವು ಅವರ ಪವಿತ್ರ ಸ್ಥಳವನ್ನು ತುಳಿದುಬಿಡುವಿರಿ!”

*33:5: ಯೆಶುರೂನ ಇಸ್ರೇಲಿನ ಮತ್ತೊಂದು ಹೆಸರು. ಇದರರ್ಥ: “ಒಳ್ಳೆಯ” ಅಥವಾ “ಯಥಾರ್ಥ.”