32
ಫರೋಹನು ಮೃಗರಾಜನೋ, ಪೇರ್ಮೊಸಳೆಯೋ?
ಸೆರೆಹಿಡಿದ ಹನ್ನೆರಡನೇ ವರ್ಷದ, ಹನ್ನೆರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು:
 
“ ‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ.
ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ.
ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ.
ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ.
ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’ ”
 
ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
 
“ಅನೇಕರನ್ನು ನಾನು ಒಟ್ಟುಗೂಡಿಸಿದ್ದೇನೆ.
ಈಗ ನನ್ನ ಬಲೆಯನ್ನು ನಿನ್ನ ಮೇಲೆ ಬೀಸುವೆನು.
ಆಗ ಅವರು ನಿನ್ನನ್ನು ಒಳಸೆಳೆಯುವರು.
ಆಮೇಲೆ ನಿನ್ನನ್ನು ಒಣನೆಲದ ಮೇಲೆ ಹಾಕುವೆನು.
ಹೊಲದ ಮೇಲೆ ನಿನ್ನನ್ನು ಬಿಸಾಡುವೆನು.
ಎಲ್ಲಾ ಪಕ್ಷಿಗಳು ನಿನ್ನನ್ನು ತಿಂದುಬಿಡುವಂತೆ ಮಾಡುವೆನು.
ಎಲ್ಲಾ ಕಡೆಗಳಿಂದ ಕಾಡುಮೃಗಗಳು ಬಂದು ನಿನ್ನನ್ನು ಹೊಟ್ಟೆತುಂಬಾ ತಿನ್ನುವಂತೆ ಮಾಡುವೆನು.
ಪರ್ವತಗಳ ಮೇಲೆ ನಿನ್ನ ದೇಹವನ್ನು ಬಿಸಾಡುವೆನು.
ಬಯಲು ಪ್ರದೇಶವನ್ನು ನಿನ್ನ ಹೆಣಗಳಿಂದ ತುಂಬಿಸುವೆನು.
ನಿನ್ನ ರಕ್ತವನ್ನು ಪರ್ವತಗಳ ಮೇಲೆ ಚೆಲ್ಲುವೆನು,
ಅದು ನೆಲವನ್ನು ಒದ್ದೆ ಮಾಡುವದು.
ಹೊಳೆಗಳಲ್ಲಿ ನೀನು ತುಂಬಿರುವಿ.
ನೀನು ಕಾಣೆಯಾಗುವಂತೆ ನಾನು ಮಾಡುವೆನು.
ಆಕಾಶವನ್ನು ಮುಚ್ಚಿ ನಕ್ಷತ್ರಗಳನ್ನು ಹೊಳೆಯದಂತೆ ಮಾಡುವೆನು.
ಸೂರ್ಯನನ್ನು ಮೋಡವು ಮುಚ್ಚುವಂತೆ ಮಾಡುವೆನು.
ಚಂದ್ರನು ಪ್ರಕಾಶಿಸದಂತೆ ಮಾಡುವೆನು.
ನಿನ್ನ ಮೇಲೆ ಆಕಾಶದಲ್ಲಿ ಹೊಳೆಯುವ ಜ್ಯೋತಿಗಳನ್ನು ಮಂಕುಗೊಳಿಸುವೆನು;
ನಿನ್ನ ದೇಶದಲ್ಲಿ ಕತ್ತಲನ್ನು ಬರಮಾಡುವೆನು”
ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.
 
“ನಿನ್ನನ್ನು ನಾಶಮಾಡಲು ನಾನು ನಿನ್ನ ಶತ್ರುವನ್ನು ಬರಮಾಡುವಾಗ ಅನೇಕ ಜನರು ದುಃಖಿತರಾಗಿ ಗಲಿಬಿಲಿಗೊಳ್ಳುವರು. ನಿನ್ನನ್ನು ಅರಿಯದ ರಾಜ್ಯದವರೂ ಗಲಿಬಿಲಿಗೊಳ್ಳುವರು. 10 ಅನೇಕ ಮಂದಿ ನಿನಗೆ ಸಂಭವಿಸಿದ್ದನ್ನು ನೋಡಿ ಚಕಿತರಾಗುವರು. ನಾನು ನಿನ್ನ ಕಡೆಗೆ ಖಡ್ಗ ಬೀಸುವಾಗ ಅವರ ಅರಸರು ಬಹಳ ಭಯಗ್ರಸ್ತರಾಗುವರು; ನೀನು ಬೀಳುವ ದಿವಸದಲ್ಲಿ ಅರಸರು ಹೆದರಿ ನಡುಗುವರು. ಪ್ರತಿಯೊಬ್ಬ ರಾಜನು ತನ್ನ ಜೀವವನ್ನು ಉಳಿಸಿಕೊಳ್ಳಲು ಆತುರಪಡುವನು.”
11 ಯಾಕೆಂದರೆ ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಬಾಬಿಲೋನಿನ ರಾಜನ ಖಡ್ಗವು ನಿನ್ನೊಂದಿಗೆ ಯುದ್ಧಮಾಡಲು ಬರುವದು. 12 ಕ್ರೂರ ರಾಷ್ಟ್ರಗಳ ಆ ಸೈನಿಕರಿಂದ ನಿನ್ನ ಜನರನ್ನು ಯುದ್ಧದಲ್ಲಿ ಹತಗೊಳಿಸುವೆನು. ಈಜಿಪ್ಟಿನ ಜನರನ್ನೂ ಅವರು ಹೆಮ್ಮೆಪಡುವಂತ ವಸ್ತುಗಳನ್ನೂ ಆ ಸೈನಿಕರು ನಾಶಗೊಳಿಸುವರು. 13 ಈಜಿಪ್ಟಿನ ಹೊಳೆಯ ತೀರದಲ್ಲಿ ಅನೇಕ ಪ್ರಾಣಿಗಳಿವೆ. ನಾನು ಅವುಗಳನ್ನು ನಾಶಮಾಡುವೆನು. ಜನರು ಹೊಳೆಯ ನೀರನ್ನು ತಮ್ಮ ಕಾಲುಗಳಿಂದ ಕೆಸರಾಗಿ ಇನ್ನು ಮಾಡಲಾರರು. ದನಗಳ ಗೊರಸುಗಳು ನೀರನ್ನು ಕೆಸರನ್ನಾಗಿ ಮಾಡುವದಿಲ್ಲ. 14 ನಾನು ಈಜಿಪ್ಟಿನ ನೀರನ್ನು ತಿಳಿಗೊಳಿಸುವೆನು; ಅದರ ನದಿಗಳು ಎಣ್ಣೆಯಷ್ಟೇ ನಯವಾಗಿ ಹರಿಯುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು. 15 “ಈಜಿಪ್ಟ್ ದೇಶವನ್ನು ನಾನು ಬರಿದುಮಾಡುವೆನು. ಆ ದೇಶವು ಎಲ್ಲವನ್ನು ಕಳೆದುಕೊಳ್ಳುವದು. ಈಜಿಪ್ಟಿನಲ್ಲಿ ವಾಸಿಸುವ ಎಲ್ಲಾ ಜನರನ್ನು ನಾನು ಶಿಕ್ಷಿಸುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ತಿಳುಕೊಳ್ಳುವರು.
16 “ಜನರು ಈಜಿಪ್ಟಿನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು. ಬೇರೆ ದೇಶಗಳಲ್ಲಿರುವ ಹೆಣ್ಣುಮಕ್ಕಳು ಈ ಶೋಕಗೀತೆಯನ್ನು ಹಾಡುವರು. ಅವರು ಈಜಿಪ್ಟ್ ಮತ್ತು ಅದರ ಎಲ್ಲಾ ಜನರ ಕುರಿತು ಈ ಶೋಕಗೀತೆಯನ್ನು ಹಾಡುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
ಈಜಿಪ್ಟ್ ನಾಶವಾಗಲಿದೆ
17 ಸೆರೆಹಿಡಿಯಲ್ಪಟ್ಟ ಹನ್ನೆರಡನೆ ವರ್ಷದ, ಹನ್ನೆರಡನೆ ತಿಂಗಳಿನ, ಹದಿನೈದನೆಯ ದಿನದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಈಜಿಪ್ಟಿನ ಜನರಿಗಾಗಿ ಗೋಳಾಡು. ಪಾತಾಳಕ್ಕೆ ಇಳಿದುಹೋಗಿರುವ ಇತರ ಎಲ್ಲರೊಡನೆ ಇರುವದಕ್ಕಾಗಿ ಈಜಿಪ್ಟನ್ನು ಮತ್ತು ಇತರ ಜನಾಂಗಗಳ ಉಳಿದ ಪಟ್ಟಣಗಳನ್ನು* ಪಟ್ಟಣಗಳು ಅಕ್ಷರಶಃ, “ಹೆಣ್ಣುಮಕ್ಕಳು.” ಸಮಾಧಿಗೆ ಕಳುಹಿಸು.
19 “ಈಜಿಪ್ಟೇ, ನೀನು ಬೇರೆಯವರಿಗಿಂತ ಉತ್ತಮಳೇನೂ ಅಲ್ಲ. ಮರಣದ ಸ್ಥಳಕ್ಕೆ ಹೋಗು. ಅಲ್ಲಿ ಪರದೇಶದವರೊಂದಿಗೆ ಹೋಗಿ ಬಿದ್ದುಕೊ. 20 ರಣರಂಗದಲ್ಲಿ ಮಡಿದ ಜನರೊಂದಿಗೆ ಈಜಿಪ್ಟ್ ಹೋಗುವದು. ಶತ್ರುಗಳು ಆಕೆಯನ್ನೂ ಆಕೆಯ ಜನರನ್ನೂ ಎಳೆದುಬಿಟ್ಟಿದ್ದಾರೆ.
21 “ಶೂರರು, ಬಲಶಾಲಿಗಳು ಯುದ್ಧದಲ್ಲಿ ಮಡಿದಿದ್ದಾರೆ, ಆ ಪರದೇಶಿಗಳು ಮರಣದ ಸ್ಥಳಕ್ಕೆ ಹೋದರು. ಅವರು ಅಲ್ಲಿದ್ದುಕೊಂಡು ಈಜಿಪ್ಟಿನವರೊಂದಿಗೆ ಮತ್ತು ಅದರ ಸಹಾಯಕರೊಂದಿಗೆ ಮಾತನಾಡುವರು.
22-23 “ಅಶ್ಶೂರವೂ ಅದರ ಎಲ್ಲಾ ಸೈನ್ಯವೂ ಆ ಪಾತಾಳದಲ್ಲಿರುವದು. ಅವರ ಸ್ಥಳವು ಆಳವಾದ ಗುಂಡಿಯಲ್ಲಿರುವದು. ಆ ಅಶ್ಶೂರದ ಸೈನಿಕರೆಲ್ಲಾ ರಣರಂಗದಲ್ಲಿ ಮಡಿದವರೇ. ಅವರ ಸಮಾಧಿಗಳು ಅಶ್ಶೂರದ ಸಮಾಧಿಯ ಸುತ್ತಮುತ್ತ ಇವೆ. ಅವರು ಜೀವಂತರಾಗಿರುವಾಗ ಜನರನ್ನು ಭೀತಿಗೊಳಿಸುತ್ತಿದ್ದರು. ಆದರೆ ಈಗ ಮೌನವಾಗಿದ್ದಾರೆ. ಅವರೆಲ್ಲಾ ಯುದ್ಧದಲ್ಲಿ ಸತ್ತರು.
24 “ಏಲಾಮು ಕೂಡಾ ಅಲ್ಲಿದೆ. ಆಕೆಯ ಸೈನ್ಯವೆಲ್ಲಾ ಆಕೆಯ ಸಮಾಧಿಯ ಸುತ್ತಲಿದೆ. ಅವರೆಲ್ಲಾ ಯುದ್ಧದಲ್ಲಿ ಮಡಿದರು. ಆ ಪರದೇಶದವರು ಪಾತಾಳವನ್ನು ಸೇರಿದರು. ಅವರು ಜೀವಿಸಿದ್ದಾಗ ಜನರನ್ನು ಭಯಗೊಳಿಸಿದರು. ಆದರೆ ಈಗ ನಾಚಿಕೆಯೊಂದಿಗೆ ಅವರು ಪಾತಾಳವನ್ನು ಸೇರಿದರು. 25 ಏಲಾಮ್ ಮತ್ತು ಯುದ್ಧದಲ್ಲಿ ಮಡಿದ ಅದರ ಎಲ್ಲಾ ಸೈನಿಕರಿಗೂ ಅಲ್ಲಿ ಅವರು ಹಾಸಿಗೆಯನ್ನು ಸಿದ್ಧಮಾಡಿದರು. ಏಲಾಮಿನ ಸೈನ್ಯವು ಅದರ ಸಮಾಧಿಯ ಸುತ್ತಲೂ ಇವೆ. ಅವರೆಲ್ಲಾ ರಣರಂಗದಲ್ಲಿ ಸತ್ತವರು. ಅವರು ಜೀವದಿಂದಿರುವಾಗ ಜನರನ್ನು ಹೆದರಿಸಿದ್ದರು. ಆದರೆ ಅವರೀಗ ತಮ್ಮ ನಾಚಿಕೆಯೊಂದಿಗೆ ಪಾತಾಳ ಸೇರಿದ್ದಾರೆ. ಅವರು ಸತ್ತವರೊಂದಿಗೆ ಸೇರಿರುತ್ತಾರೆ.
26 “ಮೆಷಕ್, ತೂಬಲ್ ಮತ್ತು ಅವರ ಎಲ್ಲಾ ಸೈನ್ಯದವರು ಅಲ್ಲಿದ್ದಾರೆ. ಅವರ ಸಮಾಧಿಗಳು ಸುತ್ತಲೂ ಇವೆ. ಅವರೆಲ್ಲಾ ಯುದ್ಧದಲ್ಲಿ ಸತ್ತವರು. ಅವರು ಜೀವಿಸಿದ್ದಾಗ ಜನರಿಗೆ ಹೆದರಿಕೆಯನ್ನುಟುಮಾಡಿದ್ದರು. 27 ಈಗ ಅವರು ಬಹಳ ಕಾಲದ ಹಿಂದೆ ಸತ್ತ ವೀರರೊಂದಿಗೆ ಬಿದ್ದುಕೊಂಡಿದ್ದಾರೆ. ಅವರು ತಮ್ಮ ಆಯುಧಗಳೊಂದಿಗೆ ಹೂಣಿಡಲ್ಪಟ್ಟರು. ಅವರ ತಲೆಯ ಕೆಳಗೆ ಅವರ ಕತ್ತಿಯು ಇಡಲ್ಪಟ್ಟಿತ್ತು. ಆದರೆ ಅವರ ಪಾಪವು ಅವರ ಎಲುಬುಗಳಲ್ಲಿವೆ. ಯಾಕೆಂದರೆ ಅವರು ಜೀವಿಸಿದ್ದಾಗ ಜನರನ್ನು ಭಯಪಡಿಸಿದರು.
28 “ಈಜಿಪ್ಟೇ, ನೀನೂ ಸಹ ನಾಶಮಾಡಲ್ಪಡುವೆ. ನೀನೂ ಆ ಪರದೇಶದವರೊಂದಿಗೆ ಬಿದ್ದುಕೊಂಡಿರುವೆ. ಯುದ್ಧದಲ್ಲಿ ಸತ್ತ ಸೈನಿಕರೊಂದಿಗೆ ನೀನು ಮಲಗುವೆ.
29 “ಎದೋಮನೂ ಅಲ್ಲಿರುವನು. ಅವನ ರಾಜರೂ ಹಿರಿಯರೂ ಅಲ್ಲಿರುವರು. ಅವರೆಲ್ಲಾ ವೀರರಾಗಿದ್ದರೂ ಈ ಬೇರೆ ಜನರೊಂದಿಗೆ ಮಲಗಿದ್ದಾರೆ; ಆ ಪರದೇಶದವರೊಂದಿಗೆ ಪಾತಾಳದಲ್ಲಿ ಬಿದ್ದುಕೊಂಡಿದ್ದಾರೆ.
30 “ಉತ್ತರ ದೇಶದ ನಾಯಕರೆಲ್ಲಾ ಅಲ್ಲಿದ್ದಾರೆ. ಚೀದೋನಿನ ಸೈನಿಕರೂ ಅಲ್ಲಿದ್ದಾರೆ. ಅವರ ಬಲವು ಜನರನ್ನು ಭಯಗ್ರಸ್ತರನ್ನಾಗಿ ಮಾಡಿತ್ತು. ಅವರೂ ಈಗ ಯುದ್ಧದಲ್ಲಿ ಮಡಿದ ಇತರರೊಂದಿಗೆ ಬಿದ್ದುಕೊಂಡಿದ್ದಾರೆ. ತಮ್ಮ ನಾಚಿಕೆಯೊಂದಿಗೆ ಪಾತಾಳವನ್ನು ಸೇರಿದ್ದಾರೆ.
31 “ಪಾತಾಳಕ್ಕೆ ಸೇರಿದ ಜನರನ್ನು ಫರೋಹನು ನೋಡುವನು. ಅವನೂ ಅವನೊಂದಿಗಿರುವ ಜನರೂ ಸಮಾಧಾನ ಹೊಂದುವರು. ಹೌದು, ಫರೋಹನೂ ಅವನ ಎಲ್ಲಾ ಸೈನಿಕರೂ ಯುದ್ಧದಲ್ಲಿ ಸಾಯುವರು.” ಇದು ಒಡೆಯನಾದ ಯೆಹೋವನ ನುಡಿ.
32 “ಫರೋಹನು ತನ್ನ ಕಾಲದಲ್ಲಿ ಜನರನ್ನು ಭಯಗೊಳಿಸಿದ್ದನು. ಈಗಲಾದರೋ, ಫರೋಹನೂ ಅವನ ಸೈನಿಕರೂ ಪರದೇಶದವರೊಂದಿಗೆ ಮತ್ತು ಯುದ್ಧದಲ್ಲಿ ಹತರಾದವರೊಂದಿಗೆ ಬಿದ್ದುಕೊಳ್ಳುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

*32:18: ಪಟ್ಟಣಗಳು ಅಕ್ಷರಶಃ, “ಹೆಣ್ಣುಮಕ್ಕಳು.”