6
ಐಶ್ವರ್ಯವು ಸಂತೋಷವನ್ನು ಕೊಡಲಾರದು
ಈ ಲೋಕದಲ್ಲಿ ಮತ್ತೊಂದು ಅನ್ಯಾಯವನ್ನು ಕಂಡಿದ್ದೇನೆ. ಅದನ್ನು ಗ್ರಹಿಸಿಕೊಳ್ಳುವುದಕ್ಕೂ ಕಷ್ಟ. ದೇವರು ಒಬ್ಬನಿಗೆ ಐಶ್ವರ್ಯವನ್ನು, ಆಸ್ತಿಪಾಸ್ತಿಯನ್ನು ಮತ್ತು ಘನತೆಯನ್ನು ಕೊಡುವನು. ಅವನು ತನಗೆ ಈಗ ಬೇಕಾಗಿರುವ ಮತ್ತು ಮುಂದೆ ಬೇಕಾಗುವ ಎಲ್ಲವನ್ನೂ ಹೊಂದಿರುವನು. ಆದರೆ ಅವುಗಳನ್ನು ಅನುಭವಿಸಲು ದೇವರು ಅವನಿಗೆ ಅವಕಾಶಕೊಡುವುದಿಲ್ಲ. ಮತ್ತೊಬ್ಬನು ಬಂದು ಎಲ್ಲವನ್ನೂ ತೆಗೆದುಕೊಳ್ಳುವನು. ಇದು ಸಹ ತುಂಬ ಕೆಟ್ಟದ್ದೂ ಅರ್ಥವಿಲ್ಲದ್ದೂ ಆಗಿದೆ.
ಒಬ್ಬನು ಬಹುಕಾಲ ಬದುಕಬಹುದು. ಅವನಿಗೆ ನೂರು ಮಂದಿ ಮಕ್ಕಳಿರಬಹುದು. ಆದರೆ ಅವನಿಗೆ ತೃಪ್ತಿಯೂ ಸತ್ತ ಮೇಲೆ ಉತ್ತರಕ್ರಿಯೆಯೂ ಇಲ್ಲದಿದ್ದರೆ ಹುಟ್ಟುವಾಗಲೇ ಸಾಯುವ ಮಗು ಅವನಿಗಿಂತಲೂ ಉತ್ತಮ. ಮಗುವು ಹುಟ್ಟುವಾಗಲೇ ಸತ್ತುಹೋದರೆ ಅದಕ್ಕೆ ನಿಜವಾಗಿಯೂ ಅರ್ಥವಿಲ್ಲ. ಅದು ಹೆಸರನ್ನೂ ಹೊಂದಿಲ್ಲದೆ ಕತ್ತಲೆಯ ಗುಂಡಿಯಲ್ಲಿ ಹೂಳಲ್ಪಡುವುದು. ಅದು ಸೂರ್ಯನನ್ನು ನೋಡಲೇ ಇಲ್ಲ. ಅದಕ್ಕೆ ತಿಳಿವಳಿಕೆಯೂ ಇಲ್ಲ. ಆದರೆ ದೇವರು ಅನುಗ್ರಹಿಸಿದವುಗಳಲ್ಲಿ ಸಂತೋಷಪಡದವನಿಗಿಂತ ಆ ಮಗುವೇ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು. ಅವನು ಎರಡು ಸಾವಿರ ವರ್ಷಗಳ ಕಾಲ ಬದುಕಿಯೂ ಜೀವನದಲ್ಲಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಆ ಮಗುವೂ ಅವನೂ ಕತ್ತಲೆ ಗುಂಡಿಗೇ ಹೋಗುವರು.
ಮನುಷ್ಯನು ದುಡಿಯುವುದೆಲ್ಲಾ ಊಟಕ್ಕಾಗಿಯೇ. ಆದರೂ ಅವನಿಗೆ ತೃಪ್ತಿಯೇ ಇಲ್ಲ. ಆದ್ದರಿಂದ ಜ್ಞಾನಿಯು ಮೂಢನಿಗಿಂತ ಉತ್ತಮನಲ್ಲ. ಬಡವರಾಗಿದ್ದರೂ ಜೀವನವನ್ನು ಅರ್ಥಮಾಡಿಕೊಂಡು ಜೀವಿಸುವುದೇ ಮೇಲು, ದುರಾಶೆಪಡುವುದಕ್ಕಿಂತ ಇರುವುದರಲ್ಲಿ ಸಂತೋಷಪಡುವುದೇ ಉತ್ತಮ. ದುರಾಶೆಯಿಂದ ಪ್ರಯೋಜನವಿಲ್ಲ. ಅದು ಸಹ ಗಾಳಿಯನ್ನು ಹಿಂದಟ್ಟಿದಂತಿದೆ.
10-11 ಮನುಷ್ಯನು ಕೇವಲ ಮನುಷ್ಯನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಅದರ ಬಗ್ಗೆ ವಾದಮಾಡುವುದರಿಂದ ಉಪಯೋಗವಿಲ್ಲ. ಅಲ್ಲದೆ ಮನುಷ್ಯನು ದೇವರೊಂದಿಗೆ ವಾದಮಾಡಲಾರನು. ಯಾಕೆಂದರೆ ದೇವರು ಮನುಷ್ಯನಿಗಿಂತಲೂ ಬಲಿಷ್ಠನಾಗಿದ್ದಾನೆ. ಆದ್ದರಿಂದ ವಾದವು ಕೇವಲ ನಿರರ್ಥಕವಾಗಿದೆ.
12 ಮನುಷ್ಯನ ಅಲ್ಪಕಾಲದ ಜೀವನದಲ್ಲಿ ಅವನಿಗೆ ಯಾವುದು ಉತ್ತಮವೆಂದು ಯಾರಿಗೆ ಗೊತ್ತು? ಅವನ ಜೀವನವು ನೆರಳಿನಂತೆ ಕಳೆದುಹೋಗುವುದು. ಮುಂದೆ ಏನಾಗುವುದೆಂದು ಯಾರೂ ಅವನಿಗೆ ಹೇಳಲಾರರು.