ವಿಮೋಚನಕಾಂಡ
1
ಈಜಿಪ್ಟಿನಲ್ಲಿ ಯಾಕೋಬನ ಕುಟುಂಬ
ಯಾಕೋಬನು (ಇಸ್ರೇಲನು) ತನ್ನ ಗಂಡುಮಕ್ಕಳೊಂದಿಗೆ ಈಜಿಪ್ಟಿಗೆ ಪ್ರಯಾಣ ಮಾಡಿದನು; ತಮ್ಮ ಕುಟುಂಬಗಳೊಡನೆ ಹೋದ ಅವನ ಗಂಡುಮಕ್ಕಳು ಯಾರೆಂದರೆ: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್, ಬೆನ್ಯಾಮೀನ್, ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್. ಯಾಕೋಬನ ಸಂತತಿಯವರಲ್ಲಿ ಒಟ್ಟು ಎಪ್ಪತ್ತು ಮಂದಿ ಇದ್ದರು. (ಯಾಕೋಬನ ಹನ್ನೆರಡು ಮಂದಿ ಗಂಡುಮಕ್ಕಳಲ್ಲಿ ಒಬ್ಬನಾದ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.)
ಬಳಿಕ ಯೋಸೇಫನೂ ಅವನ ಸಹೋದರರೂ ಮತ್ತು ಆ ತಲೆಮಾರಿನ ಜನರೆಲ್ಲರೂ ಸತ್ತುಹೋದರು. ಆದರೆ ಇಸ್ರೇಲರಿಗೆ ಅನೇಕ ಮಕ್ಕಳಿದ್ದರು; ಅವರ ಸಂಖ್ಯೆಯು ಹೆಚ್ಚಾಗತೊಡಗಿತು. ಇಸ್ರೇಲರು ಬಲಗೊಂಡರು; ಈಜಿಪ್ಟಿನಲ್ಲೆಲ್ಲಾ ತುಂಬಿಕೊಂಡರು.
ಇಸ್ರೇಲರಿಗೆ ಹಿಂಸೆ
ಬಳಿಕ ಒಬ್ಬ ಹೊಸ ರಾಜನು ಈಜಿಪ್ಟನ್ನು ಆಳತೊಡಗಿದನು. ಈ ರಾಜನಿಗೆ ಯೋಸೇಫನ ವಿಷಯವಾಗಿ ತಿಳಿದಿರಲಿಲ್ಲ. ಈ ರಾಜನು ತನ್ನ ಜನರಿಗೆ, “ಇಸ್ರೇಲರ ಸಂಖ್ಯೆಯು ಹೆಚ್ಚಾಯಿತು; ಅವರು ನಮಗಿಂತಲೂ ಬಲಿಷ್ಠರಾದರು. 10 ಯುದ್ಧವೇನಾದರೂ ಸಂಭವಿಸಿದರೆ, ಇಸ್ರೇಲರು ನಮ್ಮ ವೈರಿಗಳೊಡನೆ ಸೇರಿಕೊಂಡು ನಮ್ಮನ್ನು ಸೋಲಿಸಿ ನಮ್ಮಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ ಅವರು ಅಭಿವೃದ್ಧಿಯಾಗದಂತೆ ನಾವು ಉಪಾಯವನ್ನು ಮಾಡೋಣ” ಎಂದು ಹೇಳಿದನು.
11 ಆದ್ದರಿಂದ ಅವರು ಇಸ್ರೇಲರನ್ನು ಹಿಂಸಿಸಲು ತೀರ್ಮಾನಿಸಿದರು. ಇಸ್ರೇಲರಿಂದ ಬಿಟ್ಟೀಕೆಲಸ ಮಾಡಿಸುವುದಕ್ಕಾಗಿ ಅಧಿಕಾರಿಗಳನ್ನು ನೇಮಿಸಿದರು. ಈ ಅಧಿಕಾರಿಗಳು ರಾಜನಿಗಾಗಿ ಪಿತೋಮ್ ಮತ್ತು ರಾಮ್ಸೇಸ್ ಪಟ್ಟಣಗಳನ್ನು ಇಸ್ರೇಲರಿಂದ ಬಲವಂತವಾಗಿ ಕಟ್ಟಿಸಿದರು; ಧಾನ್ಯಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಶೇಖರಿಸುವುದಕ್ಕೆ ರಾಜನು ಈ ಪಟ್ಟಣಗಳನ್ನು ಉಪಯೋಗಿಸಿದನು.
12 ಈಜಿಪ್ಟಿನವರು ಇಸ್ರೇಲರಿಂದ ಪ್ರಯಾಸಕರವಾದ ಕೆಲಸಗಳನ್ನು ಬಲವಂತವಾಗಿ ಮಾಡಿಸಿದಷ್ಟೂ ಇಸ್ರೇಲರು ಹೆಚ್ಚು ಹರಡಿಕೊಂಡದ್ದರಿಂದ ಈಜಿಪ್ಟಿನ ಜನರು ಇಸ್ರೇಲರಿಗೆ ಹೆಚ್ಚೆಚ್ಚಾಗಿ ಭಯಪಟ್ಚರು. 13 ಅಲ್ಲದೆ ಇನ್ನೂ ಪ್ರಯಾಸಕರವಾದ ಕೆಲಸವನ್ನು ಬಲವಂತದಿಂದ ಮಾಡಿಸಿಕೊಂಡರು.
14 ಈಜಿಪ್ಟಿನವರು ಇಸ್ರೇಲರ ಜೀವಿತವನ್ನು ಕಷ್ಟಕರವನ್ನಾಗಿ ಮಾಡಿದರು. ಇಸ್ರೇಲರಿಂದ ಇಟ್ಟಿಗೆಗಳನ್ನೂ ಗಾರೆಗಳನ್ನೂ ಬೇಸಾಯವನ್ನೂ ಪ್ರತಿಯೊಂದು ಕೆಲಸವನ್ನು ಬಲವಂತವಾಗಿ ಮಾಡಿಸಿಕೊಂಡರು.
ದೇವರನ್ನು ಹಿಂಬಾಲಿಸಿದ ದಾದಿಯರು
15 ಇಸ್ರೇಲಿನ ಸ್ತ್ರೀಯರಿಗೆ ಹೆರಿಗೆ ಮಾಡಿಸಲು ಇಬ್ರಿಯರಾದ ಇಬ್ಬರು ದಾದಿಯರಿದ್ದರು. ಇವರ ಹೆಸರು: ಶಿಫ್ರಾ ಮತ್ತು ಪೂಗಾ. ಈಜಿಪ್ಟಿನ ರಾಜನು ಈ ದಾದಿಯರೊಡನೆ ಮಾತಾಡಿ ಅವರಿಗೆ, 16 “ಇಬ್ರಿಯ ಸ್ತ್ರೀಯರಿಗೆ ನೀವು ಹೆರಿಗೆ ಮಾಡುವಾಗ ಹೆಣ್ಣುಮಗು ಹುಟ್ಟಿದರೆ, ಅದನ್ನು ಉಳಿಸಿರಿ; ಗಂಡುಮಗು ಹುಟ್ಟಿದರೆ ಸಾಯಿಸಿರಿ!” ಎಂದು ಹೇಳಿದನು.
17 ಆದರೆ ಆ ದಾದಿಯರಿಗೆ ದೇವರಲ್ಲಿ ಭಯಭಕ್ತಿ ಇದ್ದಕಾರಣ ಅವರು ರಾಜನ ಆಜ್ಞೆಗೆ ವಿಧೇಯರಾಗದೆ ಗಂಡುಮಕ್ಕಳನ್ನೂ ಉಳಿಸಿದರು.
18 ಈಜಿಪ್ಟಿನ ರಾಜನು ದಾದಿಯರನ್ನು ಕರೆದು, “ನೀವು ಹೀಗೇಕೆ ಮಾಡುತ್ತಿದ್ದೀರಿ? ಗಂಡುಮಕ್ಕಳನ್ನು ನೀವು ಉಳಿಸುತ್ತಿರುವುದೇಕೆ?” ಎಂದು ಕೇಳಿದನು.
19 ದಾದಿಯರು, “ಇಬ್ರಿಯ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರಿಗಿಂತ ಚುರುಕಾಗಿದ್ದಾರೆ. ನಾವು ಅವರಿಗೆ ಸಹಾಯ ಮಾಡುವುದಕ್ಕಿಂತ ಮೊದಲೇ ಅವರು ಹೆರುತ್ತಾರೆ” ಎಂದು ಹೇಳಿದರು. 20-21 ಈ ದಾದಿಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿದ್ದ ಕಾರಣ ಆತನು ಅವರನ್ನೂ ಅವರ ಕುಟುಂಬಗಳನ್ನೂ ಅಭಿವೃದ್ಧಿಪಡಿಸಿದನು.
ಇದಲ್ಲದೆ ಇಸ್ರೇಲರ ಸಂಖ್ಯೆಯು ಅಧಿಕವಾಗಿ ಬೆಳೆಯತೊಡಗಿತು. 22 ಆದ್ದರಿಂದ ಫರೋಹನು ತನ್ನ ಜನರಿಗೆಲ್ಲಾ, “ಇಬ್ರಿಯರಿಗೆ ಹುಟ್ಟುವ ಗಂಡುಕೂಸುಗಳನ್ನೆಲ್ಲಾ ನೈಲ್ ನದಿಗೆ ಎಸೆದುಬಿಡಬೇಕು. ಆದರೆ ಎಲ್ಲಾ ಹೆಣ್ಣುಮಕ್ಕಳು ಬದುಕಲಿ” ಎಂದು ಆಜ್ಞಾಪಿಸಿದನು.