17
ಬಂಡೆಯೊಳಗಿಂದ ನೀರು
ಇಸ್ರೇಲರೆಲ್ಲರೂ ಸಿನ್ ಮರುಭೂಮಿಯಿಂದ ಒಟ್ಟಾಗಿ ಪ್ರಯಾಣಮಾಡಿದರು. ಯೆಹೋವನು ಆಜ್ಞಾಪಿಸಿದಂತೆಲ್ಲಾ ಅವರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣಮಾಡಿದರು. ಅವರು ರೆಫೀದೀಮಿಗೆ ಪ್ರಯಾಣಮಾಡಿ ಅಲ್ಲಿ ತಂಗಿದರು. ಅವರಿಗೆ ಕುಡಿಯಲು ಅಲ್ಲಿ ನೀರಿರಲಿಲ್ಲ. ಆದ್ದರಿಂದ ಅವರು ಮೋಶೆಗೆ ವಿರುದ್ಧವಾಗಿ ದಂಗೆ ಎದ್ದು ಅವನೊಡನೆ ವಾಗ್ವಾದ ಮಾಡತೊಡಗಿದರು. “ನಮಗೆ ಕುಡಿಯಲು ನೀರು ಕೊಡು” ಎಂದು ಅವರು ಕೇಳಿದರು.
ಮೋಶೆ ಅವರಿಗೆ, “ನೀವು ಯಾಕೆ ನನಗೆ ವಿರುದ್ಧವಾಗಿ ದಂಗೆಯೆದ್ದಿರಿ? ನೀವು ಯಾಕೆ ಯೆಹೋವನನ್ನು ಪರೀಕ್ಷಿಸುತ್ತಿದ್ದೀರಿ? ಯೆಹೋವನು ನಮ್ಮೊಡನೆ ಇಲ್ಲವೆಂದು ನೀವು ಭಾವಿಸುತ್ತೀರೋ?” ಎಂದು ಹೇಳಿದನು.
ಆದರೆ ಜನರು ನೀರಿಲ್ಲದೆ ಬಹಳ ಬಾಯಾರಿಕೆಗೆ ಒಳಗಾಗಿದ್ದರು. ಆದ್ದರಿಂದ ಅವರು ಮೋಶೆಯ ಮೇಲೆ ಗುಣುಗುಟ್ಟುತ್ತಿದ್ದರು. “ನೀನು ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದದ್ದೇಕೆ? ನಾವು, ನಮ್ಮ ಮಕ್ಕಳು ಮತ್ತು ನಮ್ಮ ದನಕರುಗಳೆಲ್ಲಾ ನೀರಿಲ್ಲದೆ ಸಾಯುವುದಕ್ಕೆ ನೀನು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದೆಯಾ?” ಎಂದು ಅವರು ಕೇಳಿದರು.
ಆದ್ದರಿಂದ ಮೋಶೆಯು ಯೆಹೋವನಿಗೆ ಮೊರೆಯಿಟ್ಟು, “ಈ ಜನರ ವಿಷಯದಲ್ಲಿ ನಾನೇನು ಮಾಡಲಿ? ಅವರು ಕಲ್ಲೆಸೆದು ನನ್ನನ್ನು ಕೊಲ್ಲುವುದಕ್ಕೆ ಸಿದ್ಧವಾಗಿದ್ದಾರೆ” ಅಂದನು.
ಯೆಹೋವನು ಮೋಶೆಗೆ, “ಇಸ್ರೇಲ್ ಜನರ ಮುಂದೆ ಹೋಗು. ನಿನ್ನೊಡನೆ ಜನರ ಕೆಲವು ಹಿರಿಯರನ್ನು ಕರೆದುಕೊ. ನಿನ್ನ ಊರುಗೋಲನ್ನು ಹಿಡಿದುಕೊಂಡು ಹೋಗು. ನೀನು ನೈಲ್ ನದಿಯನ್ನು ಹೊಡೆಯಲು ಉಪಯೋಗಿಸಿದ ಕೋಲು ಇದಾಗಿದೆ. ಹೋರೇಬಿನಲ್ಲಿ ನಾನು ನಿನ್ನ ಮುಂದೆ ಒಂದು ಬಂಡೆಯ ಮೇಲೆ ನಿಲ್ಲುವೆನು. ಊರುಗೋಲಿನಿಂದ ಆ ಬಂಡೆಯನ್ನು ಹೊಡೆ; ಆಗ ನೀರು ಅದರೊಳಗಿಂದ ಬರುವುದು. ಆಗ ಜನರು ಕುಡಿಯಬಹುದು” ಎಂದು ಹೇಳಿದನು.
ಅಂತೆಯೇ ಮೋಶೆ ಮಾಡಿದನು. ಇಸ್ರೇಲರ ಹಿರಿಯರು ಇದನ್ನು ನೋಡಿದರು. ಮೋಶೆ ಆ ಸ್ಥಳಕ್ಕೆ ಮಸ್ಸಾ ಮತ್ತು ಮೆರೀಬಾ ಎಂದು ಹೆಸರಿಟ್ಟನು. ಯಾಕೆಂದರೆ ಈ ಸ್ಥಳದಲ್ಲಿ ಇಸ್ರೇಲರು ಅವನಿಗೆ ವಿರುದ್ಧವಾಗಿ ದಂಗೆ ಎದ್ದು ಯೆಹೋವನನ್ನು ಪರೀಕ್ಷಿಸಿದರು. ಯೆಹೋವನು ಅವರೊಡನೆ ಇದ್ದಾನೋ ಇಲ್ಲವೋ ಎಂದು ಜನರು ತಿಳಿಯಬಯಸಿದರು.
War With the Amalekites
ರೆಫೀದೀಮಿನಲ್ಲಿ ಅಮಾಲೇಕ್ಯರು ಬಂದು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧಮಾಡಿದರು. ಆದ್ದರಿಂದ ಮೋಶೆ ಯೆಹೋಶುವನಿಗೆ, “ಕೆಲವು ಪುರುಷರನ್ನು ಆರಿಸಿಕೊಂಡು, ನಾಳೆ ಅಮಾಲೇಕ್ಯರೊಡನೆ ಯುದ್ಧಮಾಡು. ನಾನು ಬೆಟ್ಟದ ತುದಿಯಲ್ಲಿ ನಿಂತು ಗಮನಿಸುವೆನು, ದೇವರು ನನಗೆ ಕೊಟ್ಟ ಊರುಗೋಲನ್ನು ನಾನು ಹಿಡಿದುಕೊಂಡಿರುವೆನು” ಎಂದು ಹೇಳಿದನು.
10 ಯೆಹೋಶುವನು ಮೋಶೆಯ ಮಾತಿಗೆ ವಿಧೇಯನಾಗಿ ಮರುದಿನ ಅಮಾಲೇಕ್ಯರೊಡನೆ ಯುದ್ಧಮಾಡಲು ಹೋದನು. ಅದೇ ಸಮಯದಲ್ಲಿ ಮೋಶೆಯೂ ಆರೋನನೂ ಹೂರನೂ ಬೆಟ್ಟದ ತುದಿಗೆ ಹೋದರು. 11 ಮೋಶೆ ತನ್ನ ಕೈಗಳನ್ನು ಮೇಲೆತ್ತಿದಾಗ ಇಸ್ರೇಲರು ಜಯಗಳಿಸಿದರು. ಆದರೆ ಮೋಶೆಯು ತನ್ನ ಕೈಗಳನ್ನು ಕೆಳಗಿಳಿಸಿದಾಗ ಅಮಾಲೇಕ್ಯರು ಜಯಗಳಿಸಿದರು.
12 ಸ್ವಲ್ಪ ಸಮಯದ ನಂತರ ಮೋಶೆಯ ತೋಳುಗಳು ಆಯಾಸಗೊಂಡವು. ಆದ್ದರಿಂದ ಅವರು ಒಂದು ದೊಡ್ಡಕಲ್ಲನ್ನು ಇಟ್ಟು ಮೋಶೆಯನ್ನು ಅದರ ಮೇಲೆ ಕುಳ್ಳಿರಿಸಿದರು. ಬಳಿಕ ಆರೋನನು ಮತ್ತು ಹೂರನು ಮೋಶೆಯ ಕೈಗಳನ್ನು ಮೇಲೆತ್ತಿ ಹಿಡಿದುಕೊಂಡರು. ಆರೋನನು ಮೋಶೆಯ ಒಂದು ಕಡೆಯಲ್ಲಿದ್ದನು; ಹೂರನು ಮೋಶೆಯ ಇನ್ನೊಂದು ಕಡೆಯಲ್ಲಿದ್ದನು. ಸೂರ್ಯನು ಮುಳುಗುವವರೆಗೆ ಅವರು ಅವನ ಕೈಗಳನ್ನು ಮೇಲೆತ್ತಿ ಹಿಡಿದರು. 13 ಆದ್ದರಿಂದ ಯೆಹೋಶುವನು ಮತ್ತು ಅವನ ಸೈನಿಕರು ಅಮಾಲೇಕ್ಯರನ್ನು ಯುದ್ಧದಲ್ಲಿ ಸೋಲಿಸಿದರು.
14 ಬಳಿಕ ಯೆಹೋವನು ಮೋಶೆಗೆ, “ಈ ಯುದ್ಧದ ಕುರಿತು ಬರೆ: ಜನರು ಇಲ್ಲಿ ನಡೆದದ್ದನ್ನು ಜ್ಞಾಪಿಸಿಕೊಳ್ಳುವಂತೆ ಈ ಸಂಗತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡು. ನಾನು ಅಮಾಲೇಕ್ಯರನ್ನು ಭೂಮಿಯ ಮೇಲಿಂದ ಸಂಪೂರ್ಣವಾಗಿ ನಾಶಮಾಡುವೆನೆಂದು ಯೆಹೋಶುವನಿಗೆ ಹೇಳಲು ಮರೆಯಬೇಡ” ಎಂದು ಹೇಳಿದನು.
15 ಆಗ ಮೋಶೆಯು ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಮೋಶೆಯು ಯಜ್ಞವೇದಿಕೆಗೆ, “ಯೆಹೋವನು ನನ್ನ ಧ್ವಜ” ಎಂದು ಹೆಸರಿಟ್ಟನು. 16 ಮೋಶೆ, “ನಾನು ನನ್ನ ಕೈಗಳನ್ನು ಯೆಹೋವನ ಸಿಂಹಾಸನದ ಕಡೆಗೆ ಎತ್ತಿದೆನು. ಆದ್ದರಿಂದ ಯೆಹೋವನು ಎಂದಿನಂತೆ ಅಮಾಲೇಕ್ಯರ ವಿರುದ್ಧವಾಗಿ ಯುದ್ಧಮಾಡಿದನು” ಅಂದನು.