9
ಯೆಹೂದ್ಯರಲ್ಲದ ಅನ್ಯರೊಂದಿಗೆ ಮದುವೆ
ಇವೆಲ್ಲಾ ಆದ ಬಳಿಕ ಇಸ್ರೇಲರ ಪ್ರಧಾನರು ನನ್ನ ಬಳಿಗೆ ಬಂದು, “ಎಜ್ರನೇ, ಇಸ್ರೇಲ್ ಜನರು ಸುತ್ತಲೂ ವಾಸಿಸುವ ಅನ್ಯಜನರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ಯಾಜಕರಾಗಲಿ ಲೇವಿಯರಾಗಲಿ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ದೇಶದಲ್ಲಿ ವಾಸವಾಗಿರುವ ಕಾನಾನ್ಯರ, ಹಿತ್ತಿಯರ, ಪೆರಿಜ್ಜೀಯರ, ಯೆಬೂಸಿಯರ, ಅಮ್ಮೋನಿಯರ, ಮೋವಾಬ್ಯರ, ಅಮೋರಿಯರ, ಈಜಿಪ್ಟಿನವರ ಕೆಟ್ಟ ಜೀವಿತವು ಇಸ್ರೇಲರ ಮೇಲೆ ಪ್ರಭಾವಬೀರಿದೆ. ಇಸ್ರೇಲ್ ಜನರು ತಮ್ಮ ಸುತ್ತಲು ವಾಸಿಸುವ ಜನರೊಂದಿಗೆ ಮದುವೆಯಾಗಿದ್ದಾರೆ. ಇಸ್ರೇಲ್ ಜನರು ದೇವರ ವಿಶೇಷ ಜನರಾಗಿದ್ದಾರೆ. ಆದರೆ ಈಗ ಅನ್ಯರೊಂದಿಗೆ ಬೆರೆತು ಹೋಗಿದ್ದಾರೆ. ಇಸ್ರೇಲರ ಪ್ರಧಾನರು, ಮುಖ್ಯಾಧಿಕಾರಿಗಳು ಈ ರೀತಿಯಾಗಿ ಮಾಡಿ ಜನರಿಗೆ ಕೆಟ್ಟ ಮಾದರಿಯಾಗಿ ಜೀವಿಸುತ್ತಿದ್ದಾರೆ” ಎಂದು ಹೇಳಿದರು. ಇದನ್ನು ಕೇಳಿದೊಡನೆ ನನ್ನ ಮನಸ್ಸಿನ ದುಃಖವನ್ನು ತೋರಿಸುವಂತೆ ನನ್ನ ಬಟ್ಟೆಯನ್ನು ಹರಿದು ಹಾಕಿದೆನು. ನನ್ನ ತಲೆಯ ಮತ್ತು ಗಡ್ಡದ ಕೂದಲನ್ನು ಕೆದರಿಕೊಂಡು ದಿಗ್ಭ್ರಮೆಗೊಂಡವನಾಗಿಯೂ ಬೇಸರಗೊಂಡವನಾಗಿಯೂ ಕುಳಿತುಕೊಂಡೆನು. ಇದನ್ನು ನೋಡಿ ದೇವರ ಕಟ್ಟಳೆಗಳನ್ನು ಗೌರವಿಸುವ ಪ್ರತಿಯೊಬ್ಬನು ಭಯಪಟ್ಟನು; ನಡುಗಿದನು. ಯಾಕೆಂದರೆ ಸೆರೆವಾಸದಿಂದ ಹಿಂದಿರುಗಿ ಬಂದ ಇಸ್ರೇಲರು ದೇವರಿಗೆ ನಂಬಿಗಸ್ತರಾಗಿರಲಿಲ್ಲ. ನಾನೂ ನನ್ನೊಂದಿಗಿದ್ದ ಜನರೂ ಸಾಯಂಕಾಲದ ಯಜ್ಞವನ್ನರ್ಪಿಸುವ ಸಮಯದ ತನಕ ಹಾಗೆಯೇ ಕುಳಿತಿದ್ದೆವು.
ಸಾಯಂಕಾಲದ ನೈವೇದ್ಯ ಸಮರ್ಪಣೆಯ ಸಮಯದಲ್ಲಿ ನಾನು ಕುಳಿತಲ್ಲಿಂದ ಎದ್ದೆನು. ನನ್ನ ಬಟ್ಟೆಗಳು ಹರಿದಿದ್ದವು. ನಾನು ಮೊಣಕಾಲೂರಿ ಕೈಗಳನ್ನು ದೇವರಾದ ಯೆಹೋವನ ಕಡೆಗೆ ಚಾಚಿ ಹೀಗೆ ಪ್ರಾರ್ಥಿಸಿದೆನು:
“ನನ್ನ ದೇವರೇ, ನಿನ್ನ ಕಡೆಗೆ ಮುಖವೆತ್ತಲು ನನಗೆ ನಾಚಿಕೆಯಾಗುತ್ತದೆ; ಯಾಕೆಂದರೆ ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿದೆ. ನಮ್ಮ ಅಪರಾಧಗಳ ರಾಶಿಯು ಪರಲೋಕದವರೆಗೂ ಏರಿಹೋಗಿದೆ. ನಮ್ಮ ಪೂರ್ವಿಕರ ಕಾಲದಿಂದ ಈ ತನಕ ನಾವು ಮಹಾಪರಾಧಗಳನ್ನು ಮಾಡಿದ್ದೇವೆ. ನಮ್ಮ ಪಾಪಗಳಿಗಾಗಿ ನಮಗೂ ನಮ್ಮ ರಾಜರುಗಳಿಗೂ ನಮ್ಮ ಯಾಜಕರುಗಳಿಗೂ ಶಿಕ್ಷೆಯಾಯಿತು. ಅನ್ಯದೇಶದ ರಾಜರುಗಳು ನಮ್ಮ ದೇಶವನ್ನು ಆಕ್ರಮಿಸಿ ನಮ್ಮ ಜನರನ್ನು ಸೆರೆಯಾಳುಗಳಾಗಿ ಒಯ್ದರು; ನಮ್ಮ ಐಶ್ವರ್ಯವನ್ನು ಸೂರೆಗೈದು ನಮ್ಮನ್ನು ನಾಚಿಕೆಗೆ ಒಳಪಡಿಸಿದರು. ಈಗಲೂ ಅದೇ ಅನುಭವ ನಮಗಾಗಿದೆ!
“ಈಗಲಾದರೋ ನೀನು ನಮ್ಮ ಮೇಲೆ ದಯೆ ತೋರಿಸಿರುವೆ. ಸೆರೆಯಲ್ಲಿದ್ದ ನಿನ್ನ ಜನರಲ್ಲಿ ಕೆಲವರು ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಪರಿಶುದ್ಧ ದೇಶದಲ್ಲಿ ವಾಸಿಸುವಂತೆ ಮಾಡಿರುವೆ; ಗುಲಾಮತನದಿಂದ ನಮ್ಮನ್ನು ಬಿಡುಗಡೆ ಮಾಡಿ ಹೊಸಜೀವ ಕೊಟ್ಟಿರುವೆ. ಹೌದು, ನಾವು ಗುಲಾಮರಾಗಿದ್ದೆವು. ಆದರೆ ಸದಾಕಾಲ ಗುಲಾಮರಾಗಲು ನೀನು ನಮ್ಮನ್ನು ಬಿಡಲಿಲ್ಲ. ನಮ್ಮ ಮೇಲೆ ನೀನು ದಯೆ ತೋರಿಸಿರುವೆ. ಪರ್ಶಿಯ ರಾಜರು ನಮಗೆ ಕರುಣೆತೋರುವಂತೆ ಮಾಡಿದೆ. ನಿನ್ನ ಆಲಯವು ಹಾಳಾಗಿತ್ತು. ನಿನ್ನ ಆ ಆಲಯವನ್ನು ಮತ್ತೆ ಹೊಸದಾಗಿ ಕಟ್ಟಲು ನೀನು ನಮಗೆ ಹೊಸ ಜೀವವನ್ನು ಕೊಟ್ಟಿರುವೆ. ದೇವರೇ, ಯೆಹೂದ ಮತ್ತು ಜೆರುಸಲೇಮ್‌ಗಳ ಸಂರಕ್ಷಣೆಗಾಗಿ ಗೋಡೆಯನ್ನು ಕಟ್ಟಲು ನೀನು ನಮಗೆ ಸಹಾಯಮಾಡಿದೆ.
10 “ದೇವರೇ, ಈಗ ನಾವು ನಿನಗೆ ಏನು ಹೇಳೋಣ? ನಾವು ನಿನಗೆ ವಿಧೇಯರಾಗುವುದನ್ನು ನಿಲ್ಲಿಸಿದ್ದೇವೆ. 11 ದೇವರೇ, ನೀನು ನಿನ್ನ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ಆ ಆಜ್ಞೆಗಳನ್ನು ಕೊಟ್ಟಿರುವೆ. ನೀನು ಹೀಗೆ ಹೇಳಿದೆ: ‘ನೀವು ವಾಸಿಸಲಿರುವ ಮತ್ತು ನಿಮ್ಮದನ್ನಾಗಿಸಿಕೊಳ್ಳುವ ನಾಡು ಪಾಳಾಗಿರುವ ನಾಡಾಗಿದೆ. ಅಲ್ಲಿಯ ಜನರು ಎಲ್ಲೆಲ್ಲಿಯೂ ಮಾಡಿರುವ ಕೆಟ್ಟಕೃತ್ಯಗಳಿಂದ ಅದು ಹಾಳಾಗಿದೆ; ಅವರು ತಮ್ಮ ಪಾಪಗಳಿಂದ ಆ ನಾಡನ್ನು ಹೊಲಸು ಮಾಡಿದ್ದಾರೆ. 12 ಆದ್ದರಿಂದ ಇಸ್ರೇಲ್ ಜನರೇ, ನಿಮ್ಮ ಮಕ್ಕಳು ಅವರ ಮಕ್ಕಳನ್ನು ಮದುವೆಯಾಗಲು ಬಿಡಬೇಡಿ. ಅವರ ಸಹವಾಸ ಮಾಡಬೇಡಿರಿ. ಅವರ ವಸ್ತುಗಳನ್ನು ಆಶಿಸಬೇಡಿರಿ. ನನ್ನ ಕಟ್ಟಳೆಗಳನ್ನು ಪಾಲಿಸಿರಿ; ಆಗ ನೀವು ಬಲಶಾಲಿಗಳಾಗಿ ಈ ದೇಶವನ್ನು ಅನುಭವಿಸುವಿರಿ. ಈ ದೇಶವನ್ನು ನೀನು ಇಟ್ಟುಕೊಂಡವರಾಗಿ ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವಿರಿ.’
13 “ನಮಗೆ ಒದಗಿದ ಕೆಡುಕು, ಸಂಕಟಗಳಿಗೆ ನಾವೇ ಕಾರಣರು. ನಾವು ಅನೀತಿ ಕೆಲಸಗಳನ್ನು ಮಾಡಿದ್ದೆವು. ಅದಕ್ಕೆ ಅನುಭವಿಸಬೇಕಾಗಿದ್ದ ಶಿಕ್ಷೆಯನ್ನು ನೀನು ನಮಗೆ ವಿಧಿಸಲಿಲ್ಲ. ನಾವು ಅತಿಘೋರವಾದ ಪಾಪಗಳನ್ನು ಮಾಡಿದ್ದಕ್ಕೆ ಅತ್ಯಂತ ಘೋರ ಶಿಕ್ಷೆಯು ನಮಗೆ ದೊರಕ ಬೇಕಿತ್ತು. ಆದರೂ ನೀನು ನಮ್ಮವರಲ್ಲಿ ಕೆಲವರನ್ನು ಸೆರೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ. 14 ನಿನ್ನ ಆಜ್ಞೆಗಳಿಗೆ ಅವಿಧೇಯರಾಗಬಾರದೆಂದು ಈಗ ನಮಗೆ ತಿಳಿಯುತ್ತದೆ. ಅನ್ಯಜನರನ್ನು ಮದುವೆ ಮಾಡಿಕೊಳ್ಳಬಾರದು. ಅವರು ಘೋರ ಪಾಪಿಗಳು. ನಾವು ಹೀಗೆಯೇ ಅವರೊಂದಿಗೆ ಮದುವೆಯಾದರೆ ನೀನು ನಮ್ಮನ್ನು ನಾಶಮಾಡುವೆ ಎಂದು ನಾವು ತಿಳಿದಿದ್ದೇವೆ. ಹೀಗಿರುವಲ್ಲಿ ಇಸ್ರೇಲ್ ಜನಾಂಗದಲ್ಲಿ ಯಾರೂ ಉಳಿಯಲಾರರು.
15 “ಇಸ್ರೇಲಿನ ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ನಮ್ಮ ಜನಾಂಗದ ಕೆಲವರನ್ನಾದರೂ ಉಳಿದುಕೊಳ್ಳುವಂತೆ ಮಾಡಿರುವೆ. ಹೌದು, ನಾವು ಪಾಪಿಗಳು. ನಮ್ಮ ಅಪರಾಧಗಳ ದೆಸೆಯಿಂದ ಯಾರೂ ನಿನ್ನ ಮುಂದೆ ನಿಲ್ಲಲು ಸಾಧ್ಯವಿಲ್ಲ.”