35
ಸಬ್ಬತ್ ದಿನದ ಬಗ್ಗೆ ನಿಯಮಗಳು
ಮೋಶೆಯು ಇಸ್ರೇಲರನ್ನು ಒಟ್ಟಾಗಿ ಸೇರಿಸಿದನು. ಮೋಶೆ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ ಸಂಗತಿಗಳನ್ನು ನಾನು ಹೇಳುವೆನು:
“ಕೆಲಸ ಮಾಡುವುದಕ್ಕೆ ಆರು ದಿನಗಳಿವೆ. ಆದರೆ ಏಳನೆಯ ದಿನವು ನಿಮಗೆ ಬಹು ವಿಶೇಷವಾದ ವಿಶ್ರಾಂತಿ ದಿನವಾಗಿರುವುದು. ಆ ವಿಶೇಷ ದಿನದಲ್ಲಿ ವಿಶ್ರಮಿಸುವುದರ ಮೂಲಕ ನೀವು ಯೆಹೋವನನ್ನು ಸನ್ಮಾನಿಸುವಿರಿ. ಏಳನೆಯ ದಿನದಲ್ಲಿ ಕೆಲಸಮಾಡುವ ವ್ಯಕ್ತಿಯು ಸಂಹರಿಸಲ್ಪಡಬೇಕು. ನೀವು ವಾಸಿಸುವ ಯಾವ ಸ್ಥಳದಲ್ಲಿಯೂ ಸಬ್ಬತ್‌ದಿನದಂದು ಬೆಂಕಿಯನ್ನು ಹೊತ್ತಿಸಬಾರದು” ಎಂದು ಹೇಳಿದನು.
ಪವಿತ್ರಗುಡಾರಕ್ಕೆ ವಸ್ತುಗಳು
ಮೋಶೆಯು ಇಸ್ರೇಲರಿಗೆ, “ಯೆಹೋವನು ಆಜ್ಞಾಪಿಸಿದ್ದು ಇದುವೇ. ಯೆಹೋವನಿಗಾಗಿ ಕಾಣಿಕೆಗಳನ್ನು ಕೂಡಿಸಿರಿ. ನಿಮ್ಮಲ್ಲಿ ಪ್ರತಿಯೊಬ್ಬನು ತಾನು ಕೊಡುವಂಥದ್ದನ್ನು ತನ್ನ ಹೃದಯದಲ್ಲಿ ತೀರ್ಮಾನಿಸಿಕೊಳ್ಳಬೇಕು. ಬಳಿಕ ಆ ಕಾಣಿಕೆಯನ್ನು ಯೆಹೋವನ ಸನ್ನಿಧಿಗೆ ತರಬೇಕು. ಚಿನ್ನ, ಬೆಳ್ಳಿ, ತಾಮ್ರ, ನೀಲಿ, ನೇರಳೆ, ಕೆಂಪುದಾರ ಮತ್ತು ಶ್ರೇಷ್ಠ ನಾರುಬಟ್ಟೆ, ಆಡಿನ ಕೂದಲು, ಕೆಂಪುಬಣ್ಣದ ಕುರಿದೊಗಲು, ಕಡಲುಹಂದಿಯ ತೊಗಲು, ಜಾಲೀಮರ, ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕತೈಲ ಮತ್ತು ಪರಿಮಳಧೂಪವನ್ನು ತಯಾರಿಸಲು ಬೇಕಾದ ಸುಗಂಧದ್ರವ್ಯ ಇವುಗಳನ್ನು ತನ್ನಿರಿ. ಏಫೋದಿನಲ್ಲಿ ಮತ್ತು ದೈವನಿರ್ಣಯದ ಪದಕದಲ್ಲಿ ಹಾಕಬೇಕಾಗಿರುವ ಗೋಮೇಧಿಕ ರತ್ನಗಳು ಮತ್ತು ಇತರ ರತ್ನಗಳನ್ನು ತನ್ನಿರಿ.
10 “ಯೆಹೋವನು ಆಜ್ಞಾಪಿಸಿದ ವಸ್ತುಗಳನ್ನು ನಿಮ್ಮಲ್ಲಿ ನಿಪುಣರಾದ ಕೆಲಸಗಾರರೆಲ್ಲರೂ ಮಾಡಬೇಕು. ಅವು ಯಾವುವೆಂದರೆ, 11 ಪವಿತ್ರಗುಡಾರ, ಅದರ ಹೊರಗಿನ ಡೇರೆ, ಅದರ ಮೇಲ್ಹೊದಿಕೆಗಳು, ಅದರ ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳು, 12 ಪವಿತ್ರಪೆಟ್ಟಿಗೆ ಮತ್ತು ಅದನ್ನು ಹೊರುವ ಕೋಲುಗಳು, ಕೃಪಾಸನ ಮತ್ತು ಪೆಟ್ಟಿಗೆ ಇರುವ ಸ್ಥಳವನ್ನು ಮುಚ್ಚುವ ಪರದೆ, 13 ಮೇಜು ಮತ್ತು ಅದರ ಕೋಲುಗಳು, ಮೇಜಿನ ಮೇಲಿರುವ ಎಲ್ಲಾ ಉಪಕರಣಗಳು, ಮೇಜಿನ ಮೇಲಿರುವ ನೈವೇದ್ಯರೊಟ್ಟಿ, 14 ದೀಪಸ್ತಂಭ ಮತ್ತು ಅದರ ಉಪಕರಣಗಳು, ದೀಪಗಳು, ದೀಪಕ್ಕೆ ಬೇಕಾದ ಎಣ್ಣೆ, 15 ಧೂಪವೇದಿ ಮತ್ತು ಅದರ ಕೋಲುಗಳು, ಅಭಿಷೇಕತೈಲ, ಪರಿಮಳಧೂಪ, ಪವಿತ್ರ ಗುಡಾರದ ಬಾಗಿಲಿನ ಪರದೆ, 16 ಸರ್ವಾಂಗಹೋಮ ಮಾಡಲು ಯಜ್ಞವೇದಿಕೆ ಮತ್ತು ಅದರ ತಾಮ್ರದ ಜಾಳಿಗೆ, ಕೋಲುಗಳು, ಯಜ್ಞವೇದಿಕೆಗೆ ಬೇಕಾಗುವ ಎಲ್ಲಾ ಉಪಕರಣಗಳು, ಗಂಗಾಳ ಮತ್ತು ಅದರ ಪೀಠ, 17 ಅಂಗಳದ ಸುತ್ತಲಿನ ಪರದೆಗಳು, ಕಂಬಗಳು, ಗದ್ದಿಗೇಕಲ್ಲುಗಳು, ಅಂಗಳದ ಬಾಗಿಲಿನ ಪರದೆ, 18 ಗುಡಾರದ ಗೂಟಗಳು, ಅಂಗಳದ ಗೂಟಗಳು ಮತ್ತು ಹಗ್ಗಗಳು, 19 ಮತ್ತು ಪವಿತ್ರಸ್ಥಳದಲ್ಲಿ ಯಾಜಕರು ಧರಿಸತಕ್ಕ ವಿಶೇಷವಾದ ಹೆಣೆದ ಬಟ್ಟೆಗಳು. ಈ ಬಟ್ಟೆಗಳನ್ನು ಯಾಜಕನಾದ ಆರೋನನು ಮತ್ತು ಅವನ ಪುತ್ರರು ಯಾಜಕ ಸೇವೆ ಮಾಡುವಾಗ ಧರಿಸಿಕೊಳ್ಳುವರು” ಎಂದು ಹೇಳಿದನು.
ಜನರಿಂದ ಮಹಾಕಾಣಿಕೆ
20 ಬಳಿಕ ಇಸ್ರೇಲರೆಲ್ಲರೂ ಮೋಶೆಯ ಬಳಿಯಿಂದ ಹೊರಟುಹೋದರು. 21 ಕಾಣಿಕೆ ಕೊಡುವುದಕ್ಕೆ ಯಾರ್ಯಾರು ಬಯಸಿದರೋ ಅವರೆಲ್ಲರೂ ಬಂದು ಯೆಹೋವನಿಗೆ ಕಾಣಿಕೆಯನ್ನು ಅರ್ಪಿಸಿದರು. ಈ ಕಾಣಿಕೆಗಳು ದೇವದರ್ಶನಗುಡಾರ, ಅದರ ಎಲ್ಲಾ ವಸ್ತುಗಳು ಮತ್ತು ವಿಶೇಷ ಬಟ್ಟೆಗಳನ್ನು ಮಾಡಲು ಉಪಯೋಗಿಸಲ್ಪಟ್ಟವು. 22 ಕಾಣಿಕೆ ಕೊಡುವುದಕ್ಕೆ ಬಯಸಿದ ಎಲ್ಲಾ ಗಂಡಸರು, ಹೆಂಗಸರು ಎಲ್ಲಾ ವಿಧದ ಚಿನ್ನದ ಆಭರಣಗಳನ್ನು ತಂದರು. ಅವರು ತಮ್ಮ ಕಡಗ, ಮೂಗುತಿ, ಉಂಗುರ, ಕಂಠಮಾಲೆ ಮತ್ತು ಇತರ ಚಿನ್ನದ ಆಭರಣಗಳನ್ನು ತಂದರು. ಅವರೆಲ್ಲರು ತಮ್ಮ ಎಲ್ಲಾ ಕೊಡುಗೆಗಳನ್ನು ಯೆಹೋವನಿಗೆ ಕೊಟ್ಟರು. ಇದು ಯೆಹೋವನಿಗೆ ಕೊಟ್ಟ ವಿಶೇಷವಾದ ಕಾಣಿಕೆಯಾಗಿತ್ತು.
23 ಪ್ರತಿಯೊಬ್ಬನು ತನ್ನಲ್ಲಿದ್ದ ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಯೆಹೋವನಿಗಾಗಿ ತಂದನು. ಯಾರಲ್ಲಿ ಕೆಂಪುಬಣ್ಣದ ಕುರಿದೊಗಲಾಗಲಿ ಕಡಲುಹಂದಿಯ ತೊಗಲಾಗಲಿ ಇದ್ದವೋ ಅವರು ಅವುಗಳನ್ನು ಯೆಹೋವನಿಗಾಗಿ ತಂದುಕೊಟ್ಟರು. 24 ಬೆಳ್ಳಿಯನ್ನಾಗಲಿ ತಾಮ್ರವನ್ನಾಗಲಿ ಕೊಡಲು ಬಯಸಿದವರು ಅದನ್ನು ಕೆಲಸಕ್ಕೋಸ್ಕರ ಯೆಹೋವನಿಗೆ ಕಾಣಿಕೆಯಾಗಿ ತಂದರು. ಜಾಲೀಮರವನ್ನು ಹೊಂದಿದವರು ಅದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟರು. 25 ನಿಪುಣರಾದ ಸ್ತ್ರೀಯರು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಮಾಡಿದರು. 26 ನಿಪುಣರಾಗಿದ್ದ ಇತರ ಸ್ತ್ರೀಯರು ಆಡುಕೂದಲಿನಿಂದ ಬಟ್ಟೆಯನ್ನು ತಯಾರಿಸಿದರು.
27 ನಾಯಕರು ಗೋಮೇಧಿಕ ರತ್ನಗಳನ್ನು ಮತ್ತು ಇತರ ರತ್ನಗಳನ್ನು ತಂದುಕೊಟ್ಟರು. ಅವುಗಳನ್ನು ಯಾಜಕನ ಏಫೋದಿಗೂ ಮತ್ತು ದೈವನಿರ್ಣಯದ ಪದಕಕ್ಕೂ ಉಪಯೋಗಿಸಲಾಯಿತು. 28 ಜನರು ಸುಗಂಧದ್ರವ್ಯಗಳನ್ನೂ ಆಲಿವ್ ಎಣ್ಣೆಯನ್ನೂ ತಂದುಕೊಟ್ಟರು. ಈ ವಸ್ತುಗಳು ಪರಿಮಳಧೂಪ, ಅಭಿಷೇಕತೈಲ ಮತ್ತು ದೀಪಗಳಿಗೆ ಬೇಕಾದ ಎಣ್ಣೆ ಇವುಗಳನ್ನು ಮಾಡಲು ಉಪಯೋಗಿಸಲ್ಪಟ್ಟವು.
29 ಸಹಾಯ ಮಾಡುವುದಕ್ಕೆ ಬಯಸಿದ ಇಸ್ರೇಲರೆಲ್ಲರೂ ಯೆಹೋವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಈ ಕಾಣಿಕೆಗಳನ್ನು ಗಂಡಸರು ಮತ್ತು ಹೆಂಗಸರು ಕೊಡುವುದಕ್ಕೆ ಬಯಸಿದ್ದರಿಂದ ಉದಾರವಾಗಿ ಕೊಟ್ಟರು. ಯೆಹೋವನು ಮೋಶೆಗೆ ಮತ್ತು ಜನರಿಗೆ ಆಜ್ಞಾಪಿಸಿದ ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಈ ಕಾಣಿಕೆಗಳು ಉಪಯೋಗಿಸಲ್ಪಟ್ಟವು.
ಬೆಚಲೇಲ ಮತ್ತು ಒಹೊಲೀಯಾಬ
30 ಬಳಿಕ ಮೋಶೆಯು ಇಸ್ರೇಲರಿಗೆ ಹೀಗೆಂದನು: “ನೋಡಿರಿ, ಯೆಹೋವನು ಯೆಹೂದ ಕುಲದಿಂದ ಊರಿಯ ಮಗನಾದ ಬೆಚಲೇಲನನ್ನು ಆರಿಸಿಕೊಂಡಿದ್ದಾನೆ. ಊರಿಯು ಹೂರನ ಮಗ. 31 ಯೆಹೋವನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿ, ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದಾನೆ. 32 ಅವನು ಅಂದವಾಗಿ ನಕ್ಷೆಮಾಡಿ, ಚಿನ್ನ, ಬೆಳ್ಳಿ ಮತ್ತು ತಾಮ್ರಗಳಿಂದ ವಸ್ತುಗಳನ್ನು ಮಾಡಬಲ್ಲನು. 33 ಅವನು ಕಲ್ಲುಗಳನ್ನು, ರತ್ನಗಳನ್ನು ಕತ್ತರಿಸಿ ಜೋಡಿಸಬಲ್ಲನು. ಬೆಚಲೇಲನು ಮರಗೆಲಸವನ್ನು ಮಾಡಿ ಎಲ್ಲಾ ವಿಧದ ಕುಶಲ ವಸ್ತುಗಳನ್ನು ತಯಾರಿಸಬಲ್ಲನು. 34 ಇತರರಿಗೆ ಕಲಿಸುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನು ಯೆಹೋವನು ಬೆಚಲೇಲನಿಗೂ ಒಹೊಲೀಯಾಬನಿಗೂ ಅನುಗ್ರಹಿಸಿದ್ದಾನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. 35 ಯೆಹೋವನು ಇವರಿಬ್ಬರಿಗೆ ಎಲ್ಲಾ ವಿಧದ ಕೆಲಸಗಳನ್ನು ಮಾಡಲು ವಿಶೇಷ ನಿಪುಣತೆಯನ್ನು ಅನುಗ್ರಹಿಸಿದ್ದಾನೆ. ಅವರು ಮರಗೆಲಸವನ್ನೂ ಲೋಹದ ಕೆಲಸವನ್ನೂ ಮಾಡಬಲ್ಲರು. ಅವರು ನೀಲಿ, ನೇರಳೆ ಕೆಂಪುದಾರಗಳಿಂದ ಮತ್ತು ಶ್ರೇಷ್ಠ ನಾರುಬಟ್ಟೆಯಿಂದ ಅಲಂಕೃತವಾದ ಬಟ್ಟೆಗಳನ್ನು ನೇಯಿಗೆ ಮಾಡಬಲ್ಲರು; ಅವರು ಉಣ್ಣೆ ಬಟ್ಟೆಗಳನ್ನು ನೇಯಲು ಶಕ್ತರಾಗಿದ್ದಾರೆ.