33
ಇಸ್ರೇಲಿನ ಕಾವಲುಗಾರನಾಗಿ ದೇವರು ಯೆಹೆಜ್ಕೇಲನನ್ನು ಆರಿಸಿದ್ದು
ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ನಿನ್ನ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು, ‘ನಾನು ಈ ದೇಶದೊಂದಿಗೆ ಯುದ್ಧ ಮಾಡಲು ಶತ್ರು ಸೈನಿಕರನ್ನು ಬರಮಾಡುತ್ತೇನೆ. ಈ ಸಮಯದಲ್ಲಿ ಜನರು ಒಬ್ಬ ಕಾವಲುಗಾರನನ್ನು ಆರಿಸುವರು. ಈತನು ಶತ್ರು ಸೈನ್ಯವನ್ನು ನೋಡಿದಾಕ್ಷಣ ತನ್ನ ತುತ್ತೂರಿಯನ್ನೂದಿ ಜನರನ್ನು ಎಚ್ಚರಿಸುವನು. ಜನರು ಅದನ್ನು ಕೇಳಿದರೂ ಅಲಕ್ಷ್ಯ ಮಾಡಿದಾಗ ಶತ್ರುವು ಬಂದು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆಗ ಅವರ ಮರಣಕ್ಕೆ ಅವರೇ ಕಾರಣರಾಗುವರು. ಅವನು ತುತ್ತೂರಿಯ ಶಬ್ದ ಕೇಳಿದನು. ಆದರೆ ಅದನ್ನು ಅಲಕ್ಷಿಸಿದನು. ಆದ್ದರಿಂದ ಅವನ ಮರಣಕ್ಕೆ ಅವನೇ ಕಾರಣನು. ಅವನು ಆ ಎಚ್ಚರಿಕೆಯ ಶಬ್ದಕ್ಕೆ ಗಮನವನ್ನು ಕೊಟ್ಟಿದ್ದರೆ ಅವನು ಬಂದುಕುತ್ತಿದ್ದನು.
“ ‘ಆದರೆ ವೈರಿಯು ಬರುವಂತದ್ದನ್ನು ಆ ಕಾವಲುಗಾರನು ಕಂಡರೂ, ಜನರನ್ನು ಎಚ್ಚರಿಸಲು ತುತ್ತೂರಿಯನ್ನು ಧಿದದೆ ಹೋದರೆ ವೈರಿಯು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆ ಮನುಷ್ಯನು ಪಾಪಮಾಡಿದ್ದರಿಂದ ಆ ಶಿಕ್ಷೆಯು ಅವನಿಗೆ ದೊರಕಿತು. ಆದರೆ, ಕಾವಲುಗಾರನು ಕೂಡಾ ಅವನ ಮರಣಕ್ಕೆ ಕಾರಣನಾಗುವನು.’
“ಈಗ, ನರಪುತ್ರನೇ, ನಾನು ನಿನ್ನನ್ನು ಇಸ್ರೇಲಿನ ಕಾವಲುಗಾರನನ್ನಾಗಿ ಆರಿಸಿದ್ದೇನೆ. ನನ್ನ ಬಾಯಿಂದ ನೀನು ಸಂದೇಶವನ್ನು ಕೇಳಿದಾಗ, ನನ್ನ ಪರವಾಗಿ ನೀನು ಜನರನ್ನು ಎಚ್ಚರಿಸಬೇಕು. ‘ಈ ಕೆಟ್ಟ ಮನುಷ್ಯನು ಸಾಯುವನು’ ಎಂದು ನಾನು ಹೇಳಿದರೆ, ನೀನು ಹೋಗಿ ಆ ಮನುಷ್ಯನನ್ನು ಎಚ್ಚರಿಸಬೇಕು. ಆದರೆ ನೀನು ಅವನನ್ನು ಎಚ್ಚರಿಸದೆ ಹೋದರೆ, ಅವನ ಜೀವಿತವನ್ನು ಬದಲಾಯಿಸಿಕೊಳ್ಳಲು ಹೇಳದೆ ಹೋದರೆ, ಪಾಪಮಾಡಬೇಡ ಎಂದು ಹೇಳದೆ ಹೋದರೆ, ಆ ದುಷ್ಟನು ಸಾಯುವನು. ಯಾಕೆಂದರೆ, ಅವನು ಪಾಪಮಾಡಿದನು. ಆದರೆ ಅವನ ಮರಣಕ್ಕೆ ನಿನ್ನನ್ನು ಕಾರಣನನ್ನಾಗಿ ಮಾಡುತ್ತೇನೆ. ಆದರೆ ನೀನು ಅವನನ್ನು ಎಚ್ಚರಿಸಿ, ಅವನ ಜೀವಿತವನ್ನು ಬದಲಾಯಿಸಲು ಹೇಳಿ, ಪಾಪವನ್ನು ಮಾಡಬೇಡ ಎಂದು ಹೇಳಿದರೂ ಅವನು ಕೇಳದೆ ಹೋದರೆ ಪಾಪ ಮಾಡುವದನ್ನು ಬಿಡದೆ ಹೋದರೆ ಅವನು ಪಾಪ ಮಾಡಿದುದರಿಂದ ಸಾಯುವನು. ಆದರೆ ನೀನು ಅವನ ಮರಣಕ್ಕೆ ಕಾರಣನಾಗುವದಿಲ್ಲ.
ದೇವರು ಮನುಷ್ಯರನ್ನು ನಾಶಮಾಡಲು ಇಷ್ಟಪಡುವುದಿಲ್ಲ
10 “ಆದ್ದರಿಂದ ನರಪುತ್ರನೇ, ನನ್ನ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನ್ನು ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಬೇಕಾದರೆ ಏನು ಮಾಡಬೇಕು?’ ಎಂದು ಅವರು ಕೇಳಿಯಾರು.
11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’
12 “ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತ್ವದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’
13 “ಒಂದುವೇಳೆ ‘ನೀನು ಜೀವಿಸುವಿ’ ಎಂದು ಒಬ್ಬ ಒಳ್ಳೆಯ ಮನುಷ್ಯನಿಗೆ ನಾನು ಹೇಳಬಹುದು. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನೆನಸಬಹುದು. ಆ ಬಳಿಕ ಅವನು ದುಷ್ಕೃತ್ಯಗಳನ್ನು ಮಾಡಲು, ನಾನು ಅವನ ಪುಣ್ಯಕಾರ್ಯಗಳನ್ನು ನೋಡದೆ ಅವನ ದುಷ್ಕೃತ್ಯಗಳ ನಿಮಿತ್ತ ಅವನನ್ನು ಸಾಯಿಸುವೆನು.
14 “ಒಂದುವೇಳೆ ನಾನು ಒಬ್ಬ ದುಷ್ಟನಿಗೆ ನೀನು ಸಾಯುವಿ ಎಂದು ಹೇಳಿದರೆ ಅವನು ತನ್ನ ಜೀವಿತವನ್ನು ಬದಲಾಯಿಸಿ, ದುಷ್ಟತ್ವವನ್ನು ನಿಲ್ಲಿಸಿ, ಅವನು ನೀತಿವಂತನಾಗಿ ಬಾಳಿ 15 ಒತ್ತೆ ತೆಗೆದುಕೊಂಡಿದ್ದ ವಸ್ತುಗಳನ್ನು ಹಿಂದಕ್ಕೆ ಕೊಟ್ಟು, ತಾನು ಕದ್ದುಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಜೀವಕರವಾದ ಕಟ್ಟಳೆಗಳನ್ನು ಅನುಸರಿಸಿದರೆ ಆ ಮನುಷ್ಯನು ಖಂಡಿತವಾಗಿ ಬಂದುಕುವನು. ಅವನನ್ನು ಸಾಯಿಸುವುದಿಲ್ಲ. 16 ಅವನು ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಾನು ನನ್ನ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಬಾಳುತ್ತಿದ್ದಾನೆ. ಆದುದರಿಂದ ಅವನು ಜೀವಿಸುವನು.
17 “ಆದರೆ ನಿನ್ನ ಜನರು, ‘ಅದು ನ್ಯಾಯವಲ್ಲ. ನನ್ನ ಒಡೆಯನಾದ ಯೆಹೋವನು ಹಾಗೆ ಮಾಡಲಾರನು’ ಎಂದು ಹೇಳುವರು.
“ಅಂಥ ಜನರೇ ನ್ಯಾಯವಂತರಲ್ಲ. ಅವರೇ ಬದಲಾಗಬೇಕು. 18 ಒಬ್ಬ ಒಳ್ಳೆಯ ಮನುಷ್ಯನು ತನ್ನ ಶಿಷ್ಟತಬವನ್ನು ಬಿಟ್ಟು ಪಾಪದ ಮಾರ್ಗದಲ್ಲಿ ನಡೆದರೆ ಅವನು ಅವನ ಪಾಪಗಳ ನಿಮಿತ್ತ ಸಾಯುವನು. 19 ಆದರೆ ಒಬ್ಬ ಪಾಪಿ ತನ್ನ ದುಷ್ಟತನವನ್ನು ಬಿಟ್ಟು ನೀತಿವಂತನಾಗಿ ಬಾಳಿದರೆ ಅವನು ಜೀವಿಸುವನು. 20 ಆದರೆ ನಾನು ನ್ಯಾಯವಂತನಲ್ಲ, ಎಂದು ನೀವು ಹೇಳುತ್ತೀರಿ. ಆದರೆ ನಾನು ಖಂಡಿತವಾಗಿ ಹೇಳುತ್ತೇನೆ, ಇಸ್ರೇಲ್ ಮನೆತನದವರೇ, ಪ್ರತಿಯೊಬ್ಬನೂ ತಾನು ಮಾಡಿದ ಕಾರ್ಯಗಳಿಗಾಗಿ ನ್ಯಾಯ ಹೊಂದುವನು.”
ಜೆರುಸಲೇಮ್ ವಶಮಾಡಲ್ಪಟ್ಟಿತು
21 ಸೆರೆಯ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೇ ದಿವಸದಲ್ಲಿ ಜೆರುಸಲೇಮಿನಿಂದ ಒಬ್ಬನು ನನ್ನ ಬಳಿಗೆ ಬಂದನು. ಅವನು ರಣರಂಗದಿಂದ ತಪ್ಪಿಸಿಕೊಂಡು ಬಂದಾತನು. ಅವನು, “ನಗರವು ಪರಾಧೀನವಾಯಿತು” ಎಂದು ಹೇಳಿದನು.
22 ಅವನು ಬರುವ ಹಿಂದಿನ ದಿವಸದ ಸಾಯಂಕಾಲ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ಪರವಶನಾದೆನು. ದೇವರು ನನ್ನನ್ನು ಮಾತನಾಡದಂತೆ ಮಾಡಿದ್ದನು. ಆ ಸಮಯದಲ್ಲಿ ಆ ಮನುಷ್ಯನು ನನ್ನ ಬಳಿಗೆ ಬಂದನು. ಆಗ ದೇವರು ನನ್ನ ಬಾಯನ್ನು ತೆರೆದು ನಾನು ಮಾತನಾಡುವಂತೆ ಮಾಡಿದನು. 23 ಆಗ ಯೆಹೋವನ ಸಂದೇಶವು ನನಗೆ ಬಂತು. ಆತನು ಹೇಳಿದ್ದೇನೆಂದರೆ, 24 “ನರಪುತ್ರನೇ, ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳಲ್ಲಿ ಇಸ್ರೇಲ್ ಜನರು ವಾಸಿಸುತ್ತಿದ್ದಾರೆ. ಅವರು ಹೇಳುವುದೇನೆಂದರೆ, ‘ಅಬ್ರಹಾಮನು ಒಬ್ಬನೇ. ಈ ದೇಶವನ್ನೆಲ್ಲಾ ದೇವರು ಅವನಿಗೆ ಕೊಟ್ಟನು. ನಾವು ಈಗ ಬಹಳ ಮಂದಿ ಇದ್ದೇವೆ. ಆದ್ದರಿಂದ ಖಂಡಿತವಾಗಿ ಈ ದೇಶ ನಮಗೇ ಸೇರಿದ್ದಾಗಿದೆ.’
25 “ನೀನು ಅವರಿಗೆ ಹೀಗೆ ಹೇಳಬೇಕು. ನಿಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ರಕ್ತವಿರುವ ಮಾಂಸವನ್ನು ತಿನ್ನುತ್ತೀರಿ. ನಿಮ್ಮ ಸಹಾಯಕ್ಕಾಗಿ ನೀವು ವಿಗ್ರಹಗಳಿಗೆ ಮೊರೆಯಿಡುತ್ತೀರಿ. ನೀವು ನರಹತ್ಯೆ ಮಾಡುತ್ತೀರಿ. ಹೀಗೆ ಇರುವದರಿಂದ ನಾನು ಈ ದೇಶವನ್ನು ನಿಮಗೆ ಹೇಗೆ ಕೊಡಲಿ? 26 ನೀವು ನಿಮ್ಮ ಕತ್ತಿಯ ಮೇಲೆ ಭರವಸೆಯಿಡುತ್ತೀರಿ. ಪ್ರತಿಯೊಬ್ಬನು ಭಯಂಕರವಾದ ಕೃತ್ಯಗಳನ್ನು ನಡಿಸುತ್ತಾನೆ. ನಿಮ್ಮ ನೆರೆಯವನ ಹೆಂಡತಿಯೊಂದಿಗೆ ಸಂಭೋಗಿಸುವಿರಿ. ಆದ್ದರಿಂದ ನೀವು ಈ ದೇಶವನ್ನು ಹೊಂದಲಾರಿರಿ.’
27 “ ‘ನೀನು ಅವರಿಗೆ ನಿಮ್ಮ ಒಡೆಯನಾದ ಯೆಹೋವನು ಹೀಗೆ ಹೇಳಿದನೆಂದು ತಿಳಿಸಬೇಕು, “ನನ್ನ ಜೀವದಾಣೆ, ಕೆಡವಲ್ಪಟ್ಟ ಪಟ್ಟಣಗಳಲ್ಲಿ ವಾಸಿಸುವ ಜನರು ಕೊಲ್ಲಲ್ಪಡುವರು. ಯಾರಾದರೂ ಪಟ್ಟಣದ ಹೊರಗೆ ಹೋಗಿದ್ದಲ್ಲಿ ಅವರನ್ನು ಕಾಡುಪ್ರಾಣಿಗಳು ತಿನ್ನುವಂತೆ ಮಾಡುವೆನು. ಯಾರಾದರೂ ಕೋಟೆಯೊಳಗಾಗಲಿ ಗುಹೆಯೊಳಗಾಗಲಿ ಸೇರಿಕೊಂಡರೆ ಅವರು ರೋಗದಿಂದ ಸಾಯುವರು. 28 ನಾನು ಈ ದೇಶವನ್ನು ಬರಿದಾಗಿಯೂ ಬಂಜರು ಭೂಮಿಯನ್ನಾಗಿಯೂ ಮಾಡುವೆನು. ಈ ದೇಶವು ಹೆಮ್ಮೆಪಟ್ಟುಕೊಳ್ಳುತ್ತಿದ್ದ ವಿಷಯಗಳನ್ನೆಲ್ಲಾ ಅವರು ಕಳೆದುಕೊಳ್ಳುವರು. ಇಸ್ರೇಲಿನ ಪರ್ವತಗಳು ಬೋಳುಗುಡ್ಡಗಳಾಗುವವು. ಯಾರೂ ಅದನ್ನು ದಾಟಿ ಹೋಗಲಾರರು. 29 ಅವರು ಅನೇಕ ಭಯಂಕರ ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ಅವರ ರಾಜ್ಯವನ್ನು ಬಂಜರು ಭೂಮಿಯನ್ನಾಗಿ ಮಾಡುವೆನು. ಆಗ ಈ ಜನರು ನಾನು ಯೆಹೋವನೆಂದು ತಿಳಿದುಕೊಳ್ಳುವರು.”
30 “ ‘ನರಪುತ್ರನೇ, ನಿನ್ನ ವಿಷಯದಲ್ಲಿ ನಿನ್ನ ಜನರು ಗೋಡೆಗೆ ಒರಗಿಕೊಂಡೂ ಬಾಗಿಲಿನ ನಡುವೆ ನಿಂತುಕೊಂಡೂ ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು, “ಬನ್ನಿ, ಯೆಹೋವನು ಹೇಳುವುದನ್ನು ನಾವು ಹೋಗಿ ಕೇಳೋಣ” 31 ಎಂದು ಹೇಳುತ್ತಾ ನಿನ್ನ ಬಳಿಗೆ ನನ್ನ ಜನರಂತೆ ಬರುವರು. ನನ್ನ ಜನರಂತೆ ನಿನ್ನ ಎದುರಿನಲ್ಲಿ ಬಂದು ಕುಳಿತುಕೊಳ್ಳುವರು. ನಿನ್ನ ಮಾತುಗಳನ್ನು ಅವರು ಕೇಳಿದರೂ ಅವುಗಳಿಗೆ ವಿಧೇಯರಾಗದೆ ಇಷ್ಟಪಡುವದನ್ನೆ ಮಾಡುವರು. ಇತರರಿಗೆ ಮೋಸ ಮಾಡಿ ಹಣಗಳಿಸುವದೇ ಅವರ ಕೆಲಸ.
32 “ ‘ನೀನು ಅವರಿಗೆ ಏನೂ ಅಲ್ಲ. ಒಬ್ಬ ಪ್ರೇಮಗೀತೆಯನ್ನು ಹಾಡುವ ಹಾಡುಗಾರ. ನಿನಗೆ ಮಧುರವಾದ ಕಂಠವಿದೆ. ನೀನು ವಾದ್ಯವನ್ನು ಚೆನ್ನಾಗಿ ಬಾರಿಸುವಿ. ಅವರು ನಿನ್ನ ಮಾತುಗಳನ್ನು ಕೇಳಿದರೂ ನೀನು ಹೇಳಿದಂತೆ ಮಾಡುವದಿಲ್ಲ. 33 ಆದರೆ ನೀನು ಹಾಡುವ ವಿಷಯಗಳು ಸಂಭವಿಸುವವು. ಆಗ ಜನರೂ, “ನಿಜವಾಗಿಯೂ ನಮ್ಮ ಮಧ್ಯೆ ಒಬ್ಬ ಪ್ರವಾದಿಯು ವಾಸಿಸಿದನಲ್ಲಾ?” ಎಂದು ಅನ್ನುವರು.’ ”