40
ಪವಿತ್ರಗುಡಾರದ ಸ್ಥಾಪನೆ
ತರುವಾಯ ಯೆಹೋವನು ಮೋಶೆಗೆ, “ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ದೇವದರ್ಶನಗುಡಾರವಾದ ಪವಿತ್ರಗುಡಾರವನ್ನು ಎತ್ತಿನಿಲ್ಲಿಸು. ಪವಿತ್ರ ಗುಡಾರದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡು. ಪೆಟ್ಟಿಗೆಯನ್ನು ಪರದೆಯಿಂದ ಮುಚ್ಚಿಸು. ಬಳಿಕ ಮೇಜನ್ನು ಒಳಗೆ ತರಿಸಿ ಮೇಜಿನ ಮೇಲಿರಬೇಕಾದ ವಸ್ತುಗಳನ್ನು ಅದರ ಮೇಲಿರಿಸು. ದೀಪಸ್ತಂಭವನ್ನು ಗುಡಾರದಲ್ಲಿ ಇರಿಸು. ದೀಪಸ್ತಂಭದಲ್ಲಿ ಸರಿಯಾದ ಜಾಗಗಳಲ್ಲಿ ಹಣತೆಗಳನ್ನು ಇರಿಸು. ಗುಡಾರದೊಳಗೆ ಧೂಪವನ್ನು ಅರ್ಪಿಸಲು ಬಂಗಾರದ ವೇದಿಕೆಯನ್ನು ಇಡು. ವೇದಿಕೆಯನ್ನು ಒಡಂಬಡಿಕೆಯ ಪೆಟ್ಟಿಗೆಯ ಮುಂದಿರಿಸು. ಬಳಿಕ ಪವಿತ್ರಗುಡಾರದ ಪ್ರವೇಶದಲ್ಲಿ ಪರದೆಯನ್ನು ಇರಿಸು.
“ದೇವದರ್ಶನಗುಡಾರವಾದ ಪವಿತ್ರಗುಡಾರದ ಪ್ರವೇಶದ್ವಾರದ ಮುಂದೆ ಯಜ್ಞವೇದಿಕೆಯನ್ನು ಇರಿಸು. ಗಂಗಾಳವನ್ನು ದೇವದರ್ಶನಗುಡಾರ ಮತ್ತು ವೇದಿಕೆಯ ನಡುವೆ ಇರಿಸು. ಗಂಗಾಳದಲ್ಲಿ ನೀರನ್ನು ಹಾಕಿಸು. ಅಂಗಳದ ಸುತ್ತಲೂ ಪರದೆಗಳ ಗೋಡೆಯನ್ನು ನಿಲ್ಲಿಸು. ಬಳಿಕ ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಬೇಕು.
“ಅಭಿಷೇಕತೈಲವನ್ನು ಉಪಯೋಗಿಸಿ ಪವಿತ್ರಗುಡಾರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಅಭಿಷೇಕಿಸು. ನೀನು ತೈಲವನ್ನು ಈ ವಸ್ತುಗಳ ಮೇಲೆ ಹಾಕುವಾಗ, ಅವುಗಳನ್ನು ಪವಿತ್ರಗೊಳಿಸುವೆ. 10 ಯಜ್ಞವೇದಿಕೆಯನ್ನು ಅಭಿಷೇಕಿಸು. ವೇದಿಕೆಯ ಮೇಲಿರುವ ಪ್ರತಿಯೊಂದನ್ನು ಅಭಿಷೇಕಿಸಿ ಪ್ರತಿಷ್ಠಿಸು. ಆಗ ಅದು ಬಹು ಪವಿತ್ರವಾಗುವುದು. 11 ಬಳಿಕ ಗಂಗಾಳವನ್ನೂ ಅದರ ಕೆಳಗಿರುವ ಪೀಠವನ್ನೂ ಅಭಿಷೇಕಿಸಿ ಪವಿತ್ರಗೊಳಿಸು.
12 “ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನಗುಡಾರದ ಬಾಗಿಲಿಗೆ ಕರೆಸು. ಅವರಿಗೆ ನೀರಿನಿಂದ ಸ್ನಾನ ಮಾಡಿಸು. 13 ಬಳಿಕ ಆರೋನನಿಗೆ ವಿಶೇಷ ಬಟ್ಟೆಯನ್ನು ತೊಡಿಸು. ತೈಲದಿಂದ ಅವನನ್ನು ಅಭಿಷೇಕಿಸಿ ಪವಿತ್ರಗೊಳಿಸು. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. 14 ಬಳಿಕ ಅವನ ಪುತ್ರರಿಗೆ ಬಟ್ಟೆಗಳನ್ನು ತೊಡಿಸು. 15 ಅವರ ತಂದೆಯನ್ನು ಅಭಿಷೇಕಿಸಿದಂತೆ ಪುತ್ರರನ್ನೂ ಅಭಿಷೇಕಿಸು. ಆಗ ಅವರು ಯಾಜಕರಾಗಿ ತಲೆತಲೆಮಾರುಗಳವರೆಗೆ ನನ್ನ ಸೇವೆ ಮಾಡಬಹುದು. ನೀನು ಅವರನ್ನು ಅಭಿಷೇಕಿಸಿದಾಗ, ಅವರು ಯಾಜಕರಾಗುವರು. ಇನ್ನು ಮುಂದೆ ಆ ಕುಟುಂಬವು ಯಾಜಕರಾಗಿ ಮುಂದುವರಿಯುವುದು” ಎಂದು ಹೇಳಿದನು. 16 ಯೆಹೋವನು ಆಜ್ಞಾಪಿಸಿದಂತೆಯೇ ಪ್ರತಿಯೊಂದನ್ನೂ ಮೋಶೆಯು ಮಾಡಿದನು.
17 ಆದ್ದರಿಂದ ಪವಿತ್ರಗುಡಾರವು, ಅವರು ಈಜಿಪ್ಟನ್ನು ಬಿಟ್ಟಕಾಲದಿಂದ ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸ್ಥಾಪಿಸಲ್ಪಟ್ಟಿತು. 18 ಯೆಹೋವನು ಹೇಳಿದಂತೆಯೇ ಮೋಶೆಯು ಪವಿತ್ರಗುಡಾರವನ್ನು ನಿಲ್ಲಿಸಿದನು. ಅವನು ಮೊದಲು ಗದ್ದಿಗೇಕಲ್ಲುಗಳನ್ನು ಕೆಳಗೆ ಇರಿಸಿದನು. ಬಳಿಕ ಅವನು ಗದ್ದಿಗೇಕಲ್ಲುಗಳ ಮೇಲೆ ಚೌಕಟ್ಟುಗಳನ್ನು ಇರಿಸಿದನು. ಬಳಿಕ ಅವನು ಅಗುಳಿಗಳನ್ನಿರಿಸಿ ಕಂಬಗಳನ್ನು ನಿಲ್ಲಿಸಿದನು. 19 ನಂತರ, ಮೋಶೆಯು ಪವಿತ್ರಗುಡಾರದ ಮೇಲೆ ಹೊರಗಣ ಡೇರೆಯನ್ನು ಹಾಕಿಸಿದನು. ಬಳಿಕ ಅವನು ಹೊರಗಿನ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಈ ಕಾರ್ಯಗಳನ್ನು ಮಾಡಿದನು.
20 ಮೋಶೆಯು ಒಡಂಬಡಿಕೆಯ ಆಜ್ಞಾಶಾಸನಗಳನ್ನು ತೆಗೆದುಕೊಂಡು ಪವಿತ್ರ ಪೆಟ್ಟಿಗೆಯಲ್ಲಿಟ್ಟನು. ಮೋಶೆಯು ಪೆಟ್ಟಿಗೆಯ ಎರಡು ಕಡೆಗಳಲ್ಲಿ ಕೋಲುಗಳನ್ನು ಇರಿಸಿದನು. ಬಳಿಕ ಅವನು ಪೆಟ್ಟಿಗೆಯ ಮೇಲೆ ಕೃಪಾಸನವನ್ನು ಇಟ್ಟನು. 21 ಬಳಿಕ ಮೋಶೆಯು ಪವಿತ್ರಪೆಟ್ಟಿಗೆಯನ್ನು ಪವಿತ್ರಗುಡಾರದೊಳಗೆ ತಂದನು. ಅದನ್ನು ಸಂರಕ್ಷಿಸುವುದಕ್ಕಾಗಿ ಸರಿಯಾದ ಸ್ಥಳದಲ್ಲಿ ಪರದೆಯನ್ನು ಹಾಕಿದನು. ಹೀಗೆ ಒಡಂಬಡಿಕೆ ಪೆಟ್ಟಿಗೆಯನ್ನು ಪರದೆಯ ಹಿಂಭಾಗದಲ್ಲಿರಿಸಿ ಸಂರಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇದನ್ನು ಮಾಡಿದನು. 22 ತರುವಾಯ ಮೋಶೆಯು ದೇವದರ್ಶನಗುಡಾರದಲ್ಲಿ ಮೇಜನ್ನು ಇರಿಸಿದನು. ಪವಿತ್ರಗುಡಾರದ ಉತ್ತರಭಾಗದಲ್ಲಿ ಅದನ್ನು ಇರಿಸಿದನು. ಅವನು ಅದನ್ನು ಪವಿತ್ರಸ್ಥಳದಲ್ಲಿ ಪರದೆಯ ಮುಂಭಾಗದಲ್ಲಿ ಇರಿಸಿದನು. 23 ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿ ಮೇಜಿನ ಮೇಲೆ ನೈವೇದ್ಯದ ರೊಟ್ಟಿಯನ್ನಿರಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಇದನ್ನು ಮಾಡಿದನು. 24 ಬಳಿಕ ಮೋಶೆಯು ದೀಪಸ್ತಂಭವನ್ನು ಪವಿತ್ರಗುಡಾರದೊಳಗೆ ಇರಿಸಿದನು. ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನಿರಿಸಿದನು. 25 ತರುವಾಯ ಮೋಶೆಯು ಯೆಹೋವನ ಮುಂದಿರುವ ದೀಪಸ್ತಂಭದಲ್ಲಿ ಹಣತೆಗಳನ್ನು ಇರಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಇದನ್ನು ಮಾಡಿದನು.
26 ಬಳಿಕ ಮೋಶೆಯು ಚಿನ್ನದ ವೇದಿಕೆಯನ್ನು ದೇವದರ್ಶನಗುಡಾರದೊಳಗೆ ಇರಿಸಿದನು. ಅವನು ವೇದಿಕೆಯನ್ನು ಪರದೆಯ ಮುಂಭಾಗದಲ್ಲಿ ಇರಿಸಿದನು. 27 ಬಳಿಕ ಅವನು ವೇದಿಕೆಯ ಮೇಲೆ ಸುಗಂಧವಾಸನೆಯುಳ್ಳ ಧೂಪವನ್ನು ಉರಿಸಿದನು. ಯೆಹೋವನು ಅವನಿಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದನು. 28 ಬಳಿಕ ಮೋಶೆಯು ಪವಿತ್ರಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿಸಿದನು.
29 ಪವಿತ್ರಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಯಜ್ಞವೇದಿಕೆಯನ್ನು ಇರಿಸಿದನು. ಅವನು ಯೆಹೋವನಿಗಾಗಿ ಆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.
30 ತರುವಾಯ ಮೋಶೆಯು ಗಂಗಾಳವನ್ನು ದೇವದರ್ಶನಗುಡಾರ ಮತ್ತು ವೇದಿಕೆಯ ನಡುವೆ ಇಟ್ಟನು. ತೊಳೆದುಕೊಳ್ಳುವುದಕ್ಕಾಗಿ ನೀರನ್ನು ಗಂಗಾಳದಲ್ಲಿ ಹಾಕಿಸಿದನು. 31 ಮೋಶೆ, ಆರೋನ ಮತ್ತು ಆರೋನನ ಪುತ್ರರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದಕ್ಕಾಗಿ ಈ ಗಂಗಾಳವನ್ನು ಉಪಯೋಗಿಸಿದರು. 32 ಅವರು ದೇವದರ್ಶನಗುಡಾರವನ್ನು ಪ್ರವೇಶಿಸುವಾಗಲೆಲ್ಲಾ ಮತ್ತು ಯಜ್ಞವೇದಿಕೆಯ ಸಮೀಪ ಹೋಗುವಾಗಲೆಲ್ಲಾ ತಮ್ಮನ್ನು ತೊಳೆದುಕೊಳ್ಳುತ್ತಿದ್ದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡಿದರು.
33 ತರುವಾಯ ಮೋಶೆಯು ಪವಿತ್ರಗುಡಾರದ ಅಂಗಳದ ಸುತ್ತಲೂ ಪರದೆಗಳನ್ನು ನಿಲ್ಲಿಸಿದನು. ಮೋಶೆಯು ವೇದಿಕೆಯನ್ನು ಅಂಗಳದಲ್ಲಿರಿಸಿದನು. ಬಳಿಕ ಅವನು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿಸಿದನು. ಹೀಗೆ ಮೋಶೆ ಯೆಹೋವನು ತನಗೆ ಕೊಟ್ಟ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದನು.
ಯೆಹೋವನ ಮಹಿಮೆ
34 ತರುವಾಯ ಮೋಡವು ದೇವದರ್ಶನಗುಡಾರವನ್ನು ಕವಿಯಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿತು. 35 ಮೋಡವು ದೇವದರ್ಶನಗುಡಾರದ ಮೇಲೆ ನಿಂತಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿದ್ದರಿಂದ ಮೋಶೆಯು ಒಳಗೆ ಪ್ರವೇಶಿಸಲಾಗಲಿಲ್ಲ.
36 ಜನರು ಯಾವಾಗ ಚಲಿಸಬೇಕೆಂದು ಮೋಡವು ತೋರಿಸುತ್ತಿತ್ತು. ಮೋಡವು ಪವಿತ್ರಗುಡಾರವನ್ನು ಬಿಟ್ಟು ಮೇಲೆದ್ದಾಗ, ಜನರು ಪ್ರಯಾಣ ಮಾಡತೊಡಗುತ್ತಿದ್ದರು. 37 ಆದರೆ ಮೋಡವು ಪವಿತ್ರಗುಡಾರದ ಮೇಲಿದ್ದಾಗ ಜನರು ಪ್ರಯಾಣ ಮಾಡುತ್ತಿರಲಿಲ್ಲ. ಮೋಡವು ಮೇಲೇಳುವವರೆಗೆ ಅವರು ಅಲ್ಲೇ ಇರುತ್ತಿದ್ದರು. 38 ಹೀಗೆ ಯೆಹೋವನ ಮೋಡವು ಹಗಲಿನಲ್ಲಿ ಪವಿತ್ರಗುಡಾರದ ಮೇಲೆ ನಿಂತಿತು. ರಾತ್ರಿಯಲ್ಲಿ ಮೋಡದಲ್ಲಿ ಅಗ್ನಿಯು ಪ್ರಕಾಶಿಸುತ್ತಿತ್ತು. ಆದ್ದರಿಂದ ಇಸ್ರೇಲ್ ಜನರೆಲ್ಲರೂ ತಾವು ಪ್ರಯಾಣ ಮಾಡುವಾಗ, ಮೋಡವನ್ನು ನೋಡಬಹುದಾಗಿತ್ತು.