48
ಇಸ್ರೇಲಿನ ವಿವಿಧ ಕುಲದವರಿಗೆ ಸಾಬಸ್ತ್ಯ
1-7 “ಉತ್ತರದ ಮೇರೆಯು ಭೂಮಧ್ಯ ಸಮುದ್ರದಿಂದ ಪೂರ್ವಕ್ಕೆ ಹೋಗಿ ಅಲ್ಲಿಂದ ಹೆತ್ಲೋನಿಗೂ ಅಲ್ಲಿಂದ ಹಮಾತ್ ಕಣಿವೆಗೂ ಅಲ್ಲಿಂದ ಹಚರ್ ಏನಾನಿಗೂ ಹೋಗುವುದು. ಈ ಸ್ಥಳವು ಹಮಾತ್ ಮತ್ತು ದಮಸ್ಕಸ್‌ನ ಗಡಿಯಲ್ಲಿರುವದು. ಪೂರ್ವದ ಗಡಿಯಿಂದ ಪಶ್ಚಿಮದ ತನಕ ಹೋಗುವ ಈ ಪ್ರಾಂತ್ಯದಲ್ಲಿ ಇಸ್ರೇಲಿನ ದಾನ್, ಆಶೇರ್, ನಫ್ತಾಲಿ, ಮನಸ್ಸೆ, ಎಫ್ರಾಯೀಮ್ ರೂಬೇನ್ ಮತ್ತು ಯೆಹೂದ ಕುಲದ ಜನರಿಗೆ ಭೂಮಿಯು ಸಿಗುವದು.
ದೇಶದ ವಿಶೇಷವಾದ ಭಾಗ
“ಆ ಯೆಹೂದನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ನೀವು ಮೀಸಲಾಗಿಡಬೇಕಾದ ಭೂಮಿಯಿದೆ. ಇದಲ ಅಗಲ ಇಪ್ಪತ್ತೈದು ಸಾವಿರ ಮೊಳ. ಇದರ ಉದ್ದವು ಪೂರ್ವದಿಂದ ಪಶ್ಚಿಮದ ತನಕ ಇರುವ ಬೇರೆ ಕುಲದವರ ಸಾಬಸ್ತ್ಯದ ಭೂಮಿಯಷ್ಟಿರುವುದು. ಆಲಯವು ಈ ವಿಶೇಷವಾದ ಪ್ರಾಂತ್ಯದ ಮಧ್ಯದಲ್ಲಿರುವದು. ಈ ಭೂಮಿಯನ್ನು ನೀವು ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಇದು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಇಪ್ಪತ್ತು ಸಾವಿರ ಮೊಳ ಅಗಲವಾಗಿರುವದು. 10 ಈ ವಿಶೇಷವಾದ ಭೂಮಿಯನ್ನು ವಿಭಾಗಿಸಿ ಯಾಜಕರಿಗೆ ಮತ್ತು ಲೇವಿಯರಿಗೆ ಕೊಡಲಾಗುವುದು.
“ಯಾಜಕರು ಆ ಪ್ರದೇಶದ ಒಂದು ಭಾಗವನ್ನು ಪಡೆದುಕೊಳ್ಳುವರು. ಆ ಭಾಗದ ಉದ್ದವು ಉತ್ತರದಿಕ್ಕಿಗೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ಪೂರ್ವಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರುತ್ತದೆ. ಯೆಹೋವನ ಆಲಯವು ಈ ಪ್ರದೇಶದ ಮಧ್ಯದಲ್ಲಿರುವುದು. 11 ಈ ಭೂಮಿಯು ಚಾದೋಕನ ಸಂತತಿಯವರಿಗಿರುವದು. ಆ ಜನರು ನನ್ನ ಪರಿಶುದ್ಧ ಯಾಜಕರಾಗಿ ಆರಿಸಲ್ಪಟ್ಟಿರುತ್ತಾರೆ. ಯಾಕೆಂದರೆ ಇಸ್ರೇಲಿನ ಇತರ ಜನರು ನನ್ನನ್ನು ಬಿಟ್ಟು ತೊಲಗಿದರೂ ಇವರು ನನಗೆ ಸೇವೆಮಾಡುವದನ್ನು ಮುಂದುವರಿಸುತ್ತಿದ್ದರು. ಲೇವಿಕುಲದ ಜನರಂತೆ ಚಾದೋಕನ ಸಂತತಿಯವರು ನನ್ನನ್ನು ಬಿಟ್ಟುಹೋಗಲಿಲ್ಲ. 12 ಪವಿತ್ರ ಪ್ರಾಂತ್ಯದ ಈ ಭಾಗವು ಆ ಯಾಜಕರಿಗಾಗಿ ಮೀಸಲಾಗಿದೆ. ಇದು ಲೇವಿಯರ ಭೂಮಿಗೆ ಪಕ್ಕದಲ್ಲಿ ಇರುತ್ತದೆ.
13 “ಯಾಜಕರ ಭೂಮಿಯ ಪಕ್ಕದಲ್ಲಿ ಲೇವಿಯರ ಪಾಲಿನ ಭೂಮಿ ಇರುವದು. ಇದರ ಉದ್ದ ಇಪ್ಪತ್ತೈದು ಸಾವಿರ ಮೊಳ; ಅಗಲ ಹತ್ತು ಸಾವಿರ ಮೊಳ. ಈ ಎರಡು ಪಾಲುಗಳ ಒಟ್ಟಳತೆ ಇಪ್ಪತ್ತೈದು ಸಾವಿರ ಮೊಳ ಉದ್ದ, ಇಪ್ಪತ್ತು ಸಾವಿರ ಮೊಳ ಅಗಲ. 14 ಈ ಪ್ರದೇಶವನ್ನು ಲೇವಿಯರು ಮಾರಕೂಡದು, ಬದಲಾಯಿಸಕೂಡದು ಮತ್ತು ವಿಭಜಿಸಕೂಡದು. ಈ ಪ್ರದೇಶವು ಯೆಹೋವನಿಗೆ ಮೀಸಲಾಗಿರುವುದರಿಂದ ಅದು ಬಹಳ ವಿಶೇಷವಾಗಿದೆ ಅಲ್ಲದೆ ದೇಶದ ಅತ್ಯುತ್ತಮ ಭಾಗವಾಗಿದೆ.
ನಗರದ ಆಸ್ತಿಯ ಪಾಲು
15 “ಯಾಜಕರಿಗೆ ಮತ್ತು ಲೇವಿಯರಿಗೆ ಸ್ಥಳ ಕೊಟ್ಟ ಮೇಲೆ ಇನ್ನೂ ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಐದು ಸಾವಿರ ಮೊಳ ಅಗಲದ ಒಂದು ತುಂಡು ಜಾಗ ಉಳಿಯುವದು. ಈ ಜಾಗವು ನಗರವನ್ನು ಕಟ್ಟುವುದಕ್ಕಾಗಿ; ಪಶುಗಳ ಹುಲ್ಲುಗಾವಲಿಗಾಗಿ ಮತ್ತು ಮನೆಗಳನ್ನು ಕಟ್ಟುವುದಕ್ಕಾಗಿ ಇರುವದು. ಸಾಮಾನ್ಯ ಜನರು ಈ ಜಾಗವನ್ನು ಉಪಯೋಗಿಸಬಹುದು. ನಗರವು ಇದರ ಮಧ್ಯದಲ್ಲಿ ಇರುವದು. 16 ನಗರದ ಅಳತೆಯು ಈ ರೀತಿಯಾಗಿ ಇರುವದು; ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ; ದಕ್ಷಿಣದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ, ಪೂರ್ವದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಮತ್ತು ಪಶ್ಚಿಮ ದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಇರುವದು. 17 ಪಶುಗಳನ್ನು ಮೇಯಿಸಲು ಪಟ್ಟಣದ ಸುತ್ತಲೂ ಹುಲ್ಲುಗಾವಲಿರುವದು. ಈ ಹುಲ್ಲುಗಾವಲಿನ ಅಗಲವು ಪಟ್ಟಣದ ಸುತ್ತಲೂ ಇನ್ನೂರ ಐವತ್ತು ಮೊಳವಿರುತ್ತದೆ. 18 ವಿಶೇಷವಾದ ಪ್ರದೇಶದಲ್ಲಿ ಉಳಿದ ಸ್ಥಳದ ಪೂರ್ವಕ್ಕೆ ಹತ್ತು ಸಾವಿರ ಮೊಳ ಮತ್ತು ಪಶ್ಚಿಮಕ್ಕೆ ಹತ್ತು ಸಾವಿರ ಮೊಳ. ಈ ಸ್ಥಳವು ಭೂಪ್ರದೇಶದ ಪವಿತ್ರ ಭಾಗದ ಪಕ್ಕದಲ್ಲಿರುತ್ತದೆ. ನಗರದ ಕೆಲಸಗಾರರಿಗೆ ಬೆಳೆಗಳನ್ನು ಬೆಳೆಯಿಸುವುದಕ್ಕಾಗಿ ಈ ಸ್ಥಳವಿರುತ್ತದೆ. 19 ನಗರದ ಕೆಲಸಗಾರರು ಈ ಜಾಗವನ್ನು ಉತ್ತು ಬೆಳೆ ಬೆಳೆಸುವರು. ಇವರು ಇಸ್ರೇಲರ ಎಲ್ಲಾ ಗೋತ್ರಕ್ಕೆ ಸೇರಿದವರಾಗಿರುತ್ತಾರೆ.
20 “ವಿಶೇಷವಾದ ಈ ಭೂಪ್ರದೇಶವು ಚೌಕವಾಗಿರುವದು. ಇದರ ಉದ್ದ ಮತ್ತು ಇಪ್ಪತ್ತೈದು ಸಾವಿರ ಮೊಳ ಅಗಲ ಇಪ್ಪತ್ತೈದು ಸಾವಿರ ಮೊಳ. ಈ ಪ್ರದೇಶವನ್ನು ನೀನು ಅದರ ವಿಶೇಷವಾದ ಕಾರ್ಯಗಳಿಗಾಗಿ ಮೀಸಲಾಗಿಡಬೇಕು. ಅದರ ಒಂದು ಭಾಗವು ಯಾಜಕರಿಗಾಗಿರುತ್ತದೆ. ಇನ್ನೊಂದು ಭಾಗವು ಲೇವಿಯರಿಗಾಗಿರುತ್ತದೆ; ಮತ್ತೊಂದು ಭಾಗವು ಪಟ್ಟಣಕ್ಕಾಗಿರುತ್ತದೆ.
21-22 “ಈ ವಿಶೇಷ ಭೂಪ್ರದೇಶದ ಒಂದು ಭಾಗವು ದೇಶಾಧಿಪತಿಗೆ ಸೇರಿದೆ. ಈ ಭೂಪ್ರದೇಶವು ಚೌಕವಾಗಿದೆ. ಇದರ ಉದ್ದ 25,000 ಮೊಳ. ಇದರ ಅಗಲ 25,000 ಮೊಳ. ಈ ವಿಶೇಷ ಪ್ರದೇಶದಲ್ಲಿ ಒಂದು ಭಾಗವು ಯಾಜಕರಿಗೂ ಒಂದು ಭಾಗವು ಲೇವಿಯರಿಗೂ ಒಂದು ಭಾಗವು ದೇವಾಲಯಕ್ಕೂ ಸೇರಿವೆ. ಈ ವಿಶೇಷ ಪ್ರದೇಶದ ಕೇಂದ್ರದಲ್ಲಿ ದೇವಾಲಯವಿರುತ್ತದೆ. ಉಳಿದ ಭಾಗವೆಲ್ಲಾ ದೇಶಾಧಿಪತಿಗೆ ಸೇರಿದೆ. ಬೆನ್ಯಾಮೀನನ ಭಾಗಕ್ಕೂ ಯೆಹೂದದ ಭಾಗಕ್ಕೂ ನಡುವೆ ಇರುವ ಭೂಮಿಯು ಅಧಿಪತಿಗೆ ಸೇರಿದೆ.
23-27 “ಈ ವಿಶೇಷ ಜಾಗದ ದಕ್ಷಿಣದ ಸ್ಥಳವು ಜೋರ್ಡನ್ ಹೊಳೆಯ ಪೂರ್ವದಲ್ಲಿ ವಾಸಿಸಿದ್ದ ಇಸ್ರೇಲರ ಕುಲದವರಿಗಾಗಿ. ಈ ಗೋತ್ರದ ಪ್ರತಿ ಒಂದೊಂದು ಕುಲದವರಿಗೆ ಪೂರ್ವದ ಮೇರೆಯಿಂದ ಹಿಡಿದು ಭೂಮಧ್ಯ ಸಮುದ್ರದವರೆಗಿನ ದೇಶದ ಭಾಗದಲ್ಲಿ ಒಂದು ತುಂಡು ಅವರಿಗೆ ದೊರೆಯುವದು. ಉತ್ತರದಿಂದ ದಕ್ಷಿಣದ ತನಕ ಇಲ್ಲಿ ಜಾಗ ದೊರೆಯುವ ಕುಲದವರು ಯಾರೆಂದರೆ, ಬೆನ್ಯಾಮೀನ್, ಸಿಮೆಯೋನ್, ಇಸ್ಸಾಕಾರ್, ಜೆಬೂಲೂನ್ ಮತ್ತು ಗಾದ್ ವಂಶದವರು.
28 “ದೇವರ ಪ್ರಾಂತ್ಯದ ದಕ್ಷಿಣದ ಮೇರೆಯು ತಾಮಾರಿನಿಂದ ಪ್ರಾರಂಭವಾಗಿ ಮೆರೀಬೋತ್‌ಕಾದೇಶ್ ಎಂಬ ಮರುಭೂಮಿಯ ನೀರಿನಾಶ್ರಯಕ್ಕೆ ಹೋಗುತ್ತದೆ. ಅನಂತರ ಈಜಿಪ್ಟಿನ ನದಿಯ ಅಂಚಿನಲ್ಲಿ ಮುಂದುವರಿದು ಭೂಮಧ್ಯ ಸಮುದ್ರಕ್ಕೆ ತಾನು ಸೇರುವ ಸ್ಥಳಕ್ಕೆ ಹೋಗುತ್ತದೆ. 29 ಈ ಪ್ರಾಂತ್ಯವನ್ನು ನೀವು ಇಸ್ರೇಲರ ಕುಲದವರಿಗೆ ವಿಭಾಗಿಸಿ ಹಂಚಬೇಕು. ಇದು ಪ್ರತೀ ಕುಲದವರಿಗೆ ದೊರಕುವ ಭೂಮಿಯ ವಿವರ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ನಗರದ ಬಾಗಿಲುಗಳು
30 “ಇವು ನಗರದ ಬಾಗಿಲುಗಳು. ಅವುಗಳಿಗೆ ಇಸ್ರೇಲರ ಕುಲದವರ ಹೆಸರು ಕೊಡಲ್ಪಟ್ಟಿದೆ.
“ನಗರದ ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. 31 ಅದಕ್ಕೆ ಮೂರು ಬಾಗಿಲುಗಳು ಇರುವವು. ರೂಬೇನ್ ಬಾಗಿಲು, ಯೆಹೂದ ಬಾಗಿಲು ಮತ್ತು ಲೇವಿ ಬಾಗಿಲು.
32 “ನಗರದ ಪೂರ್ವದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. ಈ ಮೇರೆಯಲ್ಲಿ ಮೂರು ಬಾಗಿಲುಗಳಿರುವವು. ಯೋಸೇಫ್ ಬಾಗಿಲು, ಬೆನ್ಯಾಮೀನ್ ಬಾಗಿಲು ಮತ್ತು ದಾನ್ ಬಾಗಿಲು.
33 “ನಗರದ ದಕ್ಷಿಣ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಇದಕ್ಕೆ ಮೂರು ಬಾಗಿಲುಗಳಿರುವವು. ಸಿಮೆಯೋನ್ ಬಾಗಿಲು, ಇಸ್ಸಾಕಾರ್ ಬಾಗಿಲು ಮತ್ತು ಜೆಬುಲೂನ್ ಬಾಗಿಲು.
34 “ನಗರದ ಪಶ್ಚಿಮದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಅದಕ್ಕೆ ಮೂರು ಬಾಗಿಲುಗಳು ಇರುವವು. ಗಾದ್ ಬಾಗಿಲು, ಆಶೇರ್ ಬಾಗಿಲು ಮತ್ತು ನಫ್ತಾಲಿ ಬಾಗಿಲು.
35 “ನಗರದ ಸುತ್ತಳತೆಯು ಹದಿನೆಂಟು ಸಾವಿರ ಮೊಳ. ಇಂದಿನಿಂದ ಈ ನಗರದ ಹೆಸರು ‘ಯೆಹೋವನು ಅಲ್ಲಿದ್ದಾನೆ.’ ”* ಯೆಹೋವನು ಅಲ್ಲಿದ್ದಾನೆ ಇದು “ಜೆರುಸಲೇಮ್” ಪದದ ಶಬ್ದ ಶ್ಲೇಷ. ಹೀಬ್ರೂವಿನಲ್ಲಿ ಈ ಪದವು “ಯೆಹೊಶಾಮಾ” ಎಂದು ಉಚ್ಛರಿಸಲ್ಪಟ್ಟಂತೆ ಕೇಳಿಸುತ್ತದೆ.

*48:35: ಯೆಹೋವನು ಅಲ್ಲಿದ್ದಾನೆ ಇದು “ಜೆರುಸಲೇಮ್” ಪದದ ಶಬ್ದ ಶ್ಲೇಷ. ಹೀಬ್ರೂವಿನಲ್ಲಿ ಈ ಪದವು “ಯೆಹೊಶಾಮಾ” ಎಂದು ಉಚ್ಛರಿಸಲ್ಪಟ್ಟಂತೆ ಕೇಳಿಸುತ್ತದೆ.