32
ಏಸಾವನೊಂದಿಗೆ ಮತ್ತೆ ಒಂದಾದದ್ದು
ಯಾಕೋಬನು ಅಲ್ಲಿಂದ ಹೊರಟು ಪ್ರಯಾಣ ಮಾಡುತ್ತಿರುವಾಗ ದೇವದೂತರನ್ನು ನೋಡಿದನು. ಆದ್ದರಿಂದ ಅವನು, “ಇದು ದೇವರ ಪಾಳೆಯ” ಎಂದು ಹೇಳಿ “ಮಹನಯಿಮ್” ಎಂದು ಹೆಸರಿಟ್ಟನು.
ಯಾಕೋಬನ ಅಣ್ಣನಾದ ಏಸಾವನು ಸೇಯೀರ್ ಎಂಬ ಸ್ಥಳದಲ್ಲಿ ವಾಸವಾಗಿದ್ದನು. ಈ ಸ್ಥಳವು ಎದೋಮಿನ ಗುಡ್ಡಗಾಡು ಪ್ರದೇಶವಾಗಿತ್ತು. ಯಾಕೋಬನು ತನ್ನ ಸಂದೇಶಕರ ಮೂಲಕ ಏಸಾವನಿಗೆ ಈ ಸಂಗತಿಗಳನ್ನು ತಿಳಿಸಿದನು: “ನಿನ್ನ ಸೇವಕನಾದ ಯಾಕೋಬನು ಹೇಳುವುದೇನೆಂದರೆ, ‘ನಾನು ಕಳೆದ ವರ್ಷಗಳೆಲ್ಲಾ ಲಾಬಾನನೊಡನೆ ಜೀವಿಸಿದೆನು. ನನಗೆ ಅನೇಕ ದನಗಳೂ, ಕತ್ತೆಗಳೂ, ಆಡುಕುರಿಗಳೂ ಮತ್ತು ಸೇವಕಸೇವಕಿಯರೂ ಇದ್ದಾರೆ. ಸ್ವಾಮೀ, ನೀವು ನಮ್ಮನ್ನು ಸ್ವೀಕರಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.’ ”
ಸಂದೇಶಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಬಳಿಗೆ ಹೋದೆವು. ಅವನು ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ಅವನೊಡನೆ ನಾನೂರು ಮಂದಿ ಗಂಡಸರಿದ್ದಾರೆ” ಎಂದು ಹೇಳಿದರು.
ಯಾಕೋಬನಿಗೆ ಭಯವಾಯಿತು. ಅವನು ತನ್ನೊಡನೆ ಇದ್ದ ಜನರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. ಅವನು ಎಲ್ಲಾ ಆಡುಕುರಿಗಳನ್ನೂ ದನಕರುಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. “ಒಂದುವೇಳೆ ಏಸಾವನು ಬಂದು ಒಂದು ಗುಂಪನ್ನು ನಾಶಗೊಳಿಸಿದರೆ, ಮತ್ತೊಂದು ಗುಂಪು ಓಡಿಹೋಗಿ ತಪ್ಪಿಸಿಕೊಳ್ಳಬಹುದು” ಎಂಬುದು ಅವನ ಆಲೋಚನೆಯಾಗಿತ್ತು.
ಯಾಕೋಬನು, “ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರಾಗಿರುವ ಯೆಹೋವನೇ, ನನ್ನ ದೇಶಕ್ಕೆ ಮತ್ತು ನನ್ನ ಕುಟುಂಬಕ್ಕೆ ಹಿಂತಿರುಗಿ ಬರುವಂತೆ ನೀನು ಹೇಳಿದೆ. ನೀನು ನನಗೆ ಒಳ್ಳೆಯದನ್ನು ಮಾಡುವುದಾಗಿ ಹೇಳಿದೆ. 10 ನೀನು ನನಗೆ ತುಂಬ ಕರುಣೆ ತೋರಿದೆ. ನೀನು ನನಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಮೊದಲನೆ ಸಲ ನಾನು ಜೋರ್ಡನ್ ನದಿಯನ್ನು ದಾಟಿ ಪ್ರಯಾಣ ಮಾಡಿದಾಗ, ಕೇವಲ ನನ್ನ ಊರುಗೋಲೇ ಹೊರತು ಬೇರೇನೂ ನನಗಿರಲಿಲ್ಲ. ಆದರೆ ಈಗ ಎರಡು ಗುಂಪುಗಳಿಗೆ ಬೇಕಾದ ವಸ್ತುಗಳನ್ನು ನಾನು ಪಡೆದಿದ್ದೇನೆ. 11 ಇಂತಿರಲು, ದಯವಿಟ್ಟು ನನ್ನ ಅಣ್ಣನಿಂದ ನನ್ನನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿರುವೆ. ಏಸಾವನಿಂದ ನನ್ನನ್ನು ಕಾಪಾಡು. ಅವನು ಬಂದು ನಮ್ಮೆಲ್ಲರನ್ನೂ ತಾಯಂದಿರನ್ನೂ ಮಕ್ಕಳನ್ನೂ ಕೊಲ್ಲುವನೆಂಬ ಭಯ ನನಗಿದೆ. 12 ‘ನಾನು ನಿನಗೆ ಒಳ್ಳೆಯದನ್ನು ಮಾಡುವೆ. ನಾನು ನಿನ್ನ ಕುಟುಂಬವನ್ನು ಹೆಚ್ಚಿಸಿ ನಿನ್ನ ಮಕ್ಕಳನ್ನು ಸಮುದ್ರದ ಮರಳಿನಷ್ಟು ವೃದ್ಧಿಗೊಳಿಸುವೆನು. ಅವರು ಲೆಕ್ಕಿಸಲಾಗದಷ್ಟು ಅಸಂಖ್ಯಾತವಾಗಿರುವರು’ ಎಂದು ನೀನು ನನಗೆ ವಾಗ್ದಾನ ಮಾಡಿದಿಯಲ್ಲವೇ” ಎಂದು ಪ್ರಾರ್ಥಿಸಿದನು.
13 ಯಾಕೋಬನು ಆ ರಾತ್ರಿ ಅಲ್ಲಿಯೇ ಉಳಿದುಕೊಂಡು ಏಸಾವನಿಗೆ ಉಡುಗೊರೆಯಾಗಿ ಕೊಡಲು ಕೆಲವು ವಸ್ತುಗಳನ್ನು ಸಿದ್ಧಗೊಳಿಸಿದನು. 14 ಯಾಕೋಬನು ಇನ್ನೂರು ಮೇಕೆಗಳನ್ನು, ಇಪ್ಪತ್ತು ಹೋತಗಳನ್ನು, ಇನ್ನೂರು ಕುರಿಗಳನ್ನು ಮತ್ತು ಇಪ್ಪತ್ತು ಟಗರುಗಳನ್ನು ತೆಗೆದುಕೊಂಡನು. 15 ಯಾಕೋಬನು ಮೂವತ್ತು ಒಂಟೆಗಳನ್ನು ಮತ್ತು ಅವುಗಳ ಮರಿಗಳನ್ನು ನಲವತ್ತು ಹಸುಗಳನ್ನು ಮತ್ತು ಹತ್ತು ಹೋರಿಗಳನ್ನು, ಇಪ್ಪತ್ತು ಹೆಣ್ಣು ಕತ್ತೆಗಳನ್ನು ಮತ್ತು ಹತ್ತು ಗಂಡು ಕತ್ತೆಗಳನ್ನು ತೆಗೆದುಕೊಂಡನು. 16 ಯಾಕೋಬನು ಪಶುಗಳ ಪ್ರತಿಯೊಂದು ಮಂದೆಯನ್ನೂ ತನ್ನ ಸೇವಕರ ವಶಕ್ಕೆ ಕೊಟ್ಟನು. ಆಮೇಲೆ ಯಾಕೋಬನು ಸೇವಕರಿಗೆ, “ಪಶುಗಳ ಪ್ರತಿಯೊಂದು ಗುಂಪನ್ನು ವಿಂಗಡಿಸಿ ನನ್ನ ಮುಂದೆ ಹೋಗಿರಿ; ಅಲ್ಲದೆ ಪ್ರತಿಯೊಂದು ಮಂದೆಯ ನಡುವೆಯೂ ಸ್ವಲ್ಪ ಅಂತರವಿರಲಿ” ಎಂದು ಹೇಳಿದನು. 17 ಯಾಕೋಬನು ಅವರಿಗೆ ಅವರವರ ಕರ್ತವ್ಯಗಳನ್ನು ತಿಳಿಸಿದನು. ಯಾಕೋಬನು ಪಶುಗಳ ಮೊದಲನೆ ಗುಂಪಿನ ಸೇವಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನ ಬಳಿಗೆ ಬಂದು, ‘ಇವು ಯಾರ ಪಶುಗಳು? ನೀನು ಎಲ್ಲಿಗೆ ಹೋಗುತ್ತಿರುವೆ? ನೀನು ಯಾರ ಸೇವಕನು?’ ಎಂದು ಕೇಳುವನು. 18 ಆಗ ನೀನು, ‘ಪಶುಗಳು ನಿನ್ನ ಸೇವಕನಾದ ಯಾಕೋಬನವು. ನನ್ನ ಒಡೆಯನಾದ ಏಸಾವನೇ, ಯಾಕೋಬನು ಇವುಗಳನ್ನು ನಿನಗೆ ಉಡುಗೊರೆಯಾಗಿ ಕಳುಹಿಸಿದ್ದಾನೆ. ಅಲ್ಲದೆ ಅವನು ಸಹ ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ತಿಳಿಸಬೇಕು” ಎಂದು ಹೇಳಿದನು.
19 ಇದೇ ರೀತಿ ಮಾಡುವಂತೆ ಯಾಕೋಬನು ಎರಡನೆಯ ಸೇವಕನಿಗೆ, ಮೂರನೆಯ ಸೇವಕನಿಗೆ ಮತ್ತು ಉಳಿದೆಲ್ಲಾ ಸೇವಕರಿಗೆ ಆಜ್ಞಾಪಿಸಿದನು. ಅವನು ಅವರಿಗೆ, “ನೀವು ಏಸಾವನನ್ನು ಭೇಟಿಯಾದಾಗ ಇದೇ ರೀತಿ ಮಾಡಬೇಕು. 20 ನೀವು ಅವನಿಗೆ, ‘ಇದು ನಿನಗೆ ಕಳುಹಿಸಿರುವ ಉಡುಗೊರೆ. ಅಲ್ಲದೆ ನಿನ್ನ ಸೇವಕನಾದ ಯಾಕೋಬನು ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ಹೇಳಬೇಕು” ಎಂದು ತಿಳಿಸಿದನು.
“ನಾನು ಈ ಜನರನ್ನು ಉಡುಗೊರೆಗಳೊಡನೆ ಮುಂದೆ ಕಳುಹಿಸಿದರೆ, ಒಂದುವೇಳೆ ಏಸಾವನು ನನ್ನನ್ನು ಕ್ಷಮಿಸಿ ನನ್ನನ್ನು ಸ್ವೀಕರಿಸಿಕೊಳ್ಳಬಹುದು” ಎಂಬುದು ಯಾಕೋಬನ ಆಲೋಚನೆಯಾಗಿತ್ತು. 21 ಯಾಕೋಬನು ಏಸಾವನಿಗೆ ಉಡುಗೊರೆಗಳನ್ನು ಕಳುಹಿಸಿ ಆ ರಾತ್ರಿ ಪಾಳೆಯದಲ್ಲಿ ಉಳಿದುಕೊಂಡನು.
22 ಆ ರಾತ್ರಿ, ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ ತನ್ನ ಇಬ್ಬರು ದಾಸಿಯರನ್ನೂ ತನ್ನ ಹನ್ನೊಂದು ಮಂದಿ ಗಂಡುಮಕ್ಕಳನ್ನೂ ಕರೆದುಕೊಂಡು ಹೊರಟು ಯಬ್ಬೋಕ್ ಹೊಳೆಯನ್ನು ದಾಟತಕ್ಕ ಸ್ಥಳಕ್ಕೆ ಬಂದನು. 23 ಯಾಕೋಬನು ತನ್ನ ಕುಟುಂಬದವರನ್ನೂ ತನ್ನಲ್ಲಿದ್ದ ಪ್ರತಿಯೊಂದನ್ನೂ ಆಚೆದಡಕ್ಕೆ ಕಳುಹಿಸಿದನು.
ದೇವರೊಡನೆ ಹೋರಾಟ
24 ಎಲ್ಲರನ್ನೂ ಹೊಳೆ ದಾಟಿಸಿದ ಮೇಲೆ ಕೊನೆಯವನಾಗಿ ತಾನೊಬ್ಬನೇ ಹೊಳೆದಾಟಲು ನಿಂತಿದ್ದಾಗ ಒಬ್ಬ ಪುರುಷನು ಬಂದು ಸೂರ್ಯೋದಯದವರೆಗೂ ಹೋರಾಡಿದನು. 25 ಯಾಕೋಬನನ್ನು ಸೋಲಿಸಲು ತನಗೆ ಸಾಧ್ಯವಾಗದಿರುವುದನ್ನು ಗಮನಿಸಿದ ಆ ಪುರುಷನು ಯಾಕೋಬನ ತೊಡೆಯನ್ನು ಮುಟ್ಟಿದನು. ಆಗ ಯಾಕೋಬನ ಕೀಲು ತಪ್ಪಿತು.
26 ಆ ಪುರುಷನು ಯಾಕೋಬನಿಗೆ, “ನನ್ನನ್ನು ಬಿಡು, ಸೂರ್ಯೋದಯವಾಗುತ್ತಿದೆ” ಎಂದು ಹೇಳಿದನು.
ಆದರೆ ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನು ಬಿಡುವುದಿಲ್ಲ” ಎಂದು ಹೇಳಿದನು.
27 ಆ ಪುರುಷನು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ನನ್ನ ಹೆಸರು ಯಾಕೋಬ” ಅಂದನು.
28 ಆಗ ಆ ಪುರುಷನು, “ಇನ್ನು ಮೇಲೆ ನಿನ್ನ ಹೆಸರು ‘ಯಾಕೋಬ’ ಎಂದಿರುವುದಿಲ್ಲ. ಇಂದಿನಿಂದ ನಿನ್ನ ಹೆಸರು ‘ಇಸ್ರೇಲ್’ ಎಂದಾಗುವುದು. ನಾನೇ ನಿನಗೆ ಈ ಹೆಸರನ್ನು ಕೊಟ್ಟಿದ್ದೇನೆ; ಯಾಕೆಂದರೆ ನೀನು ದೇವರೊಡನೆಯೂ ಮನುಷ್ಯರೊಡನೆಯೂ ಹೋರಾಡಿದೆ; ಆದರೂ ನೀನು ಸೋಲಲಿಲ್ಲ” ಎಂದು ಹೇಳಿದನು.
29 ಯಾಕೋಬನು ಆತನಿಗೆ, “ದಯವಿಟ್ಟು ನಿನ್ನ ಹೆಸರನ್ನು ತಿಳಿಸು” ಎಂದು ಕೇಳಿದನು.
ಅದಕ್ಕೆ ಆ ಪುರುಷನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಯಾಕೋಬನನ್ನು ಆಶೀರ್ವದಿಸಿದನು.
30 ಆದ್ದರಿಂದ ಯಾಕೋಬನು, “ಈ ಸ್ಥಳದಲ್ಲಿ ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ ನನ್ನ ಜೀವ ಉಳಿಯಿತು” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು. 31 ಆಮೇಲೆ ಅವನು ಪೆನೀಯೇಲ್‌ನಿಂದ ಹೊರಟುಹೋಗುತ್ತಿರುವಾಗ ಸೂರ್ಯೋದಯವಾಯಿತು. ಯಾಕೋಬನು ತನ್ನ ಕೀಲುನೋವಿನಿಂದ ಕುಂಟುತ್ತಾ ಹೋದನು. 32 ಈ ಮಾಂಸಖಂಡದಲ್ಲಿ ಯಾಕೋಬನಿಗೆ ನೋವು ಉಂಟಾಗಿದ್ದರಿಂದ ಇಂದಿಗೂ ಇಸ್ರೇಲರು ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವುದಿಲ್ಲ.